ಚುನಾವಣಾ ಸಮಿತಿ, ಮಹಿಳಾ ನಿರ್ದೇಶಕರು ಸೇರಿದಂತೆ ಸಹಕಾರಿ ಕ್ಷೇತ್ರದಲ್ಲಿ ಸುಧಾರಣೆಗಳಿಗೆ ಅಮಿತ್‌ ಶಾ ಸಮ್ಮತಿ

Update: 2021-09-28 14:30 GMT

ಹೊಸದಿಲ್ಲಿ,ಸೆ.28: ಕೇಂದ್ರೀಕೃತ ಚುನಾವಣೆಗಳು ಸೇರಿದಂತೆ ಸಹಕಾರಿ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳಿಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಹಸಿರು ನಿಶಾನೆಯನ್ನು ತೋರಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಪ್ರಸ್ತಾವಿತ ಬದಲಾವಣೆಗಳನ್ನು ಶೀಘ್ರವೇ ಅಂತರ್-ಸಚಿವಾಲಯ ಸಮಾಲೋಚನೆಗೆ ಕಳುಹಿಸಲಾಗುವುದು.

ದೇಶದಲ್ಲಿ ಸಹಕಾರ ಚಳವಳಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಜುಲೈನಲ್ಲಿ ಹೊಸದಾಗಿ ರಚಿಸಲಾದ ಸಹಕಾರ ಸಚಿವಾಲಯದ ಜವಾಬ್ದಾರಿಯನ್ನು ಶಾ ಅವರಿಗೆ ವಹಿಸಲಾಗಿತ್ತು. ಸಹಕಾರಿ ಕ್ಷೇತ್ರದಲ್ಲಿ 10 ಲಕ್ಷಕ್ಕೂ ಅಧಿಕ ಘಟಕಗಳು ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿರುವುದರಿಂದ ಶಾ ಅವರು ಸಂಪುಟ ಟಿಪ್ಪಣಿಯಲ್ಲಿ ಅನುಮೋದಿಸಿರುವ ಶಿಫಾರಸುಗಳು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ಆಡಳಿತ ಮಂಡಳಿಯಲ್ಲಿ ನಿರ್ದೇಶಕರ ಸಂಖ್ಯೆಯನ್ನು 21ಕ್ಕೆ ಸೀಮಿತಗೊಳಿಸುವದು ಈ ಸುಧಾರಣೆಗಳಲ್ಲಿ ಸೇರಿದೆ. ಈ ಪೈಕಿ ಓರ್ವ ನಿರ್ದೇಶಕರು ಎಸ್ಸಿ ಅಥವಾ ಎಸ್ಟಿ ಸಮುದಾಯಕ್ಕೆ ಸೇರಿದವರಾಗಿದ್ದು,ಕನಿಷ್ಠ ಇಬ್ಬರು ಮಹಿಳೆಯರಾಗಿರಬೇಕು ಎಂದು ಸೂಚಿಸಲಾಗಿದೆ.

ಪ್ರಸ್ತಾವಿತ ಸುಧಾರಣೆಗಳು ಜಾರಿಗೊಂಡರೆ ಹಣಕಾಸು ಮತ್ತು ಬ್ಯಾಂಕಿಂಗ್ನಲ್ಲಿ ಪರಿಣಿತ ಇಬ್ಬರು ನಿರ್ದೇಶಕರನ್ನು ಸಹಕಾರಿ ಸಂಘಗಳು ಸೇರಿಸಿಕೊಳ್ಳಬಹುದಾಗಿದೆ ಮತ್ತು ಅವರಿಗೆ ಮತದಾನದ ಅಧಿಕಾರವಿರುವುದಿಲ್ಲ.

ಸಹಕಾರಿ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸಲು ಚುನಾವಣಾ ಪ್ರಾಧಿಕಾರವೊಂದನ್ನು ಸ್ಥಾಪಿಸಲಾಗುವುದು ಮತ್ತು ಹೆಚ್ಚುವರಿ ಕಾರ್ಯದರ್ಶಿಯೋರ್ವರು ಅದರ ಅಧ್ಯಕ್ಷರು ಮತ್ತು ಜಂಟಿ ಕಾರ್ಯದರ್ಶಿಯೋರ್ವರು ಉಪಾಧ್ಯಕ್ಷರಾಗಿರುತ್ತಾರೆ.

ನೂತನ ನಿಯಮಗಳಡಿ ಸಹಕಾರಿ ಸಂಘಗಳ ನಿಯಮಾವಳಿಯ ಉಲ್ಲಂಘನೆಗಾಗಿ 25,000 ರೂ.ಗಳಿಂದ ಒಂದು ಲಕ್ಷ ರೂ.ಗಳವರೆಗೆ ದಂಡ ವಿಧಿಸಲು ಅವಕಾಶವಿರುತ್ತದೆ.
ಸಿದ್ಧತೆ ಹಂತದಲ್ಲಿರುವ ಸಂಪುಟ ಟಿಪ್ಪಣಿಯು ಅಭಿವೃದ್ಧಿ, ಪುನರ್ನಿರ್ಮಾಣ ಮತ್ತು ಪುನರ್ವಸತಿಗಾಗಿ ಐದು ಕೋ.ರೂ.ಗಳ ನಿಧಿಯನ್ನು ಸ್ಥಾಪಿಸುವ ಚಿಂತನೆಯನ್ನು ಹೊಂದಿದೆ ಎಂದೂ ಮೂಲಗಳು ತಿಳಿಸಿವೆ.

ಸಹಕಾರಿ ಬ್ಯಾಂಕುಗಳು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಡಿ ಕಾರ್ಯ ನಿರ್ವಹಿಸುತ್ತವೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ಸಹಕಾರಿ ಸಂಸ್ಥೆಗಳಲ್ಲಿ ಚುನಾವಣೆಗಳನ್ನು ನಡೆಸಲು ಕೇಂದ್ರೀಯ ಪ್ರಾಧಿಕಾರದ ರಚನೆಯಂತಹ ರಾಜ್ಯ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಪರಿಗಣಿಸಬಹುದಾದ ಕ್ರಮಗಳ ಬಗ್ಗೆ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಗಳಿವೆ. ಭಾರತದಲ್ಲಿರುವ 10 ಲಕ್ಷಕ್ಕೂ ಅಧಿಕ ಸಹಕಾರಿ ಸಂಸ್ಥೆಗಳು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News