ಗುಜುರಿ ಅಂಗಡಿ ಸೇರಿದ ಅಡುಗೆ ಅನಿಲ ಸಿಲಿಂಡರ್‌ಗಳು!

Update: 2021-10-24 03:51 GMT
ಸಾಂದರ್ಭಿಕ ಚಿತ್ರ (Photo source: PTI)

ಭೋಪಾಲ್, ಅ.24: ಮಧ್ಯಪ್ರದೇಶದ ಗುಜುರಿ ಅಂಗಡಿಯಲ್ಲಿ ದೊಡ್ಡ ಸಂಖ್ಯೆಯ ಖಾಲಿ ಎಲ್‌ಪಿಜಿ ಸಿಲಿಂಡರ್‌ಗಳು ಪತ್ತೆಯಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಬಗ್ಗೆ ಹಲವು ಸಂಶಯಗಳನ್ನು ಹುಟ್ಟುಹಾಕಿದ್ದು, ಅಡುಗೆ ಅನಿಲ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳು ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆಪಾದಿಸಿವೆ.

ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ಭಿಂಡ್ ಜಿಲ್ಲೆಯ ಗುಜರಿ ಅಂಗಡಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ರಾಶಿ ಹಾಕಿರುವ ವೀಡಿಯೊ ಟ್ವೀಟ್ ಮಾಡಿದ್ದಾರೆ.

"ಸ್ಕ್ರಾಪ್‌ಯಾರ್ಡ್‌ನಲ್ಲಿ ಗುಡ್ಡೆ ಹಾಕಿರುವ ಸಿಲಿಂಡರ್‌ಗಳು ನರೇಂದ್ರ ಮೋದಿ ಆಡಳಿತದಲ್ಲಿ ಅನಿಯಂತ್ರಿತ ಹಣದುಬ್ಬದ ಬಗ್ಗೆ ಸಾರಿ ಹೇಳುತ್ತವೆ" ಎಂದು ಕಮಲನಾಥ್ ಹೇಳಿದ್ದಾರೆ. ಜಬಲ್ಪುರದಲ್ಲಿ ಉಜ್ವಲ ಯೋಜನೆಯ ಎರಡನೇ ಆವೃತ್ತಿಗೆ ಅದ್ದೂರಿ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಚಾಲನೆ ನೀಡಿದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಬೆಲೆ ಗಣನೀಯವಾಗಿ ಏರಿಕೆಯಾಗಿರುವ ಕಾರಣ ತಾವು ಎಲ್‌ಪಿಜಿ ಸಿಲಿಂಡರ್ ಮರು ಭರ್ತಿ ಮಾಡುವುದನ್ನು ಸ್ಥಗಿತಗೊಳಿಸಿದ್ದಾಗಿ ಎಂದು ಹಲವು ಫಲಾನುಭವಿಗಳನ್ನು ಎನ್‌ಡಿಟಿವಿ ಮಾತನಾಡಿಸಿದಾಗ ಸ್ಪಷ್ಟಪಡಿಸಿದರು.

"ನಾವು ದಿನಗೂಲಿಗಳು. ನಾಲ್ವರು ಮಕ್ಕಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲಸವಿಲ್ಲದೇ ಹಣದ ಕೊರತೆ ಇದೆ. ನಾವು ಎಲ್‌ಪಿಜಿ ಮರುಭರ್ತಿ ಮಾಡಿಕೊಳ್ಳುವುದು ಹೇಗೆ? ಸಿಲಿಂಡರ್ ಬೆಲೆ 600 ರೂಪಾಯಿ ದಾಟಿದ ತಕ್ಷಣ ಮರು ಭರ್ತಿ ಮಾಡುವುದು ಸ್ಥಗಿತಗೊಳಿಸಿದ್ದೇವೆ" ಎಂದು ಫಲಾನುಭವಿಯೊಬ್ಬರು ವಿವರಿಸಿದರು.

"ಹಲವು ಮಂದಿ ಸಿಲಿಂಡರ್ ಕಾಯ್ದಿರಿಸುತ್ತಾರೆ. ಆದರೆ ಮನೆಗೆ ಸಿಲಿಂಡರ್ ಸರಬರಾಜು ಮಾಡಲು ಮುಂದಾದಾಗ ಹಣ ಇಲ್ಲ ಎಂಬ ಕಾರಣಕ್ಕೆ ಖರೀದಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ" ಎಂದು ಗ್ಯಾಸ್ ಏಜೆನ್ಸಿ ಉದ್ಯೋಗಿಯೊಬ್ಬರು ಹೇಳಿದರು.

ಈ ವಿಷಯವನ್ನು ಜಿಲ್ಲೆಯ ಪೂರೈಕೆ ಅಧಿಕಾರಿಯ ಗಮನಕ್ಕೆ ತಂದಾಗ, ಸಿಲಿಂಡರ್ ಮಾರಾಟ ಮಾಡಿರುವ ಬಗ್ಗೆ ಅರಿವು ಇಲ್ಲ; ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ, ಸ್ಟವ್ ನೀಡುವ ಜತೆಗೆ ಮೊದಲ ಬಾರಿ ಉಚಿತವಾಗಿ ರಿಫಿಲ್ ಸೌಲಭ್ಯ ನೀಡಲಾಗುತ್ತದೆ. ಪದೇ ಪದೇ ಉಚಿತವಾಗಿ ಮರುಭರ್ತಿ ಮಾಡುವುದು ಅಸಾಧ್ಯ ಎಂದು ಅವರು ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿರುವ 2.76 ಲಕ್ಷ ಎಲ್‌ಪಿಜಿ ಸಂಪರ್ಕ ಹೊಂದಿರುವ ಕುಟುಂಬಗಳ ಪೈಕಿ 1.33 ಲಕ್ಷ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳು. 14.2 ಕೆಜಿ ತೂಕದ ಅಡುಗೆ ಅನಿಲ ಬೆಲೆ ಪ್ರಸಕ್ತ ರೂ. 983.50 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News