ಪಕ್ಷದ ಕಾರ್ಯಕರ್ತರು ಸರಕಾರಿ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ರಾಯಭಾರಿಗಳು: ಉಮಾನಾಥ್ ಕೋಟ್ಯಾನ್

Update: 2021-07-12 13:42 GMT

ಉಡುಪಿ, ಜು.12: ಕೇಂದ್ರ, ರಾಜ್ಯ ಸರಕಾರದ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಜನರ ಮನೆ, ಮನ ಮುಟ್ಟಿಸುವ ರಾಯಭಾರಿಗಳಾಗಬೇಕು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.

ಅಜ್ಜರಕಾಡಿನ ಪುರಭವನದಲ್ಲಿ ಸೋಮವಾರ ನಡೆದ ಉಡುಪಿ ಜಿಲ್ಲಾ ಬಿಜೆಪಿ ಮೂರನೆ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡುತಿದ್ದರು. ಪಕ್ಷ ಸಂಘಟನೆ ಮೂಲಕ ಜಿಪಂ, ತಾಪಂ ಚುನಾವಣೆಯಲ್ಲಿ ಗೆಲುವಿನ ಸವಾಲು ನಿಭಾಯಿಸಬೇಕು. ಜನರ ಬಳಿಗೆ ತೆರಳಿ ಸಮಸ್ಯೆ ಅರಿತು ಸ್ಪಂದಿಸಿದರೆ ಪಕ್ಷ ಸಂಘಟನೆ ಮತ್ತಷ್ಟು ಗಟ್ಟಿಯಾಗಲು ಸಾಧ್ಯ ಎಂದರು.

ಸಭೆಯನ್ನು ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಜಿಪಂ, ತಾಪಂ ಚುನಾವಣಾ ಮೀಸಲು ಎರಡು ತಿಂಗಳಲ್ಲಿ ಘೋಷಣೆಯಾಗಲಿದ್ದು ಏಳು ತಾಪಂಗಳಲ್ಲಿ ಅಧಿಕಾರದ ಜೊತೆಗೆ ಜಿಪಂ 30ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದೆ. ಬ್ರಹ್ಮಾವರದಲ್ಲಿ ನೂತನವಾಗಿ ಕೇಂದ್ರೀಯ ಕೃಷಿ ವಿವಿ ಸ್ಥಾಪನೆ ಬೇಡಿಕೆ ಕುರಿತು ಕಾರ್ಯಕಾರಿಣಿಯಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಭೆಯಲ್ಲಿ ಹಾಜರಿದ್ದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಸ್ವಾಗತಿಸಿದರು. ರೇಶ್ಮಾ ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್ ಎಂ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ