ವಿದ್ಯುತ್ ತಿದ್ದುಪಡಿ ಮಸೂದೆ-2021 ಕಾರ್ಪೊರೇಟ್ ಲಾಭ ಪ್ರಖರ: ರೈತ, ಕಾರ್ಮಿಕರ ಬದುಕು ಬರ್ಬರ

Update: 2021-08-10 19:30 GMT

ಮಾರುಕಟ್ಟೆ ಮತ್ತು ಲಾಭವೇ ಮುಖ್ಯವಾದ ಕಾರ್ಪೊರೇಟ್ ಕಂಪೆನಿಗಳಿಗೆ ಸರಕಾರವು ಸರಕು ಮತ್ತು ಸೇವೆ ಒದಗಿಸುವುದು ಹಾಗೂ ಅದರಲ್ಲಿ ಸಬ್ಸಿಡಿ-ಕ್ರಾಸ್ ಸಬ್ಸಿಡಿ ಅನುಸರಿಸುವುದು ಅತಿದೊಡ್ಡ ಮಾರುಕಟ್ಟೆ ವಿರೋಧಿ ತತ್ವವಾಗಿದೆ. ಆದ್ದರಿಂದ ಅವು ಸರಕಾರಗಳು ಸರಕು-ಸೇವಾ ಉದ್ಯಮಗಳಿಂದ ಹೊರನಡೆಯಬೇಕೆಂದೂ ಹಾಗೂ ಗ್ರಾಹಕರಿಗೆ ಬೆಲೆ ವಿಧಿಸುವ ಅಧಿಕಾರವನ್ನು ತಮಗೆ ಕೊಡಬೇಕೆಂದೂ ಆಗ್ರಹಿಸುತ್ತಾ ಬಂದಿವೆ. ಅದರ ಭಾಗವಾಗಿಯೇ ಸರಕಾರಿ ಕ್ಷೇತ್ರಗಳೆಲ್ಲಾ ಇದ್ದಕ್ಕಿದ್ದಂತೆ ನಷ್ಟ ಎದುರಿಸುವ ಪವಾಡಗಳು ಶುರುವಾದವು.



ಭಾಗ-1

ಇದೇ ಆಗಸ್ಟ್ 10ರಂದು ಸಂಸತ್ತಿನಲ್ಲಿ ಮಂಡನೆಯಾಗಬಹುದು ಎಂದು ಭಾವಿಸಲಾಗಿದ್ದ ವಿದ್ಯುತ್ ತಿದ್ದುಪಡಿ ಮಸೂದೆ-2021, ಪ್ರಾಯಶಃ ಈ ಅಧಿವೇಶನದಲ್ಲಿ ಮಂಡನೆಯಾಗಲಾರದು. ಈ ಸೂಚನೆ ದೊರೆತಿದ್ದರಿಂದ ಆಗಸ್ಟ್ 10ರಂದು ದೇಶಾದ್ಯಂತ ವಿದ್ಯುತ್ ಇಲಾಖೆ ನೌಕರರು ಹಾಗೂ ರೈತರು ಜಂಟಿಯಾಗಿ ನಡೆಸಬೇಕೆಂದಿದ್ದ ದೇಶವ್ಯಾಪಿ ಹೋರಾಟವನ್ನು ಮುಂದೂಡಿದ್ದಾರೆ. ತಲೆಯ ಮೇಲಿನ ಕತ್ತಿ ಇನ್ನು ತೂಗುತ್ತಿದೆ

ಆದರೆ ಮೋದಿ ಸರಕಾರವು ತನ್ನ ಗುಪ್ತ ಅಜೆಂಡಾದ ಭಾಗವಾಗಿ ದೇಶವಿರೋಧಿ-ಜನದ್ರೋಹಿ ಕಾಯ್ದೆಗಳನ್ನು ಜಾರಿಗೆ ತರುವಲ್ಲಿ ಕಳೆದ ಏಳು ವರ್ಷಗಳಿಂದ ಅನುಸರಿಸುತ್ತಿರುವ ಸಂವಿಧಾನ ವಿರೋಧಿ ತಂತ್ರ-ಕುತಂತ್ರಗಳನ್ನು ಗಮನಿಸಿದಾಗ ಪ್ರಜ್ಞಾವಂತ ಜನರು ಹಿಂದೆಂದಿಗಿಂತಲೂ ಹೆಚ್ಚಿನ ಎಚ್ಚರದಲ್ಲಿರುವ ಅಗತ್ಯವಂತೂ ತುಂಬಾ ಇದೆ. ಈ ವಿದ್ಯುತ್ ಮಸೂದೆಯನ್ನೇ ಗಮನಿಸಿ: 2020ರ ಡಿಸೆಂಬರ್ 30ರಂದು ರೈತ ನಾಯಕರ ಜೊತೆ ದಿಲ್ಲಿಯಲ್ಲಿ ನಡೆದ ನಾಲ್ಕನೇ ಸುತ್ತಿನ ಸಭೆಯಲ್ಲಿ ಈ ಮಸೂದೆಯನ್ನು ಕೈಬಿಡುವುದಾಗಿ ಮೋದಿ ಸರಕಾರ ಲಿಖಿತ ಭರವಸೆ ನೀಡಿತ್ತು. ಆದರೂ ಸರಕಾರ ಮಾನ್ಸೂನ್ ಅಧಿವೇಶನದ ವೇಳಾಪಟ್ಟಿಯಲ್ಲಿ ಸೇರಿಸಲು ವಿದ್ಯುತ್ ತಿದ್ದುಪಡಿ ಮಸೂದೆಯನ್ನೂ ಜುಲೈ 25ರಂದು ಕ್ಯಾಬಿನೆಟ್ ಪರಿಗಣನೆಗೆ ಮುಂದಿರಿಸಿತ್ತು. ಅಂದರೆ ರೈತರಿಗೆ ಕೊಟ್ಟ ಭರವಸೆಗೆ ದ್ರೋಹ ಬಗೆದು ಈ ಮಸೂದೆಯನ್ನು ಜಾರಿಗೆ ತರುವ ಪ್ರಯತ್ನಗಳು ಪ್ರಾರಂಭವಾಗಿವೆ. ಅದೇ ರೀತಿ, ಮೂರು ಕೃಷಿ ಸುಗ್ರೀವಾಜ್ಞೆಗಳನ್ನು ಕೋವಿಡ್ ಸಂದರ್ಭದಲ್ಲಿ ಜಾರಿ ಮಾಡಿದ ಮೋದಿ ಸರಕಾರ 2020ರ ಸೆಪ್ಟಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಎಲ್ಲಾ ಸಾಂವಿಧಾನಿಕ ರೀತಿ-ರಿವಾಜುಗಳನ್ನು ಗಾಳಿಗೆ ತೂರಿ, ಶಕ್ತಿಪ್ರದರ್ಶನದ ಮೂಲಕ ಮಸೂದೆಗಳನ್ನು ಪಾಸು ಮಾಡಿಸಿಕೊಂಡಿತು. ಹಾಗೆಯೇ ವಿರೋಧ ಪಕ್ಷಗಳು ಕೃಷಿ ನೀತಿಯ ವಿರುದ್ಧ ಹೊರಗೆ ಪ್ರತಿಭಟನೆ ಮಾಡುವ ಹೊತ್ತಿನಲ್ಲಿ ಕಾರ್ಮಿಕ ವಿರೋಧಿ ನೀತಿಗಳನ್ನು ಪಾಸು ಮಾಡಿತು. ಈ ಅಧಿವೇಶನದಲ್ಲಂತೂ ದೇಶದ ಸಾರ್ವಭೌಮತೆಯ ಜೊತೆಗೇ ರಾಜಿ ಮಾಡಿಕೊಂಡಿರುವ ಇಸ್ರೇಲಿನ ಪೆಗಾಸಸ್ ಗೂಢಚರ್ಯೆಯ ಬಗ್ಗೆ ವಿರೋಧ ಪಕ್ಷಗಳು ಸರಕಾರದ ಉತ್ತರವನ್ನು ಕೋರುತ್ತಾ ಪ್ರತಿಭಟಿಸುತ್ತಿರುವ ಹೊತ್ತಿನಲ್ಲಿ ಹತ್ತಾರು ಶಾಸನಗಳನ್ನು ಪಾಸು ಮಾಡಿಸಿಕೊಂಡಿದೆ. ಒಟ್ಟಿನಲ್ಲಿ ಈ ಸರಕಾರಕ್ಕೆ ಜನರ ಬಗ್ಗೆಯಾಗಲಿ, ಸಾಂವಿಧಾನಿಕ ನಡಾವಳಿಗಳ ಬಗ್ಗೆಯಾಗಲಿ ಯಾವುದೇ ಕಾಳಜಿಯಿಲ್ಲದಿರುವುದರಿಂದ ವಿದ್ಯುತ್ ತಿದ್ದುಪಡಿ ಮಸೂದೆಯ ಜನದ್ರೋಹಿ ಪರಿಣಾಮಗಳ ಬಗ್ಗೆ ಜನರಲ್ಲಿ ನಿರಂತರ ಅರಿವು ಮೂಡಿಸುತ್ತಾ ಸದಾ ಸಮರಸನ್ನದ್ಧ ಸ್ಥಿತಿಯಲ್ಲಿರುವುದು ಅತ್ಯಗತ್ಯವಾಗಿದೆ. ತಲೆಯ ಮೇಲೆ ತೂಗುತ್ತಿರುವ ಕತ್ತಿ ಸೂಕ್ತ ಸಮಯಕ್ಕೆ ಕಾಯುತ್ತಿದೆಯಷ್ಟೆ.

ಬೆಳಕಿನ ವಿರುದ್ಧ ನಡೆದುಬಂದಿರುವ ಕತ್ತಲ ಕುತಂತ್ರ
ಈ ಹೊಸ ವಿದ್ಯುತ್ ತಿದ್ದುಪಡಿ ಮಸೂದೆಯು 2003ರಲ್ಲಿ ಜಾರಿಯಾದ ವಿದ್ಯುತ್ ಕಾಯ್ದೆಗೆ ಕೆಲವು ಮೂಲಭೂತ ಬದಲಾವಣೆಗಳನ್ನು ತರುವ ಉದ್ದೇಶ ಹೊಂದಿದೆ. ಅದರಲ್ಲೂ ಈ ತಿದ್ದುಪಡಿಗಳು ವಿದ್ಯುತ್ ವಿತರಣಾ ಕ್ಷೇತ್ರದ ಸ್ವರೂಪವನ್ನೇ ಸಂಪೂರ್ಣವಾಗಿ ಜನವಿರೋಧಿಯಾಗಿ ಹಾಗೂ ಕಾರ್ಪೊರೇಟ್ ಶಕ್ತಿಗಳ ಪರವಾಗಿ ಬದಲಿಸಲಿವೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ವಿದ್ಯುತ್ ಉತ್ಪಾದನೆ, ಸರಬರಾಜು ಮತ್ತು ವಿತರಣೆ ಮೂರೂ ಕ್ಷೇತ್ರಗಳೂ ಸರಕಾರದ ಒಡೆತನದಲ್ಲಿರುತ್ತಿತ್ತು. ದೇಶದ ಸಂವಿಧಾನದಲ್ಲಿರುವ ಕಲ್ಯಾಣ ರಾಜ್ಯದ ಆಶಯಗಳಂತೆ ಸಕಲರಿಗೂ ಎಟುಕುವ ದರದ ವಿದ್ಯುತ್ ಹಾಗೂ ದೇಶದ ಕೈಗಾರಿಕೆ ಮತ್ತು ಕೃಷಿಯನ್ನು ಕಟ್ಟಲು ವಿದ್ಯುತ್ ಕ್ಷೇತ್ರ ಕೆಲಸ ಮಾಡಬೇಕೆಂಬುದು ಆಶಯವಾಗಿತ್ತು. ಹೀಗಾಗಿ ಇಲ್ಲಿ ಲಾಭಕ್ಕಿಂತ ಮುಖ್ಯವಾಗಿ ನಿರ್ವಹಣೆಗೆ ಬೇಕಾದಷ್ಟು ಶುಲ್ಕವನ್ನು ವಸೂಲಿ ಮಾಡಿ ಸಾಮಾಜಿಕ ಹಾಗೂ ಆರ್ಥಿಕ ಲಕ್ಷಗಳನ್ನು ಈಡೇರಿಸುವುದು ವಿದ್ಯುತ್ ಕ್ಷೇತ್ರದ ಜವಾಬ್ದಾರಿಯಾಗಿತ್ತು. ಆದರೆ 1991ರಲ್ಲಿ ಕಾಂಗ್ರೆಸ್ ಸರಕಾರದ ನೇತೃತ್ವದಲ್ಲಿ ಹಾಗೂ ಆಗಿನ ಪ್ರಮುಖ ಪ್ರತಿಪಕ್ಷ ಬಿಜೆಪಿಯ ಸರ್ವ ಸಮ್ಮತಿಯೊಂದಿಗೆ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಸಂವಿಧಾನ ವಿರೋಧಿ ಕಾರ್ಪೊರೇಟ್ ಆರ್ಥಿಕ ತತ್ವಗಳು ಜಾರಿಗೆ ಬಂದವು. ಅದರಂತೆ ದೇಶದ ಅಭಿವೃದ್ಧಿಯೆಂದರೆ ಜನರ ಕಲ್ಯಾಣಕ್ಕಿಂತ ಮಾರುಕಟ್ಟೆ ಶಕ್ತಿಗಳ ಅಭಿವೃದ್ಧಿ ಎಂಬ ನೀತಿಗಳು ಮತ್ತು ಕಾರ್ಯಕ್ರಮಗಳು ಜಾರಿಯಾದವು. ಅದರ ಭಾಗವಾಗಿ ವಿದ್ಯುತ್ ಕ್ಷೇತ್ರದಲ್ಲೂ ಖಾಸಗಿ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಮತ್ತು ಖಾಸಗಿ ಕ್ಷೇತ್ರಕ್ಕೆ ಲಾಭ ಖಾತರಿ ಮಾಡಿಕೊಡುವ ನೀತಿಗಳು ಜಾರಿಗೆ ಬಂದವು. 1991ರ ನಂತರದಲ್ಲಿ ವಿದ್ಯುತ್ ಉತ್ಪಾದನಾ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಖಾಸಗೀಕರಣಗೊಂಡಿತು. ಮಹಾರಾಷ್ಟ್ರದಲ್ಲಿ ಎನ್ರಾನ್, ಕರ್ನಾಟಕದಲ್ಲಿ ಕೊಜೆಂಟ್ರಿಕ್ಸ್ ಕಂಪೆನಿಗಳು ದೇಶವನ್ನು ಸೂರೆ ಹೊಡೆಯಲು ಬಂದಿದ್ದ ಕಾಲವದು. ಕೊಜೆಂಟ್ರಿಕ್ಸ್‌ನ ಅಧ್ಯಕ್ಷನಾಗಿದ್ದ ರಾನ್ ಸೋಮರ್ಸ್ ಮಹಾಶಯನಂತೂ ತಾನು ಭಾರತಕ್ಕೆ ಬಂದಿದ್ದೇ ‘‘ಅತಿ ಸುರಕ್ಷಿತವಾಗಿ, ಅತಿ ಹೆಚ್ಚು ಲಾಭ ಮಾಡಲು’’ ಎಂದು ಘೋಷಿಸಿದ್ದ (“Highest Returns in Safest Heavens”)!

2003ರಲ್ಲಿ ಬಿಜೆಪಿ ನೇತೃತ್ವದ ಸರಕಾರ ಆಗಿನ ವಿರೋಧ ಪಕ್ಷವಾದ ಕಾಂಗ್ರೆಸ್‌ನ ಸರ್ವಸಮ್ಮತಿಯೊಂದಿಗೆ ವಿದ್ಯುತ್ ಪ್ರಸರಣೆ ಮತ್ತು ವಿತರಣಾ ಕ್ಷೇತ್ರಗಳನ್ನೂ ಕಾರ್ಪೊರೇಟೀಕರಿಸಿತು. ಸರಕಾರದ ಒಡೆತನದಲ್ಲೇ ಇದ್ದರೂ ಅವುಗಳನ್ನು ಹಲವು ಸ್ವತಂತ್ರ ಕಂಪೆನಿಗಳನ್ನಾಗಿ ಒಡೆಯಲಾಯಿತು ಮತ್ತು ಸ್ವತಂತ್ರವಾಗಿ ಮತ್ತು ಲಾಭದಾಯಕವಾಗಿ ಕಾರ್ಯನಿರ್ವಹಿಸಬೇಕೆಂದು ತಾಕೀತು ಮಾಡಲಾಯಿತು. ಹೀಗಾಗಿಯೇ 2003ರ ನಂತರದಲ್ಲಿ ಕರ್ನಾಟಕದಲ್ಲೂ ವಿದ್ಯುತ್ ವಿತರಣೆಯ ಜವಾಬ್ದಾರಿಯು ಕರ್ನಾಟಕ ವಿದ್ಯುತ್ ಮಂಡಳಿ (ಕೆ.ಇ.ಬಿ.)ಯಿಂದ ಎಸ್ಕಾಂಗಳಿಗೆ ವರ್ಗಾಯಿಸಲಾಯಿತು (ಇಲೆಕ್ಟ್ರಿಸಿಟಿ ಸಪ್ಲೈ ಕಂಪೆನಿ- ಎಸ್ಕಾಂ). ಅದರ ಭಾಗವಾಗಿಯೇ 2003ರಿಂದ ಕರ್ನಾಟಕದಲ್ಲಿ ಬೆಸ್ಕಾಂ, ಹೆಸ್ಕಾಂ, ಚೆಸ್ಕಾಮ್, ಮೆಸ್ಕಾಂ...ಇತ್ಯಾದಿ ಆರು ಕಂಪೆನಿಗಳು ವಿದ್ಯುತ್ ಸರಬರಾಜನ್ನು ನಿರ್ವಹಿಸುತ್ತಿವೆ.

ದೇಶಾದ್ಯಂತ ಇಂದು ಈ ಬಗೆಯ ಸರಕಾರಿ ಒಡೆತನದ ಅಂದಾಜು ನೂರು ಎಸ್ಕಾಂಗಳಿವೆ. ಇವುಗಳು ವಿದ್ಯುತ್ ಉತ್ಪಾದನಾ ಕಂಪೆನಿಗಳಿಂದ ವಿದ್ಯುತ್ತನ್ನು ಖರೀದಿ ಮಾಡಿ ಗ್ರಾಹಕರಿಗೆ ಮಾರುತ್ತವೆ. ಅವರಿಂದ ಶುಲ್ಕವನ್ನು ಸಂಗ್ರಹಿಸಿ ವಿದ್ಯುತ್ ಉತ್ಪಾದಕ ಕಂಪೆನಿಗಳಿಗೆ ಬಾಕಿ ತೀರಿಸುತ್ತವೆ. ಅವು ಪ್ರತಿಯಾಗಿ ವಿದ್ಯುತ್ ಉತ್ಪಾದನೆಗಾಗಿ ಕೊಂಡಿದ್ದ ಕಲ್ಲಿದ್ದಲು ಇನ್ನಿತ್ಯಾದಿ ಕಂಪೆನಿಗಳಿಗೆ ಬಾಕಿ ತೀರಿಸುತ್ತವೆ. ಹೀಗೆ ಒಟ್ಟಾರೆ ವಿದ್ಯುತ್ ಉತ್ಪಾದನಾ- ವಿತರಣಾ ಚಕ್ರದಲ್ಲಿ ಸುಲಭ ಹಣಕಾಸು ಹರಿದಾಟಕ್ಕೆ ವಿತರಣಾ ಕಂಪೆನಿಗಳ ಹಾಗೂ ಸರಕಾರದ ಪಾತ್ರ ತುಂಬಾ ಮುಖ್ಯವಾದದ್ದು.

ಕ್ರಾಸ್ ಸಬ್ಸಿಡಿ ಎಂಬ ಪ್ರಜಾತಾಂತ್ರಿಕ ದರನೀತಿ

ವಿದ್ಯುತ್ ವಿತರಣೆ ಮಾಡುವಾಗ ಸರಕಾರಿ ಮಾಲಕತ್ವದ ಕಂಪೆನಿಗಳು ಈವರೆಗೆ ಬಡ ಗ್ರಾಹಕರಿಗೆ ಹಾಗೂ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಕಡಿಮೆ ಶುಲ್ಕವನ್ನು ವಿಧಿಸುತ್ತಿದ್ದರೆ, ಹೆಚ್ಚಿನ ವಿದ್ಯುತ್ ಬಳಸುವ ಹಾಗೂ ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆದಾರರಿಗೆ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸುತ್ತಿದ್ದವು. ಉದಾಹರಣೆಗೆ ಇಂದು ಒಂದು ಯುನಿಟ್ ವಿದ್ಯುತ್‌ನ ಸರಾಸರಿ ಬೆಲೆ 4 ರೂ. ಎಂದಿಟ್ಟುಕೊಂಡರೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ಸಾಮಾನ್ಯವಾಗಿ ಯಾವ ರಾಜ್ಯಗಳಲ್ಲೂ ಈವರೆಗೆ ಶುಲ್ಕ ವಿಧಿಸುತ್ತಿರಲಿಲ್ಲ. ಇನ್ನು 100 ಯುನಿಟ್ ವರೆಗೆ ಬಳಕೆ ಮಾಡುವ ಬಡ ಗ್ರಾಹಕರಿಗೆ 4 ರೂ. ಗಿಂತ ಕಡಿಮೆ ಶುಲ್ಕ ವಿಧಿಸುತ್ತಿದ್ದರೆ 100 ಯುನಿಟ್‌ಗಿಂತ ಹೆಚ್ಚಿನ ವಿದ್ಯುತ್ ಬಳಸುವ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 6-10 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಅಂದರೆ ಉಳ್ಳವರಿಗೆ ಹೆಚ್ಚು ದರ ವಿಧಿಸಿ ಬಡವರಿಗೆ ಮತ್ತು ಕೃಷಿಕರಿಗೆ ಅಗ್ಗದ ದರದಲ್ಲಿ ಅಥವಾ ಉಚಿತವಾಗಿ ವಿದ್ಯುತ್ ಒದಗಿಸಲಾಗುತ್ತಿತ್ತು. ಇದನ್ನೇ ಆರ್ಥಿಕ ಪರಿಭಾಷೆಯಲ್ಲಿ ಕ್ರಾಸ್ ಸಬ್ಸಿಡಿ ಎನ್ನುತ್ತಾರೆ. ಕೆಲವೊಮ್ಮೆ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಶುಲ್ಕವನ್ನು ರಾಜ್ಯ ಸರಕಾರಗಳು ಸಬ್ಸಿಡಿ ಒದಗಿಸುವ ಮೂಲಕ ಭರಿಸುತ್ತಿದ್ದವು. ಈ ಸಬ್ಸಿಡಿ ಮತ್ತು ಕ್ರಾಸ್ ಸಬ್ಸಿಡಿಗಳು ಒಂದು ಕಲ್ಯಾಣ ರಾಜ್ಯದ ಕರ್ತವ್ಯ. ಆದರೆ ಮಾರುಕಟ್ಟೆ ಮತ್ತು ಲಾಭವೇ ಮುಖ್ಯವಾದ ಕಾರ್ಪೊರೇಟ್ ಕಂಪೆನಿಗಳಿಗೆ ಸರಕಾರವು ಸರಕು ಮತ್ತು ಸೇವೆ ಒದಗಿಸುವುದು ಹಾಗೂ ಅದರಲ್ಲಿ ಸಬ್ಸಿಡಿ-ಕ್ರಾಸ್ ಸಬ್ಸಿಡಿ ಅನುಸರಿಸುವುದು ಅತಿದೊಡ್ಡ ಮಾರುಕಟ್ಟೆ ವಿರೋಧಿ ತತ್ವವಾಗಿದೆ. ಆದ್ದರಿಂದ ಅವು ಸರಕಾರಗಳು ಸರಕು-ಸೇವಾ ಉದ್ಯಮಗಳಿಂದ ಹೊರನಡೆಯಬೇಕೆಂದೂ ಹಾಗೂ ಗ್ರಾಹಕರಿಗೆ ಬೆಲೆ ವಿಧಿಸುವ ಅಧಿಕಾರವನ್ನು ತಮಗೆ ಕೊಡಬೇಕೆಂದೂ ಆಗ್ರಹಿಸುತ್ತಾ ಬಂದಿವೆ. ಅದರ ಭಾಗವಾಗಿಯೇ ಸರಕಾರಿ ಕ್ಷೇತ್ರಗಳೆಲ್ಲಾ ಇದ್ದಕ್ಕಿದ್ದಂತೆ ನಷ್ಟ ಎದುರಿಸುವ ಪವಾಡಗಳು ಶುರುವಾದವು.

ಸರಕಾರದ ನಷ್ಟಗಳು ಖಾಸಗಿಯ ಲಾಭವಾಗುವ ಪವಾಡ

ನಮ್ಮನ್ನಾಳುವ ಎಲ್ಲಾ ಸರಕಾರದ ತತ್ವಗಳೂ ಕಾರ್ಪೊರೇಟ್ ಪರವಾಗಿ ಬದಲಾಗಿರುವುದರಿಂದ ಇದ್ದಕ್ಕಿದಂತೆ ಕಳೆದ ಹತ್ತು ವರ್ಷಗಳಿಂದ ಲಾಭದಾಯಕ ಸರಕಾರಿ ಕಂಪೆನಿಗಳೆಲ್ಲಾ ನಷ್ಟವನ್ನು ಅನುಭವಿಸಲು ಪ್ರಾರಂಭಿಸಿವೆ. ಅದನ್ನು ನೆಪವಾಗಿ ಬಳಸಿಕೊಂಡು ಸರಕಾರಗಳು ಸರಕಾರಿ ಒಡೆತನದಲ್ಲಿರುವ ಕಂಪೆನಿಗಳನ್ನು ಖಾಸಗೀಕರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮೋದಿ ಸರಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ ಸರಕಾರಿ ಸಂಪತ್ತಿನ ಖಾಸಗೀಕರಣದ ವೇಗ ದುಪ್ಪಟ್ಟು ಹೆಚ್ಚಾಗಿದೆ. ಮೋದಿ ಸರಕಾರ ಇದೇ ಕುತಂತ್ರವನ್ನು ವಿದ್ಯುತ್ ಕ್ಷೇತ್ರಕ್ಕೂ ಅನ್ವಯಿಸುತ್ತಿದೆ. ಅದರ ಭಾಗವಾಗಿ ವಿದ್ಯುತ್ ವಿತರಣಾ ಕಂಪೆನಿಗಳು ತೀವ್ರವಾದ ನಷ್ಟವನ್ನು ಎದುರಿಸುತ್ತಿವೆ. ಅದನ್ನು ಭರಿಸಲು ಸಾಧ್ಯವಿಲ್ಲವಾದ್ದರಿಂದ ಖಾಸಗೀಕರಿಸಲಾಗುವುದು ಎಂದು ಘೋಷಿಸಿದೆ.

(ಮುಂದಿನ ವಾರಕ್ಕೆ ಮುಂದುವರಿಯುವುದು)

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News