ರಂಗಾಯಣ: ಒಂದು ಸದಾಗ್ರಹ

Update: 2021-12-13 19:30 GMT

ಮೈಸೂರಿನ ರಂಗಾಯಣದಲ್ಲಿನ ವಿದ್ಯಮಾನಗಳ ಕುರಿತಂತೆ ರಂಗಾಯಣದಲ್ಲಿ ದಶಕಗಟ್ಟಲೆ ಕೆಲಸಮಾಡಿದ ನಟರು ಹಾಗೂ ರಂಗಾಯಣದ ಭಾಗವೇ ಆಗಿದ್ದು ಅಲ್ಲಿ ಕೆಲಸಮಾಡಿದ ಅಧ್ಯಾಪಕರು ಮತ್ತು ಕೆಲವು ನಿರ್ದೇಶಕರು, ರಂಗಭೂಮಿ ಕಲಾವಿದರು, ಸಿನೆಮಾ ಕಲಾವಿದರು, ನಾಟಕಕಾರರು, ಕವಿಗಳು, ಲೇಖಕ-ಲೇಖಕಿಯರು, ಸಂಗೀತಗಾರರು ಹಾಗೂ ವರ್ಣಚಿತ್ರಕಾರರು ಒಟ್ಟು 44 ಮಂದಿ ಕೂಡಿ ನೀಡಿರುವ ಒಂದು ಹೇಳಿಕೆ


ಈ ಬಾರಿಯ ‘ಬಹುರೂಪಿ ನಾಟಕೋತ್ಸವ’ ತನ್ನ ಬಣ್ಣವನ್ನು ಬದಲಾಯಿಸುತ್ತಿರುವುದಕ್ಕೆ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಕೆಲವು ಕಾರಣಗಳನ್ನು ನೀಡಿದ್ದಾರೆ. ಬಹುರೂಪಿಯ ಸಮಾರಂಭಕ್ಕೆ ರಂಗಾಯಣ ಆಯ್ಕೆಮಾಡಿರುವ ಇಬ್ಬರು ಅತಿಥಿಗಳ ಬಗ್ಗೆ ಮೈಸೂರಿನ ರಂಗಭೂಮಿ ಕಲಾವಿದರು, ಬರಹಗಾರರು ಮತ್ತು ಧೀಮಂತರು ಎತ್ತಿರುವ ಆಕ್ಷೇಪದ ಹಿನ್ನೆಲೆಯಲ್ಲಿ ಕಾರ್ಯಪ್ಪ ಈ ಮಾತುಗಳನ್ನು ಆಡಿದ್ದಾರೆ. ಹಾಗೆಯೇ ರಂಗಾಯಣದ ಕಿರಿಯ ಕಲಾವಿದರು ಆಡಿರುವ ಮಾತುಗಳು ಮತ್ತು ಹಂಚಿಕೊಂಡಿರುವ ಅಭಿಪ್ರಾಯಗಳ ಬಗ್ಗೆಯೂ ಈ ನಿರ್ದೇಶಕರು ಮಾತನಾಡಿದ್ದಾರೆ.

ಬಹುರೂಪಿಯ ಈ ಇಬ್ಬರು ಅತಿಥಿಗಳ ಬಗ್ಗೆ ಆಕ್ಷೇಪ ಹೊರಬಿದ್ದಾಗ ಕಾರ್ಯಪ್ಪನವರು ಇದನ್ನು ‘ಎಡಚರ’ ಅಡ್ಡಗಾಲು, ಕಿರುಕುಳ ಎಂದು ಭಾವಿಸಿದರು. ಈ ಸಂದರ್ಭವನ್ನು ಬಳಸಿಕೊಂಡು ಎಡಚರು ಮತ್ತು ಬಲಚರು ಎಂದೆಲ್ಲ ಹೇಳಿ ಎಡಚರನ್ನು ಕಟುವಾಗಿ ಟೀಕಿಸಿದ್ದಾರೆ.

ಮೈಸೂರಿನ ರಂಗಪ್ರಿಯರಾಗಲಿ, ಕರ್ನಾಟಕದ ರಂಗಾಸಕ್ತರಾಗಲಿ, ರಂಗಾಯಣವನ್ನು ಒಂದು ಗಂಭೀರ ರಂಗಭೂಮಿಯ ಸಂಸ್ಥೆ ಎಂದು ಪರಿಭಾವಿಸಿ ದಶಕಗಳೇ ಕಳೆದಿವೆ. ರಂಗಾಯಣವನ್ನು ಕಟ್ಟಿಬೆಳಸಿದ ಈವರೆಗಿನ ರಂಗಕಲೆಯ ಅಧ್ಯಾಪಕರಾಗಲಿ, ರಂಗಾಯಣದ ನಿರ್ದೇಶಕರಾಗಲಿ, ರಂಗಾಸಕ್ತರಾಗಲಿ ಎಂದೂ ರಂಗಾಯಣವನ್ನು ಎಡಚ, ಬಲಚ ಸಂಸ್ಥೆ ಎಂದು ಭಾವಿಸಲೇ ಇಲ್ಲ. ಯಾರ ಒಲವು ಯಾವುದೇ ಇರಲಿ, ರಂಗಭೂಮಿ, ಅಥವಾ ಬಹುರೂಪಿ ಉತ್ಸವ ಎಂದಾಗ, ಇದೆಲ್ಲವನ್ನು ಮೀರಿದ ಒಂದು ಸಾಂಸ್ಕೃತಿಕ ಹಬ್ಬ, ಇಡೀ ರಾಷ್ಟ್ರದ ಭಿನ್ನ ಭಾಷೆಗಳ, ಸಂಸ್ಕೃತಿಗಳ ಮೇಳ, ಹೊಸ ಹೊಸ ಪ್ರಯೋಗಗಳ, ಸಾಧನೆಗಳ ವೇದಿಕೆ ಎಂದು ಗೌರವಿಸಿದರು. ಈ ಕಾರಣಕ್ಕಾಗಿಯೇ ‘ಬಹುರೂಪಿ’ ಎಂದರೆ ಇಡೀ ಕರ್ನಾಟಕದ ಜನತೆ ಕುತೂಹಲದಿಂದ, ಆಸಕ್ತಿಯಿಂದ ನೋಡುತ್ತ, ಭಾಗವಹಿಸುತ್ತ ಈ ಹಬ್ಬಕ್ಕೆ ಆಸರೆಯಾಗಿ ನಿಂತಿದ್ದಾರೆ.

ಇದು ಒಬ್ಬರ ಸಾಧನೆಯಲ್ಲ; ರಂಗಾಯಣದ ನಿರ್ದೇಶಕರು, ರಂಗಕಲೆಯ ಅಧ್ಯಾಪಕರು, ಕಲಾವಿದರು, ಕಲಾರಸಿಕರು ಎಲ್ಲ ಸೇರಿದ ಸಾಮೂಹಿಕ ಪ್ರಯತ್ನದ ಫಲ. ಹಾಗೆಯೇ ಈ ಬಹುರೂಪಿ ಉತ್ಸವಕ್ಕೆ ಸರಕಾರ, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕರು ಆರ್ಥಿಕ ಬಲವನ್ನೂ ಒದಗಿಸುತ್ತ ಬಂದಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಲು ಅವಕಾಶವೇ ಇಲ್ಲದಂತೆ ಈ ಹಬ್ಬ ಎರಡು ದಶಕಗಳ ಕಾಲ ನಡೆದುಕೊಂಡು ಬಂದಿದೆ.

 ಕಾರ್ಯಪ್ಪನವರು ತಾವೇ ಸರಕಾರದಿಂದ ಹಣತಂದಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ತಾವೇ ಹೇಳಿಕೊಂಡಿರುವಂತೆ, ಕಾರ್ಯಪ್ಪನವರು ಆರೆಸ್ಸೆಸ್‌ನಿಂದ ಬಂದವರು. ಆರೆಸ್ಸೆಸ್‌ನ ಬಿಗಿಹಿಡಿತದಲ್ಲಿರುವ ಸರಕಾರ ಕಾರ್ಯಪ್ಪನವರು ಕೇಳಿದಷ್ಟು ಹಣವನ್ನು ಕೊಟ್ಟಿರಬಹುದು. ಆದರೆ ಈ ಹಣ ಯಾವುದೇ ಪಕ್ಷದ ಅಥವಾ ಸಂಸ್ಥೆಯ ಹಣವಲ್ಲ. ಇದು ಜನರ ಹಣ. ನಾಡಿನ ಜನರು ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಈ ಹಣದ ಮೂಲಕ ಬೆಳೆಸುತ್ತ ಬಂದಿದ್ದಾರೆ. ಸರಕಾರ ಈ ಹಣವನ್ನು ಕೊಡುವುದು ಅದರ ಕರ್ತವ್ಯಭಾಗ. ಇಲ್ಲಿ ಕಾರ್ಯಪ್ಪನವರ ಓಡಾಟ, ಶ್ರಮ ಇದ್ದರೆ ಅದಕ್ಕಾಗಿ ಅವರಿಗೆ ವಂದನೆ ಹೇಳೋಣ. ಆದರೆ ಸಾರ್ವಜನಿಕ ಹಣ ಎಂಬ ಎಚ್ಚರ ಮಾನ್ಯ ಕಾರ್ಯಪ್ಪನವರಿಗೆ ಮತ್ತು ಆರೆಸ್ಸೆಸ್ ಅಥವಾ ಬಿಜೆಪಿಗೆ ಇರಬೇಕಾಗುತ್ತದೆ.

ರಂಗಾಯಣದ ಕಿರಿಯ ಕಲಾವಿದರ ಬಗ್ಗೆ ಕಾರ್ಯಪ್ಪನವರು ಆಡಿರುವ ಮಾತುಗಳು ಈಗ ಗಾಳಿಯಲ್ಲಿ ಹರಿದಾಡುತ್ತಿವೆ. ಆ ಮಾತುಗಳನ್ನು ಇಲ್ಲಿ ಬಳಸದೆ, ಅದರ ಧ್ವನಿ ಮತ್ತು ಅರ್ಥವನ್ನಷ್ಟೇ ಬಳಸಿಕೊಂಡು ಹೇಳುವುದಾದರೆ: ರಂಗಾಯಣವಾಗಲಿ, ಅದು ಪ್ರಸ್ತುತ ಪಡಿಸುವ ವಿಭಿನ್ನ ಬಗೆಯ ನಾಟಕಗಳಾಗಲಿ ಕೇವಲ ರಂಜನಗೆಗಾಗಿ ಇರುವ ಸಾಧನಗಳಲ್ಲ. ಯಾವುದೇ ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದ ಚಿಂತನೆಯನ್ನು ಬೆಳೆಸುತ್ತ, ವೈಚಾರಿಕ ಎಚ್ಚರವನ್ನು ಜಾಗೃತವಾಗಿಡುತ್ತ, ಜನತಂತ್ರ ವ್ಯವಸ್ಥೆಯ ಜೀವನಾಡಿಯಾಗಿ ಕ್ರಿಯಾಶೀಲವಾಗಿರುತ್ತವೆ. ಕಲಾವಿದರು ಮುಕ್ತವಾಗಿ ಮಾತನಾಡುವ, ಪ್ರಬುದ್ಧವಾಗಿ ಚಿಂತಿಸುವ ಅವಕಾಶವೂ ಇಲ್ಲಿರುತ್ತದೆ. ಇಂತಹ ಅವಕಾಶ ಬಳಕೆಯಾಗುತ್ತಿದ್ದರೆ ನಾವೆಲ್ಲ ಸಂತೋಷಪಡಬೇಕು. ಜನತೆಯ ಹಣ ಸರಿಯಾದ ರೀತಿಯಲ್ಲಿ ಉಪಯೋಗವಾಗುತ್ತಿದೆ ಎಂದುಕೊಳ್ಳಬೇಕು. ಅದು ಬಿಟ್ಟು, ‘ಸರಕಾರದ ಹಣವನ್ನು ತಿಂದು, ಸರಕಾರಕ್ಕೆ ದ್ರೋಹ ಬಗೆಯುತ್ತಿದ್ದಾರೆ’ ಇತ್ಯಾದಿ ನಮೂನೆಯ ಮಾತನಾಡುವುದು ರಂಗಾಯಣದಂತಹ ಸ್ವಾಯತ್ತ ಸಂಸ್ಥೆಯ, ಜನ ಸಂಸ್ಥೆಯ ಘನತೆಯನ್ನು ಕೆಳಗಿಳಿಸಿದಂತಾಗುತ್ತದೆ. ರಂಗಾಯಣದ ನಿರ್ದೇಶಕ ಸ್ಥಾನದಲ್ಲಿರುವವರು ಇಂತಹ ಕೆಲಸಕ್ಕೆ ಮುಂದಾಗಬಾರದು.

ಇದಲ್ಲದೆ, ಕಾರ್ಯಪ್ಪನವರು ‘ಸಂವಾದ’ (SAMVADA) ಎಂಬ ಯೂಟ್ಯೂಬ್ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ, ಬಿ. ವಿ. ಕಾರಂತರ ನಂತರ ರಂಗಾಯಣಕ್ಕೆ ನಿರ್ದೇಶಕರಾಗಿ ಬಂದವರಲ್ಲಿ ಒಬ್ಬರನ್ನು ಬಿಟ್ಟರೆ ಉಳಿದವರೆಲ್ಲ ‘ಮಾವೋವಾದಿಗಳ ಸಿದ್ಧಾಂತಗಳನ್ನು ಸ್ವೀಕರಿಸುವವರು’ ಎಂದು ಇಲ್ಲಸಲ್ಲದ ಮಾತಾಡಿದ್ದಾರೆ. ಆ ಸಿದ್ಧಾಂತವನ್ನು, ತನಗಿಂತ ಮುಂಚೆ ರಂಗಾಯಣದಲ್ಲಿದ್ದು ಆ ಸಂಸ್ಥೆಗೆ ಜವಾಬ್ದಾರರಾಗಿದ್ದವರ ತಲೆಗೆ ಮೇಲಿಂದ ಮೇಲೆ ಕಟ್ಟಿದ್ದಾರೆ. ಆದರೆ, ಆ ಸಂಬಂಧ ಅವರು ಆಡಿರುವುದೆಲ್ಲ ಶುದ್ಧ ಅಬದ್ಧವಾದ ಮಾತು. ವಿಶ್ವವಿದ್ಯಾನಿಲಯಗಳೂ ಸೇರಿದಂತೆ ಕರ್ನಾಟಕದ ಯಾವುದೇ ಶಿಕ್ಷಣ ಸಂಸ್ಥೆ ಮತ್ತು ಕಲಾಸಂಸ್ಥೆಯ ಮುಖ್ಯಸ್ಥರು ಕಾರ್ಯಪ್ಪನವರ ತರಹ ಅಬದ್ಧಗಳನ್ನು, ಕೀಳು ಮಾತುಗಳನ್ನು ಎಂದೂ ಆಡಿದ್ದಿಲ್ಲವೆಂದೇ ಹೇಳಬೇಕು. ಈವರೆಗೆ ರಂಗಾಯಣ ನಡೆದುಬಂದ ದಾರಿಯನ್ನು ನೋಡಿದರೆ, ನಿರ್ದೇಶಕ ಸ್ಥಾನದಲ್ಲಿದ್ದು ಕೆಲಸ ಮಾಡಿರುವ ಗಣ್ಯರು ಮತ್ತು ಅಲ್ಲಿ ಅದರ ಆರಂಭದ ದಿನಗಳಿಂದ ಕೆಲಸಮಾಡಿ ಅದರ ಆರೋಗ್ಯಪೂರ್ಣ ಕಾಯಕಕ್ಕೆ ಬುನಾದಿಹಾಕಿದ ರಂಗಕಲೆಯ ಅಧ್ಯಾಪಕರು, ವಿಭಿನ್ನ ಚಿಂತನೆಯ, ತಾತ್ವಿಕ ನಿಲುವಿನ, ದೃಷ್ಟಿ ಧೋರಣೆಯ ಗಂಭೀರ ವ್ಯಕ್ತಿಗಳು. ಇವರು ತಮ್ಮ ವ್ಯಕ್ತಿಗತ ಅಭಿಪ್ರಾಯಗಳನ್ನು ಬದಿಗಿಟ್ಟು ರಂಗಭೂಮಿಯ ಘನತೆಗೆ ಕುಂದುಬರದಂತೆ ನೋಡಿಕೊಂಡಿದ್ದಾರೆ. ತಮ್ಮ ಕೈಲಾದ ಮಟ್ಟಿಗೆ ರಂಗಾಯಣವನ್ನು ಬೆಳಸಿ, ಉಳಿಸಿ ಹೋಗಿದ್ದಾರೆ. ಇವತ್ತು ಕರ್ನಾಟಕದಲ್ಲಿ ಮತ್ತು ಕನ್ನಡಿಗರ ಮನಸ್ಸಿನಲ್ಲಿ ರಂಗಾಯಣ ಮತ್ತು ಬಹುರೂಪಿಗಳು ಉಳಿದಿದ್ದರೆ ಅದಕ್ಕೆ ಕಾರಣ ಈ ಎಲ್ಲ ಗಣ್ಯರು. ಅವರನ್ನು ಯಾರೂ ‘ಎಡಚರು’ ’ಬಲಚರು’ ಎಂದು ಗುರುತಿಸಲಿಲ್ಲ. ಅವರು ರಂಗಭೂಮಿಯವರು. ಅಲ್ಲಿಯೇ ಚಿಂತಿಸಿ, ದುಡಿದು, ರಂಗಭೂಮಿಯನ್ನು ಬೆಳಸಿದವರು; ಕರ್ನಾಟಕವನ್ನು ಮುನ್ನಡೆಸಿದವರು.

ಕಾರ್ಯಪ್ಪನವರು ಮತ್ತು ಅವರಂತಹವರು ರಂಗಾಯಣವನ್ನು ಮತ್ತು ಬಹುರೂಪಿಯನ್ನು ಹಗುರವಾಗಿ ನೋಡಬಾರದು; ಅವುಗಳ ಗೌರವವನ್ನು ಹಾಳುಮಾಡಬಾರದು ಎಂಬ ಸದಾಗ್ರಹ ನಮ್ಮದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ