ಟಿಪ್ಪು ಆನಂತರ ಏನಾಯಿತು?

Update: 2021-12-02 04:27 GMT

ಟಿಪ್ಪು ಸುಲ್ತಾನ 1782ರಿಂದ 1799ರ ತನಕ ಮೈಸೂರನ್ನು ಆಳಿದ ಬಹುಮುಖ ಪ್ರತಿಭೆ ಮತ್ತು ವ್ಯಕ್ತಿತ್ವದ ರಾಜ. ಆತನ ತಂದೆ ಹೈದರಲಿ ಮೈಸೂರು ಯಾದವ ರಾಜವಂಶಜರಿಂದ ಆಡಳಿತದ ಚುಕ್ಕಾಣಿಯನ್ನು ವಹಿಸಿಕೊಂಡು, ಅವರ ಹೆಸರಿನಲ್ಲಿಯೇ ರಾಜ್ಯಭಾರ ನಡೆಸುತ್ತಾನೆ. ಹೈದರ್ ತನ್ನ ಕಾಲದಲ್ಲಿ ಬ್ರಿಟಿಷರ ವಿರುದ್ಧದ ಪ್ರಥಮ ಮೈಸೂರು ಯುದ್ಧದಲ್ಲಿ ಜಯಭೇರಿಯನ್ನು ಬಾರಿಸಿರುತ್ತಾನೆ. 1782ರಲ್ಲಿ ಆತ ಮರಣ ಹೊಂದುತ್ತಾನೆ. ಇದರೊಂದಿಗೆ ಮೈಸೂರಿನ ಪಟ್ಟ ಟಿಪ್ಪುವಿಗೆ ದಕ್ಕುತ್ತದೆ. ವಸ್ತುಶಃ ತನ್ನ ಈ ಪುತ್ರನನ್ನು ಒಬ್ಬ ಧರ್ಮ ಪಂಡಿತನ್ನಾಗಿಸಬೇಕೆಂಬ ಆಸೆಯಿಂದ ಹೈದರ್ ಆತನಿಗೆ ಧಾರ್ಮಿಕ ಶಿಕ್ಷಣವನ್ನು ಕೊಡಿಸಿದ್ದ ಎನ್ನಲಾಗಿದೆ. ಅವನಿಗೆ ಇಡಲಾದ ಹೆಸರು ಒಬ್ಬ ಪ್ರಸಿದ್ಧ ಸೂಫಿ ಸಂತನದ್ದಾಗಿತ್ತು. ಹೀಗೆ ಸುಶಿಕ್ಷಿತನಾದ ಟಿಪ್ಪುವಿನ ನಿಲುವು ಮಾತ್ರ ವಿಭಿನ್ನವಾಗಿತ್ತು. ಮುಂದೊಮ್ಮೆ ಆಂಗ್ಲರು ಅಪಾಯಕಾರಿಯಾಗಲಿದ್ದಾರೆ ಎಂಬ ಪೂರ್ವಾ ಲೋಚನೆಯಲ್ಲಿ ಟಿಪ್ಪುವು, ಮುನ್ನುಗ್ಗಿ ಬರುತ್ತಿರುವ ಅವರನ್ನು ತಡೆಯಲು ಅಧಿಕಾರಕ್ಕೆ ಬಂದ ತತ್‌ಕ್ಷಣದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾನೆ. ಮತ್ತೆ ಮತ್ತೆ ಯುದ್ಧಗಳು ನಿಜಾಮರ ಮತ್ತು ಪೇಶ್ವೆಗಳ ಆಕ್ರಮಣಗಳನ್ನು ಸಹ ಆತ ನಿರ್ವಹಿಸ ಬೇಕಾಗುತ್ತದೆ. ಕೊಡಗು ಮತ್ತು ಟಿಪ್ಪುಬಗೆಗಿನ ವಾದವಿವಾದಗಳನ್ನು ಇಲ್ಲಿ ಚರ್ಚೆಗೆ ಬಳಸಿಕೊಳ್ಳಲಾಗುತ್ತಿಲ್ಲ. ಆದರೆ ಟಿಪ್ಪು ಕೊಡಗಿನ ಇತಿಹಾಸದ ಒಂದು ಭಾಗವೇ ಆಗಿದ್ದಾನೆ ಎನ್ನುವುದು ಮಾತ್ರ ಸತ್ಯ. ಆತನ ಹಲವು ಜನಪರ ನಿಲುವುಗಳಿಂದಾಗಿ ಅವನು ಉಳಿದ ರಾಜರುಗಳಿಂದ ಭಿನ್ನವಾಗಿ ಗೋಚರಿಸುತ್ತಾನೆ. ರೈತರ ಬದುಕನ್ನು ಸಂಪನ್ನಗೊಳಿಸುವ ನಿಟ್ಟಿನಲ್ಲಿ ಆತ ನಡೆಸಿದ ಗ್ರಾಮಾಡಳಿತದ ಆಮೂಲಾಗ್ರ ಬದಲಾವಣೆ, ಕೈಗೊಂಡ ರೇಷ್ಮೆ ಕೃಷಿ ಹಾಗೂ ರೇಷ್ಮೆ ಉದ್ಯಮ, ಕನ್ನಂಬಾಡಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟೆ ಕಟ್ಟುವ ದೂರದೃಷ್ಟಿಯ ಯೋಜನೆಯ ನೀಲನಕ್ಷೆ, ಬೆಣ್ಣೆಚಾವಡಿ ಅಂದರೆ ಅಮೃತಮಹಲ್ ದನಗಳ ತಳಿ ಸಂವರ್ಧನೆ, ಹೆಣ್ಣುಮಕ್ಕಳಿಗೆ ಗೌರವಯುತ ಸ್ಥಾನಮಾನ ನೀಡುವ ನಿಲುವುಗಳು ಇವೆಲ್ಲ ಬಹಳ ಪ್ರಸಿದ್ಧವಾದವುಗಳು.

ಟಿಪ್ಪುವಿನ ವ್ಯಕ್ತಿತ್ವದ ಪ್ರಭಾವ ಆತನ ಮರಣದ ನಂತರವೂ ಎಷ್ಟೊಂದು ದಟ್ಟವಾಗಿತ್ತು ಎನ್ನುವುದು ಅತ್ಯಂತ ಕುತೂಹಲಕಾರಿ. ಟಿಪ್ಪುಸತ್ತ ಕೆಲವೇ ಕೆಲವು ದಿನಗಳಲ್ಲಿ, ಹಿಂದೆ ಅವನ ಸೈನ್ಯಾಧಿಕಾರಿಯೂ ಆಪ್ತನೂ ಆಗಿದ್ದ ಧೋಂಡಿಯಾ ವಾಘ್ ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗುತ್ತಾನೆ. ವಾಘ್ ಎಂದರೆ ವ್ಯಾಘ್ರ, ಮೈಸೂರಿನ ಹುಲಿಯೆಂದೇ ಪ್ರಖ್ಯಾತನಾಗಿದ್ದ ಟಿಪ್ಪುಸುಲ್ತಾನನ ಹತ್ಯೆಯ ನಂತರ ಈ ಯೋಧ ಇಂಗ್ಲಿಷರ ವಿರುದ್ಧ ಹುಲಿಯಂತೆ ಕಾದಾಡಿದ್ದಾನೆ. ಈತ ಎಂತಹ ಪ್ರಚಂಡ ಸಂಘಟಕನೆಂದರೆ ಕೊನೆಯ ಮೈಸೂರು ಯುದ್ಧದ ನಂತರ ಚದುರಿ ಚೆಲ್ಲಾಡಿಹೋಗಿದ್ದ ಟಿಪ್ಪುವಿನ ಸೈನಿಕರನ್ನೆಲ್ಲ ಮತ್ತೆ ಒಟ್ಟು ಸೇರಿಸುತ್ತಾನೆ. ತಿಂಗಳುಗಳೊಳಗೆ ತೊಂಭತ್ತು ಸಾವಿರದಷ್ಟು ದೊಡ್ಡ ಸಂಖ್ಯೆಯ ಅಶ್ವದಳ ಮತ್ತು ಬಹು ವಿಶಾಲವಾದ ಪದಾತಿದಳವನ್ನು ರೂಪಿಸುತ್ತಾನೆ. ಶಿವಮೊಗ್ಗ, ಬಿದನೂರು, ಹೊನ್ನಾಳಿ, ಚಿತ್ರದುರ್ಗ, ಹಾಸನ, ಪೂಲಾಲ್, ಗೂಚಿ, ಕಿತ್ತೂರು ಹೀಗೆ ಒಂದಾದಮೇಲೊಂದು ಕೋಟೆಗಳನ್ನು ವಶಪಡಿಸುತ್ತಾ ಭದ್ರಪಡಿಸುತ್ತಾ ಒಂದೆಡೆಯಿಂದ ಇನ್ನೊಂದೆಡೆ ಮಿಂಚಿನಂತೆ ಸಂಚರಿಸುತ್ತಾನೆ. ಇವನಿಗೆ ಇಂದಿನ ಕರ್ನಾಟಕದ ಮಾತ್ರವಲ್ಲ ತಮಿಳ್ನಾಡಿನ ವಿವಿಧ ಪ್ರದೇಶಗಳ ಜನರು ಕೂಡ ಬೆಂಬಲವನ್ನು ನೀಡುತ್ತಾರೆ. ಸೇಲಂ, ತಂಜಾವೂರು ಕಡೆಯ ರೈತಾಪಿ ಜನರು ಧೋಂಡಿಯಾ ವಾಘ್ ಜೊತೆ ಕೈಜೋಡಿಸುತ್ತಾರೆ, ಇದರೊಂದಿಗೆ ಟಿಪ್ಪುವಿನ ಮಗ ಫತೇ ಹೈದರ್ ಸಹ ಬ್ರಿಟಿಷರನ್ನು ಸೋಲಿಸುವ ಈತನ ಉದ್ದೇಶಕ್ಕೆ ಸಹಾಯ ನೀಡುತ್ತಾನೆ ಎನ್ನುತ್ತಾರೆ ಪ್ರಸಿದ್ಧ ಇತಿಹಾಸಕಾರರಾದ ಡಾ. ಮೀರಾ ಸೆಬಾಸ್ಟಿನ್. ಆದರೆ 1800ರ ಸೆಪ್ಟ್ಟಂಬರ್ ತಿಂಗಳಲ್ಲಿ ಆಂಗ್ಲ ರೊಂದಿಗೆ ಕಾದಾಡುತ್ತಾ ಈತ ರಣರಂಗದಲ್ಲಿ ಮಡಿಯುತ್ತಾನೆ. ದೇಶದ ಇತಿಹಾಸ ಪುಟಗಳಲ್ಲಿ ಇಂತಹ ಅಪ್ರತಿಮ ಯುದ್ಧ ಸಂಘಟಕ ವೀರಾಗ್ರಣಿ ಧೋಂಡಿಯಾ ವಾಘ್‌ಗೆ ಇನ್ನಷ್ಟು ಪ್ರಾಶಸ್ತ್ರ ಸಿಗಬೇಕಿತ್ತು.

ಕೃತಿ: ಅಮರ ಸುಳ್ಯ - 1837

ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ

ಲೇಖಕ: ವಿದ್ಯಾಧರ ಕುಡೆಕಲ್ಲು

ಪುಟಗಳು: 160

ಮುಖಬೆಲೆ: 200 ರೂ.

ಪ್ರಕಾಶನ: ಬಂಟಮಲೆ ಪ್ರಕಾಶನ,

ಗುತ್ತಿಗಾರು, ಸುಳ್ಯ ತಾಲೂಕು, ದಕ.

ದೂರವಾಣಿ: 9481267121

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ