ಎಂದೆಂದಿಗೂ ಪ್ರಸ್ತುತವೆನಿಸುವ ಕುವೆಂಪು ವೈಚಾರಿಕತೆ

Update: 2024-12-29 03:54 GMT

ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ ಕುವೆಂಪು ತಮ್ಮ ಅಗಾಧ ಪಾಂಡಿತ್ಯದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಆಡುಮುಟ್ಟದ ಸೊಪ್ಪಿಲ್ಲ ಕುವೆಂಪು ಬರೆಯದ ಸಾಹಿತ್ಯವಿಲ್ಲ ಎಂಬುದು ಸಾಹಿತ್ಯ ಕ್ಷೇತ್ರದಲ್ಲಿ ಜನಜನಿತ.

ಯುಗದ ಕವಿ ಎನಿಸಿದ್ದ ಅವರನ್ನು ಕೇವಲ ಕವಿ ಎಂದು ಪರಿಭಾವಿಸಿದರೆ ಅದು ತಪ್ಪಾಗುತ್ತದೆ. ಅವರೊಬ್ಬ ಸಾಮಾಜಿಕ ತತ್ವಜ್ಞಾನಿ, ಶುದ್ಧ ಮಾನವತಾವಾದಿ.

ಇಂದಿನ ವಿಶ್ವವನ್ನು ಆಳುವುದು ವೈಚಾರಿಕತೆಯೇ ಹೊರತು, ವ್ಯಕ್ತಿ ಅಥವಾ ಧರ್ಮಗಳಲ್ಲ. ಕುವೆಂಪು ಇಂದು ಜಗತ್ತಿನಲ್ಲಿ ಇಲ್ಲದಿದ್ದರೂ ಕೂಡ ಅವರ ವೈಚಾರಿಕತೆಗಳು ಮತ್ತು ವಿಶ್ವಮಾನವ ಸಂದೇಶ ಇಂದಿಗೂ ಜೀವಂತವಾಗಿವೆ. ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇಂದು ವ್ಯಾಪಕವಾದ ಬದಲಾವಣೆಗಳು ಮತ್ತು ಪ್ರಗತಿ ಸಾಧಿಸಿದ್ದರೂ ಮೌಢ್ಯ, ಅಂಧಶ್ರದ್ಧೆ, ವರ್ಗ ತಾರತಮ್ಯಗಳು ಬೆಳೆಯುತ್ತಲೇ ಹೋಗುತ್ತಿವೆ. ಸ್ವಾರ್ಥ, ಅಧಿಕಾರ ಲಾಲಸೆ, ವಿಚಾರ ಶೂನ್ಯತೆ ಹೆಚ್ಚಿನ ಜನರನ್ನು ಆಕ್ರಮಿಸಿವೆ. ನಾವು ಭೌತಿಕವಾಗಿ ಬೆಳೆಯುತ್ತಿದ್ದರೂ ಆಂತರಿಕವಾಗಿ ವಿವಿಧ ಸಾಮಾಜಿಕ ರೋಗಗಳಿಂದ ಬಳಲುತ್ತಿದ್ದೇವೆ. ಸಮಾಜ ಸೇವೆ, ಸಾಹಿತ್ಯ, ಸಂಸ್ಕೃತಿ, ಮಾನಸಿಕ ಮತ್ತು ಸಾಮಾಜಿಕ ವಿಶಾಲತೆಗಳಿಗಿಂತ ಹಣ ಗಳಿಸುವಿಕೆ ಅತ್ಯಂತ ಮುಖ್ಯವಾಗುತ್ತಿದೆ.

ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆಯೂ ಕುವೆಂಪುರವರ ವೈಚಾರಿಕ ಪ್ರಜ್ಞೆ ಇಂದಿನ ಸಂದರ್ಭಕ್ಕೆ ಅತ್ಯಗತ್ಯವಾಗಿದೆ. ‘ಸರ್ವೇ ಜನ ಸುಖಿನೋ ಭವಂತು’ ಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ವಿಶ್ವಮಾನವರಾಗಬೇಕಾಗಿದೆ. ‘ಏನಾದರಾಗು ಮೊದಲು ಮಾನವನಾಗು’ ಎಂಬ ಕವಿವಾಣಿ ನಿತ್ಯನೂತನವಾಗಬೇಕಾಗಿದೆ. ಮನುಜಮತ-ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಈ ಪಂಚ ಸೂತ್ರಗಳು ಬದುಕಿನ ದಾರಿದೀಪಗಳಾಗಬೇಕು. ಮನುಷ್ಯನು ಜಾತಿ, ಮತದ ಹೆಸರಿನಲ್ಲಿ ಸಂಕುಚಿತ ಮನೋಭಾವದಿಂದ ಮತ್ತೊಬ್ಬರ ಘನತೆ ಮತ್ತು ವ್ಯಕ್ತಿತ್ವವನ್ನು ಗೌರವಿಸದೆ ಎಲ್ಲರನ್ನೂ ತನ್ನಂತೆಯೇ ಭಾವಿಸಿ ಸಮರಸ ಭಾವದಿಂದ ಮುಂದುವರಿಯಬೇಕೆಂಬ ಜೀವನ ಮಾರ್ಗವೇ ವಿಶ್ವಪಥ.

ಸಮಾಜ ಬೆಳೆಸಿಕೊಂಡಿರುವ ಮೌಢ್ಯತೆಯನ್ನು ಹೊಡೆದೋಡಿಸಿ, ಆಸ್ತಿಕ ಸಮಾಜದ ಸಾಂಪ್ರದಾಯಿಕ ಸಂಕೋಲೆಗಳನ್ನು ಕಿತ್ತೆಸೆಯಲು ಕರೆ ನೀಡಿದ್ದರು ಕುವೆಂಪು. ಅವರು ಕರೆಕೊಟ್ಟ ‘ನೂರು ದೇವರುಗಳ ನೂಕಾಚೆ ದೂರ’, ‘ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ’ ಚಲಿಸಬೇಕಾದ ಮಾನವೀಯತೆ ವೈಚಾರಿಕತೆಯ ನೆಲೆಯಲ್ಲಿ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳಬೇಕಿರುವುದು ನಮ್ಮ ಇಂದಿನ ಅನಿವಾರ್ಯತೆಯಾಗಿದೆ.

ವರ್ಣಾಶ್ರಮ ಪದ್ಧತಿಯನ್ನು ತಿದ್ದುವುದಲ್ಲ ಬದಲಾಗಿ ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು ಎಂಬುದು ರಸಋಷಿಯ ಆಶಯವಾಗಿತ್ತು. ಇಂಗ್ಲಿಷ್‌ನ ನವೋದಯ ಕಾಲದ ರಮ್ಯ ಕವಿಗಳ ಪ್ರಭಾವಕ್ಕೊಳಗಾಗಿ ‘ಬಿಗಿನರ್ಸ್ ಮ್ಯೂಸ್’ ಎಂಬ ಆರು ಕವನಗಳ ಸಂಕಲನವನ್ನು ೧೯೨೨ರಲ್ಲೇ ರಚಿಸಿದ ಕುವೆಂಪು, ಇಂಗ್ಲಿಷ್ ಕವಿ ಜೇಮ್ಸ್ ಕಸಿನ್ ಸಲಹೆಯ ಮೇರೆಗೆ ಕನ್ನಡದಲ್ಲಿ ಸಾಹಿತ್ಯ ರಚಿಸಲು ತೊಡಗಿದರು. ಅವರ ಸಾಹಿತ್ಯ ಸೃಷ್ಟಿ ಎಂತಹವರನ್ನಾದರೂ ಬೆರಗುಗೊಳಿಸುವಂತದ್ದು. ಕಾವ್ಯ, ಕವನ, ಕಥೆ, ಕಾದಂಬರಿ, ವಿಮರ್ಶೆ, ಅನುವಾದ, ನಾಟಕ ಹೀಗೆ ಸಾಹಿತ್ಯದ ಎಲ್ಲಾ ರೂಪಗಳಲ್ಲಿಯೂ ಕೈಯಾಡಿಸಿದ ಕೀರ್ತಿ ಅವರದು.

‘‘ಬಾಯಾರಿ ಬಂದ ಮನುಷ್ಯನಿಗೆ ಕುಡಿಯಲು ನೀರು ಕೊಡಲು ಮನುವಿನ ಅಪ್ಪಣೆಯ ಅಗತ್ಯವೇನು? ಪಂಚಮರ ಮಗುವೊಂದು ಕೆರೆಯಲ್ಲಿ ಮುಳುಗುತಿರೆ, ದಡದಲ್ಲಿ ಮೀಯುತ್ತ ನಿಂತಿರುವ ನಾನು ಮುಟ್ಟಿದರೆ ಬ್ರಹ್ಮತ್ವ ಹೋಗುವುದೆಂದು ಸುಮ್ಮನಿದ್ದರೆ ಶಾಸ್ತ್ರಸಮ್ಮತವದೇನು?’’ ಎಂದು ಮನುಸಿದ್ಧಾಂತವನ್ನು ಆಕ್ರೋಶದಿಂದ ಪ್ರಶ್ನಿಸುತ್ತಾರೆ. ಮನುಷ್ಯನಾದವನಿಗೆ ಆತ್ಮಸಾಕ್ಷಿಯೇ ಅತ್ಯಂತ ದೊಡ್ಡದು. ಆತ್ಮಸಾಕ್ಷಿಯ ಮುಂದೆ ಎಲ್ಲಾ ಶಾಸ್ತ್ರಗಳು ಶೂನ್ಯ, ಮಾನವೀಯತೆಗೆ ವಿರುದ್ಧವಾದ ಯಾವುದೇ ಶಾಸ್ತ್ರ ಅಥವಾ ಗ್ರಂಥಗಳು ಓದಲು ಯೋಗ್ಯವಾದವುಗಳಲ್ಲ ಬದಲಾಗಿ ಅವುಗಳನ್ನು ದೂರ ಬಿಸಾಡಿ ಎಂಬುದನ್ನು ಕುವೆಂಪು ಮಾರ್ಮಿಕವಾಗಿ ಈ ಕವನದಲ್ಲಿ ತಿಳಿಸಿದ್ದಾರೆ. ಆದ್ದರಿಂದಲೇ ಕುವೆಂಪುರವರ ವಿಚಾರಧಾರೆಗಳೂ ಇಂದಿಗೂ, ಎಂದೆಂದಿಗೂ ಪ್ರಸ್ತುತ.

‘ರಾಮಾಯಣ ದರ್ಶನಂ’, ‘ಮಲೆಗಳಲ್ಲಿ ಮದುಮಗಳು’, ‘ಬೆರಳ್‌ಗೆ ಕೊರಳ್’, ‘ಶೂದ್ರ ತಪಸ್ವಿ’ ಹಾಗೂ ‘ಜಲಗಾರ’ ಕೃತಿಗಳಲ್ಲಿ ಇಲ್ಲಿ ಯಾರೂ ಮುಖ್ಯರೂ ಅಲ್ಲ, ಯಾರೂ ಅಮುಖ್ಯರೂ ಅಲ್ಲ ಎಂಬುದನ್ನು ಸ್ಪಷ್ಟಪಡಿಸುವ ಜೊತೆಗೆ ಜಾತಿಗಿಂತ ಮಾನವೀಯತೆಯೇ ಮುಖ್ಯ, ಅದನ್ನು ಬಿಟ್ಟು ಮಿಕ್ಕಿದ್ದೆಲ್ಲಾ ಶೂನ್ಯ ಎಂದು ಪ್ರತಿಪಾದಿಸುತ್ತಾರೆ. ‘‘ನನಗೇಕೆ ಶಿವಗುಡಿಯ ಯಾತ್ರೆ, ಕರ್ಮವೇ ಆರಾಧನೆ, ಸೇವೆಯೇ ಪೂಜೆ, ಪೊರಕೆ ಎನ್ನ ಭಾಗದ ಆರತಿ, ಗುಡಿಸುವುದೇ ನನ್ನ ದೇವರ ಪೂಜೆ’’ ಎನ್ನುವ ಜಲಗಾರನ ಮಾತುಗಳಲ್ಲಿ ನಾವು ಮಾಡುವ ಕೆಲಸವೇ ದೇವರು ಎಂಬುದನ್ನು ತೋರಿಸುತ್ತದೆ. ಕುವೆಂಪು ಅವರ ನಾಟಕಗಳು ವಾಸ್ತವಿಕತೆಯನ್ನು ಋಜುವಾತು ಮಾಡುತ್ತವೆ. ಕಂದಾಚಾರ, ಅಂಧಶ್ರದ್ಧೆ, ವರ್ಣಭೇದ, ಚಾತುರ್ವರ್ಣದಂತಹ ರೋಗಗಳಿಗೆ ಕುವೆಂಪು ತಮ್ಮ ನಾಟಕಗಳಲ್ಲಿ ಪರಿಹಾರ ನೀಡುವ ಮೂಲಕ ಆಧುನಿಕತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ನೀರೆರೆದಿದ್ದಾರೆ.

ಕುವೆಂಪು ಅಷ್ಟು ಸುಲಭವಾಗಿ ನಿಲುಕುವವರಲ್ಲ. ಅವರೊಬ್ಬ ತೀವ್ರ ವಿಚಾರವಾದಿ, ಅಧ್ಯಾತ್ಮವಾದಿ. ಕುವೆಂಪು ಅವರ ಕಾವ್ಯ, ಸಾಹಿತ್ಯ ಸೃಷ್ಟಿಯ ಮುಖ್ಯ ಸೂತ್ರ ವ್ಯಕ್ತಿಯ ಆತ್ಮ ಸ್ವಾತಂತ್ರ್ಯಕ್ಕಾಗಿ ತುಡಿಯುವುದೇ ಆಗಿದೆ. ಕುವೆಂಪು ಅವರ ಕಾವ್ಯಗಳಲ್ಲಿ ಆದರ್ಶ ಮಾನವನಿದ್ದರೆ, ಅವರ ಕಥೆ-ಕಾದಂಬರಿಗಳಲ್ಲಿ ಮಾನವ ಸ್ವಭಾವ, ಮಾನವನ ಕೆಟ್ಟ ಮನೋಭಾವಗಳು, ಈ ಕಾಲಘಟ್ಟದಲ್ಲಿ ಭಾರತೀಯ ಸಮಾಜವನ್ನು ಕಾಡುತ್ತಿರುವ ಅಸ್ಪಶ್ಯತೆ, ಜಾತಿ ವ್ಯವಸ್ಥೆ ಮತ್ತು ಸ್ತ್ರಿ ವಿರೋಧಿ ಧೋರಣೆಗಳನ್ನು ಖಂಡಿಸುವ ಜೊತೆಗೆ ಅವುಗಳ ನಿಷ್ಠುರ ಚಿತ್ರಣವನ್ನು ಕಾಣಬಹುದು.

ಇಡೀ ವಿಶ್ವದ ಸಾಕ್ಷಿಪ್ರಜ್ಞೆಯಂತಿರುವ ಮಹಾನ್ ಕವಿ, ವಿಶ್ವ ಮಾನವ ಸಂದೇಶದ ಮೂಲಕ ಮನುಜ ಮತ-ವಿಶ್ವಪಥ ಸಂದೇಶವನ್ನು ಕೊಡುವ ಮೂಲಕ ಸಾಮಾಜಿಕವಾಗಿ ರಾಷ್ಟ್ರದಾದ್ಯಂತ ಸೌಹಾರ್ದದ ಬೀಜಗಳನ್ನು ಬಿತ್ತಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸಿನ ಜಾತಿ ಜಾತಿವ್ಯವಸ್ಥೆಯಿಲ್ಲದ, ಚಾತುರ್ವರ್ಣದಿಂದ ದೂರವಾದ ನವ ಸಮಾಜದ ನಿರ್ಮಾಣಕ್ಕಾಗಿ, ಕುವೆಂಪುರವರ ಕನಸಿನ ವಿಶ್ವ ಮಾನವತೆಯ ಸಮಾಜದ ನಿರ್ಮಾಣಕ್ಕಾಗಿ ವೈಚಾರಿಕ ನೆಲೆಗಟ್ಟಿನ ವೈಜ್ಞಾನಿಕ ಮನೋಧರ್ಮ ಮುಖ್ಯವಾಗಿ ಕಂಡು ಬರುತ್ತದೆ. ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ ಅವರು ತಮ್ಮ ಅಗಾಧ ಪಾಂಡಿತ್ಯದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಆಡುಮುಟ್ಟದ ಸೊಪ್ಪಿಲ್ಲ ಕುವೆಂಪು ಬರೆಯದ ಸಾಹಿತ್ಯವಿಲ್ಲ ಎಂಬುದು ಸಾಹಿತ್ಯ ಕ್ಷೇತ್ರದಲ್ಲಿ ಜನಜನಿತ.

ಯುಗದ ಕವಿ ಎನಿಸಿದ್ದ ಅವರನ್ನು ಕೇವಲ ಕವಿ ಎಂದು ಪರಿಭಾವಿಸಿದರೆ ಅದು ತಪ್ಪಾಗುತ್ತದೆ. ಅವರೊಬ್ಬ ಸಾಮಾಜಿಕ ತತ್ವಜ್ಞಾನಿ, ಶುದ್ಧ ಮಾನವತಾವಾದಿ, ನಿರಂಕುಶಮತಿಗಳು ಎಲ್ಲದ್ದಕ್ಕಿಂತ ಹೆಚ್ಚಾಗಿ ವೈಜ್ಞಾನಿಕ ಕ್ರಾಂತಿಕಾರರು. ಕುವೆಂಪು ನಿಷ್ಠುರತೆಯನ್ನು ತಮ್ಮ ಜೀವನದಲ್ಲಿ ಹಾಸುಹೊಕ್ಕಾಗಿಸಿಕೊಂಡಿದ್ದರು. ರಾಜಕಾರಣಿಗಳು ಮತ್ತು ಮಠಾಧೀಶರುಗಳಿಂದ ಆದಷ್ಟು ಅಂತರವನ್ನು ಕಾಪಾಡಿಕೊಂಡಿದ್ದರು. ಅದೇ ರೀತಿ ಅವರು ಎಂದೂ ಪ್ರಶಸ್ತಿಗಳ ಬೆನ್ನು ಹತ್ತಿದವರಲ್ಲ. ಕುವೆಂಪು ಸಾಹಿತ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ, ಆದರೂ ಅವರ ವೈಜ್ಞಾನಿಕ ದೃಷ್ಟಿಕೋನಗಳು, ಅಧ್ಯಾತ್ಮ ನಿಲುವುಗಳು, ವಿಶ್ವ ಮಾನವ ಸಂದೇಶಗಳ ಕುರಿತು ಹೊಸದಾಗಿ ಚರ್ಚೆಗಳಾಗಬೇಕಾಗಿವೆೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ಅಮ್ಮಸಂದ್ರ ಸುರೇಶ್

contributor

Similar News