ಅಪ್ಪುಣ್ಣಿ ಮತ್ತು ಆತನ ಮನೆ ಆಯ್ದ ಪುಟದಿಂದ
ಕೇರಳದ ಕೊಲ್ಲಂ ಬಳಿಯ ಗ್ರಾಮವೊಂದರ ಸರಕಾರಿ ಆಸ್ಪತ್ರೆಯೆದುರು 2018ರ ಜೂನ್‌ನಲ್ಲಿ ನಾನು ಅಪ್ಪುಣ್ಣಿಯನ್ನು ಭೇಟಿಯಾದಾಗ ಆತ ಬಳಲಿದವನಂತೆ ಕಂಡುಬಂದಿದ್ದ. ಮಣ್ಣಿನ ಬಣ್ಣಕ್ಕೆ ತಿರುಗಿದ್ದ ಧೋತಿ, ಸುಕ್ಕುಗಟ್ಟಿದ ಅಂಗಿ ಧರಿಸಿಕೊಂಡು ದಟ್ಟ ಗಡ್ಡ ಬಿಟ್ಟಿದ್ದ ಆತನ ಕಣ್ಣುಗಳು ನಿಸ್ತೇಜಗೊಂಡಿದ್ದವು. ಆದರೂ, ಈ ಹಿಂದೆ 2015ರಲ್ಲಿ ಆತನನ್ನು ಒಮಾನ್‌ನಲ್ಲಿ ಭೇಟಿಯಾದದ್ದಕ್ಕಿಂತ ಆತ ಗೆಲುವಾಗಿ ಕಂಡುಬಂದಿದ್ದ.
ತಮ್ಮ ಮನೆಯಲ್ಲಿ ಆಪ್ತರೊಂದಿಗೆ ಇರುವಾಗ ಜನ ಆರೋಗ್ಯವಂತರಾಗಿ, ಖುಷಿಯಾಗಿ ಇರಬೇಕಲ್ಲವೇ? ಆದರೆ ಅಪ್ಪುಣ್ಣಿ ಖುಷಿಯಾಗಿರುವಂತೆ ಕಾಣಿಸಲಿಲ್ಲ. ಅಪ್ಪುಣ್ಣಿಯ ಮನೆ ಕೊಲ್ಲಂ ಬಳಿಯಿದೆ ಎಂಬುದು ನನಗೆ ಗೊತ್ತಿತ್ತು. ವರದಿ ಮಾಡುವ ಕಾರ್ಯಕ್ಕಾಗಿ ನಾನು ಕೊಲ್ಲಂಗೆ ಬೈಕಿನಲ್ಲಿ ಬಂದಿದ್ದೆ. 2015ರಿಂದ ನಾನು ಆತನನ್ನು ಭೇಟಿಯಾಗಿಲ್ಲ. ಆದರೂ ಪರಸ್ಪರ ಸಂಪರ್ಕದಲ್ಲಿದ್ದೆವು. ಆತ ಕೇರಳಕ್ಕೆ ವಾಪಸಾದ ಬಳಿಕವೂ ಒಮಾನ್‌ನಲ್ಲಿದ್ದ ನಾನು ಆತನೊಂದಿಗೆ ಆಗಾಗ ಫೋನ್ ಮೂಲಕ ಮಾತನಾಡುತ್ತಿದ್ದೆ. ಒಮಾನ್‌ನಲ್ಲಿದ್ದಾಗ ನಾನು ಮಾಡಿದ ಸಹಾಯವನ್ನು ನೆನಪಿಸಿಕೊಂಡು ಧನ್ಯವಾದ ಹೇಳುತ್ತಿದ್ದ. ಕೆಲವೊಮ್ಮೆ ನನ್ನ ಯೋಗಕ್ಷೇಮದ ಬಗ್ಗೆ ವಿಚಾರಿಸುತ್ತಿದ್ದ.
ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಬಳಿಕ ಆತ ಕೇಳುತ್ತಿದ್ದ ‘‘ರೆಜಿ, ದಯವಿಟ್ಟು ನನಗೊಂದು ಉದ್ಯೋಗ ವೀಸಾ ಪಡೆಯಲು ನೆರವಾಗುತ್ತೀಯಾ?’’. ಆದರೆ ಆತ ಒಮಾನ್‌ಗೆ ಮರಳಿ ಬರುವುದು ನನಗೆ ಇಷ್ಟವಿಲ್ಲದಿದ್ದರಿಂದ ನಾನು ಈ ಪ್ರಶ್ನೆಗೆ ಉತ್ತರಿಸುತ್ತಿರಲಿಲ್ಲ. ಆತ ಮತ್ತೆ ಒಮಾನ್‌ಗೆ ಯಾಕೆ ಮರಳಲು ಬಯಸುತ್ತಾನೆ ಎಂಬ ಬಗ್ಗೆ ನನಗೆಂದೂ ಅಚ್ಚರಿಯಾಗಿರಲಿಲ್ಲ.
ಕೊಲ್ಲಂ ಬಳಿಯ ಸರಕಾರಿ ಆಸ್ಪತ್ರೆಯ ಬಳಿ ಬಂದ ಬಳಿಕ ಆತನ ನಂಬರ್‌ಗೆ ಕರೆ ಮಾಡಿದೆ. ಕೆಲ ಹೊತ್ತಿನಲ್ಲಿ ತನ್ನ ಬಿಳಿಯ ಬಣ್ಣದ ಮಾರುತಿ 800 ಕಾರಿನಲ್ಲಿ ಆತ ಬಂದ. ಆತನನ್ನು ಬದುಕಿಸಲು ನಾನು ಒಟ್ಟುಗೂಡಿದ ಹಣದಿಂದ ಖರೀದಿಸಿದ ಕಾರು ಇದು. ಎಡಗಡೆಯ ಬಂಪರ್ ಮೇಲಿನ ಬಣ್ಣ ಮಾಸಿ ಕಪ್ಪಗಿನ ಗೆರೆ ಕಾಣಿಸಿಕೊಂಡಿದ್ದವು. ಕಪ್ಪುಬಣ್ಣದ ಬಂಪರ್ ಗಾರ್ಡ್ ಬೂದುಬಣ್ಣಕ್ಕೆ ತಿರುಗಿತ್ತು. ಕಾರಿನ ಟೈರ್‌ಗಳು ಜೀರ್ಣಾವಸ್ಥೆಗೆ ತಲುಪಿದ್ದವು. ಕಾರಿನಿಂದ ಇಳಿದ ಅಪ್ಪುಣ್ಣಿ ನನ್ನೆಡೆಗೆ ಬಂದು ಆಲಂಗಿಸಿಕೊಂಡ. ಕೇರಳದಲ್ಲಿ ಸಾಮಾನ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಜನರು ಪರಸ್ಪರ ಆಲಂಗಿಸಿಕೊಳ್ಳುವುದಿಲ್ಲ. ಆದರೆ ನಾವಿಬ್ಬರೂ ಅರಬ್ ದೇಶದಲ್ಲಿ ದೀರ್ಘ ಕಾಲವಿದ್ದ ಕಾರಣ ಆ ದೇಶದ ಪದ್ಧತಿ ನಮಗೆ ಒಗ್ಗಿಹೋಗಿತ್ತು.
ಅರಬ್ ಜಗತ್ತಿನಲ್ಲಿ ಶುಭಾಶಯ ಹೇಳುವ ಹಲವು ವಿಧಾನಗಳಿವೆ. ಭುಜ ಸ್ಪರ್ಶಿಸುವುದು, ಭುಜಕ್ಕೆ ಮುತ್ತಿಡುವುದು, ಭುಜದಿಂದ ಭುಜ ಸ್ಪರ್ಶಿಸುವುದು, ಹಸ್ತಲಾಘವ, ಆಲಿಂಗನ, ಮುತ್ತಿಡುವುದು, ಮೂಗಿನ ನಮಸ್ಕಾರ ಕೂಡಾ ಇದೆ. ಪರಸ್ಪರ ದೀರ್ಘ ಕಾಲದಿಂದ ಭೇಟಿಯಾಗದ ಜನರ ಮಧ್ಯೆ ಮುತ್ತಿನ ವಿನಿಮಯವಾಗುತ್ತದೆ. ಶುಭಾಶಯ ಸಲ್ಲಿಕೆಯಾದ ಬಳಿಕ ಆತನ ಆರೋಗ್ಯ, ಕುಟುಂಬದ ಸದಸ್ಯರ ಯೋಗಕ್ಷೇಮದ ಬಗ್ಗೆ ವಿಚಾರಣೆ ನಡೆಯುತ್ತದೆ. ಭೇಟಿಯಾದೊಡನೆ ನೇರವಾಗಿ ವ್ಯವಹಾರದ ಮಾತನಾಡುವುದು ಅಸಭ್ಯದ ವರ್ತನೆ ಎಂದು ಪರಿಗಣಿಸಲಾಗುತ್ತದೆ. ಕುತೂಹಲದ ವಿಷಯವೆಂದರೆ, ಶುಭಾಶಯಗಳು ಯಾವ ಸಮಯದಲ್ಲಿ ರೂಪುಗೊಂಡವು, ಆಯಾ ಪ್ರದೇಶದಲ್ಲೇ ಇದರ ಉಗಮವಾಗಿದೆಯೇ ಅಥವಾ ಇತರ ಪ್ರದೇಶಗಳಿಂದ ಆಮದಾಗಿವೆಯೇ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಶುಭಾಶಯ ಸಲ್ಲಿಸುವುದನ್ನು ನೋಡಲು ಮತ್ತು ಅನುಭವಿಸಲು ಆಹ್ಲಾದಕರವಾಗಿರುತ್ತದೆ.
ಶುಭಾಶಯ ವಿನಿಮಯಗೊಂಡ ಬಳಿಕ, ಕಾರಿನ ಡ್ಯಾಷ್‌ಬೋರ್ಡ್‌ನಲ್ಲಿ ಹಮಾಮ್ ಸಾಬೂನಿನ ಪೊಟ್ಟಣ ಮತ್ತು ಒಂದು ಟವಲ್ ನನ್ನ ಕಣ್ಣಿಗೆ ಬಿದ್ದಿತು. ಈ ಬಗ್ಗೆ ಕೇಳಿದಾಗ ‘‘ನಾನು ಈಗ ಮನೆಯಲ್ಲಿ ವಾಸಿಸುತ್ತಿಲ್ಲ. ಈ ಕಾರಿನಲ್ಲೇ ಮಲಗುತ್ತಿದ್ದೇನೆ. ಈ ಬಿಳಿಯ ಲೋಹದ ಪೆಟ್ಟಿಗೆಯೇ ನನ್ನ ಮನೆ ಮತ್ತು ನನ್ನ ಶವಪೆಟ್ಟಗೆ ಕೂಡಾ’’ ಎಂದಾತ ಉತ್ತರಿಸಿದ. ಇದನ್ನು ಕೇಳಿ ನನಗೆ ಬೇಸರವಾಯಿತು. ಹುಟ್ಟೂರಲ್ಲಿ ಇದ್ದರೂ ಆತ ತನ್ನ ಮನೆಯಲ್ಲಿ ವಾಸಿಸುತ್ತಿಲ್ಲ. ಈ ಬಗ್ಗೆ ಅಪ್ಪುಣ್ಣಿಯನ್ನು ವಿಚಾರಿಸುವುದಕ್ಕೂ ಮುನ್ನ, ಆತನನ್ನು ಪ್ರಥಮ ಬಾರಿಗೆ ಮಸ್ಕತ್‌ನಲ್ಲಿ ಭೇಟಿಯಾದ ನೆನಪು ನನ್ನ ಮನದಲ್ಲಿ ಹಾದುಹೋಯಿತು. 2015ರಲ್ಲಿ ಮಸ್ಕತ್‌ನ ಕಡಲ ತೀರದಲ್ಲಿ ಆತನನ್ನು ಮೊದಲ ಬಾರಿಗೆ ಭೇಟಿಯಾದಾಗ ಆತ ಹೇಗಾದರೂ ಮಾಡಿ ಮನೆಗೆ ಹೋಗಬೇಕು ಎಂಬ ಹತಾಶ ಮನೋಭಾವದಲ್ಲಿದ್ದ. ಹರಿದು ಹೋಗಿದ್ದ ಬಿಳಿ ಬಣ್ಣದ ಶರ್ಟ್, ಬಣ್ಣ ಮಸುಕಾದ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದ. ಆತ ಧರಿಸಿದ್ದ ಹಳೆಯ ಚಪ್ಪಲಿಯ ಕೊಂಡಿ ಕಳಚಿಹೋಗಿ ನಡೆಯಲೂ ಕಷ್ಟಪಡುತ್ತಿದ್ದ. ಆದರೂ ಏನೂ ಸಮಸ್ಯೆಯಿಲ್ಲ ಎಂಬಂತೆ ನಟಿಸುತ್ತಿದ್ದ.
ಅವನೊಂದಿಗೆ ನಡೆಯುತ್ತಿದ್ದಾಗ ಆತ ಕೇಳಿದ್ದ ‘‘ರೆಜಿ, ಈ ಸಮುದ್ರದ ಆಚೆಕಡೆ ಏನಿದೆ ಎಂಬುದು ನಿನಗೆ ತಿಳಿದಿದೆಯೇ? ಅಲ್ಲಿ ಕೊಲ್ಲಂ ಇದೆ, ನನ್ನ ಮನೆ, ನನ್ನ ಪ್ರೀತಿಯ ಮನೆ. ಕೆಲವೊಮ್ಮೆ ಸಂಜೆ ವೇಳೆ ನಾನಿಲ್ಲಿಗೆ ಬಂದು ಸಮುದ್ರದ ದಡದಲ್ಲಿ ಕುಳಿತಿರುತ್ತೇನೆ. ಇನ್ನೊಂದು ಬದಿಯಲ್ಲಿ ನನ್ನ ಮನೆಯಿದೆ. ಕೆಲವೊಮ್ಮೆ ಸಮುದ್ರದಲ್ಲಿ ಈಜಿ ಆ ದಡ ಸೇರಿ ನನ್ನ ಮನೆಯನ್ನು ನೋಡಬೇಕೆಂಬ ಬಯಕೆಯಾಗುತ್ತದೆ’’ ಎಂದಿದ್ದ. ‘‘ನನ್ನ ಪುತ್ರಿ, ಆಕೆಯ ಮಗು, ನನ್ನ ಪ್ರೀತಿಯ ಪತ್ನಿ, ನನ್ನ ಮಗ, ನನ್ನ ಸಣ್ಣ ಮನೆ.. ನಿಜಕ್ಕೂ ಅದೊಂದು ಸ್ವರ್ಗ’’ ಎಂದಾತ ಹೊಳಪು ಕಣ್ಣುಗಳಲ್ಲಿ ಬಣ್ಣಿಸುತ್ತಿದ್ದ. ಮನೆಗೆ ಹಿಂದಿರುಗಿ ಹೋಗಬೇಕೆಂಬ ಹತಾಶ ಬಯಕೆ ಆತನಲ್ಲಿತ್ತು. ಆತ ಮನೆ ಬಿಟ್ಟು ಬಂದಾಗ ಪುತ್ರಿಗೆ 10 ವರ್ಷವಾಗಿತ್ತು. 2005ರಲ್ಲಿ ಆಕೆಯ ವಿವಾಹವಾಯಿತು. ಪುತ್ರಿಯ ಮದುವೆಗೂ ಆತ ಊರಿಗೆ ಹೋಗಲು ಆಗಲಿಲ್ಲ. ಆತ ಪ್ರಯತ್ನಿಸಿದ್ದ, ಭಾರತವನ್ನು ತಲುಪಿದ್ದ ಕೂಡಾ. ಆದರೆ ಅಲ್ಲಿಂದ ಆತನನ್ನು ಬಲವಂತವಾಗಿ ಮರಳಿ ಕರೆತರಲಾಗಿತ್ತು.
ಆದರೆ ಈಗ, ಆತನ ಹುಟ್ಟೂರಲ್ಲಿ ಭೇಟಿಯಾದಾಗ ‘‘ನಾನು ಮನೆಯಲ್ಲಿ ವಾಸಿಸುತ್ತಿಲ್ಲ’’ ಎಂದು ಅಪ್ಪುಣ್ಣಿ ಹೇಳುತ್ತಿದ್ದಾನೆ. ಈ ಬಗ್ಗೆ ಕಡೆಗೂ ಕೇಳಿದಾಗ ಆತ ಉತ್ತರಿಸಿದ. ‘‘ರೆಜಿ, ನಾನು ಮನೆಯಲ್ಲಿ ಅನಪೇಕ್ಷಿತ ಅತಿಥಿಯಾಗಿದ್ದೆ. 22 ವರ್ಷ ಎಲ್ಲಿಯೋ ಉಳಿದುಕೊಂಡಿದ್ದೆ. ಆದರೆ ಇದರರ್ಥ ನಾನು ತಲೆತಪ್ಪಿಸಿಕೊಂಡಿದ್ದೆ ಎಂದಲ್ಲ. ಏನಾದರೂ ಮಾಡಿ ಸಂಪಾದಿಸುತ್ತಿದ್ದೆ ಮತ್ತು ಇದನ್ನೆಲ್ಲಾ ಮನೆಗೆ ಕಳಿಸುತ್ತಿದ್ದೆ. ನಾನು ಕಳಿಸಿದ ಹಣದಿಂದ ಅವರು ಜೀವನ ಸಾಗಿಸುತ್ತಿದ್ದರು. ಆದರೆ ನಾನು ಹೃದಯ ತುಂಬಿದ ಪ್ರೀತಿಯಿಂದ ಮತ್ತು ಪ್ರೀತಿಯನ್ನು ಬಯಸಿ ಮನೆಗೆ ಮರಳಿದಾಗ ನನ್ನನ್ನು ಅನಪೇಕ್ಷಿತ ಅತಿಥಿಯಂತೆ ಕಂಡರು. ಹಾಗಾಗಿ ಮನೆ ಬಿಟ್ಟು ಬಂದೆ’’ ಎಂದ. ಕೆಲ ಹೊತ್ತು ಬಿಟ್ಟು ಆತ ಮತ್ತೆ ಆರಂಭಿಸಿದ ‘‘ರೆಜಿ, ಇಲ್ಲಿಗೆ ಮರಳಿ ಬಂದ ಮೇಲೊಮ್ಮೆ ವೀಸಾ ಕೊಡಿಸುವಂತೆ ನಿನ್ನಲ್ಲಿ ಕೇಳಿಕೊಂಡಿದ್ದೆ. ನಾನು ಒಮಾನ್‌ಗೆ ಮರಳಿ ಅಲ್ಲೇ ನೆಲೆಸಲು ಇಚ್ಛಿಸಿದ್ದೇನೆ ಎಂದು ನೀನಂದುಕೊಂಡಿರಬಹುದು. ಆದರೆ ಖಂಡಿತಾ ಹಾಗಲ್ಲ. ನಾನು ಒಮಾನ್‌ನಲ್ಲಿ ಸಾಯಲು ಇಚ್ಛಿಸುತ್ತೇನೆ, ಯಾಕೆಂದರೆ ನನ್ನ ಕುಟುಂಬದವರಿಗೆ ಆಗುವ ಮುಜುಗರವನ್ನು ತಪ್ಪಿಸಬೇಕಿದೆ. ನಾನು ಹೀಗೆ ಬದುಕುತ್ತಿರುವುದರಿಂದ ಅವರಿಗೆ ಅವಮಾನವಾಗುತ್ತಿದೆ’’ ಎಂದ. ಕೇರಳದಲ್ಲಿ ವಲಸಿಗ ಕಾರ್ಮಿಕರಲ್ಲಿ ಕೇಳುವ ಮೊದಲ ಪ್ರಶ್ನೆಯೆಂದರೆ ‘‘ನೀನು ಯಾವಾಗ ಬಂದೆ, ಯಾವಾಗ ಮರಳಿ ಹೋಗುತ್ತಿ?’’ ಎಂದಾಗಿದೆ. ಮರಳಿ ಹೋಗುವ ದಿನಾಂಕವನ್ನು ತಿಳಿದು ಅವರು, ಅಂದರೆ ನೆಂಟರು, ಆಪ್ತರೆಲ್ಲಾ ಖುಷಿಯಾಗುತ್ತಾರೆ. ಆದರೆ ಹಿಂದಿರುಗುವ ದಿನದ ಬಗ್ಗೆ ಖಚಿತವಾದ ಉತ್ತರ ಬಾರದಿದ್ದರೆ ಆಗ ಎಲ್ಲರ ಮುಖದಲ್ಲಿ ಆತಂಕ ನೆಲೆಸುತ್ತದೆ. ‘‘3 ತಿಂಗಳ ಬಳಿಕ ಹೋಗುತ್ತೇನೆ’’ ಎಂದು ಹೇಳಿದಾಗ ಎಲ್ಲರ ಹುಬ್ಬೂ ನೆಟ್ಟಗಾಗುತ್ತದೆ. ‘‘ಅಲ್ಲಿ ಎಲ್ಲವೂ ಸರಿಯಾಗಿದೆ ಅಲ್ಲವೇ?, ನಿಮ್ಮ ಕೆಲಸ ಇದೆ ಅಲ್ವಾ? ಸಂಬಳವಿಲ್ಲದೆ ಅಷ್ಟು ಸಮಯ ಇರಲು ಸಾಧ್ಯವೇ?’’ ಎಂಬ ಸರಣಿ ಪ್ರಶ್ನೆಗಳು ಎದುರಾಗುತ್ತವೆ. ಆದರೆ ಅಪ್ಪುಣ್ಣಿಯ ಪ್ರಕರಣ ವಿಭಿನ್ನವಾಗಿದೆ. ಇಲ್ಲಿ ಸ್ವತಃ ಅಪ್ಪುಣ್ಣಿಯೇ ಉತ್ತರವಾಗಿದ್ದಾನೆ. ಗಲ್ಫ್ ದೇಶಗಳಿಗೆ ತೆರಳಿದವರು ಹುಟ್ಟೂರಲ್ಲಿ ಬಂಗಲೆ ಕಟ್ಟಿಕೊಂಡು ಐಷಾರಾಮಿ ಕಾರು ಖರೀದಿಸಿದ್ದಾರೆ. ಆದರೆ ನಾನು ಏನನ್ನೂ ಮಾಡಲಿಲ್ಲ. ಅದೇ ಮನೆಗೆ ಸ್ವಲ್ಪರಿಪೇರಿ, ನವೀಕರಣ ಮಾಡಿದ್ದೇನೆ. ಈಗ ಅರಬ್ ದೇಶಗಳಲ್ಲಿ ಯಾರು ಹಣ ಮುದ್ರಿಸುತ್ತಾರೆ ನಿಗೆ ಗೊತ್ತಲ್ವಾ? ಎಂದಾತ ಪ್ರಶ್ನಿಸಿದ.
ಹೌದು, ಅರಬ್ ದೇಶಗಳಲ್ಲಿ ಮಾಸಿಕ ವೇತನಕ್ಕಾಗಿ ದುಡಿಯುವವರು ಹೆಚ್ಚು ಗಳಿಸುವುದಿಲ್ಲ. ಅಲ್ಲಿ ವ್ಯವಹಾರ ಮಾಡುವವರು ಶ್ರೀಮಂತರಾಗುತ್ತಾರೆ. ಕಫಾಲ ವ್ಯವಸ್ಥೆಯು ವಲಸಿಗ ಕಾರ್ಮಿಕರನ್ನು ಶೋಷಿಸಿ ವ್ಯವಹಾರ ಮಾಡುವ ಮೂಲಕ ಅತ್ಯಧಿಕ ಲಾಭ ಗಳಿಸಲು ನೆರವಾಗುತ್ತದೆ. ಅಲ್ಲದೆ ಅರಬ್ ದೇಶಗಳಲ್ಲಿ ಕ್ರಿಮಿನಲ್ ಕಾನೂನು ಬಿಗಿಯಾಗಿದೆ ಎಂಬುದು ಸಾಮಾನ್ಯ ಜನರಿಗೂ ತಿಳಿದಿದೆ. ಆದರೆ ರಂಗೋಲಿ ಕೆಳಗೆ ತೂರಿ ಈ ಕಾನೂನಿನ ಅಂಶಗಳಿಂದ ಬಚಾವಾಗಬಹುದು. ಕೆಲವೊಂದು ಉತ್ತಮ ವ್ಯಕ್ತಿಗಳ ಸಂಪರ್ಕ ಇರಿಸಿಕೊಂಡು ನೀವು ವ್ಯವಹಾರ ಮುಂದುವರಿಸಿದರೆ ನೀವು ಹಣವನ್ನು ಮುದ್ರಿಸಬಹುದು(ಹೇರಳ ಹಣ ಗಳಿಸಬಹುದು). ವೀಸಾ ವ್ಯವಹಾರ, ಮಾನವ ಕಳ್ಳಸಾಗಾಣೆ, (ಪುರುಷರು ಮತ್ತು ಮಹಿಳೆಯರನ್ನು ಅಕ್ರಮವಾಗಿ ಸಾಗಿಸುವುದು) ಸಾರಾಯಿ ವ್ಯವಹಾರ ಮಾಡಿದರೆ ಒಂದೆರಡು ವರ್ಷದಲ್ಲಿ ಕೇರಳದಲ್ಲಿ ಕೋಟಿಗಟ್ಟಲೆ ಮೌಲ್ಯದ ಮನೆ, ಐಷಾರಾಮಿ ಕಾರನ್ನು ಹೊಂದಬಹುದು. ಒಮಾನ್‌ನಲ್ಲಿ 22 ವರ್ಷ ಸಾಮಾನ್ಯ ಕೆಲಸಗಾರನಾಗಿ ದುಡಿದ ಅಪ್ಪುಣ್ಣಿಗೆ ಹೆಚ್ಚಿನ ಹಣ ಸಂಪಾದಿಸಲು ಸಾಧ್ಯವಾಗಲಿಲ್ಲ.
(ಕೃತಿಯ ಆಯ್ದ ಭಾಗದ ಕನ್ನಡಾನುವಾದ)
ಕೃತಿ: ಅನ್ ಡಾಕ್ಯುಮೆಂಟ್‌ಡ್ ಸ್ಟೋರೀಸ್ ಆಫ್ ಇಂಡಿಯನ್ ಮೈಗ್ರಂಟ್ಸ್ ಇನ್ ದ ಅರಬ್ ಗಲ್ಫ್
ಲೇಖಕ: ರೆಜಿಮೋನ್ ಕುಟ್ಟಪ್ಪನ್