ಮಿಲ್ಖಾ ಸಿಂಗ್ ಇದ್ದಿದ್ದರೆ ನೀರಜ್ ಸಾಧನೆಗೆ ಹೆಮ್ಮೆಪಡುತ್ತಿದ್ದರು: ಪಿ.ಟಿ.ಉಷಾ

Update: 2021-08-08 04:15 GMT
ಎಡದಿಂದ(ನೀರಜ್ ಚೋಪ್ರ, ಪಿ.ಟಿ.ಉಷಾ, ಮಿಲ್ಖಾ ಸಿಂಗ್) 

ಹೊಸದಿಲ್ಲಿ, ಆ.8: ಒಲಿಂಪಿಕ್ಸ್ ಇತಿಹಾಸದಲ್ಲೇ ಅಥ್ಲೆಟಿಕ್ಸ್‌ನಲ್ಲಿ ಮೊಟ್ಟಮೊದಲ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಛೋಪ್ರಾ ಅವರ ಸಾಧನೆ ಬಗ್ಗೆ ಮಿಲ್ಖಾ ಸಿಂಗ್ ಇದ್ದಿದ್ದರೆ ಅತೀವ ಹೆಮ್ಮೆಪಡುತ್ತಿದ್ದರು ಎಂದು ಭಾರತದ ಮಾಜಿ ಓಟಗಾರ್ತಿ ಪಿ.ಟಿ.ಉಷಾ ಪ್ರತಿಕ್ರಿಯಿಸಿದ್ದಾರೆ.

"ನಾನು 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸಿದ ದಿನದಿಂದಲೂ ಭಾರತೀಯ ಅಥ್ಲೀಟ್ ಪದಕ ಗೆಲ್ಲಬೇಕು ಎಂಬ ಕನಸು ಕಾಣುತ್ತಿದ್ದೆ. 1984ರಲ್ಲಿ ನಾನು 100ನೇ ಒಂದು ಸೆಕೆಂಡ್‌ನಷ್ಟು ಕೂದಲೆಳೆ ಅಂತರದಿಂದ ಕಂಚಿನ ಪದಕ ತಪ್ಪಿಸಿಕೊಂಡು ನಾಲ್ಕನೇ ಸ್ಥಾನ ಗಳಿಸಿದ್ದೆ. ಆ ಬಗ್ಗೆ ನಾನು ಕಳೆದ 35 ವರ್ಷಗಳಿಂದ ಯೋಚಿಸುತ್ತಿದ್ದೆ. ಅಥ್ಲೆಟಿಕ್ಸ್ ಎಲ್ಲ ಕ್ರೀಡೆಗಳ ತಾಯಿ. ಎಲ್ಲ ಕ್ರೀಡೆಗಳು ಕಠಿಣವಾದರೂ, ಅಥ್ಲೆಟಿಕ್ಸ್ ಅದರಲ್ಲೂ ಅತ್ಯಂತ ಕಠಿಣ" ಎಂದು ಉಷಾ ಬಣ್ಣಿಸಿದರು.

ಮಿಲ್ಖಾಜಿ ಮತ್ತು ನಾನು ಇಬ್ಬರೂ ನಾಲ್ಕನೇ ಸ್ಥಾನ ಪಡೆದಿದ್ದೆವು. ಈ ಸಾಧನೆಯನ್ನು ಇಡೀ ಭಾರತ ಶ್ಲಾಘಿಸಿತ್ತು. ಮಿಲ್ಖಾಜಿ ಇದ್ದಿದ್ದರೆ ನನ್ನಂತೆಯೇ ನೀರಜ್ ಬಗ್ಗೆ ಹೆಮ್ಮೆಪಡುತ್ತಿದ್ದರು" ಎಂದು ವಿವರಿಸಿದರು.

"ಭಾರತೀಯ ಒಲಿಂಪಿಕ್ ಚಿನ್ನ ಗೆಲ್ಲಬೇಕು ಎಂದು ನಾನು ಬಯಸಿದ್ದೆ. ಕೇರಳದಲ್ಲಿ ಅಥ್ಲೆಟಿಕ್ಸ್ ಹೆಚ್ಚು ಜನಪ್ರಿಯವಾಗಿರುವುದರಿಂದ ನಾವು ಹೆಚ್ಚಾಗಿ ಟ್ರ್ಯಾಕ್ ಸ್ಪರ್ಧೆಗಳನ್ನು ವೀಕ್ಷಿಸುತ್ತೇವೆ. ಆದರೆ ಈ ಬಾರಿ ನಾವು ನೀರಜ್ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದ್ದರಿಂದ ನಾವೆಲ್ಲ ಒಟ್ಟಾಗಿ ಜಾವೆಲಿನ್ ಫೈನಲ್ ನೋಡುತ್ತಿದ್ದೆವು. ಅರ್ಹತಾ ಸುತ್ತನ್ನೂ ನಾವು ನೋಡಿದ್ದೆವು. ಅಲ್ಲಿ ಒಂದೇ ಎಸೆತದಲ್ಲೇ ಅತ್ಯುತ್ತಮ ಸಾಧನೆ ತೋರಿದ್ದರು ಎಂದು ಹೇಳಿದರು.

ನೀರಜ್ ಚಿನ್ನ ಗೆಲ್ಲುತ್ತಾರೆ ಎಂದು ನಾನು ಭಾವಿಸಿದ್ದರೂ, ಜೊಹಾನೆಸ್ ವೆಟ್ಟರ್ ವಿಶ್ವದಲ್ಲಿ ಅತ್ಯುತ್ತಮ ಜಾವೆಲಿನ್ ಪಟು. ಆದರೆ ನೀರಜ್ ನಿಯತವಾಗಿ 85 ಮೀಟರ್ ಎಸೆಯುತ್ತಿದ್ದರು. ಫೈನಲ್‌ನಲ್ಲಿ ಅವರು ಅತೀವ ಆತ್ಮವಿಶ್ವಾಸದಿಂದ ಇದ್ದರು. ಅತ್ಯುನ್ನತ ಫಾರ್ಮ್‌ನಲ್ಲಿರುವ ಅಥ್ಲೀಟ್‌ಗಳನ್ನು ನಾನು ಗುರುತಿಸಬಲ್ಲೆ. ಛೋಪ್ರಾ ಅರ್ಹತಾ ಸುತ್ತು ಹಾಗೂ ಫೈನಲ್‌ನಲ್ಲಿ ನಡೆದಾಡುತ್ತಿದ್ದ ರೀತಿಯಿಂದಲೇ ಅದನ್ನು ಗುರುತಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು. ಪೋಲಂಡ್‌ನಲಿ ಛೋಪ್ರಾ ವಿಶ್ವ ಜ್ಯೂನಿಯರ್ ಚಾಂಪಿಯನ್‌ಶಿಪ್ ಗೆದ್ದಿದ್ದೂ ನೆನಪಿದೆ ಎಂದು ಉಷಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News