ಶ್ರೀನಗರ-ಶಾರ್ಜಾ ವಿಮಾನಗಳಿಗೆ ತನ್ನ ವಾಯುಪ್ರದೇಶ ಬಳಕೆಗೆ ಪಾಕಿಸ್ತಾನ ನಕಾರ

Update: 2021-11-03 15:13 GMT
ಸಾಂದರ್ಭಿಕ ಚಿತ್ರ

ಶ್ರೀನಗರ,ನ.3: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕಳೆದ ತಿಂಗಳು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉದ್ಘಾಟಿಸಿದ್ದ ಶ್ರೀನಗರ -ಶಾರ್ಜಾ ನಡುವೆ ನೇರ ವಿಮಾನಯಾನಕ್ಕೆ ತನ್ನ ವಾಯುಪ್ರದೇಶದ ಬಳಕೆಗೆ ಪಾಕಿಸ್ತಾನವು ಅನುಮತಿಯನ್ನು ನಿರಾಕರಿಸಿದೆ.

ನಾಗರಿಕ ವಾಯುಯಾನ,ವಿದೇಶಾಂಗ ವ್ಯವಹಾರಗಳು ಮತ್ತು ಗೃಹ ವ್ಯವಹಾರಗಳ ಸಚಿವಾಲಯಗಳಿಗೆ ಈ ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಅನುಮತಿ ನಿರಾಕರಣೆಯು ವಿಮಾನಯಾನದ ಕಾರ್ಯಸಾಧ್ಯತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದ್ದು,ಇದೂ ಶ್ರೀನಗರ-ದುಬೈ ವಿಮಾನಯಾನದ ಗತಿಯನ್ನೇ ಎದುರಿಸಬಹುದು ಎಂಬ ಆತಂಕವನ್ನು ಸೃಷ್ಟಿಸಿದೆ. 2009ರಲ್ಲಿ ಆರಂಭಿಸಲಾಗಿದ್ದ ಶ್ರೀನಗರ-ದುಬೈ ನೇರ ವಿಮಾನಯಾನವನ್ನು ಪಾಕಿಸ್ತಾನವು ತನ್ನ ವಾಯುಪ್ರದೇಶದ ಬಳಕೆಗೆ ಅನುಮತಿ ನಿರಾಕರಿಸಿದ ಬಳಿಕ ಬೇಡಿಕೆ ಕಡಿಮೆಯಾಗಿದ್ದರಿಂದ ಸ್ಥಗಿತಗೊಳಿಸಲಾಗಿತ್ತು.

ಶೀನಗರದಿಂದ ಯುಎಇಗೆ ವಿಮಾನಯಾನಗಳು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸದೆ ಸುತ್ತು ಮಾರ್ಗದಲ್ಲಿ ಕಾರ್ಯಾಚರಿಸಿದರೆ ಯಾನದ ಅವಧಿ ಒಂದು ಗಂಟೆ ಹೆಚ್ಚುವ ಜೊತೆಗೆ ಇಂಧನ ಮತ್ತು ಟಿಕೆಟ್ ವೆಚ್ಚಗಳೂ ಹೆಚ್ಚುತ್ತವೆ.

 ಶ್ರೀನಗರ-ಶಾರ್ಜಾ ನಡುವೆ ಮೊದಲ ವಿಮಾನಯಾನ ಅ.23ರಂದು ನಡೆದಿತ್ತು. ಈ ವಿಮಾನಗಳು ಅ.30ರವರೆಗೆ ಪಾಕಿಸ್ತಾನದ ವಾಯುಪ್ರದೇಶದ ಮೂಲಕ ಹಾರಾಟ ನಡೆಸಿದ್ದವು. ಆದರೆ ನ.2ರಂದು ವಿಮಾನವು ರಾಜಸ್ಥಾನ ಮತ್ತು ಗುಜರಾತಗಳ ಮೂಲಕ ಪಶ್ಚಿಮಕ್ಕೆ ತಿರುಗಿ ಅರಬ್ಬಿ ಸಮುದ್ರವನ್ನು ಹಾದು ಹೋಗಿತ್ತು.

ಸದ್ಯಕ್ಕೆ ಪರ್ಯಾಯ ದಿನಗಳಲ್ಲಿ ಈ ಸೇವೆಯನ್ನು ಮುಂದುವರಿಸಲು ತಾನು ಯೋಜಿಸಿದ್ದೇನೆ ಎಂದು ಶ್ರೀನಗರ-ಶಾರ್ಜಾ ವಿಮಾನಯಾನವನ್ನು ನಿರ್ವಹಿಸುತ್ತಿರುವ ಅಗ್ಗದರದ ವಿಮಾನಯಾನ ಸಂಸ್ಥೆ ಗೋ ಏರ್ ತಿಳಿಸಿದೆ.

 ಪಾಕಿಸ್ತಾನದಿಂದ ಅಗತ್ಯ ಅನುಮತಿ ಪಡೆದುಕೊಳ್ಳದೆ ವಿಮಾನಯಾನವನ್ನು ಆರಂಭಿಸಿದ್ದಕ್ಕಾಗಿ ಕೇಂದ್ರದ ವಿರುದ್ಧ ಟ್ವಿಟರ್ ದಾಳಿಯನ್ನು ನಡೆಸಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು,ಶಾ ನೂತನ ವಿಮಾನಯಾನಕ್ಕೆ ಚಾಲನೆ ನೀಡಿದ್ದು ಕೇವಲ ಪ್ರಚಾರ ತಂತ್ರವಾಗಿತ್ತು ಎಂದು ಟೀಕಿಸಿದ್ದಾರೆ.

ಇನ್ನೋರ್ವ ಮಾಜಿ ಮುಖ್ಯಮಂತ್ರಿ ಹಾಗೂ ಎನ್‌ಸಿ ನಾಯಕ ಉಮರ್ ಅಬ್ದುಲ್ಲಾ ಅವರು ‘ಇದು ಅತ್ಯಂತ ದುರದೃಷ್ಟಕರ ’ಎಂದು ಟ್ವೀಟಿಸಿದ್ದಾರೆ.

2009ರಲ್ಲಿ ಶ್ರೀನಗರ-ದುಬೈ ನಡುವೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನಯಾನಕ್ಕೂ ಪಾಕಿಸ್ತಾನವು ಹೀಗೆಯೇ ಮಾಡಿತ್ತು. ಈಗ ಗೋ ಏರ್‌ಗೆ ಪಾಕ್ ವಾಯುಪ್ರದೇಶದ ಬಳಕೆಗೆ ಅನುಮತಿ ನೀಡುತ್ತಿರುವುದು ಸಂಬಂಧಗಳಲ್ಲಿ ಸುಧಾರಣೆಯ ಸಂಕೇತ ಎಂದು ತಾನು ಆಶಿಸಿದ್ದೆ,ಆದರೆ ಅದು ಆಗಿಲ್ಲ ಎಂದು ಅವರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News