ಜಮ್ಮು-ಕಾಶ್ಮೀರದ ಆರ್ಥಿಕತೆಯ ಮಾನವೀಯ ಮುಖದ ಅಧ್ಯಯನ

Update: 2021-12-07 06:45 GMT

ಜಮ್ಮು ಮತ್ತು ಕಾಶ್ಮೀರದ ಅಂತರ್‌ರಾಷ್ಟ್ರೀಯ ಆಯಾಮಗಳು, ಆಂತರಿಕ ರಾಜಕೀಯ ಮತ್ತು ಸಂಘರ್ಷದ ರೂಪುರೇಷೆಗಳ ಬಗ್ಗೆ ಈಗಾಗಲೇ ವ್ಯಾಪಕವಾಗಿ ಬರೆಯಲಾಗಿದೆ. ಆದರೆ, ಅದರ ಆರ್ಥಿಕತೆಯ ಬಗ್ಗೆ, ಅದರಲ್ಲೂ ಮುಖ್ಯವಾಗಿ 1947ರ ಬಳಿಕದ ಆರ್ಥಿಕತೆಯ ಬಗ್ಗೆ ಸಮಗ್ರ ಪುಸ್ತಕಗಳಿಲ್ಲ.

ಸೆಹರ್ ಇಕ್ಬಾಲ್‌ರ ಪುಸ್ತಕ ‘ಎ ಸ್ಟ್ರಾಟಜಿಕ್ ಮಿತ್: ‘ಅಂಡರ್‌ಡೆವಲಪ್‌ಮೆಂಟ್’ ಇನ್ ಜಮ್ಮು ಆ್ಯಂಡ್ ಕಾಶ್ಮೀರ್’ (A Strategic Myth: 'Underdevelopment' in Jammu and Kashmir) ಜಮ್ಮು ಮತ್ತು ಕಾಶ್ಮೀರದಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕಗಳು ಮತ್ತು ಇಂದಿನ ದಿನದವರೆಗೆ ಈ ಸೂಚ್ಯಂಕಗಳ ವಿಕಾಸದ ಬಗ್ಗೆ ವಿಸ್ತೃತ ನೋಟವೊಂದನ್ನು ನೀಡುತ್ತದೆ. ಅವರ ಅಧ್ಯಯನವು ಮೊದಲ ಬಾರಿಗೆ ಕಾಶ್ಮೀರದಾದ್ಯಂತ ಜಮೀನು ಮರುಹಂಚಿಕಗೆ ಸಂಬಂಧಿಸಿದ ವಾಸ್ತವಿಕ ಅಂಕಿಸಂಖ್ಯೆಗಳನ್ನು ನೀಡುವುದರ ಜೊತೆಗೆ ಭೂಸುಧಾರಣೆ ಪ್ರಕ್ರಿಯೆಯ ವಿವರಗಳನ್ನು ದಾಖಲಿಸಿದೆ. ತಮ್ಮ ಗ್ರಾಮಗಳಲ್ಲಿ ಈ ಪ್ರಕ್ರಿಯೆಗಳನ್ನು ವೀಕ್ಷಿಸಿದ ಜನರನ್ನು ಅವರು ಸಂದರ್ಶಿಸಿ ವಾಸ್ತವಾಂಶಗಳನ್ನು ಪಡೆದಿದ್ದಾರೆ. ಈ ಅಮೂಲ್ಯ ಜೀವಂತ ಸಾಕ್ಷ್ಯಗಳ ದಾಖಲೀಕರಣ ಸರಿಯಾದ ಸಮಯದಲ್ಲಿ ನಡೆದಿದೆ. ಮುಂದಿನ ದಶಕಗಳಲ್ಲಿ ಈ ಜೀವಂತ ದಾಖಲೆಗಳು ಅಳಿಸಿಹೋಗುವ ಸಾಧ್ಯತೆಗಳಿದ್ದವು. ಕೋವಿಡ್-19 ಸಾಂಕ್ರಮಿಕವು ಹಲವಾರು ಹಿರಿಯ ಜೀವಗಳನ್ನು ಈಗಾಗಲೇ ಬಲಿತೆಗೆದುಕೊಂಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ, ಸರಕಾರದ ನೇತೃತ್ವದಲ್ಲಿ ನಡೆದ ಸುಧಾರಣೆಗಳು ಸಮುದಾಯ ಮಟ್ಟದಲ್ಲಿ ಬೀರಿದ ಪರಿಣಾಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುಡಲಾಗಿದೆ ಅಥವಾ ಹಾನಿಗೊಳಿಸಲಾಗಿದೆ. ಇರುವ ದಾಖಲೆಗಳು ಈ ವಿಷಯಗಳ ಬಗ್ಗೆ ಮೌನವಾಗಿವೆ. ಹಾಗಾಗಿ, ಪುಸ್ತಕದಲ್ಲಿ ದಾಖಲಾಗಿರುವ ಮೌಖಿಕ ಇತಿಹಾಸಗಳು ಮುಂದಿನ ತಲೆಮಾರುಗಳಿಗಾಗಿ ಅಮೂಲ್ಯ ಮಾಹಿತಿ ಮೂಲವಾಗಬಹುದಾಗಿದೆ.

ಪುಸ್ತಕವು ಆಸಕ್ತಿದಾಯಕ ಮುನ್ನುಡಿಯೊಂದಿಗೆ ಆರಂಭಗೊಳ್ಳುತ್ತದೆ. ಜಮ್ಮು ಮತ್ತು ಕಾಶ್ಮೀರದ ಭೂಸುಧಾರಣೆಗಳು ಮತ್ತು ಸಾಲ ಮನ್ನಾ ಕಾರ್ಯಕ್ರಮಗಳು ತನ್ನದೇ ಕುಟುಂಬದ ಮೇಲೆ ಯಾವ ರೀತಿಯ ಪರಿಣಾಮ ಬೀರಿತು ಎನ್ನುವುದನ್ನು ಲೇಖಕಿ ವಿವರಿಸುತ್ತಾರೆ. ಮಹಿಳಾ ದೃಷ್ಟಿಕೋನದಿಂದ ಅವರು ಈ ಸುಧಾರಣೆಗಳನ್ನು ಸ್ವಾಗತಿಸುತ್ತಾರೆ. ಇದರಿಂದಾಗಿ ತನ್ನ ಅಜ್ಜಿ ವಿದ್ಯಾಭ್ಯಾಸ ಪಡೆಯಲು ಹಾಗೂ ಉದ್ಯೋಗ ಮಾಡಲು ಸಾಧ್ಯವಾಯಿತು. ಇದರಿಂದಾಗಿ ತನ್ನ ತಾಯಿಯ ತಲೆಮಾರಿಗೆ ಕೂಡ ಇದನ್ನೇ ಮಾಡಲು ಸಾಧ್ಯವಾಯಿತು ಎಂದು ಅವರು ಹೇಳುತ್ತಾರೆ. ಹೆಚ್ಚಿನ ಕಾಶ್ಮೀರಿ ಲೇಖಕರು ಇಷ್ಟೊಂದು ವಿವರಗಳೊಂದಿಗೆ ತಮ್ಮದೇ ಉದಾಹರಣೆಗಳನ್ನು ನೀಡಿಲ್ಲ.

ಖ್ಯಾತ ಇತಿಹಾಸಕಾರ ಹಾಗೂ ಬಿಬಿಸಿ ಪತ್ರಕರ್ತ ಆ್ಯಂಡ್ರೂ ವೈಟ್‌ಹೆಡ್ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಅವರು 1940ರ ದಶಕ, 50ರ ದಶಕ ಮತ್ತು 60ರ ದಶಕದ ಕಾಶ್ಮೀರ ಇತಿಹಾಸದ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುರಿತ ಅಕಾಡಮಿಕ್ ಸಾಹಿತ್ಯದಲ್ಲಿರುವ ಅಗಾಧ ಅಂತರ ಮತ್ತು ಈ ಅಂತರವನ್ನು ತುಂಬಲು ಯುವ ಕಾಶ್ಮೀರಿ ಲೇಖಕರು ಏನು ಮಾಡುತ್ತಿದ್ದಾರೆ ಎನ್ನುವುದರತ್ತ ಅವರು ಬೆಟ್ಟು ಮಾಡಿದ್ದಾರೆ.

ರಾಜಾಡಳಿತ ಕಾಲದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಸಾಧನೆಗಳನ್ನು ವಿಶ್ಲೇಷಿಸಲು ಇಕ್ಬಾಲ್, ಜಿಡಿಪಿ ಬೆಳವಣಿಗೆಯೆಂಬ ಸೀಮಿತ ಸಿದ್ಧಾಂತವನ್ನು ಬದಿಗಿಟ್ಟು ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಬಳಸುತ್ತಾರೆ. ಸಿದ್ಧಾಂತ ವಿಭಾಗದಲ್ಲಿ ಮಾರ್ತಾ ನಸ್ಬಾಮ್‌ರನ್ನು ಅವರು ವ್ಯಾಪಕವಾಗಿ ಉಲ್ಲೇಖಿಸುತ್ತಾರೆ.

ಮಾರ್ತಾ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಜೊತೆಗೆ ‘ಮಾನವ ಸಾಮರ್ಥ್ಯ ವಿಧಾನ’ವನ್ನು ಅಭಿವೃದ್ಧಿಪಡಿಸಿದ್ದಾರೆ. ಮಾನವ ಸಾಮರ್ಥ್ಯಗಳನ್ನು ಅಳೆಯುವ ವಿಧಾನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾರ್ತಾ ಮಾಡಿರುವ ಕೆಲಸಗಳಿಂದಾಗಿ ಮಾನವ ಅಭಿವೃದ್ಧಿ ಸೂಚ್ಯಂಕವು ಜಾಗತಿಕವಾಗಿ ಬಳಕೆಗೆ ಬಂದಿದೆ. ಆರೋಗ್ಯ, ಶಿಕ್ಷಣ ಮತ್ತು ಆದಾಯ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮಾನವ ಸೂಚ್ಯಂಕವನ್ನು ರೂಪಿಸಲಾಗಿದೆ.

ಹಾಗಾಗಿ ಮಾನವ ಅಭಿವೃದ್ಧಿ ಸೂಚ್ಯಂಕವು ಯಾವುದೇ ದೇಶ ಅಥವಾ ರಾಜ್ಯದ ಮಾನವ ಅಭಿವೃದ್ಧಿಯ ಸಂಕೀರ್ಣ ಚಿತ್ರಣವನ್ನು ಒದಗಿಸುತ್ತದೆ.

ಪುಸ್ತಕದಲ್ಲಿ 8 ಅಧ್ಯಾಯಗಳಿವೆ ಹಾಗೂ ಈ ಎಲ್ಲಾ ಅಧ್ಯಾಯಗಳಿಗೆ ಮಾನವ ಅಭಿವೃದ್ಧಿ ಸೂಚ್ಯಂಕಗಳೇ ತಳಹದಿಯಾಗಿವೆ. ತಲಾವಾರು ಆದಾಯ, ಆಯುಷ್ಯ, ಆರೋಗ್ಯ ಸೇವೆಗಳ ಲಭ್ಯತೆ, ಶೈಕ್ಷಣಿಕ ಲಭ್ಯತೆ, ಸಾಲ, ಕೌಟುಂಬಿಕ ಸೊತ್ತುಗಳು ಮುಂತಾದವುಗಳಿಗೆ ಸಂಬಂಧಿಸಿದ ವಿವರವಾದ ಅಂಕಿ-ಅಂಶಗಳನ್ನು ಪುಸ್ತಕವು ನೀಡುತ್ತದೆ.

ಮಾನವ ಅಭಿವೃದ್ಧಿ ಸೂಚ್ಯಂಕಗಳ ಜೊತೆಗೆ ಪುಸ್ತಕವು ಸಾಮಾಜಿಕ ವ್ಯವಸ್ಥೆ, ಮಾನವ ಸುರಕ್ಷತೆ ಮತ್ತು ಲಿಂಗ ತಾರತಮ್ಯಗಳ ಬಗ್ಗೆಯೂ ಪುಸ್ತಕವು ಗಮನ ಹರಿಸಿದೆ. ಅದರಂತೆ, ಲಿಂಗ ಮತ್ತು ಜಾತಿ ಸೇರಿದಂತೆ ವಿವಿಧ ಸಾಮಾಜಿಕ ಗುಂಪುಗಳಲ್ಲಿ ಪ್ರಮುಖ ಸೂಚ್ಯಂಕಗಳು ಹೇಗೆ ಹರಡಿಕೊಂಡಿವೆ ಎಂಬುದನ್ನು ಅಧ್ಯಯನ ಮಾಡಲಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕವನ್ನು 1947ರ ಮೊದಲಿನ ಹಾಗೂ ನಂತರದ ಜನಗಣತಿ ಅಂಕಿಅಂಶಗಳೊಂದಿಗೆ ತುಲನೆ ಮಾಡಲಾಗಿದೆ.

ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್)ಯಲ್ಲಿ ಪ್ರಸ್ತಾಪಿಸಲಾಗಿರುವ ಲಿಂಗಕ್ಕೆ ಸಂಬಂಧಿಸಿದ ಏಳು ಸೂಚ್ಯಂಕಗಳನ್ನು ಅವರು ಉಲ್ಲೇಖಿಸುತ್ತಾರೆ. ಈ ಪೈಕಿ ನಾಲ್ಕರಲ್ಲಿ ಜಮ್ಮು ಮತ್ತು ಕಾಶ್ಮೀರವು ರಾಷ್ಟ್ರೀಯ ಸರಾಸರಿಗಿಂತ ಮುಂದಿದೆ ಎಂದು ಅವರು ಹೇಳುತ್ತಾರೆ. ಆ ನಾಲ್ಕು ಸೂಚ್ಯಂಕಗಳು ಅತ್ಯಲ್ಪ ಹೆರಿಗೆ ಸಾವಿನ ದರ, ಕಡಿಮೆ ಪ್ರಮಾಣದ ಕೌಟುಂಬಿಕ ಹಿಂಸೆ, ಹೆಚ್ಚಿನ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಋತುಸ್ರಾವ ಸ್ವಚ್ಛತೆ ಸಲಕರಣೆಗಳು ಹೆಚ್ಚಿನ ಮಹಿಳೆಯರಿಗೆ ಲಭಿಸುವುದಕ್ಕೆ ಸಂಬಂಧಿಸಿವೆ.

ಅದೂ ಅಲ್ಲದೆ, ಕುಟುಂಬಗಳು ತೆಗೆದುಕೊಳ್ಳುವ ನಿರ್ಧಾರದಲ್ಲಿ ಮಹಿಳೆಯರ ಪಾತ್ರಕ್ಕೆ ಸಂಬಂಧಿಸಿದ ಸೂಚ್ಯಂಕದಲ್ಲಿ ಜಮ್ಮು ಮತ್ತು ಕಾಶ್ಮೀರವು ಭಾರತೀಯ ಸರಾಸರಿಗೆ ಸರಿಗಟ್ಟುತ್ತದೆ ಎನ್ನುವುದನ್ನು ಅವರು ಬೆಟ್ಟು ಮಾಡಿದ್ದಾರೆ.

ರಾಜಕೀಯ ನಿರ್ಬಂಧ ಮತ್ತು ಪ್ರಜಾತಾಂತ್ರಿಕ ವೈಫಲ್ಯಗಳ ಹಿನ್ನೆಲೆಯಲ್ಲಿ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ನಡುವೆ ಏರ್ಪಟ್ಟಿರುವ ಕಂದರವು ಸಮಸ್ಯೆಯಾಗಿದೆ ಎಂದು ಪುಸ್ತಕ ಹೇಳುತ್ತದೆ. ಏಳನೇ ಅಧ್ಯಾಯವು ಸ್ಫೋಟಕ ಹಾಗೂ ನಿರ್ಬಂಧಾತ್ಮಕ ರಾಜಕೀಯ ಹಿನ್ನೆಲೆಯನ್ನು ವಿವರಿಸುತ್ತದೆ. ಇದು ಮಾನವ ಅಭಿವೃದ್ಧಿ ಸೂಚ್ಯಂಕಗಳ ಸುಧಾರಣೆಯ ಮೇಲೆ ಯಾವ ಪರಿಣಾಮ ಬೀರಿತು ಹಾಗೂ 1980ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಶಸ್ತ್ರ ಸಂಘರ್ಷಕ್ಕೆ ಹೇಗೆ ನಾಂದಿ ಹಾಡಿತು ಎನ್ನುವುದನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಶೇಖ್ ಅಬ್ದುಲ್ಲಾ ಮತ್ತು ಬಕ್ಷಿ ಗುಲಾಮ್ ಮುಹಮ್ಮದ್‌ರ ಸರಕಾರಗಳು ಮತ್ತು ಆ ಸರಕಾರಗಳು ಭಿನ್ನಮತವನ್ನು ಹೇಗೆ ಬಗ್ಗುಬಡಿಯಿತು ಎನ್ನುವುದನ್ನು ದಾಖಲಿಸಲಾಗಿದೆ. ಒಂದರ ನಂತರ ಒಂದರಂತೆ ಬಂದ ‘ಇನ್ನೊಬ್ಬರ ಪ್ರತಿನಿಧಿ ಸರಕಾರಗಳ’ ಆಳ್ವಿಕೆಯನ್ನು ಜನರ ಮನಸ್ಸಿನಲ್ಲಿ ಕಾನೂನುಬದ್ಧಗೊಳಿಸುವುದಕ್ಕಾಗಿ ‘ನಯಾ ಕಾಶ್ಮೀರ್’ ಎಂಬ ಭಾಷೆಯನ್ನು ಹೇಗೆ ಬಳಸಲಾಯಿತು ಎನ್ನುವುದನ್ನೂ ಪುಸ್ತಕ ವಿವರಿಸುತ್ತದೆ.

ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲು ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಿರುವ ಬೆಳವಣಿಗೆಯೇ ಕಾರಣ ಎಂಬ ಪ್ರಸಕ್ತ ಸರಕಾರದ ಹೇಳಿಕೆಯನ್ನು ಗಮನದಲ್ಲಿರಿಸಿಕೊಂಡು, ‘ಇನ್ಸಲ್ಟ್ ಆ್ಯಂಡ್ ಇಂಜುರಿ: ಡೆವಲಪ್‌ಮೆಂಟ್ ಇನ್ ಆ್ಯಂಡ್ ಆ್ಯಸ್ ಎ ಯೂನಿಯನ್ ಟೆರಿಟರಿ’ ಎಂಬ ಎಂಟನೇ ಅಧ್ಯಾಯವನ್ನು ಬರೆಯಲಾಗಿದೆ. ಈ ಅಧ್ಯಾಯವು ಜಮ್ಮು ಮತ್ತು ಕಾಶ್ಮೀರವು ‘ಕಡಿಮೆ ಅಭಿವೃದ್ಧಿ ಹೊಂದಿದ ರಾಜ್ಯ’ಎಂಬ ಕಲ್ಪನೆಯನ್ನು ಹೋಗಲಾಡಿಸುತ್ತದೆ.

ಆದರೆ, ಸೆಹರ್ ಇಕ್ಬಾಲ್ ತನ್ನ ವಿಶ್ಲೇಷಣೆಯಲ್ಲಿ ಸಾಮಾಜಿಕ ಒಗ್ಗಟ್ಟಿಗೆ ಅತಿ ಹೆಚ್ಚಿನ ಒತ್ತು ನೀಡುತ್ತಾರೆ. ಅದು ಅಗತ್ಯವಾದರೂ, ಸಂಪೂರ್ಣ ಸರಿಯೇನೂ ಅಲ್ಲ. ಸಾಮಾಜಿಕ ಒಗ್ಗಟ್ಟಿಗೆ ಜೋತು ಬಿದ್ದ ಪರಿಣಾಮವಾಗಿ 1947ರಲ್ಲಿ ಜಮ್ಮುವಿನಲ್ಲಿ ನಡೆದ ಹಿಂಸಾಚಾರ ಮತ್ತು ಮುಸ್ಲಿಮರ ವಲಸೆಯನ್ನು ದಾಖಲಿಸುವಲ್ಲಿ ಅವರು ವಿಫಲರಾಗಿದ್ದಾರೆ. ಜಮ್ಮು ಹತ್ಯಾಕಾಂಡಕ್ಕೆ ಕಾರಣವಾದ ಪೂಂಚ್ ಬಂಡಾಯವನ್ನು ದಾಖಲಿಸುವಲ್ಲಿಯೂ ಅವರು ವಿಫಲರಾಗಿದ್ದಾರೆ. ಅದೂ ಅಲ್ಲದೆ, ಪೂಂಚ್ ಮತ್ತು ಬಡ್ಗಾಮ್ ಜಿಲ್ಲೆಗಳಲ್ಲಿ ಅವರು ನಡೆಸಿದ ಮೂರು ಗ್ರಾಮ ಮಟ್ಟದ ಅಧ್ಯಯನಗಳಲ್ಲಿ ಬುಡಕಟ್ಟು ಸಮುದಾಯವನ್ನು ಸೇರಿಸಿಲ್ಲ. ಯಾಕೆಂದರೆ ಅವರ ಸಂಶೋಧನೆಯು ಜಮೀನು ವಿತರಣೆಯ ಪ್ರಮಾಣವನ್ನು ಆಧರಿಸಿತ್ತು, ಜನಸಂಖ್ಯಾ ವೈವಿಧ್ಯತೆಯನ್ನಲ್ಲ.

ಇದರ ಹೊರತಾಗಿಯೂ, ಈ ಪುಸ್ತಕವು ಜಮ್ಮು ಮತ್ತು ಕಾಶ್ಮೀರ ಕುರಿತ ಜ್ಞಾನಕ್ಕೆ ಒಂದು ಮೌಲ್ಯಯುತ ಸೇರ್ಪಡೆಯಾಗಿದೆ ಹಾಗೂ ಓದಲು ಅರ್ಹವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ವಿದ್ವಾಂಸರು ಮತ್ತು ವಿಶ್ವವಿದ್ಯಾನಿಲಯ ಮಟ್ಟದ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಗಮನಾರ್ಹ ಪುಸ್ತಕವಾಗಿದೆ. ಅವರು ಈ ವಲಯವು ಇಂದು ಎದುರಿಸುತ್ತಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಬಹುದಾಗಿದೆ.

(ಸೆಹರ್ ಇಕ್ಬಾಲ್‌ರ ‘ಎ ಸ್ಟ್ರಾಟಜಿಕ್ ಮಿತ್: ‘ಅಂಡರ್‌ಡೆವಲಪ್‌ಮೆಂಟ್’ ಇನ್ ಜಮ್ಮು ಆ್ಯಂಡ್ ಕಾಶ್ಮೀರ್’ ಪುಸ್ತಕದ ಆಯ್ದ ಭಾಗದ ಕನ್ನಡಾನುವಾದ)

ಕೃಪೆ: thewire.in

ಫೈಝಾನ್ ಭಟ್ ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಕರಾಗಿದ್ದಾರೆ.

Writer - ಫೈಝಾನ್ ಭಟ್

contributor

Editor - ಫೈಝಾನ್ ಭಟ್

contributor

Similar News

ಜಗದಗಲ
ಜಗ ದಗಲ