ದೇಶದಲ್ಲೇ ಮೊದಲ ಬಾರಿಗೆ ಅರಣ್ಯ ಭೂಮಿ ರಕ್ಷಣೆಗೆ ಉಪಗ್ರಹ ಬಳಕೆ

Update: 2021-07-06 16:34 GMT

ಶಿವಮೊಗ್ಗ, ಜು.6: ಅರಣ್ಯ ಒತ್ತುವರಿ ತಡೆಯಲು ಅರಣ್ಯ ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಉಪಗ್ರಹದ ಸಹಾಯದಿಂದ ಅರಣ್ಯ ಭೂಮಿ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ.

ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಅರಣ್ಯ ಒತ್ತುವರಿ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಸುಮಾರು 50 ವರ್ಷಗಳಿಂದ ಬಗರ್‌ಹುಕುಂ, ಒತ್ತುವರಿ ಹೆಸರಿನಲ್ಲಿ ಲಕ್ಷಾಂತರ ಹೆಕ್ಟೇರ್ ಅರಣ್ಯ ನಾಶವಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ಅರಣ್ಯ ಇಲಾಖೆ ಉಪಗ್ರಹದ ಮೊರೆ ಹೋಗಿದೆ.

ಏನಿದು ಯೋಜನೆ?: ಕರ್ನಾಟಕ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ)ದಿಂದ ಉಪಗ್ರಹ ಚಿತ್ರ ಆಧಾರಿತ ಅರಣ್ಯ ಭೂಮಿ ನಕಾಶೆ ಸಿದ್ಧಪಡಿಸಿದ್ದು, ಇದು ಅರಣ್ಯ ಭೂಮಿಯೊಳಗೆ ಯಾವುದೇ ಬದಲಾವಣೆಗಳು ಕಂಡುಬಂದರೆ ಸ್ಥಳೀಯವಾಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡುತ್ತದೆ. ಮಾಹಿತಿ ಆಧಾರದ ಮೇಲೆ ಅರಣ್ಯಾಧಿಕಾರಿಗಳು ಸ್ಥಳ ಭೇಟಿ ಮಾಡಿ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. ಈಗಾಗಲೇ ಕಾರ್ಯಾಚರಣೆ ಆರಂಭವಾಗಿದ್ದು, ಒತ್ತುವರಿದಾರರ ವಿರುದ್ಧ ನೂರಾರು ದೂರುಗಳು ದಾಖಲಾಗಿವೆ. ಪ್ರತಿ 21 ದಿನಗಳಿಗೊಮ್ಮೆ ಉಪಗ್ರಹ ಆಧಾರಿತ ಚಿತ್ರಗಳು ರವಾನೆಯಾಗಲಿವೆ. 10x 10 ಮೀಟರ್ ವ್ಯಾಪ್ತಿವರೆಗೂ ಉಪಗ್ರಹ ಸ್ಕ್ಯಾನ್ ಮಾಡುತ್ತದೆ. 21 ದಿನಗಳ ಅಂತರದಲ್ಲಿ ಯಾವುದೇ ಬದಲಾವಣೆ ಕಂಡುಬಂದರೆ ಆ ಪ್ರದೇಶವನ್ನು ಗುರುತು ಮಾಡಿ ಅರಣ್ಯಾಧಿಕಾರಿಗಳಿಗೆ ಸರ್ವೇ ನಂಬರ್ ಸಮೇತ ಫೋಟೊ ಆಧಾರಿತ ಮೆಸೇಜ್ ಅರಣ್ಯಾಧಿಕಾರಿಗಳ ಮೊಬೈಲ್‌ಗೆ ರವಾನೆಯಾಗಲಿದೆ. ಈ ಪ್ರಕ್ರಿಯೆಯು ಪ್ರತಿ 21 ದಿನಗಳಿಗೊಮ್ಮೆ ನಡೆಯುತ್ತಿರುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹತ್ತಿರದ ಬದಲಾವಣೆಗಳನ್ನು ಗಮನಿಸುವ ಸಾಧ್ಯತೆ ಇದೆ.

ನೂರಾರು ವರ್ಷಗಳಿಂದ ಇರುವ ಅರಣ್ಯ ಭೂಮಿ ದಾಖಲೆಗಳ ಆಧಾರದ ಮೇಲೆ ಗಡಿಯನ್ನು ಗುರುತಿಸಲಾಗಿದೆ. ಶೇ.80ರಷ್ಟು ದಾಖಲೆಗಳು ಡಿಜಿಟಲೀಕರಣಗೊಳಿಸಲಾಗಿದೆ. ಈಗಾಗಲೇ ಒತ್ತುವರಿ ಮಾಡಿರುವ ಜಮೀನು ಕೂಡ ಇದರಲ್ಲಿ ತಿಳಿಯಲಿದೆ. ಈಗಾಗಲೇ ಒತ್ತುವರಿ ಪ್ರಕರಣಗಳು ಕೋರ್ಟ್‌ನಲ್ಲಿ ಇರುವುದರಿಂದ ಅದರ ಬಗ್ಗೆ ಯಾವುದೇ ಕ್ರಮ ಸದ್ಯಕ್ಕಿಲ್ಲ. ಹೊಸ ಒತ್ತುವರಿಯನ್ನು ತಡೆಯುವುದು ಯೋಜನೆಯ ಉದ್ದೇಶವಾಗಿದೆ.

ಎಷ್ಟು ಅರಣ್ಯ ಕುಸಿದಿದೆ ?
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಅರಣ್ಯ ಭೂಮಿ ಕುಸಿಯುತ್ತಿದ್ದು, ಪ್ರಸ್ತುತ 41,590 ಚದರ ಕಿ.ಮೀ. ಅರಣ್ಯ ಭೂಮಿ ಇದೆ. ಇದು ರಾಜ್ಯದ ಭೂಪ್ರದೇಶದ ಶೇ.21.69ರಷ್ಟು ಮಾತ್ರ. ಪಶ್ಚಿಮಘಟ್ಟ ಜಿಲ್ಲೆಗಳಲ್ಲಿ ಅರಣ್ಯ ಭೂಮಿ ಹೆಚ್ಚಾಗಿರುವುದು ಬಿಟ್ಟರೆ ಉಳಿದ ಜಿಲ್ಲೆಗಳಲ್ಲಿ ಅತಿ ಕಡಿಮೆ ಇದೆ. ರಾಜ್ಯದಲ್ಲಿ ಒಟ್ಟು ಭೂ ಪ್ರದೇಶಕ್ಕಿಂತ ಅತಿ ಕಡಿಮೆ ಅರಣ್ಯ ಭೂಮಿ ಹೊಂದಿರುವ ಜಿಲ್ಲೆ ಬಿಜಾಪುರ. ಇಲ್ಲಿ 0.22ರಷ್ಟು ಮಾತ್ರ ಅರಣ್ಯ ಭೂಮಿ ಇದೆ. ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು 122.51 ಚದರ ಕಿ.ಮೀ ರಷ್ಟು ಅರಣ್ಯ ಭೂಮಿ ಇದೆ. ನಗರೀಕರಣ, ಬಗರ್‌ಹುಕುಂ, ವಿವಿಧ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಅರಣ್ಯ ಭೂಮಿ ನಾಶವಾಗುತ್ತಿದ್ದು, ಪ್ರತಿ ವರ್ಷ ಕಡಿಮೆಯಾಗುತ್ತಿದೆ. 2020ರ ವರದಿ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ 49.22 ಚದರ ಕಿ.ಮೀ., ಹಾವೇರಿ 17.75 ಚ.ಕಿ.ಮೀ., ಧಾರವಾಡ 7.58, ಗದಗ 1.30, ಬಾಗಲಕೋಟೆಯಲ್ಲಿ 0.03 ಚದರ ಕಿ.ಮೀ ಅರಣ್ಯ ಕುಸಿದಿದೆ.

ಹೊಸ ಒತ್ತುವರಿ ತಡೆ
ಈಗಾಗಲೇ ನೂರಾರು ವರ್ಷದಿಂದ ಒತ್ತುವರಿಗಳು ನಡೆದಿದ್ದು, ಕೆಲವು ಕಡೆ ಪೋಡಿ, ಇಂಡೀಕರಣ ಆಗದ ಲಕ್ಷಾಂತರ ಪ್ರಕರಣಗಳು ಬಾಕಿ ಇವೆ. ಜಲಾಶಯಗಳಿಗೆ ಮನೆ, ಜಮೀನು ಬಿಟ್ಟುಕೊಟ್ಟ ಸಾವಿರಾರು ಜನರಿಗೆ ಈಗಲೂ ನ್ಯಾಯ ಸಿಕ್ಕಿಲ್ಲ. ಅವರೆಲ್ಲರೂ ಸರಕಾರದ ಆದೇಶದಂತೆ ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ನೂರಾರು ವರ್ಷಗಳ ಹಳೆಯ ದಾಖಲೆಗಳನ್ನು ಅಪ್‌ಲೋಡ್ ಮಾಡಿರುವುದರಿಂದ ಇವರಿಗೆ ಸಂಕಷ್ಟಕ್ಕೆ ಸಿಲುಕುವ ಆತಂಕವಿತ್ತು. ಅರಣ್ಯಾಧಿಕಾರಿಗಳ ಪ್ರಕಾರ ಇಂತಹ ಯಾವುದೇ ಹಳೇ ಒತ್ತುವರಿ ವಿರುದ್ಧ ಕೈಹಾಕದೆ ಈಗಿರುವ ಅರಣ್ಯ ಭೂಮಿಯಲ್ಲಿ ಹೊಸ ಚಟುವಟಿಕೆಗಳು ಕಂಡುಬಂದರೆ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಹೊಸ ಒತ್ತುವರಿ ಮಾಡಿದ 15 ಜನರ ವಿರುದ್ಧ ಪ್ರಕರಣ ದಾಖಲು
ಉಪಗ್ರಹದಿಂದ ನಮಗೆ 75 ಅಲರ್ಟ್‌ಗಳು ಬಂದಿವೆ. ಅದರಲ್ಲಿ 15 ದೂರು ದಾಖಲಿಸಲಾಗಿದೆ. ಜಮೀನಿನ ಕಸ ತಂದು ಸುರಿದ ಚಿತ್ರವೂ ಇತ್ತೀಚೆಗೆ ರವಾನೆಯಾಗಿತ್ತು. ಅರಣ್ಯ ಗಡಿಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಇದರಿಂದ ಅಧಿಕಾರಿಗಳ ಜವಾಬ್ದಾರಿಯೂ ಹೆಚ್ಚಿದೆ. ಇನ್ಮುಂದೆ ಒತ್ತುವರಿ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಿವಮೊಗ್ಗ ಸಿಸಿಎಫ್ ಆರ್.ರವಿಶಂಕರ್ ತಿಳಿಸಿದ್ದಾರೆ.

Writer - ಶರತ್ ಪುರದಾಳ್

contributor

Editor - ಶರತ್ ಪುರದಾಳ್

contributor

Similar News