ಒಲಿಂಪಿಕ್ಸ್ :ಬೆಳ್ಳಿ ವಿಜೇತೆ ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ 2 ಕೋಟಿ ರೂ.ಬಹುಮಾನ, ರೈಲ್ವೆ ಹುದ್ದೆಯಲ್ಲಿ ಭಡ್ತಿ
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ ಸನ್ಮಾನಿಸಿದರು ಹಾಗೂ ಈಶಾನ್ಯ ರೈಲ್ವೆಯಲ್ಲಿ ಭಡ್ತಿಯ ಜೊತೆಗೆ 2 ಕೋಟಿ ರೂ. ಬಹುಮಾನ ಘೋಷಿಸಿದರು.
ಮೀರಾಬಾಯಿ ಚಾನು ಅವರು ತಮ್ಮ ಪ್ರತಿಭೆ, ಕುಶಲತೆ ಹಾಗೂ ಸ್ಥೈರ್ಯದಿಂದ ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದ್ದಾರೆ ಎಂದು ಸಚಿವರು ಹೇಳಿದರು.
"ಭಾರತದ ಹೆಮ್ಮೆ ಮಿರಾಬಾಯಿ ಚಾನು ಅವರಿಗೆ ಅಭಿನಂದಿಸುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಅವರಿಗೆ ಭಾರತೀಯ ರೈಲ್ವೆ ಅಭಿನಂದನೆ ಸಲ್ಲಿಸುತ್ತದೆ, ಸಾಧನೆಯನ್ನು ಗೌರವಿಸುತ್ತದೆ. ಅವರಿಗೆ 2 ಕೋ.ರೂ. ಬಹುಮಾನ ಹಾಗೂ ರೈಲ್ವೆ ಹುದ್ದೆಯಲ್ಲಿ ಭಡ್ತಿ ನೀಡಲಾಗುವುದು . ಭಾರತಕ್ಕಾಗಿ ಹೀಗೆ ಗೆಲ್ಲುತ್ತಲೇ ಇರಿ! " ಎಂದು ವೈಷ್ಣವ್ ಟ್ವೀಟ್ ಮಾಡಿದ್ದಾರೆ.
ಸೋಮವಾರ ಸಂಜೆ ಭಾರತಕ್ಕೆ ಮರಳಿದ ಮೀರಾಬಾಯಿ ಚಾನು, ಒಲಿಂಪಿಕ್ಸ್ ನಲ್ಲಿ 49 ಕೆಜಿ ವಿಭಾಗದಲ್ಲಿ ಒಟ್ಟು 202 ಕೆಜಿ (87 ಕೆಜಿ + 115 ಕೆಜಿ) ತೂಕವನ್ನು ಎತ್ತಿ ಹಿಡಿದು ಬೆಳ್ಳಿ ಗೆದ್ದಿದ್ದರು. 21 ವರ್ಷಗಳ ಬಳಿಕ ಭಾರತದ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಈ ಸಾಧನೆ ಮಾಡಿದ್ದರು. 2000 ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚು ಗೆದ್ದ ಸಾಧನೆ ಮಾಡಿದ್ದರು.
ಮಣಿಪುರದ ಚಾನು ಅವರು 2018 ರ ಎಪ್ರಿಲ್‌ನಲ್ಲಿ ಈಶಾನ್ಯ ಗಡಿನಾಡು ರೈಲ್ವೆಯಲ್ಲಿ ವಿಶೇಷ ಕರ್ತವ್ಯ (ಕ್ರೀಡೆ) ಅಧಿಕಾರಿಯಾಗಿ ಭಡ್ತಿ ಪಡೆದಿದ್ದರು.