ಆರ್ಯವ್ಯಸನ

Update: 2021-12-12 06:05 GMT

ಅವನೊಬ್ಬ ಪುಟ್ಟ ಹುಡುಗ ಇತರ ಮಕ್ಕಳ ಜೊತೆಗೆ ಕ್ರಿಕೆಟ್ ಆಡಲು ಸಿದ್ಧವಾದಾಗ ಹೇಳಿದ. ‘‘ನಾನು ಮೊದಲು ಆಡಬೇಕು. ಇತರ ಮಕ್ಕಳು ‘‘ಯಾಕೇ?’’ ಎಂದು ಕೇಳಿದರು. ‘‘ನಾನೇ ನಿಮ್ಮೆಲ್ಲರಿಗಿಂತ ಹೈಟ್ ಇರೋದು’’ ಎಂದ ಆ ಹುಡುಗ. ಅದಕ್ಕೆ ಇತರ ಮಕ್ಕಳು ಒಪ್ಪಲಿಲ್ಲ. ಅಲ್ಲೇನೋ ಚರ್ಚೆ ಆಗುತ್ತಿತ್ತು. ನಾನು ಮುಂದೆ ಬಂದೆ. ಆ ಹುಡುಗ ಮುಂದೆ ಬೆಳೆದಂತೆ ಇನ್ನೂ ಏನೆಲ್ಲಾ ಕಾರಣಗಳನ್ನು ಒಡ್ಡಿ ತಾನು ಶ್ರೇಷ್ಠ ಎಂದು ನಿರೂಪಿಸಿಕೊಳ್ಳಲು ಯತ್ನಿಸಬಹುದು? ನಾನು ಬೆಳ್ಳಗಿದ್ದೇನೆ, ನೀನು ಕಪ್ಪಗಿದ್ದೀಯ, ನಾನು ಎತ್ತರಕ್ಕಿದ್ದೇನೆ - ನೀನು ಕುಳ್ಳಕ್ಕಿದ್ದೀಯಾ, ನಾನು ಹೆಚ್ಚು ಓದಿದ್ದೇನೆ - ನೀನು ಓದಿಲ್ಲ, ನಾನು ಜಾಣ - ನೀನು ದಡ್ಡ, ನನ್ನ ತಲೆಯಲ್ಲಿ ಒಳ್ಳೆಯ ಕೂದಲಿದೆ - ನೀನು ಮೊಟ್ಟೆ, ಬಾಂಡ್ಲಿ, ನಾನು ಗಂಡಸು - ನೀನು ಹೆಂಗಸು, ನಾನು ಮೇಲ್ಜಾತಿ - ನೀನು ಕೀಳ್ಜಾತಿ, ಒಂದೇ ಜಾತಿಯಾದರೂ ನನ್ನ ಪಂಗಡ ಮೇಲು - ನಿನ್ನ ಪಂಗಡ ಕೀಳು, ನಾನು ಈ ಧರ್ಮ - ನೀನು ಆ ಧರ್ಮ, ನಾನು ಈ ಜನಾಂಗ - ನೀನು ಆ ಜನಾಂಗ, ನಾನು ಸೀನಿಯರ್ - ನೀನು ಜೂನಿಯರ್, ನಾನು ವಯಸ್ಸಿನಲ್ಲಿ ದೊಡ್ಡವನು - ನೀನು ಸಣ್ಣವನು; ಎಂತದ್ದೋ ಒಂದು ಒಬ್ಬನಿಗೆ ತಾನು ಮತ್ತೊಬ್ಬನಿಗಿಂತ ಮಿಗಿಲು ಅಥವಾ ಮೇಲು ಎಂದು ನಿರೂಪಿಸಿಕೊಳ್ಳಲು ಬೇಕಾಗಿದೆ. ವ್ಯಕ್ತಿಗತವಾಗಿಯೂ ಮತ್ತು ಸಾಮಾಜಿಕವಾಗಿಯೂ ಇರುವಂತ ಈ ವ್ಯಸನವೇ ಆರ್ಯವ್ಯಸನ.

ತಲೆ ತುಂಬಾ ಕೂದಲಿರುವವನು ಬೊಕ್ಕ ತಲೆಯವನನ್ನು ನೋಡಿ ನಗುವ, ಲೇವಡಿ ಮಾಡುವ, ಅವನ ಮುಂದೆ ತನ್ನ ಕೂದಲನ್ನು ಸವರಿಕೊಳ್ಳುವ. ಆ ಮೇಲರಿಮೆಯ ಅಮಲಿನಲ್ಲಿ ತೇಲಿದರೆ, ಮತ್ತೊಬ್ಬ ಕೀಳರಿಮೆಯ ಸಂಕೋಚದಲ್ಲಿ ಕುಗ್ಗುವನು. ಈ ಕೀಳರಿಮೆ ಕೂಡಾ ವಾಣಿಜ್ಯದ ಬಂಡವಾಳವಾಗುವುದು. ನಿಮ್ಮ ತ್ವಚೆಯನ್ನು ಇಂತೆಷ್ಟೋ ದಿನಗಳಲ್ಲಿ ಗೌರವವರ್ಣವಾಗಿಸುವುದು ಎಂದು ಮಾರುಕಟ್ಟೆಗೆ ಬರುವ ಫೇಸ್ ಕ್ರೀಮನ್ನು ವರ್ಷಾನುಗಟ್ಟಳೆ ಬಳಸುವ ಕಪ್ಪುತ್ವಚೆಯ ಮನುಷ್ಯ ತನ್ನ ತ್ವಚೆಯ ಬಗ್ಗೆ ಕೀಳರಿಮೆಯನ್ನು ಉಳಿಸಿಕೊಂಡೇ ಇರುತ್ತಾನೆ. ಕ್ರೀಮನ್ನು ಬಳಸುತ್ತಲೇ ಇರುತ್ತಾನೆ. ತ್ವಚೆಯ ಬಣ್ಣ ಬದಲಾಗುವುದರಿಂದ ಆತ್ಮವಿಶ್ವಾಸ ಹೆಚ್ಚುವುದು ಎಂದು ಜಾಹಿರಾತುಗಳಲ್ಲಿ ಚಿತ್ರಿಸುವರು. ಆದರೆ ಇವನ ಆತ್ಮವಿಶ್ವಾಸ ಮಾತ್ರ ಕೀಳರಿಮೆಯ ಭಾರದಲ್ಲಿಯೇ ಕುಗ್ಗುತ್ತಿರುತ್ತದೆ.

ಇದು ಫೇಸ್ ಕ್ರೀಂ ಜಾಹಿರಾತು ಮಾತ್ರವಲ್ಲ. ಭಾರತದಲ್ಲಿ ಜಾತಿಗಳೂ ಕೂಡಾ ತಮ್ಮ ಜಾಹೀರಾತುಗಳನ್ನು ಕೊಡುತ್ತಿರುತ್ತವೆ. ನಾನಾ ಬಗೆಯ ಅತ್ಯಾಕರ್ಷಕ ಆಚರಣೆಗಳು. ಅವುಗಳ ವೈಭವದ ಸಂಮೋಹನಕ್ಕೆ ಒಳಗಾಗುವ ತಗ್ಗಿನ, ಕೆಳಗಿನ ಜಾತಿಗಳೆಂದು ಅನ್ನಿಸಿಕೊಂಡಿರುವವೂ ಕೂಡಾ ಅವರ ಆಚರಣೆಗಳನ್ನು ನಕಲು ಮಾಡುತ್ತಾರೆ. ಆದರೆ ಅವರು ನಕಲು ಮಾಡುತ್ತಾ ತಮ್ಮ ಸ್ವಂತಿಕೆ ಕಳೆದುಕೊಳ್ಳುತ್ತಾರೆ. ಆದರೆ ಆರ್ಯವ್ಯಸನದ ಜಾತಿಯಲ್ಲಿ ಗೌರವಕ್ಕೇನೂ ಪಾತ್ರವಾಗುವುದಿಲ್ಲ. ವೈಶ್ಯರು ಆರ್ಯ ವೈಶ್ಯರಾಗುತ್ತಾರೆ, ಈಡಿಗರು ಆರ್ಯ ಈಡಿಗರಾಗುತ್ತಾರೆ. ಹಾಗಂತ ಆರ್ಯ ಈಡಿಗರೇನೂ ಬ್ರಾಹ್ಮಣರ ಮತ ಸಮ್ಮತ ಮದುವೆಯಾಗುವುದಿರಲಿ, ಮತಸ್ಥ ಮಠಗಳಲ್ಲಿ ಸಹಪಂಕ್ತಿ ಭೋಜನಕ್ಕೂ ಅರ್ಹರೇನಾಗುವುದಿಲ್ಲ.

ವ್ಯಸನ ಎನ್ನುವುದೇ ಹಾಗೆ. ಬಿಡಲಾಗದು. ನಾನು ಇತರರಿಗಿಂತ ಶ್ರೇಷ್ಠ ಎನ್ನುವ ವ್ಯಸನದಂತೆಯೇ ಅವರಂತೆಯೇ ನಾನೂ ಶ್ರೇಷ್ಟನಾಗಬೇಕೆಂದು ಪಡುವ ಪಡಿಪಾಟಲಿನ ಗೀಳನ್ನು ಅನಾರ್ಯವ್ಯಸನವೆಂದು ಧಾರಾಳವಾಗಿ ಗುರುತಿಸಬಹುದು. ಅನಾರ್ಯರು ಇರುವುದೇ ಆರ್ಯರ ಪರಿಚಾರಕರಾಗಿರುವುದಕ್ಕೆ. ಅಂತಹುದರಲ್ಲಿ ಅವರು ಪ್ರಶ್ನಿಸುವುದು, ವಿಮರ್ಶಿಸುವುದು, ಹಕ್ಕು ಸ್ಥಾಪಿಸುವುದು ಇತ್ಯಾದಿಗಳನ್ನು ಮಾಡಲಾದೀತೇ?

ಎರಡನೇ ವಿಶ್ವಯುದ್ಧದ ಪೂರ್ವದಲ್ಲಿ ಜರ್ಮನಿಯಲ್ಲಿ ಜನಾಂಗೀಯ ವಾದದ ತತ್ವಜ್ಞಾನಿಗಳು ಹುಟ್ಟಿಕೊಂಡು ಆರ್ಯರು ಆಳುವುದಕ್ಕಾಗಿಯೇ ಹುಟ್ಟಿರುವವರು, ಯಹೂದಿಗಳಂತಹವರು ನೀಚ ರಕ್ತದವರು ದಾಸರಾಗುವ ಜನಾಂಗದವರು ಎಂದು ನಿರ್ಲಜ್ಜೆಯಿಂದ ಪ್ರತಿಪಾದಿಸಿದರು. ಅದು ಎಂತಹ ಹತ್ಯಾಕಾಂಡಕ್ಕೆ ಕಾರಣವಾಯಿತು ಎಂಬುದು ಇತಿಹಾಸ. ಆದರೆ ಅದನ್ನು ಒಪ್ಪಿದ ಆರ್ಯವ್ಯಸನಿಗಳಾಗಿ ರೂಪುಗೊಂಡ ಮನಸ್ಥಿತಿಗಳ ಬಗ್ಗೆ ಆಲೋಚಿಸಿ. ಈಗ ನಮ್ಮ ದೇಶದಲ್ಲಿಯೂ ಕೂಡಾ ಆರ್ಯವ್ಯಸನ ಮತ್ತು ಅನಾರ್ಯವ್ಯಸನದ ರೋಗ ಅಕಾರಣ ದ್ವೇಷಕ್ಕೆ ಈಡಾಗಿರುವುದಕ್ಕೆ ಗುರುತಿಸಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಹಿಟ್ಲರ್‌ನ ರಣರತಿಯ ಕೌತುಕವನ್ನು ಇಲ್ಲಿ ನಿರೀಕ್ಷಿಸಬಹುದು.

ಒಬ್ಬ ವ್ಯಕ್ತಿಯಲ್ಲಿ ಮಾನಸಿಕ ಸಮಸ್ಯೆಯಾಗಿ ಇರುವಂತಹ ಯಾವುದೇ ಬಗೆಯ ವ್ಯಸನಗಳು ಮತ್ತು ಉನ್ಮತ್ತತೆಗಳು ಸಮಾಜದಲ್ಲಿಯೂ ಕೂಡಾ ಸಂಕಲಿತವಾಗಿ ಇರುತ್ತವೆ. ಗಾಢಾಂಧಕಾರದ ಇರುಳಲ್ಲಿ ಸೂರ್ಯ ಹುಟ್ಟುವುದಿಲ್ಲ. ನಮ್ಮ ನಮ್ಮ ಒಂದೊಂದೇ ದೀಪಗಳನ್ನು ಹಚ್ಚಿಕೊಳ್ಳಬೇಕು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News

ಜಗದಗಲ
ಜಗ ದಗಲ