ಕಲೆಯನ್ನೂ ಆವರಿಸಿದ ಸಾಂಸ್ಕೃತಿಕ ಮಾಲಿನ್ಯ

Update: 2021-12-08 07:46 GMT

ಈ ಬಾರಿ ‘ತಾಯಿ ಬಹುರೂಪಿ ನಾಟಕೋತ್ಸವ’ಕ್ಕೆ ಚಲನಚಿತ್ರ ನಟಿ ಮಾಳವಿಕಾ ಅವಿನಾಶ್ ಮತ್ತು ಸಮಾರೋಪ ಭಾಷಣ ಮಾಡಲು ಚಕ್ರವರ್ತಿ ಸೂಲಿಬೆಲೆ ಅವರನ್ನು ಆಯ್ಕೆ ಮಾಡುವ ಮೂಲಕ ರಂಗಾಯಣದ ನಿರ್ದೇಶಕರು, ರಂಗಾಯಣಕ್ಕೆ ಕೇವಲ ರಾಜಕೀಯ ಸ್ಪರ್ಶವನ್ನಷ್ಟೇ ಅಲ್ಲದೆ, ನಿರ್ದಿಷ್ಟ ಕೋಮಿನ ಚಿಂತನೆಗಳ ಸ್ಪರ್ಶವನ್ನೂ ನೀಡಲೆತ್ನಿಸಿದ್ದಾರೆ. ಬಿಜೆಪಿ ಸಂಘಪರಿವಾರ ಪ್ರತಿಪಾದಿಸುವ ಹಿಂದುತ್ವ ಮತ್ತು ಹಿಂದೂ ಮತದ ತಾತ್ವಿಕ ನೆಲೆಗಳಿಗೆ ಸಾಂಸ್ಕೃತಿಕ ಲೋಕದಲ್ಲಿ ಒಂದು ವೇದಿಕೆಯನ್ನು ಒದಗಿಸುವ ಈ ಪ್ರಯತ್ನವೇ ಅಪಾಯಕಾರಿಯಾಗಿ ಕಾಣುತ್ತದೆ.

 ರಂಗಾಯಣದ ನಿರ್ದೇಶಕರು

ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಮೈಸೂರಿನ ರಂಗಾಯಣ ಒಂದು ಪ್ರತಿಷ್ಠಿತ ಸ್ಥಾನ ಪಡೆದಿರುವಂತಹ ಸ್ವಾಯತ್ತ ಸಂಸ್ಥೆ. ಬಿ.ವಿ. ಕಾರಂತರ ಕನಸಿನ ಕೂಸು ಎಂದೇ ಹೇಳಲಾಗುವ ರಂಗಾಯಣ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದ ಕಲಾಭಿವ್ಯಕ್ತಿಯ ಮಾಧ್ಯಮವಾಗಿ ಜನಸಾಮಾನ್ಯರ ನಡುವೆ ತನ್ನದೇ ಆದ ನೆಲೆ ಮಾಡಿದೆ. ಮೂಲತಃ ಒಂದು ಸ್ವಾಯತ್ತ ಸಂಸ್ಥೆಯಾಗಿರುವ ರಂಗಾಯಣ ಸರಕಾರದ ಅನುದಾನದಲ್ಲಿ ನಡೆಯುವ ಒಂದು ರಂಗಸಂಸ್ಥೆಯಾದರೂ, ಸಾಂಸ್ಕೃತಿಕವಾಗಿ ತನ್ನ ಸ್ವಾಯತ್ತತೆಯನ್ನು ಉಳಿಸಿಕೊಂಡೇ ಬಂದಿದೆ. ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ, ನಿರ್ದಿಷ್ಟ ರಾಜಕೀಯ ಸಿದ್ಧಾಂತಗಳ ಸೋಂಕಿಲ್ಲದೆ, ರಂಗಭೂಮಿ, ನಾಟ್ಯ ಮತ್ತಿತರ ಕಲಾಪ್ರಕಾರಗಳಿಗೆ ರಂಗಾಯಣ ಒಂದು ಬೌದ್ಧಿಕ ತಾಣವಾಗಿ ರೂಪುಗೊಂಡಿದೆ. ಬಾಹ್ಯ ಸಮಾಜದ ಸಾಂಸ್ಕೃತಿಕ -ಸಾಹಿತ್ಯ ವಲಯದ ಸೈದ್ಧಾಂತಿಕ ಒಲುಮೆ ನಿಲುಮೆಗಳನ್ನೂ ಮೀರಿ ಕರ್ನಾಟಕದ ಜನ ಸಂಸ್ಕೃತಿಯನ್ನು, ಸಾಂಸ್ಕೃತಿಕ ನೆಲೆಯನ್ನು ಸಂರಕ್ಷಿಸಿ, ಪೋಷಿಸುವ ನಿಟ್ಟಿನಲ್ಲಿ ರಂಗಾಯಣ ನಡೆದುಬಂದಿದೆ.

ಈವರೆಗೂ ನಡೆದುಬಂದ ಹಾದಿಯನ್ನು ಗಮನಿಸಿದರೆ, ಆಂತರಿಕವಾದ ಹಲವಾರು ಸಮಸ್ಯೆಗಳ ಹೊರತಾಗಿಯೂ, ರಂಗಾಯಣ ತನ್ನ ನಿಷ್ಪಕ್ಷಪಾತ ಸಾಂಸ್ಕೃತಿಕ ನಿಲುಮೆಯನ್ನು ಭಂಗಗೊಳಿಸದೆ ನಡೆದುಬಂದಿದೆ ಎನ್ನಬಹುದು. ಈ ಸ್ವಾಯತ್ತ ಸಂಸ್ಥೆಗೆ ನೇಮಕವಾಗಿರುವ ನಿರ್ದೇಶಕರೂ ಈವರೆಗಿನ ತಮ್ಮ ಆಡಳಿತ ನಿರ್ವಹಣೆಯಲ್ಲಿ ತಮ್ಮ ವೈಯಕ್ತಿಕ ತಾತ್ವಿಕ ನಿಲುಮೆಗಳನ್ನು ಬದಿಗಿಟ್ಟು ರಂಗಾಯಣದ ಮೂಲ ಆಶಯಗಳಿಗೆ ಚ್ಯುತಿ ಬರದಂತೆ ನಡೆದುಕೊಂಡಿದ್ದಾರೆ. ಹಾಗಾಗಿಯೇ ರಂಗಾಯಣ ಇಂದಿಗೂ ತನ್ನ ಅಂತಃಸತ್ವವನ್ನು ಉಳಿಸಿಕೊಂಡಿದೆ. ಎಡ-ಬಲ-ಮಧ್ಯಮ ಪಂಥದ ತಾತ್ವಿಕ ಒಲವು, ನಿಲುಮೆಗಳು ಈ ಸಂಸ್ಥೆ ನಡೆಸುವ ಕಾರ್ಯಕ್ರಮಗಳಿಗೆ ಅಥವಾ ಕೈಗೊಳ್ಳುವ ಯೋಜನೆಗಳಿಗೆ ಚ್ಯುತಿ ಉಂಟುಮಾಡದಂತೆ ಈವರೆಗಿನ ಆಡಳಿತ ವ್ಯವಸ್ಥೆ ಎಚ್ಚರವಹಿಸಿರುವುದೂ ಹೌದು.

ಈ ಹಿನ್ನೆಲೆಯಲ್ಲೇ ಈ ಬಾರಿಯ ‘‘ತಾಯಿ ಬಹುರೂಪಿ ನಾಟಕೋತ್ಸವ’’ ವಿವಾದ ಸೃಷ್ಟಿಸಿದೆ. ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಈ ವಾರ್ಷಿಕ ನಾಟಕೋತ್ಸವದಲ್ಲಿ ನಡೆಸುವ ವಿಚಾರ ಸಂಕಿರಣಗಳು, ಸಂವಾದಗಳು, ಚರ್ಚೆಗಳು ಮತ್ತು ನಾಟಕಗಳೂ ಜನಸಾಮಾನ್ಯರ ಬದುಕಿಗೆ ಹತ್ತಿರವಾದ, ತುಳಿತಕ್ಕೊಳಗಾದ ಜನಸಮುದಾಯಗಳ ಬದುಕನ್ನು ಬಿಂಬಿಸುವ ನಿಟ್ಟಿನಲ್ಲಿ ಇರುತ್ತವೆ. ಈ ಚರ್ಚಾವೇದಿಕೆಗಳಲ್ಲಿ ಪಾಲ್ಗೊಳ್ಳುವ ಚಿಂತಕರೂ ತಮ್ಮ ಎಡ-ಬಲ ಸಿದ್ಧಾಂತಗಳ ಪರಿಧಿಯಿಂದಾಚೆಗಿನ ಜನಸಂಸ್ಕೃತಿಯ ನೆಲೆಗಳನ್ನು ಕಂಡುಕೊಳ್ಳಲು ಯತ್ನಿಸಿರುವುದನ್ನು ಗಮನಿಸಿದ್ದೇವೆ. ಸಾಂಸ್ಕೃತಿಕ ಜಗತ್ತಿನಲ್ಲಿ ಅಂತರ್ಗತವಾಗಿರಬೇಕಾದ ಜನಸಂಸ್ಕೃತಿಯ ನೆಲೆಗಳನ್ನು ಕಾಪಾಡಿಕೊಳ್ಳುತ್ತಲೇ ಆಧುನಿಕತೆಗೆ ತೆರೆದುಕೊಳ್ಳುವ ಸಾಧ್ಯತೆಗಳನ್ನೂ ರಂಗಾಯಣದಲ್ಲಿ ಕಂಡಿದ್ದೇವೆ.

ಹಾಗಾಗಿ ಈ ನಾಟಕೋತ್ಸವದ ಸಂದರ್ಭದಲ್ಲಿ ಆಯ್ಕೆಯಾಗುವ ಅತಿಥಿಗಳು, ಭಾಷಣಕಾರರು, ಸಮಾರೋಪ ಉಪನ್ಯಾಸಕರು ಇವರೆಲ್ಲರಿಗೂ ಒಂದು ಸಾಂಸ್ಕೃತಿಕ ಹಿನ್ನೆಲೆ ಇರಬೇಕಾಗುತ್ತದೆ. ಸಾಹಿತ್ಯ, ಕಲೆ, ನಾಟಕ, ರಂಗಭೂಮಿ ಹೀಗೆ ವಿಭಿನ್ನ ಸಾಂಸ್ಕೃತಿಕ ನೆಲೆಗಳ ಪರಿಚಯ ಅಗತ್ಯವಾಗಿ ಇರಬೇಕಾಗುತ್ತದೆ. ಅಷ್ಟೇ ಅಲ್ಲದೆ ರಂಗಾಯಣ ಪ್ರತಿನಿಧಿಸುವ ಜನಸಂಸ್ಕೃತಿಯ ಬೇರುಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅರ್ಥೈಸುವ ಬೌದ್ಧಿಕ ಸಾಮರ್ಥ್ಯವೂ ಇಲ್ಲಿ ಮುಖ್ಯವಾಗುತ್ತದೆ. ಮತ-ಧರ್ಮ-ಜಾತಿಯ ನೆಲೆಗಳಿಂದ ಹೊರತಾದ ಸಂಸ್ಕೃತಿಯ ಗ್ರಹಿಕೆ ಇಲ್ಲದ ಯಾವುದೇ ವ್ಯಕ್ತಿಯೂ ಈ ಸಂವಹನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಅಪಭ್ರಂಶ ಎಂದೇ ಎನಿಸುತ್ತದೆ. ಯಾವುದೇ ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಅಂಟಿಕೊಳ್ಳದೆ, ಜನಸಂಸ್ಕೃತಿಯ ತಾತ್ವಿಕ ನೆಲೆಗಳನ್ನು ಬಿಂಬಿಸುವ ನಿಟ್ಟಿನಲ್ಲಿ ಇಲ್ಲಿ ಉಪನ್ಯಾಸಗಳು, ಚರ್ಚೆಗಳು ಇರಬೇಕಾಗುತ್ತದೆ. ಹಾಗಾಗಿಯೇ ರಂಗಾಯಣ ಮತ್ತು ಇಲ್ಲಿನ ಕಾರ್ಯಕ್ರಮಗಳು ರಾಜಕೀಯ ಸ್ಪರ್ಶದಿಂದ ಹೊರತಾಗಿಯೇ ಇರಬೇಕಾಗುತ್ತದೆ. ಬಹುಶಃ ಕಳೆದ ಮೂರು ದಶಕಗಳಲ್ಲಿ ಇದೇ ಪರಂಪರೆ ಬೆಳೆದುಬಂದಿರುವುದನ್ನು ಅಲ್ಲಗಳೆಯಲೂ ಆಗುವುದಿಲ್ಲ.

ಆದರೆ ಈ ಬಾರಿ ‘ತಾಯಿ ಬಹುರೂಪಿ ನಾಟಕೋತ್ಸವ’ಕ್ಕೆ ಚಲನಚಿತ್ರ ನಟಿ ಮಾಳವಿಕಾ ಅವಿನಾಶ್ ಮತ್ತು ಸಮಾರೋಪ ಭಾಷಣ ಮಾಡಲು ಚಕ್ರವರ್ತಿ ಸೂಲಿಬೆಲೆ ಅವರನ್ನು ಆಯ್ಕೆ ಮಾಡುವ ಮೂಲಕ ರಂಗಾಯಣದ ನಿರ್ದೇಶಕರು, ರಂಗಾಯಣಕ್ಕೆ ಕೇವಲ ರಾಜಕೀಯ ಸ್ಪರ್ಶವನ್ನಷ್ಟೇ ಅಲ್ಲದೆ, ನಿರ್ದಿಷ್ಟ ಕೋಮಿನ ಚಿಂತನೆಗಳ ಸ್ಪರ್ಶವನ್ನೂ ನೀಡಲೆತ್ನಿಸಿದ್ದಾರೆ. ಬಿಜೆಪಿ ಸಂಘಪರಿವಾರ ಪ್ರತಿಪಾದಿಸುವ ಹಿಂದುತ್ವ ಮತ್ತು ಹಿಂದೂ ಮತದ ತಾತ್ವಿಕ ನೆಲೆಗಳಿಗೆ ಸಾಂಸ್ಕೃತಿಕ ಲೋಕದಲ್ಲಿ ಒಂದು ವೇದಿಕೆಯನ್ನು ಒದಗಿಸುವ ಈ ಪ್ರಯತ್ನವೇ ಅಪಾಯಕಾರಿಯಾಗಿ ಕಾಣುತ್ತದೆ. ಇಲ್ಲಿ ಬಲಪಂಥದ ಪ್ರಶ್ನೆಗಿಂತಲೂ ಮುಖ್ಯವಾಗುವುದು ಆಯ್ಕೆಯಾಗಿರುವ ಅತಿಥಿಗಳ ಸಾಂಸ್ಕೃತಿಕ ಕಲಾಭಿವ್ಯಕ್ತಿಯ ಹಿನ್ನೆಲೆ ಮತ್ತು ಸಂಸ್ಕೃತಿಯ ಗ್ರಹಿಕೆ. ಸಂಸ್ಕೃತಿ ಮತ್ತು ಸಾಂಸ್ಕೃತಿಕ ಕಲಾಭಿವ್ಯಕ್ತಿಯ ಮಾರ್ಗಗಳನ್ನು ಹಿಂದೂ ಮತದ ತಾತ್ವಿಕ ನೆಲೆಗಳೊಂದಿಗೆ ಬೆಸೆಯುವ ವೈದಿಕಶಾಹಿ ಪರಂಪರೆಯ ಪ್ರಯತ್ನಗಳಿಗೆ ರಂಗಾಯಣ ಒಂದು ಪ್ರಯೋಗಶಾಲೆಯಾಗುವುದನ್ನು ಕರ್ನಾಟಕದ ಜನಸಾಂಸ್ಕೃತಿಕ ಮನಸ್ಸುಗಳು ಒಪ್ಪುವುದಿಲ್ಲ, ಒಪ್ಪಲಾಗುವುದೂ ಇಲ್ಲ.

ಸಾಂಸ್ಕೃತಿಕ ನೆಲೆಗಳ ಹುಡುಕಾಟದಲ್ಲಿ

ಒಂದು ನಾಡಿನ ಜನತೆಯ ಸಂಸ್ಕೃತಿಯನ್ನು ಜನಸಮುದಾಯಗಳ ನಿತ್ಯ ಬದುಕಿನಲ್ಲಿ ಕಂಡುಕೊಳ್ಳಬೇಕು. ಯಾವುದೇ ಭೂ ಪ್ರದೇಶದ ಸಂಸ್ಕೃತಿಯ ಪ್ರತಿಫಲನವಾಗುವುದು ಅಲ್ಲಿನ ಜನಜೀವನದಲ್ಲಿ ಮತ್ತು ಈ ಜೀವನ ರೂಪುಗೊಳ್ಳುವ ಸಾಮಾಜಿಕ ಸಂಬಂಧಗಳ ಮೂಲಕ. ಸಂಸ್ಕೃತಿ ಎನ್ನುವುದನ್ನು ನೆಲಮಟ್ಟದ ಸಾಮುದಾಯಿಕ ಬದುಕಿನ ಚೌಕಟ್ಟಿನಲ್ಲಿ ವಿಸ್ತರಿಸುತ್ತಾ ಹೋದಂತೆ ಒಂದು ಸಮಾಜ ರೂಪುಗೊಳ್ಳಲು ನೆರವಾಗುವ ಎಲ್ಲ ಬೌದ್ಧಿಕ ಪರಿಕರಗಳೂ, ಲೌಕಿಕ ಸ್ಥಿತ್ಯಂತರಗಳೂ ಮತ್ತು ನಿತ್ಯ ಜೀವನದ ಚಟುವಟಿಕೆಗಳೂ ತಮ್ಮದೇ ಆದ ಪ್ರಾಶಸ್ತ್ಯವನ್ನು ಪಡೆಯುತ್ತವೆ. ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ, ನಾಟಕ ಹೀಗೆ ಮಾನವನ ಸಾಮಾಜಿಕ ಅಭಿವ್ಯಕ್ತಿಯ ಹಲವು ಆಯಾಮಗಳ ಮೂಲಕವೇ ನೆಲ ಸಂಸ್ಕೃತಿಯೂ ಬೆಳೆಯುತ್ತದೆ. ಇದನ್ನು ಪೋಷಿಸುವ ಮೂಲಕವೇ ಸಮಾಜದ ಅಂತಃಸತ್ವವನ್ನೂ ಕಾಪಾಡಿಕೊಳ್ಳಲು ಸಾಧ್ಯ.

ಭಾರತ ಒಂದು ಬಹುಸಂಸ್ಕೃತಿಯ ರಾಷ್ಟ್ರ ಎಂದು ಹೇಳುವಾಗ ನಮ್ಮ ಗಮನದಲ್ಲಿರಬೇಕಾದುದು ಈ ಸಾಂಸ್ಕೃತಿಕ ನೆಲೆಗಳು. ನೆಲಸಂಸ್ಕೃತಿಯಿಂದ ಬೇರ್ಪಡಿಸಿ ಭಾರತವನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದರೆ ಅಲ್ಲಿ ನಮ್ಮ ನಡುವಿನ ಅನೇಕ ವಿಭಜಕ ಅಸ್ಮಿತೆಗಳು ಅಡ್ಡಗೋಡೆಗಳನ್ನು ನಿರ್ಮಿಸಿಬಿಡುತ್ತವೆ. ನೂರಾರು ಜಾತಿ ಉಪಜಾತಿಗಳು, ಹಲವು ಧಾರ್ಮಿಕ ನಂಬಿಕೆಗಳು, ಹತ್ತಾರು ಪಂಥಗಳು ಶತಮಾನಗಳಿಂದ ಬೇರೂರಿರುವ ಭಾರತದಲ್ಲಿ ಜನಸಮುದಾಯಗಳು ತಮ್ಮದೇ ಆದ ಸಾಂಸ್ಕೃತಿಕ ನೆಲೆಗಳನ್ನೂ ರೂಪಿಸಿಕೊಂಡಿವೆ. ಈ ಸಾಂಸ್ಕೃತಿಕ ನೆಲೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೊಸತನವನ್ನು ಪಡೆದುಕೊಳ್ಳುತ್ತಿರುವಂತೆಯೇ ತಮ್ಮ ಮೂಲ ಅಂತಃಸತ್ವವನ್ನು ಉಳಿಸಿಕೊಳ್ಳುತ್ತಲೂ ಬಂದಿವೆ.

ನೆಲ ಸಂಸ್ಕೃತಿಯ ಈ ವೈವಿಧ್ಯತೆಯೇ ಭಾರತ ಎಂಬ ದೇಶವನ್ನೂ ಕಟ್ಟಿದೆ. ಭೌಗೋಳಿಕವಾಗಿ ಒಂದು ದೇಶವಾಗಿರುವ ಭಾರತ ಆಂತರಿಕವಾಗಿ ಸಾಂಸ್ಕೃತಿಕ ನೆಲೆಯಲ್ಲಿ ಹಲವು ದೇಶಗಳಾಗಿ ಇಂದಿಗೂ ಕಾಣುತ್ತಿರುವುದು ವಾಸ್ತವ. ಅತಿಯಾದ ಭಾವುಕ ದೇಶಭಕ್ತಿ ಇದ್ದರೆ ಮಾತ್ರ ಇದನ್ನು ನಿರಾಕರಿಸಲು ಸಾಧ್ಯ. ಈ ವೈವಿಧ್ಯದ ನೆಲೆಯಲ್ಲೇ ಪರಸ್ಪರ ಸಾಂಸ್ಕೃತಿಕ ವಿನಿಮಯದ ಮೂಲಕ ಭಾರತ ಭೌಗೋಳಿಕವಾಗಿ ಸದೃಢ ರಾಷ್ಟ್ರವಾಗಿ ರೂಪುಗೊಂಡಿದೆ. ಈ ಅಖಂಡತೆಯನ್ನು ಕಾಪಾಡಿಕೊಂಡು ಬರಬೇಕಾದರೆ, ನೆಲ ಸಂಸ್ಕೃತಿಯ ಮೂಲ ಸ್ವರೂಪಗಳನ್ನೂ ವಿರೂಪಗೊಳಿಸದೆ ಕಾಪಾಡಿಕೊಂಡು ಬರಬೇಕಾಗುತ್ತದೆ. ದೇಶವನ್ನು ಪ್ರೀತಿಸುವವರಲ್ಲಿ ಈ ಮಾತೃವಾತ್ಸಲ್ಯದ ಕೊರತೆ ಹೆಚ್ಚಾದಂತೆಲ್ಲಾ ವಿಭಜಕ ಶಕ್ತಿಗಳು ಮೇಲುಗೈ ಸಾಧಿಸುತ್ತವೆ.

ಭಾರತ ಇಂದು ಇಂತಹ ಶಕ್ತಿಗಳ ಕೈವಶವಾಗುವತ್ತ ಸಾಗಿದೆ. ನೆಲ ಮೂಲದ ಸಾಂಸ್ಕೃತಿಕ ನೆಲೆಗಳನ್ನು ಧ್ವಂಸ ಮಾಡುತ್ತಾ, ಶತಮಾನಗಳ ಸಾಂಸ್ಕೃತಿಕ ಪರಂಪರೆಗಳನ್ನು ನಿರಾಕರಿಸುತ್ತಾ, ಕಲ್ಪಿತ ಸಂಸ್ಕೃತಿಯೊಂದನ್ನು ಹೇರಲು ಮತ-ಧರ್ಮಗಳ ಗ್ರಾಂಥಿಕ ಪರಿಕಲ್ಪನೆಗಳನ್ನು ಬಳಸಲಾಗುತ್ತಿದೆ. ಈ ಪ್ರತಿಯೊಂದು ಮತಾಚರಣೆಗಳ ಆಂತರ್ಯದಲ್ಲೂ ನೆಲಮೂಲದ ಸಾಂಸ್ಕೃತಿಕ ಧಾತುಗಳು ಜೀವಂತವಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸದೆ ಹೋದರೆ, ಬಹುಶಃ ನೆಲಸಂಸ್ಕೃತಿಯ ನೆಲೆಗಳೇ ನಾಶವಾಗುವ ಸಾಧ್ಯತೆಗಳಿವೆ. ಈ ಮೂರೂ ಮತಗಳ ಸಾಂಸ್ಥಿಕ ನೆಲೆಗಳಲ್ಲಿ ಸಮಸ್ತ ಜನಸಮುದಾಯಗಳನ್ನು ಆವರಿಸಿಕೊಳ್ಳುವ ಹಪಾಹಪಿ ಹೆಚ್ಚಾಗಿರುವುದೇ ಹೊರತು, ಸಾಮುದಾಯಿಕ ಅಸ್ಮಿತೆಗಳನ್ನು ಪ್ರತಿನಿಧಿಸುವ ನಿತ್ಯ ಬದುಕಿನ ಸಾಮಾಜಿಕ-ಸಾಂಸ್ಕೃತಿಕ ಮೂಲಗಳನ್ನು ಮಾನ್ಯ ಮಾಡುವ ಇಂಗಿತ ಕಂಡುಬರುವುದಿಲ್ಲ.

ಸಂಸ್ಕೃತಿಯ ವಿಭಿನ್ನ ವ್ಯಾಖ್ಯಾನಗಳು

ಸಂಸ್ಕೃತಿಯನ್ನು ವಿಶ್ವದ ಹಲವಾರು ಚಿಂತಕರು, ದಾರ್ಶನಿಕರು ವಿಭಿನ್ನ ರೀತಿಯಲ್ಲಿ ವಿಷದೀಕರಿಸಿದ್ದಾರೆ. ಮತ-ಧರ್ಮ ಮತ್ತು ಸಂಸ್ಕೃತಿಯನ್ನು ಒಂದೇ ಭೂಮಿಕೆಯಲ್ಲಿಟ್ಟು ನೋಡುವಾಗ ಈ ವ್ಯಾಖ್ಯಾನಗಳು ಮತ್ತಷ್ಟು ವೈವಿಧ್ಯತೆಯನ್ನು ಪಡೆದುಕೊಳ್ಳುತ್ತವೆ. ಸಾಮಾನ್ಯ ಪರಿಭಾಷೆಯಲ್ಲಿ ಸಂಸ್ಕೃತಿ ಎಂದರೆ ಒಂದು ಸಮಾಜದ ಅಥವಾ ಸಮುದಾಯದ ನಡುವೆ ಬೇರೂರಿರುವ, ಪ್ರಚಲಿತವಾಗಿರುವ ಜ್ಞಾನ ಪರಂಪರೆ, ಅನುಭವ ಮತ್ತು ಅನುಭಾವದ ನೆಲೆಗಳು, ನಂಬಿಕೆಗಳು, ಮೌಲ್ಯಗಳು, ವಿಚಾರ ಧೋರಣೆ ಮತ್ತು ಶ್ರೇಣೀಕರಣ, ಧರ್ಮದ ಪರಿಕಲ್ಪನೆ, ಲೌಕಿಕ ಪ್ರಪಂಚವನ್ನು ಕುರಿತ ಗ್ರಹಿಕೆ ಮತ್ತು ಆ ಸಮಾಜದಲ್ಲಿನ ಜನಸಮುದಾಯಗಳ ನಡುವೆ ಇರುವ ಸಂವಹನದ ಮಾಧ್ಯಮಗಳು, ಹೀಗೆ ಹಲವು ಆಯಾಮಗಳಲ್ಲಿ ಕಂಡುಬರುತ್ತದೆ. ಒಂದು ಸಮಾಜ ಸಾಂಪ್ರದಾಯಿಕವಾಗಿ ಅಥವಾ ಪಾರಂಪರಿಕವಾಗಿ ರೂಢಿಸಿಕೊಂಡು ಬರುವ ವ್ಯಕ್ತಿಗತ ಮತ್ತು ಸಾಮುದಾಯಿಕ ಧೋರಣೆ ಹಾಗೂ ವಿಚಾರಲಹರಿ ಸಂಸ್ಕೃತಿಯನ್ನು ನಿರ್ಧರಿಸುವ ಪ್ರಮುಖ ನೆಲೆಯಾಗುತ್ತವೆ.

ಜನಸಾಮಾನ್ಯರ ನಡುವಿನ ಸಾಂಕೇತಿಕ ಸಂವಹನ ಪ್ರಕ್ರಿಯೆಯಲ್ಲಿ ವ್ಯಕ್ತವಾಗುವ ಅನೇಕ ಸೂಕ್ಷ್ಮಸಂವೇದನೆಯ ಚಿಂತನೆಗಳು ಸಂಸ್ಕೃತಿಯನ್ನು ರೂಪಿಸುವಲ್ಲಿ ಸಕ್ರಿಯವಾಗಿರುತ್ತವೆ. ಮನುಷ್ಯ ಆಧುನಿಕತೆಗೆ ತೆರೆದುಕೊಂಡಂತೆಲ್ಲಾ ಅವನೊಳಗಿನ ಈ ಸಂವೇದನೆ ಮತ್ತು ಧೋರಣೆ ಬದಲಾಗುತ್ತಾ ಹೋುತ್ತದೆ, ಇದರೊಟ್ಟಿಗೇ ಸಾಂಸ್ಕೃತಿಕ ನೆಲೆಗಳೂ ಹಲವು ಕವಲುಗಳಲ್ಲಿ ವಿಸ್ತರಿಸಲಾರಂಭಿಸುತ್ತವೆ. ಈ ವಿಸ್ತರಣದ ಸಂದರ್ಭದಲ್ಲೇ ಮೂಲ ಸಂಸ್ಕೃತಿಯಿಂದ ವಿಮುಖವಾಗುವ ಲಕ್ಷಣಗಳೂ ಸಮಾಜದಲ್ಲಿ ಢಾಳಾಗಿ ಕಾಣಿಸಿಕೊಳ್ಳತೊಡಗುತ್ತವೆ. ಜನಸಾಮಾನ್ಯರ ಅಭಿವ್ಯಕ್ತಿಯಲ್ಲಿ ಕಂಡುಬರುವ ಆಧುನಿಕ ಚಿಂತನೆಗಳು ಮತ್ತು ಸಮಾಜದಲ್ಲಿ ಅಂತರ್ಗತವಾಗಿರುವ ಪಾರಂಪರಿಕ ಧೋರಣೆಗಳು ಮುಖಾಮುಖಿಯಾಗುವುದು ಇಲ್ಲಿಯೇ. ತಾವು ಪರಿಭಾವಿಸುವ ಯಾವುದೋ ಒಂದು ನಿರ್ದಿಷ್ಟ ಮತದ ತಾತ್ವಿಕ ನೆಲೆಗಳನ್ನೇ, ಬೇರೂರಿರುವ ಸಂಸ್ಕೃತಿಯೊಡನೆ

 ಮೀಕರಿಸಿ ಒಂದು ಹೊಸ ಸಾಂಸ್ಕೃತಿಕ ಪರಿಭಾಷೆಯನ್ನು ಸೃಷ್ಟಿಸುವ ಪ್ರಯತ್ನಗಳು ಇಲ್ಲಿ ಮುಖ್ಯವಾಗಿ ಕಂಡುಬರುತ್ತವೆ. ಯಾವುದೇ ಸಮಾಜದಲ್ಲಾದರೂ ಸಾಂಸ್ಕೃತಿಕ ನೆಲೆಗಳನ್ನು ಜನಸಮುದಾಯಗಳ ಅಭಿವ್ಯಕ್ತಿಯಲ್ಲಿ ಕಾಣುವುದು ಸಹಜ. ಈ ಅಭಿವ್ಯಕ್ತಿಯ ಮಾಧ್ಯಮಗಳು ಸಂವಹನ ಮಾರ್ಗಗಳನ್ನೂ ದಾಟಿ ಚಿತ್ರಕಲೆ, ಸಾಹಿತ್ಯ, ರಂಗಭೂಮಿ, ನಾಟ್ಯ ಮತ್ತಿತರ ನೆಲಮೂಲದ ಕಲೆಗಳಲ್ಲಿ ವ್ಯಕ್ತವಾಗುತ್ತವೆ. ಜನಸಮುದಾಯಗಳ ನಿತ್ಯ ಜೀವನದ ಒಂದು ಭಾಗವಾಗಿಯೇ ರೂಪುಗೊಳ್ಳುವ ಈ ಕಲಾ ಪ್ರಕಾರಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಹೋದರೂ, ಮೂಲ ಜನಸಂಸ್ಕೃತಿಯ ಬೇರುಗಳನ್ನು ಕಾಪಾಡಿಕೊಂಡುಬರುವುದನ್ನೂ ಕಾಣಬಹುದು. ಭಾರತದ ಸಂದರ್ಭದಲ್ಲಿ ರಂಗಭೂಮಿ ಮತ್ತು ನಾಟಕ ಕಲೆ, ನೃತ್ಯ ಕಲೆ ಮತ್ತು ಮೌಖಿಕ ಸಂಪ್ರದಾಯದ ಹಲವು ಆಯಾಮಗಳು ಇಲ್ಲಿನ ನೆಲ ಸಂಸ್ಕೃತಿಯಿಂದಲೇ ಉಗಮಿಸಿವೆ. ಭಾರತದಲ್ಲಿ ಜಾತಿಗಳಿರುವಷ್ಟೇ ಸಂಖ್ಯೆಯಲ್ಲಿ ಸಾಂಸ್ಕೃತಿಕ ನೆಲೆಗಳೂ ಹರವಿಕೊಂಡಿರುವುದನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗುರುತಿಸಬಹುದು. ಈ ವೈವಿಧ್ಯತೆಯ ನಡುವೆಯೇ ಕಾಣಬಹುದಾದ ಒಂದು ಸಮಾನ ಎಳೆ ಎಂದರೆ ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧಗಳು, ವ್ಯಷ್ಟಿ ಮತ್ತು ಸಮಷ್ಟಿಯ ನಡುವಿನ ಕೊಂಡಿ ಹಾಗೂ ವ್ಯಕ್ತಿಗತ ಬದುಕಿಗೆ ಪೂರಕವಾಗುವಂತಹ ಆಚರಣೆಯ ವಿಧಾನಗಳು. 19ನೇ ಶತಮಾನದವರೆಗೂ ಭಾರತದ ಸಾಂಸ್ಕೃತಿಕ ನೆಲೆಗಳನ್ನು ವಿಸ್ತರಿಸುವ ಅಭಿವ್ಯಕ್ತಿ ಮಾರ್ಗಗಳು ಈ ದೇಶದ ತಳಸಮುದಾಯಗಳಿಂದಲೇ ವ್ಯಕ್ತವಾಗುತ್ತಿದ್ದುದನ್ನು ಗಮನಿಸಬಹುದು. ನಾಟಕ, ರಂಗಭೂಮಿ, ನಾಟ್ಯ ಮತ್ತು ಇತರ ಕಲಾ ಪ್ರಕಾರಗಳು ಮೂಲತಃ ಜನಸಮುದಾಯಗಳ ನಿತ್ಯ ಬದುಕಿನ ಒಂದು ಭಾಗವಾಗಿ, ನೆಲದೊಡನೆ ತಮ್ಮ ಸಂಬಂಧವನ್ನು ಇರಿಸಿಕೊಳ್ಳುತ್ತಲೇ ವಿಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದವು. ಜನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳುತ್ತಲೇ ಆಧುನಿಕ ಜಗತ್ತಿಗೆ ತೆರೆದುಕೊಳ್ಳುವ ಪ್ರಯತ್ನಗಳಲ್ಲಿ ರಂಗಭೂಮಿ ಮತ್ತು ಕಲಾ ಪ್ರಕಾರಗಳು ವಿಭಿನ್ನ ಆಯಾಮಗಳನ್ನು ಪಡೆದುಕೊಂಡವು. ತಳಸಮುದಾಯಗಳ ಕಲಾಭಿವ್ಯಕ್ತಿಯ ಮಾರ್ಗಗಳಾಗಿದ್ದ ನಾಟ್ಯ, ಸಂಗೀತ ಮತ್ತು ವಾದ್ಯ ಸಂಗೀತ ಮಾಧ್ಯಮಗಳು ಆಧುನಿಕ ಜಗತ್ತಿಗೆ ತೆರೆದುಕೊಂಡ ಕೂಡಲೇ ಮೇಲ್ಜಾತಿಯಿಂದ ಆವರಿಸಲ್ಪಟ್ಟವು. ನಾಟಕ, ವಾದ್ಯ ಸಂಗೀತ ಹಾಗೂ ಸ್ವರ ಸಂಗೀತ ಮತ್ತು ನಾಟ್ಯ ಪರಂಪರೆಗಳು ಕ್ರಮೇಣ ಮೇಲ್ಜಾತಿಗಳ, ವೈದಿಕ ಸಮುದಾಯಗಳ ಹಿಡಿತಕ್ಕೊಳಪಟ್ಟವು.

 ವೈದಿಕ ಸಮುದಾಯದ ಈ ಪ್ರಾಬಲ್ಯವೇ ಸಮಕಾಲೀನ ಸಂದರ್ಭದಲ್ಲಿ ಸಂಸ್ಕೃತಿಯನ್ನು ಹಿಂದೂ ಮತದೊಡನೆ ಸಮೀಕರಿಸುವ ಮತ್ತು ಹಿಂದೂ ಧಾರ್ಮಿಕ ಆಚರಣೆಗಳೊಡನೆ ಪೋಣಿಸುವ ಪ್ರಕ್ರಿಯೆಗೂ ನಾಂದಿ ಹಾಡಿದೆ. ತಳಸಮುದಾಯಗಳ ಅನೇಕ ದೇವಾದಿದೇವತೆಗಳನ್ನು, ಪೂಜಾ ಕೇಂದ್ರಗಳನ್ನು, ಆರಾಧನಾ ಕೇಂದ್ರಗಳನ್ನು ಆಕ್ರಮಿಸಿಕೊಂಡಂತೆಯೇ ವೈದಿಕಶಾಹಿ ಮತ್ತು ವೈದಿಕ ಸಂಪ್ರದಾಯದ ಶಕ್ತಿಗಳು ಕೆಲವು ಆಚರಣೆಗಳಿಗೂ ಆಧುನಿಕತೆಯ ಸ್ಪರ್ಶ ನೀಡುವ ಮೂಲಕ ವೈದಿಕೀಕರಣಗೊಳಿಸಿವೆ. ಈ ಪ್ರಕ್ರಿಯೆಯೊಂದಿಗೇ ಜನಪದ ಮೂಲದ ಕಲಾಭಿವ್ಯಕ್ತಿಯ ಮಾರ್ಗಗಳ ಮೇಲೂ ತಮ್ಮ ಪಾರಮ್ಯ ಸಾಧಿಸುವಲ್ಲಿ ವೈದಿಕಶಾಹಿ ಯಶಸ್ವಿಯಾಗಿದೆ. ಸಂಸ್ಕೃತಿಯ ಬ್ರಾಹ್ಮಣೀಕರಣ ಅಥವಾ ವೈದಿಕೀಕರಣದ ಈ ಪ್ರಕ್ರಿಯೆಯಿಂದಲೇ, ತಳಸಮುದಾಯದ ಆಶಯಗಳನ್ನು ಪ್ರತಿನಿಧಿಸಬೇಕಾದ ಸಾಂಸ್ಕೃತಿಕ ನೆಲೆಗಳು ನಿರ್ದಿಷ್ಟ ಧಾರ್ಮಿಕ ಚೌಕಟ್ಟಿನೊಳಗೆ ಸಿಲುಕಿ ತಮ್ಮ ಅಂತಃಸತ್ವವನ್ನು ಕಳೆದುಕೊಳ್ಳುತ್ತಿವೆ. ಸಾಂಸ್ಕೃತಿಕ ನೆಲೆಗಳ ಮೇಲಿನ ದಾಳಿ

ಭಾರತದಲ್ಲಿ ಹಿಂದುತ್ವ ರಾಜಕಾರಣ ಬೇರೂರುತ್ತಿರುವಂತೆಯೇ ಹಿಂದೂ ಮತದ ತಾತ್ವಿಕ ನಿಲುಮೆಗಳನ್ನು ಎಲ್ಲ ವಲಯಗಳಲ್ಲೂ ಪಸರಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಲೇ ಇವೆ. ಶೈಕ್ಷಣಿಕ ವಲಯದಲ್ಲಿ ಇದು ಈಗಾಗಲೇ ಆಳವಾಗಿ ಬೇರೂರಿದ್ದು ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ವ್ಯಾಸಂಗದವರೆಗೆ ಇದು ಸ್ಥಾಪಿತವಾಗಿಬಿಟ್ಟಿದೆ. ಸಂಸ್ಕೃತಿ ಎಂಬ ವ್ಯಾಪಕ ಚೌಕಟ್ಟಿನೊಳಗೆ ದೇವರು, ಧರ್ಮ, ಆಚರಣೆ ಮತ್ತು ವಿಧಿವಿಧಾನಗಳನ್ನು ಅಳವಡಿಸುವ ಮೂಲಕ ಹಿಂದೂ ಸಂಸ್ಕೃತಿಯ ವ್ಯಾಪ್ತಿಯಲ್ಲಿ ಈ ದೇಶದ ಜನ ಸಂಸ್ಕೃತಿಯ ನೆಲೆಗಳನ್ನೂ ಸಮ್ಮಿಳಿತಗೊಳಿಸಲಾಗುತ್ತಿದೆ. ಈ ಸಾಂಸ್ಕೃತಿಕ ದಾಳಿಯ ಒಂದು ಆಯಾಮವನ್ನು ಬಹುರೂಪಿ ವಿವಾದದಲ್ಲಿ ಗುರುತಿಸಬಹುದು. ಒಂದು ನಿರ್ದಿಷ್ಟ ಮತ-ಧರ್ಮ-ಜಾತಿಯ ಸಾಂಸ್ಕೃತಿಕ ಟೊಂಗೆಗಳನ್ನು ಜನಸಂಸ್ಕೃತಿಯ ಬೇರುಗಳೊಂದಿಗೆ ಕಸಿ ಮಾಡುವ ಪ್ರಕ್ರಿಯೆಯಲ್ಲಿ ಮೂಲ ನೆಲ ಸಂಸ್ಕೃತಿಯನ್ನೇ ಭ್ರಷ್ಟಗೊಳಿಸುವ ಪ್ರಯತ್ನಗಳನ್ನು ಇಲ್ಲಿ ಗಮನಿಸಬೇಕಿದೆ.

‘ತಾಯಿ ಬಹುರೂಪಿ ನಾಟಕೋತ್ಸವ’ದ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ವಿವಾದವನ್ನು ಈ ದೃಷ್ಟಿಯಿಂದ ನೋಡಿದಾಗ ರಂಗಾಯಣ ನಿರ್ದೇಶಕರಿಗಾಗಲಿ, ಹಿಂದೂ ಸಾಂಸ್ಕೃತಿಕ ಪರಿಚಾರಕರಿಗಾಗಲಿ ಯಾವುದೇ ಷಡ್ಯಂತ್ರ, ಪಿತೂರಿ ಕಾಣಲು ಸಾಧ್ಯವಿಲ್ಲ. ಪ್ರಕೃತಿಯೊಡನೆ ನೇರವಾಗಿ ಸಂವಾದಿಸುವ ಒಂದು ಪರಂಪರೆಯಲ್ಲಿ ಕಲಾಭಿವ್ಯಕ್ತಿಯ ಮಾಧ್ಯಮಗಳು ಬೆಳೆದುಬಂದರೆ ಸಾಂಸ್ಕೃತಿಕ ಜಗತ್ತು ಶ್ರೀಮಂತವಾಗಲು ಸಾಧ್ಯ. ಇಲ್ಲಿ ಪ್ರಕೃತಿ ಎಂದರೆ ಕೇವಲ ನಮ್ಮ ಸುತ್ತಲಿನ ನಿಸರ್ಗ ಮಾತ್ರವೇ ಅಲ್ಲ, ಈ ನಿಸರ್ಗವನ್ನು ಅವಲಂಬಿಸಿಯೇ ತಮ್ಮ ಬದುಕು ಕಟ್ಟಿಕೊಳ್ಳುವ ತಳಸಮುದಾಯಗಳೂ ಇರುತ್ತವೆ. ಈ ತಳಸಮುದಾಯಗಳೊಂದಿಗೆ ಗುರುತಿಸಿಕೊಳ್ಳಲಾಗದ ಯಾವುದೇ ಕಲಾಭಿವ್ಯಕ್ತಿ ಆಧುನಿಕತೆಯ ಭರಾಟೆಯಲ್ಲಿ ಕಳೆದುಹೋಗುತ್ತದೆ.

ಯಾವುದೇ ನಿರ್ದಿಷ್ಟ ಮತದ ಧಾರ್ಮಿಕ ನಂಬಿಕೆಗಳು ಸಾಂಸ್ಕೃತಿಕ ನೆಲೆಗಳನ್ನು ಆಕ್ರಮಿಸಲು ಯತ್ನಿಸುವಾಗ ಈ ಕಳೆದುಹೋಗುವ ಪ್ರಕ್ರಿಯೆ ಮತ್ತಷ್ಟು ಗಟ್ಟಿಯಾಗಿ ಭ್ರಷ್ಟ ಸ್ವರೂಪಗಳನ್ನು ಪಡೆದುಕೊಂಡುಬಿಡುತ್ತವೆ. ಬಹುರೂಪಿ ಅಥವಾ ರಂಗಾಯಣ ಇದಕ್ಕೆ ಸಾಕ್ಷಿಯಾಗುವುದು ಬೇಡ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News

ಜಗದಗಲ
ಜಗ ದಗಲ