ಜಾತಿಯಿಂದ ಹಿಂದುಳಿದವರು ಶಿಕ್ಷಣದಿಂದಲೂ ಹಿಂದುಳಿದಿದ್ದಾರೆ

ಆಗಾಗ ಶುಲ್ಕದಲ್ಲಿನ ಹೆಚ್ಚಳವು ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಅಥವಾ ಸಾಲದ ಮೂಲಕ ಅಧ್ಯಯನವನ್ನು ಮುಂದುವರಿಸಲು ಕಷ್ಟಕರವಾಗಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ವೆಚ್ಚಗಳೊಂದಿಗೆ ಅಂಚಿನಲ್ಲಿರುವ ಸಮುದಾಯಗಳ ಅನೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಶ್ರೇಯಾಂಕಗಳನ್ನು ಪಡೆದುಕೊಂಡರೂ ಪ್ರತಿಷ್ಠಿತ ಸಂಸ್ಥೆಗಳಾದ ಐಐಟಿ ಮತ್ತು ಐಎಎಂಗಳಿಗೆ ದಾಖಲಾಗುವುದನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಕೆಲವು ವಿದ್ಯಾರ್ಥಿಗಳು ಆರ್ಥಿಕ ಹೊರೆಯನ್ನು ನಿಭಾಯಿಸಲು ಹೆಣಗಾಡುತ್ತಿದ್ದರೆ, ಇನ್ನೂ ಕೆಲವರು ಒತ್ತಡ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿನ ಅಸಮಾನತೆಯಿಂದ ಬಾಯಿಲ್ಲದವರಂತಾಗಿದ್ದಾರೆ.

Update: 2025-01-02 06:29 GMT

ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ದಿನಗೂಲಿ ಕಾರ್ಮಿಕನ ಪುತ್ರ ಅತುಲ್ ಕುಮಾರ್ ಎಂಬವರು ಧನ್‌ಬಾದ್‌ನ ಐಐಟಿಯಲ್ಲಿ ತನಗಾಗಿ ಪ್ರವೇಶವನ್ನು ಪಡೆಯಲು ಅಗತ್ಯವಿರುವ 17,500 ರೂಪಾಯಿಗಳನ್ನು, ಸೀಟ್ ಬುಕಿಂಗ್ ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣ ಸೀಟು ಕಳೆದುಕೊಂಡನು. ಅವನ ಪ್ರಕರಣವು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಗಮನ ಸೆಳೆಯುವಲ್ಲಿ ಸಫಲವಾಯಿತು. ಸರ್ವೋಚ್ಚ ನ್ಯಾಯಾಲಯ ಅವನಿಗೆ ಪ್ರವೇಶವನ್ನು ನೀಡಲು ಸಂವಿಧಾನದ 142ನೇ ವಿಧಿಯಡಿಯಲ್ಲಿ ತನ್ನ ಅಸಮಾನ್ಯ ಅಧಿಕಾರ ಚಲಾಯಿಸುವ ಮೂಲಕ ಮಧ್ಯ ಪ್ರವೇಶಿಸಿತು. ಅತುಲ್‌ನಂತಹ ಅನೇಕ ಮತ್ತು ಅಂತಹುದೇ ಪ್ರಕರಣಗಳು ಇವೆಯಾದರೂ, ಅವು ಎಂದಿಗೂ ಮಾಧ್ಯಮದ ಗಮನ ಸೆಳೆಯುವಲ್ಲಿ ವಿಫಲವಾಗುತ್ತವೆ ಮತ್ತು ನ್ಯಾಯವನ್ನೂ ಪಡೆಯಲು ಸಾಧ್ಯವಾಗುವುದಿಲ್ಲ. ಹಣಕಾಸಿನ ನಿರ್ಬಂಧಗಳು ಮತ್ತು ವ್ಯವಸ್ಥಿತ ಅಸಮಾನತೆಗಳಿಂದಾಗಿ ಅನೇಕ ವಿದ್ಯಾರ್ಥಿಗಳಿಗೆ ಅವಕಾಶಗಳು ಸಿಗುವುದೇ ಇಲ್ಲ.

ಬೋಧನಾ ಶುಲ್ಕದಲ್ಲಿ ಏರಿಕೆ

ದಲಿತ ವಿದ್ಯಾರ್ಥಿಗಳು ಅವರ ಜಾತಿಯ ಕಾರಣದಿಂದ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗುವುದನ್ನು ನಿರ್ಬಂಧಿಸಿದಾಗ ಅವರು ಎದುರಿಸುತ್ತಿರುವ ಹೋರಾಟಗಳು ಸ್ವಾತಂತ್ರ್ಯ ಪೂರ್ವ ಭಾರತದ ಸವಾಲುಗಳನ್ನು ಪ್ರತಿಧ್ವನಿಸುತ್ತವೆ. ಈ ಐತಿಹಾಸಿಕ ನಿರ್ಬಂಧಗಳು ಬಹಿರಂಗವಾಗಿದ್ದರೂ, ಈಗ ಪರಿಸ್ಥಿತಿ ಹೆಚ್ಚು ವಂಚನೆಯಿಂದ ಕೂಡಿದೆ. ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಭಾರತ ಸರಕಾರವು ಸಂಸ್ಥೆಗಳಿಗೆ ಸ್ವಾವಲಂಬನೆಗಾಗಿ ಒತ್ತಾಯಿಸುತ್ತಿದೆ. ಹೀಗಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ), ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಂತಹ ಅನೇಕ ಸರಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಶುಲ್ಕದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ, 2016ರಲ್ಲಿ ಐಐಟಿ ಕೌನ್ಸಿಲ್‌ನ ಸ್ಥಾಯಿ ಸಮಿತಿಯು ಪದವಿ ಪೂರ್ವ ಬೋಧನಾ ಶುಲ್ಕವನ್ನು ಪ್ರತಿಶತ 200ರಷ್ಟು ಹೆಚ್ಚಿಸಲು ಒಪ್ಪಿಕೊಂಡಿತು. ಇದರರ್ಥ ವರ್ಷಕ್ಕೆ 90 ಸಾವಿರ ರೂಪಾಯಿಗಳಿಂದ ಮೂರು ಲಕ್ಷಕ್ಕೆ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದಾಯಿತು.

ಶುಲ್ಕ ಹೆಚ್ಚಳದ ಬಗ್ಗೆ ಟೀಕೆಗೆ ಪ್ರತಿಕ್ರಿಯೆಯಾಗಿ ಸರಕಾರವು ಸ್ಥಾಪಿಸಿದ ಸಮಿತಿಯು ಬಡ್ಡಿರಹಿತ ವಿದ್ಯಾರ್ಥಿವೇತನವನ್ನು ನೀಡುವ ವಿದ್ಯಾಲಕ್ಷ್ಮಿ ಯೋಜನೆಯಿಂದ ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಾರೆ ಎಂದು ಪ್ರತಿಪಾದಿಸಿದರು. ಈ ಉಪಕ್ರಮ ಸಹಾಯ ಒದಗಿಸುವ ಗುರಿ ಹೊಂದಿದ್ದರೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಸಂಪೂರ್ಣವಾಗಿ ಪರಿಹರಿಸಲು ಇದರಿಂದ ಕಷ್ಟ ಸಾಧ್ಯ. ವಿಶೇಷವಾಗಿ ಶುಲ್ಕಗಳು ಹೆಚ್ಚುತ್ತಲೇ ಇವೆ. ಹೆಚ್ಚು ಬೋಧನಾ ಶುಲ್ಕ ಸೇರಿದಂತೆ ಇವುಗಳನ್ನು ಜಾರಿ ಗೊಳಿಸಲಾದ ಶುಲ್ಕದ ಹೆಚ್ಚಳ ಐಐಎಂ-ಲಕ್ನೊ ಪ್ರತಿಶತ 10, ಐಐಎಂ-ಅಹಮದಾಬಾದ್ ಮತ್ತು ಐಐಎಂ- ಶಿಲ್ಲಾಂಗ್ ಪ್ರತಿಶತ 5, ಐಐಎಂ-ಕೋಲ್ಕತಾ ಪ್ರತಿಶತ 17.3, ಐಐಎಂ- ಕೋಝಿಕೋಡ್ ಪ್ರತಿಶತ 23.1, ಐಐಎಂ-ರಾಂಚಿ ಪ್ರತಿಶತ 19 ಮತ್ತು ಐಐಎಂ- ತಿರುಚರಾಪಳ್ಳಿ ಪ್ರತಿಶತ 20. ಐಐಟಿ-ದಿಲ್ಲಿಯು 2023ರಲ್ಲಿ ಸೆಮಿಸ್ಟರ್‌ನ ಪೂರ್ಣ ಸಮಯದ ಎಂ.ಟೆಕ್. ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕವನ್ನು ಹೆಚ್ಚಿಸಿದೆ. ಒಟ್ಟು ಶೈಕ್ಷಣಿಕ ಶುಲ್ಕವು ಈಗ ರೂ. 53,100 ಆಗಿದೆ. ಇದು ವಿದ್ಯಾರ್ಥಿ ನಿಲಯದ ಶುಲ್ಕವನ್ನು ಒಳಗೊಂಡಿಲ್ಲ. ಇದು ಕಳೆದ ವರ್ಷದ ಶುಲ್ಕ ರೂ. 26,450 ಪ್ರತಿಶತ 100ರಷ್ಟು ಹೆಚ್ಚಳವಾಗಿದೆ.

ಆಗಾಗ ಶುಲ್ಕದಲ್ಲಿನ ಹೆಚ್ಚಳವು ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಅಥವಾ ಸಾಲದ ಮೂಲಕ ಅಧ್ಯಯನವನ್ನು ಮುಂದುವರಿಸಲು ಕಷ್ಟಕರವಾಗಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ವೆಚ್ಚಗಳೊಂದಿಗೆ ಅಂಚಿನಲ್ಲಿರುವ ಸಮುದಾಯಗಳ ಅನೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಶ್ರೇಯಾಂಕಗಳನ್ನು ಪಡೆದುಕೊಂಡರೂ ಪ್ರತಿಷ್ಠಿತ ಸಂಸ್ಥೆಗಳಾದ ಐಐಟಿ ಮತ್ತು ಐಎಎಂಗಳಿಗೆ ದಾಖಲಾಗುವುದನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಕೆಲವು ವಿದ್ಯಾರ್ಥಿಗಳು ಆರ್ಥಿಕ ಹೊರೆಯನ್ನು ನಿಭಾಯಿಸಲು ಹೆಣಗಾಡುತ್ತಿದ್ದರೆ, ಇನ್ನೂ ಕೆಲವರು ಒತ್ತಡ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿನ ಅಸಮಾನತೆಯಿಂದ ಬಾಯಿಲ್ಲದವರಂತಾಗಿದ್ದಾರೆ. ಶಿಕ್ಷಣದ ಹೆಚ್ಚಿನ ವೆಚ್ಚದಿಂದ ಉಲ್ಬಣಗೊಂಡ ಈ ಒತ್ತಡವು ಮಾನವ ದೃಷ್ಟಿ ಕೋನವನ್ನೂ ಸಹ ಹೊಂದಿದೆ. 2021ರ ಅಂಕಿ ಅಂಶಗಳಂತೆ ಏಳು ವರ್ಷಗಳಲ್ಲಿ ಐಐಟಿ ಮತ್ತು ಐಐಎಂಗಳ 122 ವಿದ್ಯಾರ್ಥಿಗಳು ತಮ್ಮ ಬದುಕನ್ನೇ ಕೊನೆಗೊಳಿಸಿಕೊಂಡಿದ್ದಾರೆ. ಹೆಚ್ಚುತ್ತಿರುವ ಶುಲ್ಕದ ಆರ್ಥಿಕ ಒತ್ತಡ ಮತ್ತು ಉದ್ಯೋಗದ ಭದ್ರತೆಯ ಆತಂಕದಿಂದ ಅನೇಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.

ವಿದ್ಯಾಭ್ಯಾಸ ತೊರೆದವರ ಪರಿಣಾಮ:

ಮತ್ತೊಂದು ಕಟು ವಾಸ್ತವವೆಂದರೆ ಪ್ರತಿಷ್ಠಿತ ಸಂಸ್ಥೆಗಳಿಗೆ ಸೇರಲು ಮನಸ್ಸು ಮಾಡುವ ಅನೇಕ ವಿದ್ಯಾರ್ಥಿಗಳು ಏರುತ್ತಿರುವ ಶಿಕ್ಷಣ ಶುಲ್ಕವನ್ನು ಪಡೆಯಲು ಅಸಮರ್ಥತೆಯ ಕಾರಣದಿಂದ ಹೊರಗುಳಿಯುತ್ತಾರೆ. ಕೇವಲ ಎರಡು ವರ್ಷಗಳಲ್ಲಿ (2017 ಮತ್ತು 2018) 2,461 ವಿದ್ಯಾರ್ಥಿಗಳು ಐಐಟಿಯಿಂದ ಹೊರಗುಳಿದಿದ್ದಾರೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವರದಿ ಸೂಚಿಸಿದೆ. ಕಳೆದ ವರ್ಷ ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಕಳೆದ ಐದು ವರ್ಷಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ 13,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳು, ಐಐಟಿಗಳು, ಐಐಎಂಗಳಿಂದ ಹೊರಗಿದ್ದಾರೆ. ಈ ಅವಧಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಇತರ ಹಿಂದುಳಿದ ವರ್ಗಗಳ 4,596 ವಿದ್ಯಾರ್ಥಿಗಳು, 2,024 ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಮತ್ತು 2,622 ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಸರಕಾರದ ಅಂಕಿ ಅಂಶಗಳು ತೋರಿಸಿವೆ. ಐಐಟಿಗಳಲ್ಲಿ 206, ಒಬಿಸಿ ವಿದ್ಯಾರ್ಥಿಗಳು 1,048, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಮತ್ತು 91 ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಕಳೆದ ಐದು ವರ್ಷಗಳಲ್ಲಿ ಶಾಲೆ ಬಿಟ್ಟಿದ್ದಾರೆ. ಭಾರತದಲ್ಲಿ ಉನ್ನತ ಶಿಕ್ಷಣವನ್ನು ಪ್ರವೇಶಿಸುವಲ್ಲಿ ಮತ್ತು ಉಳಿಸಿಕೊಳ್ಳುವಲ್ಲಿ ಅಂಚಿನಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ಗಮನಾರ್ಹ ಸವಾಲುಗಳನ್ನು ಈ ಸಂಖ್ಯೆಗಳು ಎತ್ತಿ ತೋರಿಸುತ್ತವೆ.

ದಲಿತ ಸಮುದಾಯದ ದುರ್ಬಲ ಆರ್ಥಿಕ ಪರಿಸ್ಥಿತಿಗಳ ಹಿಂದಿನ ಪ್ರಮುಖ ಕಾರಣವೆಂದರೆ ಭಾರತದಲ್ಲಿ ಅವರ ಗುರುತನ್ನು ಇನ್ನೂ ಜಾತಿಯಿಂದಲೇ ಅಳೆಯಲಾಗುತ್ತಿದೆ. ಸಮಾಜದಲ್ಲಿ ಇತರರಿಗೆ ಸರಿ ಸಮಾನಾಗಿ ಕೆಲಸ ಮಾಡಲು ದಲಿತರಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಇದು ಅವರನ್ನು ಆರ್ಥಿಕವಾಗಿ ಅಂಚಿಗೆ ತಳ್ಳಿರುವುದು ಮಾತ್ರವಲ್ಲದೆ ಸಾಮಾಜಿಕವಾಗಿ ದುರ್ಬಲಗೊಳಿಸಿದೆ. ಭಾರತದಲ್ಲಿ ದಲಿತರನ್ನು ತುಳಿತಕ್ಕೊಳಗಾದ ಮತ್ತು ತಾರತಮ್ಯಕ್ಕೊಳಗಾದ ವರ್ಗವೆಂದು ಪರಿಗಣಿಸಲಾಗಿದೆ, ಇದನ್ನು ಸಾಮಾನ್ಯವಾಗಿ ಅಸ್ಪಶ್ಯ ಎಂದು ಲೇಬಲ್ ಮಾಡಲಾಗಿರುತ್ತದೆ. ಐತಿಹಾಸಿಕವಾಗಿ ಈ ಕಳಂಕದ ಅರ್ಥ ದಲಿತರಿಗೆ ಶಿಕ್ಷಣದ ಪ್ರವೇಶವನ್ನು ನಿರಾಕರಿಸಲಾಗಿದೆ ಎಂಬುದಾಗಿದೆ. ಅಸ್ಪಶ್ಯರು ಎಂಬ ಪದವು ಅತ್ಯಂತ ಅನಪೇಕ್ಷಿತ ಮತ್ತು ಅವಮಾನಕರವಾದ ಕೆಲಸಗಳಿಗೆ ಬಲವಂತ ಪಡಿಸಿರುವುದನ್ನು ಸಹ ಸೂಚಿಸುತ್ತದೆ. ನಗರ ಒಳಚರಂಡಿ, ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರ ಕುರಿತು 29 ರಾಜ್ಯಗಳಲ್ಲಿ ನಡೆದ ಇತ್ತೀಚಿನ ಸಮೀಕ್ಷೆಯ ಪ್ರಕಾರ ಈ ಕಾರ್ಮಿಕರಲ್ಲಿ ಪ್ರತಿಶತ 92ರಷ್ಟು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಒಬಿಸಿ ವರ್ಗಗಳಿಗೆ ಸೇರಿದವರು ಎಂದು ಬಹಿರಂಗಪಡಿಸಲಾಗಿದೆ. ಮಾಜಿ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಲ್ ಅವರ 2019ರ ವರದಿಯಂತೆ ಐಐಟಿಗಳಲ್ಲಿ ಪ್ರತಿಶತ 95ರಷ್ಟು ಅಧ್ಯಾಪಕ ಹುದ್ದೆಗಳನ್ನು ಮೇಲ್ಜಾತಿ ಹಿನ್ನೆಲೆಯ ವ್ಯಕ್ತಿಗಳು ಹೊಂದಿದ್ದು ಕೇವಲ ಪ್ರತಿಶತ 5ರಷ್ಟು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಒಬಿಸಿ ವರ್ಗಗಳಿಗೆ ಹಂಚಿಕೆ ಮಾಡಲಾಗಿದೆ. ಈ ಗುಂಪುಗಳು ಭಾರತದ ಜನಸಂಖ್ಯೆಯಲ್ಲಿ ಪ್ರತಿಶತ 70ರಿಂದ 80ರಷ್ಟಿದ್ದಾರೆ. ಐಐಟಿ-ಬಾಂಬೆ ವಿದ್ಯಾರ್ಥಿಗಳು ಆರ್‌ಟಿಐ ಮೂಲಕ ಪಡೆದುಕೊಂಡ ಮಾಹಿತಿಯಿಂದ ಅಸಮಾನತೆ ಮತ್ತಷ್ಟು ಬಹಿರಂಗಗೊಂಡಿದೆ. 24 ಇಲಾಖೆಗಳಲ್ಲಿ ಪರಿಶಿಷ್ಟ ಜಾತಿಯ ಅಧ್ಯಾಪಕರೇ ಇಲ್ಲ. ಪರಿಶಿಷ್ಟ ಪಂಗಡದಲ್ಲಿ 15 ಹುದ್ದೆಗಳ ಕೊರತೆ, ಹಾಗೆಯೇ ಒಬಿಸಿಗಳಲ್ಲಿ 9 ಹುದ್ದೆಗಳ ಕೊರತೆ ಇದೆ. ಈ ಅಂಕಿ ಅಂಶಗಳು ಉದ್ಯೋಗ ಮತ್ತು ಶಿಕ್ಷಣ ಎರಡರಲ್ಲೂ ಆಳವಾಗಿ ಬೇರೂರಿರುವ ಜಾತಿ ಆಧಾರಿತ ಅಸಮಾನತೆಗಳನ್ನು ಎತ್ತಿ ತೋರಿಸುತ್ತವೆ.

ಇನ್ನೂ ಅಸ್ತಿತ್ವದಲ್ಲಿರುವ ಅಡೆ-ತಡೆಗಳು

ಸ್ವಾತಂತ್ರ್ಯಾನಂತರ, ಸಂವಿಧಾನ ಮತ್ತು ಕಲ್ಯಾಣ ಕಾರ್ಯ ವಿಧಾನಗಳಲ್ಲಿನ ನಿಬಂಧನೆಗಳೊಂದಿಗೆ ದಲಿತ ಶಾಲಾ ದಾಖಲಾತಿ ಪ್ರಮಾಣಗಳು ಕಾಲಾನಂತರದಲ್ಲಿ ಸುಧಾರಿಸಿವೆ. ಆದರೂ ದಲಿತ ಮಕ್ಕಳು ಶಿಕ್ಷಣದಲ್ಲಿ ಬಡತನ, ಸಾಮಾಜಿಕ ತಾರತಮ್ಯ ಮತ್ತು ಜಾತಿ ಆಧಾರಿತ ಪೂರ್ವಗ್ರಹ ಸೇರಿದಂತೆ ಗಮನಾರ್ಹ ಅಡೆತಡೆಗಳನ್ನು ಎದುರಿಸುತ್ತಲೆ ಇದ್ದಾರೆ. ದಲಿತ ವಿದ್ಯಾರ್ಥಿಗಳು ಅಥವಾ ಸಾಮಾನ್ಯವಾಗಿ ಅವರು ಉಡುವ ಬಟ್ಟೆ, ಆಡುವ ಭಾಷೆ ಮತ್ತು ಇತರ ಗುರುತುಗಳನ್ನು ಆಧರಿಸಿ ಅವರು ತಮ್ಮ ಮೇಲ್ಜಾತಿ ಶ್ರೀಮಂತ ವರ್ಗದವರೊಡನೆ ಬೆರೆಯಲು ಕಷ್ಟ ಪಡುತ್ತಾರೆ.

ಅನೇಕ ಸಂದರ್ಭಗಳಲ್ಲಿ ಜಾತಿ ಆಧಾರಿತ ಟೀಕೆಗಳು ಮತ್ತು ತಾರತಮ್ಯವೂ ಈ ವಿದ್ಯಾರ್ಥಿಗಳನ್ನು ಹಿಂಸೆಗೊಳಿಸುತ್ತವೆ. ಇದು ಸಾಮಾಜಿಕ ಪ್ರತ್ಯೇಕತೆಗೆ ಕಾರಣವಾಗುತ್ತದೆ. ಕೆಲವು ವಿದ್ಯಾರ್ಥಿಗಳು ಈ ಪೂರ್ವಗ್ರಹದ ಭಾವನಾತ್ಮಕ ನಷ್ಟದಿಂದ ಬಲಿಯಾಗುತ್ತಾರೆ-ಮಹಾರಾಷ್ಟ್ರ ವೈದ್ಯಕೀಯ ಕಾಲೇಜಿನಲ್ಲಿ ಮಹಿಳಾ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಮತ್ತು ಐಐಟಿ-ಬಾಂಬೆ ಮತ್ತು ಐಐಟಿ-ದಿಲ್ಲಿಯ ಇಬ್ಬರು ವಿದ್ಯಾರ್ಥಿಗಳ ಸಂಗತಿಗಳು ಈ ವಾಸ್ತವದ ನೋವಿನ ಅವಶೇಷಗಳಾಗಿವೆ. ಈ ಘಟನೆಗಳು ಅನೇಕ ದಲಿತ ವಿದ್ಯಾರ್ಥಿಗಳ ಆಕಾಂಕ್ಷಿಗಳ ಮೇಲೆ ಜಾತೀವಾದ ಮತ್ತು ಕಿರುಕುಳದ ನಿರಂತರ ಪ್ರತಿಬಿಂಬದ ಅಡಿಗೆರೆಗಳು. ಈ ತೊಂದರೆಗೀಡಾದ ಪರಿಸ್ಥಿತಿಯು ನಿರ್ಣಾಯಕ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಈ ಪ್ರತಿಷ್ಠಿತ ಸಂಸ್ಥೆಗಳು ಈ ಸಮಸ್ಯೆಯನ್ನು ಹೇಗೆ ಪರಿಣಾಮಕಾರಿಯಾಗಿ ಪರಿಹರಿಸಬಹುದು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಸುರಕ್ಷಿತ, ಒಳಗೊಳ್ಳುವ ವಾತಾವರಣವನ್ನು ಹೇಗೆ ಬೆಳೆಸಬಹುದು?

ವಿದ್ಯಾರ್ಥಿಗಳ ಆತ್ಮಹತ್ಯೆಯ ದುರದೃಷ್ಟಕರ ಘಟನೆಗಳು ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಅಪಾರ ಒತ್ತಡವನ್ನು ಸೂಚಿಸುತ್ತವೆ. ಪದವಿಯನ್ನು ಪೂರ್ಣಗೊಳಿಸುತ್ತಿರುವುದರಿಂದ ತಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬ ಅವರ ಕುಟುಂಬದ ನಿರೀಕ್ಷೆಗಳಿಂದ ಅನೇಕ ವಿದ್ಯಾರ್ಥಿಗಳು ಹೊರೆಯಾಗುತ್ತಾರೆ. ಆದರೆ ಭಾರತದಲ್ಲಿ ನಿರುದ್ಯೋಗವು ಅಧಿಕವಾಗಿದೆ. 2024ರಲ್ಲಿ ಐಐಟಿ ಉದ್ಯೋಗಗಳ ಕುರಿತು ಸಲ್ಲಿಸಿದ ಆರ್‌ಟಿಐ ಪ್ರಕಾರ 23 ಐಐಟಿ ಕ್ಯಾಂಪಸ್‌ಗಳಲ್ಲಿ ಸರಿ ಸುಮಾರು 8,000 ವಿದ್ಯಾರ್ಥಿಗಳು (ಶೇ.38) ಈ ವರ್ಷ ಸ್ಥಾನವಿಲ್ಲದೆ ಉಳಿದಿದ್ದಾರೆ. ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ, ಈ ಹೋರಾಟವು ಇನ್ನೂ ಹೆಚ್ಚು ಸ್ಪಷ್ಟತೆ ಒದಗಿಸಿದೆ. ಏಕೆಂದರೆ ಅವರ ಜಾತಿ ಗುರುತಿಸುವಿಕೆಯು ಉದ್ಯೋಗಗಳನ್ನು ಭದ್ರ ಪಡಿಸುವಲ್ಲಿ ಅವರು ಎದುರಿಸುತ್ತಿರುವ ಸವಾಲುಗಳನ್ನು ದ್ವಿಗುಣಗೊಳಿಸುತ್ತವೆ. ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ನಿವಾರಿಸಲು ಮತ್ತು ಜಾತಿ ಆಧಾರಿತ ಅಸಮಾನತೆಗಳನ್ನು ಶಮನಗೊಳಿಸಲು ಶಿಕ್ಷಣ ಮತ್ತು ಉದ್ಯೋಗದಲ್ಲಿ ವ್ಯವಸ್ಥಿತ ಸುಧಾರಣೆಗಳ ಅಗತ್ಯವನ್ನು ಈ ಸಮಸ್ಯೆಗಳು ಒತ್ತಿ ಹೇಳುತ್ತವೆ.

ಕೃಪೆ: ದಿ ಹಿಂದೂ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸುಮಂತ್ ಕುಮಾರ್

contributor

Contributor - ಕನ್ನಡಕ್ಕೆ: ಕೆ.ಎನ್. ಲಿಂಗಪ್ಪ

contributor

Similar News