ಪೌರಕಾರ್ಮಿಕರ ಅಸಹಾಯಕ ಬದುಕು

Update: 2021-12-09 06:44 GMT

ಆಗಾಗ ಚಾಮರಾಜನಗರದ ಪೌರಕಾರ್ಮಿಕರ ಆ ಬಡಾವಣೆಯ ಹಾದಿ ಚಲಿಸುತ್ತಿದ್ದ ನಾನು ಮೊನ್ನೆ ಗೆಳೆಯ ಗಾಳಿಪುರ ಮಹೇಶ್‌ರವರ ಜೊತೆ ಅಕಸ್ಮಾತ್ ಆ ಬಡಾವಣೆಗೆ ಭೇಟಿ ಕೊಟ್ಟೆ. ಹಿಂದೆ ಹೋಗುವಾಗಲೆಲ್ಲ ಒಮ್ಮೆ ಹೋಗಿ ಬಡಾವಣೆಯ ಎಲ್ಲರನ್ನೂ ಮಾತಾಡಿಸಿಕೊಂಡು ಬರೋಣ ಎಂದುಕೊಳ್ಳುತ್ತಿದ್ದೆ. ಆದರೆ ಪರಿಚಯವಿರದ ಕಾರಣ ಅಭಾಸ ಆಗಬಾರದು ಎಂದು ಹೋಗಿರಲಿಲ್ಲ.

ಪೌರಕಾರ್ಮಿಕರ ಆ ಬಡಾವಣೆಯಲ್ಲಿ ಒಟ್ಟು 94 ಕುಟುಂಬಗಳು ವಾಸವಾಗಿವೆ. ಹಲವು ವರ್ಷಗಳ ಹಿಂದೆ ಕುದುರೆ ಲಾಯವಾಗಿದ್ದ ಆ ಬಡಾವಣೆ ಈಗ ವಾಸದ ಸ್ಥಾನಗಳಾಗಿವೆ (ಮನೆ ಅನ್ನಲು ಮನಸ್ಸಾಗುತ್ತಿಲ್ಲ). 10x10 ಅಡಿ ಅಳತೆಯ ವಾಸ ಸ್ಥಳಗಳು, ಹೇಗೆಂದರೆ ಹಿಂದುಗಡೆ ಮನೆಗೂ ಮುಂದುಗಡೆ ಮನೆಗೂ ಮಧ್ಯೆ ಒಂದು ಮೋಟು ಗೋಡೆ! ಪ್ರತ್ಯೇಕ ಕೊಠಡಿಯಂತೂ ಇಲ್ಲ. ಶೌಚಾಲಯವಂತೂ ಕೇಳುವುದೇ ಬೇಡ, ಹೊರಗೆ ಕಟ್ಟಿದ ಒಂದು ನೆರಿಕೆಯೇ ಸ್ನಾನದ ಮನೆ. ಪ್ರತ್ಯೇಕ ಮಲಗುವ ಕೊಠಡಿಗಳು ಇಲ್ಲದ ಕಾರಣ ಮಂಚದ ಮೇಲೆ ತಂದೆ ತಾಯಿ ಮಲಗಿದರೆ ಮಂಚದ ಕೆಳಗೆ ಮಕ್ಕಳು ಮಲಗುತ್ತಾರಂತೆ... ಗೆಳೆಯ ಮಹೇಶ್ ಹೇಳುತ್ತಿದ್ದಾಗ ನಮ್ಮ ಅಭಿವೃದ್ಧಿ ಮಾತಿನ ಶೂರರು ಕುಬ್ಜರಂತೆ ಕಂಡರು.

ಇಲ್ಲಿಯವರೆಗೆ ಇಲ್ಲಿ ಬೀದಿ ದೀಪಗಳು, ಲೈಟು ಕಂಬಗಳು ಇತ್ತೇ? ಖಂಡಿತ ಇಲ್ಲ. ಒಂದೆರಡು ತಿಂಗಳ ಹಿಂದೆಯಷ್ಟೆ ಗೆಳೆಯ ಗಾಳಿಪುರ ಮಹೇಶ್ (ಇಲ್ಲಿಯ ಹಾಲಿ ನಗರಸಭಾ ಸದಸ್ಯ)ರವರ ಕಾಳಜಿಯಿಂದ ಇಲ್ಲಿ ಲೈಟು ಕಂಬಗಳು ಬಂದಿವೆ, ಬೀದಿ ದೀಪಗಳು ಬೆಳಗುತ್ತಿವೆ. ಹಾಗೆಯೇ ಮನೆಯ ಒಳಗೆ ಪಿಣ ಪಿಣ ಉರಿಯುವ ಬಲ್ಬುಗಳ ಕಾರಣ ಪಳ ಪಳ ಹೊಳೆಯುವ ಬೀದಿಯ ದೀಪಗಳೇ ಇಲ್ಲಿಯ ಓದುವ ಮಕ್ಕಳ ಓದುವ ಸ್ಥಳಗಳಾಗಿವೆ. ಇನ್ನು ಪೌರಕಾರ್ಮಿಕರಾದ್ದರಿಂದ ಬೆಳಗ್ಗೆ 5 ಗಂಟೆಗೆ ಕೆಲಸಕ್ಕೆ ಹೋದವರು ಬರುವುದು ಮಧ್ಯಾಹ್ನ 2:30ಕ್ಕೆ. ಬಹುತೇಕರು ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ತಿಂಗಳ ಸಂಬಳ ಸರಿಯಾಗಿ ಸಿಗದೆ ಎರಡು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಹೀಗೆ ಅಸ್ತವ್ಯಸ್ತ. ಆ ಕಾರಣಕ್ಕೆ ಅಸ್ತವ್ಯಸ್ತ ಬದುಕು.

ಮಧ್ಯೆ ಮಾತನಾಡಿದ ಪೌರಕಾರ್ಮಿಕ ನಾಗರಾಜು ‘‘ಸಾರ್, ಮಂಗಳ ಗ್ರಹಕ್ಕೆ ಹೋದರಂತೆ, ರಾಕೆಟ್ ಹಾರಿಸಿದರಂತೆ, ಅದಂತೆ ಇದಂತೆ, ಆದರೆ ನಮ್ಮ ಉದ್ಧಾರ ಯಾವಾಗ ಸಾರ್?.’’ ನನ್ನ ಬಳಿ ಉತ್ತರ ಇರಲಿಲ್ಲ. ನಡುವೆ ಪೆದ್ದುತನ ಪ್ರದರ್ಶಿಸಿದ ನಾನು, ‘‘ದಯವಿಟ್ಟು ಪೌರಕಾರ್ಮಿಕರ ಕೆಲಸ ಬಿಟ್ಟುಬಿಡಿ. ನಿಮ್ಮ ತಲೆಮಾರಿಗೆ ಇದು ನಿಂತು ಹೋಗಲಿ’’ ಎನ್ನುತ್ತಿದ್ದಂತೆ ನಾಗರಾಜು ‘‘ಸಾರ್, ಈ ಕೆಲಸ ಬಿಟ್ಟು ಬೇರೆ ಕೆಲಸ ನಮಗೆ ಯಾರು ಕೊಡುತ್ತಾರೆ? ಹೊಟೇಲ್, ಅಂಗಡಿ, ಕಚೇರಿ.. ಎಲ್ಲೇ ಹೋದರೂ ಅದೇ ಗಲೀಜು ತೊಳೆಯುವ ಕೆಲಸ. ನಾವು ಏನು ಮಾಡುವುದು ಹೇಳಿ? ಕಡೇ ಪಕ್ಷ ನಮಗೆ ಎಂಜಲು ಎಲೆ ಎತ್ತುವ ಕೆಲಸ ಕೂಡ ಕೊಡುವುದಿಲ್ಲ!’’ ಎನ್ನುತ್ತಿದ್ದಾಗ ನನ್ನ ಪೆದ್ದುತನವನ್ನು ಶಪಿಸಿಕೊಂಡೆ, ಪಾಪ ಪ್ರಜ್ಞೆ ಚುಚ್ಚಲಾರಂಭಿಸಿತು. ಮುಂದೆ ನಾಗರಾಜು ‘‘ಸಾರ್, ನಮ್ಮ ಮಕ್ಕಳಿಗೆ ಖಾಸಗಿ ಶಾಲೆಗೆ ಸೇರಿಸಲು ಹೋದಾಗ ನಿಮಗೆ ಅಂತ ಕಾರ್ಪೊರೇಷನ್ ಶಾಲೆಗಳಿವೆಯಲ್ಲ? ನೀವ್ಯಾಕೆ ಇಲ್ಲಿ ಬಂದಿರಿ? ಎಂದು ಪ್ರಶ್ನಿಸಿದರು ಸರ್’’ ಎಂದು ದುಃಖ ತೋಡಿಕೊಂಡರು. ಸಮಾಧಾನ ನೀಡದ ಅಸಹಾಯಕ ಸ್ಥಿತಿಯಲ್ಲಿ ನಾನಿದ್ದೆ.

ಅಲ್ಲಿದ್ದ ಅರ್ಧ ಗಂಟೆಯಲ್ಲಿ ಬಡಾವಣೆಯ ಎಲ್ಲರೂ ಸಮಸ್ಯೆಗಳ ರಾಶಿ ರಾಶಿ ಹಂಚಿಕೊಂಡರು. ಈ ನಡುವೆಯೂ ಅಲ್ಲಿದ್ದ ಮಕ್ಕಳನ್ನು ಪ್ರತ್ಯೇಕವಾಗಿ ಕರೆದು ಮುಂದೆ ಜೀವನದಲ್ಲಿ ಯಾವುದೇ ಕಾರಣಕ್ಕೂ ಪೌರಕಾರ್ಮಿಕ ವೃತ್ತಿ ಮಾಡದಂತೆ ಕೇಳಿಕೊಂಡೆ. ಮಹಿಳೆಯರಿಗೂ ಈ ವೃತ್ತಿ ತಮ್ಮ ಪತಿಯರು ಮಾಡದಂತೆ ನೋಡಿಕೊಳ್ಳಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಕೈ ಮುಗಿದು ಮನವಿ ಮಾಡಿಕೊಂಡೆ. ಅವರ ಬೇಡಿಕೆ ನಮ್ಮ ಬಡಾವಣೆ ಹತ್ತಿರ ಒಂದು ಕಾರ್ಖಾನೆ ತೆಗೆದರೆ ನಾವು ಈ ಕೆಲಸ ಬಿಟ್ಟು ಫ್ಯಾಕ್ಟರಿ ಕೆಲಸ ಮಾಡುತ್ತೇವೆ ಎಂಬುದಾಗಿತ್ತು. ಹಾಗೆಯೇ ಖಾಸಗಿ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ಇಷ್ಟು ಸೀಟು ಎಂದು ಮೀಸಲಿರಿಸಬೇಕು ಎಂಬುದಾಗಿತ್ತು. ಇನ್ನು ಗುತ್ತಿಗೆ ಪದ್ಧತಿ ತೊಲಗಿ ನಮಗೂ ಖಾಯಂ ಮಾಡಬೇಕು, ನಮ್ಮ ವೃತ್ತಿಗೆ ತಕ್ಕಂತೆ ವೇತನ, ರಜೆ ಮತ್ತು ವಿಶ್ರಾಂತಿ ಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಪರಿಹರಿಸುವ ಸ್ಥಿತಿಯಲ್ಲಿ ನಾನಿಲ್ಲದಿದ್ದರೂ ಸಮಸ್ಯೆಯನ್ನು ಸಾರ್ವಜನಿಕವಾಗಿ ಇಡಬಲ್ಲೆನಷ್ಟೆ.

Writer - ರಘೋತ್ತಮ ಹೊ.ಬ., ಮೈಸೂರು

contributor

Editor - ರಘೋತ್ತಮ ಹೊ.ಬ., ಮೈಸೂರು

contributor

Similar News

ಜಗದಗಲ
ಜಗ ದಗಲ