ವೀಕ್ಷಿಸಿ ಅರಿತು ಕೊಳ್ಳಬೇಕಾದ ಚಿತ್ರ 'ಅಕ್ಷಿ'

Update: 2021-12-04 19:30 GMT

ರಾಷ್ಟ್ರ ಪ್ರಶಸ್ತಿ ಬಂದ ಮಾತ್ರಕ್ಕೆ ಆ ಸಿನೆಮಾ ಎಲ್ಲರಿಗೂ ಇಷ್ಟವಾಗಬೇಕು ಎಂದೇನಿಲ್ಲ. ಆದರೆ ಬಹಳಷ್ಟು ಬಾರಿ ಅಂತಹ ಸಿನೆಮಾಗಳು ಎಲ್ಲರನ್ನು ತಲುಪಬೇಕಾಗಿರುತ್ತದೆ. ಅಂತಹದ್ದೊಂದು ಸಂದೇಶವನ್ನು ನೈಜತೆಯೊಂದಿಗೆ ಸಾರಿರುವ ಚಿತ್ರ 'ಅಕ್ಷಿ'.

ಇದು ಕರ್ನಾಟಕದ ಗ್ರಾಮೀಣ ಭಾಗದಲ್ಲಿ ನಡೆಯುವ ಕತೆ. ಭಾಗ್ಯ ಮತ್ತು ಆಕೆಯ ಪತಿ ಇಬ್ಬರೂ ಕೂಲಿ ಕಾರ್ಮಿಕ ದಂಪತಿ. ರಾಮು ಮತ್ತು ಲಕ್ಷ್ಮಿ ಅವರ ಇಬ್ಬರು ಮಕ್ಕಳು. ಆದರೆ ಲಕ್ಷ್ಮಿ ಹುಟ್ಟು ಕುರುಡಿ. ಲಕ್ಷ್ಮಿಯ ಮೇಲಿನ ಕಾಳಜಿಗಾಗಿ ಹೆಚ್ಚು ದುಡ್ಡಿನ ಆವಶ್ಯಕತೆಯಿದೆ ಎಂದು ಭಾಗ್ಯಳ ಗಂಡ ನಗರಕ್ಕೆ ಹೋಗಿ ದುಡಿಯುತ್ತಿರುತ್ತಾನೆ. ಅಣ್ಣ ರಾಮುವಿಗೆ ಕೂಡ ಕಣ್ಣು ಕಾಣದ ತಂಗಿಯ ಮೇಲೆ ತುಂಬ ಅಕ್ಕರೆ. ಒಟ್ಟಿನಲ್ಲಿ ಎಲ್ಲರೂ ಪ್ರೀತಿಯನ್ನೇ ಹಂಚಿಕೊಂಡು ಬಾಳುವ ಕುಟುಂಬ ಅದು. ಇದರ ನಡುವೆ ಆ ಹಳ್ಳಿಯ ಸರಕಾರಿ ಆಸ್ಪತ್ರೆಗೆ ಹೊಸದಾಗಿ ಬರುವ ವೈದ್ಯರು ಲಕ್ಷ್ಮಿಗೆ ಕಣ್ಣು ಬರುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ. ಅಷ್ಟಕ್ಕೆ ಇಡೀ ಕುಟುಂಬ ಸಂಭ್ರಮದಲ್ಲಿ ಮುಳುಗುತ್ತದೆ. ಆದರೆ ಆ ದಿನಗಳಲ್ಲಿ ಒಂದು ಮನಕಲಕುವ ಘಟನೆ ನಡೆಯುತ್ತದೆ. ಅದು ಏನು? ಅದರಿಂದ ಆ ಕುಟುಂಬದ ಮೇಲೆ ಉಂಟಾಗುವ ಪರಿಣಾಮ ಏನು? ಎನ್ನುವುದನ್ನು 'ಅಕ್ಷಿ' ಸಿನೆಮಾ ವೀಕ್ಷಿಸಿ ತಿಳಿಯಬಹುದು.
ಚಿತ್ರದ ಪ್ರಧಾನ ಕತೆ ಲಕ್ಷ್ಮಿಯ ಸುತ್ತ ನಡೆಯುತ್ತದೆ. ಲಕ್ಷ್ಮಿಯಾಗಿ ಬಾಲನಟಿ ಸೌಮ್ಯಾ ಪ್ರಭು ಅದ್ಭುತವಾಗಿ ನಟಿಸಿದ್ದಾರೆ. ಸಾಮಾನ್ಯವಾಗಿ ಅಂಧೆಯ ಪಾತ್ರ ಎಂದಕೂಡಲೇ ಕಣ್ಣ ಬೊಂಬೆ ಮೇಲೆ ಮಾಡಿ ನಟಿಸುವುದು, ಅಥವಾ ಕಣ್ಣಿಗೆ ಲೆನ್ಸ್ ಹಾಕುವುದನ್ನು ನೋಡಿರುತ್ತೇವೆ. ಆದರೆ ಕಣ್ಣನ್ನು ನೇರವಾಗಿ ತೋರಿಸಿಯೂ ಅದರಲ್ಲಿ ಜೀವಂತಿಕೆ ಇಲ್ಲದೆ ಹಾಗೆ ನಟಿಸಿರುವ ಮಗುವನ್ನು ಮೆಚ್ಚಲೇಬೇಕು! ಕತೆ ಲಕ್ಷ್ಮಿಯ ಸುತ್ತ ಸಾಗಿದರೂ ಇಡೀ ಚಿತ್ರದ ಕಣ್ಣಿನಂತೆ ಇರುವ ಹುಡುಗ ರಾಮುವಾಗಿ ಬಾಲನಟ ಮಿಥುನ್ ಆಕರ್ಷಕ ಅಭಿನಯ ನೀಡಿದ್ದಾರೆ. ಆತನ ಮುಖಭಾವಗಳು ಪ್ರತಿ ಸಂಭಾಷಣೆಗಳಿಗೆ ಜೀವಂತಿಕೆ ತಂದುಕೊಟ್ಟಿವೆ.
ಮೇಲ್ನೋಟಕ್ಕೆ ಮಕ್ಕಳ ಕುರಿತಾಗಿಯೇ ಸಾಗುವ ಕತೆ ಇದೆ. ಹಾಗಾಗಿ ಇದು ಮಕ್ಕಳ ಚಿತ್ರದಂತೆ ಕಾಣಿಸಿದರೂ ಸಿಕ್ಕ ಅವಕಾಶದಲ್ಲಿ ತಮ್ಮ ಪ್ರಬುದ್ಧ ನಟನೆಯನ್ನು ತೋರಿಸಿದ್ದಾರೆ ನಟಿ ಇಳಾ ವಿಟ್ಲ. ತುಂಟ ಮಗನ ತಾಯಿಯಾಗಿ ಆತನನ್ನು ಮಾತಿನಲ್ಲೇ ಹದ್ದುಬಸ್ತಿನಲ್ಲಿರಿಸುವಾಗ ಅವರ ಕಂಗಳಲ್ಲಿ ಮೂಡುವ ನೋಟದ ತೀಕ್ಷ್ಣತೆೆ, ಮಗಳು ಅಂಧೆಯೆನ್ನುವ ವಿಷಯ ನೆನಪಾದಾಗಲೆಲ್ಲ ಮುಖದ ಮೇಲೆ ಸರಿದಾಡುವ ಮ್ಲಾನತೆ.. ಎಲ್ಲವೂ ಅಮೋಘ. ಕಿರುತೆರೆಯಲ್ಲಿ ಲೇಡಿಕೇಡಿ ಎನ್ನುವ ಕ್ಲೀಷಾತ್ಮಕ ಪಾತ್ರಗಳಲ್ಲಿ ಸೇರಿಹೋಗಿದ್ದ ಇಳಾ ಅವರು ಎಷ್ಟು ನೈಜವಾಗಿ ನಟಿಸಬಲ್ಲರೆನ್ನುವುದನ್ನು ಭಾಗ್ಯಳ ಪಾತ್ರದಲ್ಲಿ ನೋಡುವ ಭಾಗ್ಯ ವೀಕ್ಷಕರದ್ದಾಗಿದೆ. ಅದೇ ರೀತಿ 'ಕಾಮಿಡಿ ಕಿಲಾಡಿ' ಖ್ಯಾತಿಯ ಜಿ.ಜಿ.ಯವರನ್ನು ಸಿನೆಮಾರಂಗ ಕೂಡ ಹಾಸ್ಯಕ್ಕೆ ಸೀಮಿತಗೊಳಿಸಿತ್ತು. ಚಿತ್ರದಲ್ಲಿ ಜವಾಬ್ದಾರಿ ಹಾಗೂ ಪ್ರೀತಿ ತುಂಬಿದ ತಂದೆಯಾಗಿ ಅವರ ಭಾವ ಪ್ರದರ್ಶನ ಅನನ್ಯ.
 ದೃಶ್ಯಗಳಲ್ಲಿ ಮೂಡಿರುವ ಪರಿಸರಕ್ಕೆ ಛಾಯಾಗ್ರಾಹಕರು ನಮ್ಮನ್ನು ಕರೆದೊಯ್ಯುತ್ತಾರೆ. ಹಳ್ಳಿಗಾಡಿನಲ್ಲಿರುವ ಬಡವನ ಮನೆಯ ವಾತಾವರಣವನ್ನು ಮುಕುಲ್ ಗೌಡ ಅವರು ತಮ್ಮ ಕ್ಯಾಮರಾ ಚೌಕಟ್ಟುಗಳೊಳಗೆ ಕಟ್ಟಿಕೊಡುತ್ತಾರೆ. ಡಾಕ್ಟರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ ನಟ, ನಿರೂಪಕ ಕಲಾದೇಗುಲ ಶ್ರೀನಿವಾಸ್ ಅವರೇ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. 'ಬಣ್ಣ ಬಣ್ಣ..' ಎನ್ನುವ ಹಾಡು ಇವರ ಸಂಗೀತ ಮತ್ತು ಸಾಹಿತ್ಯದಿಂದ ಭಾವಪೂರ್ಣವಾಗಿದೆ. ಕುರುಡಪ್ಪಣ್ಣನ ಪಾತ್ರಕ್ಕೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಂಠದ ಗಾಯನವೂ ಸೇರಿದಾಗ ಆ ದೃಶ್ಯ ಪರಿಪೂರ್ಣವೆನಿಸುತ್ತದೆ.
ಚಿತ್ರ ನೋಡುತ್ತಿದ್ದರೆ 'ಎಲ್ಲರೂ ಕಣ್ಣುದಾನ ಮಾಡುವಂತಾಗಲಿ' ಎಂದು ಆಶಿಸುವ ರಾಮುವಿನ ತುಡಿತ ಪ್ರತಿಯೊಬ್ಬ ಪ್ರೇಕ್ಷಕರ ಎದೆಬಡಿತದಲ್ಲಿ ಸೇರಿಕೊಳ್ಳುತ್ತದೆ. ಆದರೆ ಅದೇ ಸಂದರ್ಭದಲ್ಲಿ ಶಾಲಾ ನಾಟಕದ ಮೂಲಕವೂ ಅದನ್ನು 'ವಿವರಿಸಿ' ಹೇಳುವ ಅಗತ್ಯವಿರಲಿಲ್ಲ ಅನಿಸುತ್ತದೆ. ಪೂರ್ತಿ ವೇದಿಕೆ ನಾಟಕವನ್ನು ನೈಜವಾಗಿಯೇ ಚಿತ್ರಿಸಲಾಗಿದ್ದರೂ ಸಿನೆಮಾ ನೋಡಲು ಬಂದವರ ಸ್ಥಿತಿ ನಾಟಕ ನೋಡಲು ಬಂದಂತಾಗಿಬಿಡುತ್ತದೆ! ಚಿತ್ರದ ಸಂಭಾಷಣೆಯಲ್ಲಿ ಸಹಜತೆಯೇನೋ ಇದೆ. ಆದರೆ ಅಂಧ ಬಾಲಕಿ ಲಕ್ಷ್ಮಿಯಲ್ಲಿ ನಮ್ಮ ರಾಷ್ಟ್ರಪತಿ ಯಾರು ಎಂದು ಕೇಳಿದಾಗ ಆಕೆ ಹೇಳುವ ಉತ್ತರ ರಾಮನಾಥ ಕೋವಿಂದ್ ಎಂದು ಆಗಿರುತ್ತದೆ. ಆದರೆ ''ಪ್ರಧಾನ ಮಂತ್ರಿ ಯಾರು?' ಎಂದಾಗ ''ಶ್ರೀ ನರೇಂದ್ರ ಮೋದಿ'' ಎನ್ನುತ್ತಾಳೆ. ದೇಶದ ಇಬ್ಬರು ಉನ್ನತ ಹುದ್ದೆಯಲ್ಲಿರುವವರಲ್ಲಿ ಒಬ್ಬರಿಗೆ ಮಾತ್ರ ''ಶ್ರೀ'' ನೀಡಿರುವುದನ್ನು 'ಅಂಧ ಭಕ್ತಿ' ಎಂದು ಕರೆಯಬಹುದೇ? ನಿರ್ದೇಶಕರೇ ಉತ್ತರಿಸಬೇಕು.
 ಒಟ್ಟು ಚಿತ್ರದ ವಿಚಾರಕ್ಕೆ ಬಂದರೆ ಸಂದೇಶದ ನಿರ್ದೇಶನದಲ್ಲಿ ಮನೋಜ್ ಕುಮಾರ್ ಗೆದ್ದಿದ್ದಾರೆ. ಅದಕ್ಕಾಗಿ ಅವರು ಡಾ. ರಾಜ್ ಕುಮಾರ್ ಅವರ ಆದರ್ಶವನ್ನು ಕೂಡ ಬಳಸಿಕೊಂಡಿದ್ದಾರೆ. ಡಾ.ರಾಜ್ ಅವರು ಬದುಕಿನ ಮೂಲಕ ನೀಡಿರುವ ಸಂದೇಶವು ಪ್ರಭಾವಿಸಿದ ಒಂದು ಭಾಗದಷ್ಟಾದರೂ ಪ್ರಭಾವವನ್ನು 'ಅಕ್ಷಿ' ಕನ್ನಡಿಗರ ಮೇಲೆ ಮೂಡಿಸಿದರೆ ಚಿತ್ರದ ಉದ್ದೇಶ ಸಾರ್ಥಕವಾದಂತೆ ಎನ್ನಬಹುದು.

ನಿರ್ದೇಶನ: ಮನೋಜ್ ಕುಮಾರ್
ನಿರ್ಮಾಣ: ಶ್ರೀನಿವಾಸ್ ವಿ., ರಮೇಶ್ ಎನ್.ಮತ್ತು ರವಿ ಎಚ್.ಎಸ್.
ತಾರಾಗಣ: ಇಳಾ ವಿಟ್ಲ, ಸೌಮ್ಯಾ ಪ್ರಭು, ಮಿಥುನ್ ಎಂ. ವೈ. ಮೊದಲಾದವರು

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News