ಲಿಂಗಾಯತ ಧರ್ಮದ ನಿಜತತ್ವಾಚರಣೆಯನ್ನು ತಿಳಿಸುವ ಕೃತಿ
‘ವೇದಕ್ಕೆ ಒರೆಯ ಕಟ್ಟುವೆ’-ಇದೊಂದು ವಿನೂತನ, ವಿಶಿಷ್ಟ ಕೃತಿ. ಬಸವಾದಿ ಶರಣರ ಜೀವಪರ-ಜೀವನಪರ ಉದಾತ್ತ ವೈಚಾರಿಕ ಚಿಂತನೆಗಳನ್ನು ಇಲ್ಲಿ ಸಂಭಾಷಣೆಯ ರೂಪದಲ್ಲಿ ಸರಗೊಳಿಸಲಾಗಿದೆ. ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಸನಾತನತೆ ಮತ್ತು ವೈಚಾರಿಕತೆಗಳ ಮಧ್ಯ ನಿರಂತರ ತಿಕ್ಕಾಟಗಳು ನಡೆಯುತ್ತಲೇ ಬಂದಿವೆ. ಅದಕ್ಕೆ ಹೆಚ್ಚು ತೀವ್ರತೆ ಉಂಟಾದುದು ಹನ್ನೆರಡನೇ ಶತಮಾನದಲ್ಲಿ ಶಿವಶರಣರು ನಡೆಸಿದ ಸಮಾಜೋ ಧಾರ್ಮಿಕ ಸಮಗ್ರ ಕ್ರಾಂತಿಯ ಸಂದರ್ಭದಲ್ಲಿ.
ಸನಾತನ ಧರ್ಮ ಪೋಷಿಸಿಕೊಂಡು ಬಂದ ಬಹುಮುಖ್ಯ ಜೀವನ ಮೌಲ್ಯಗಳೆಂದರೆ- ಯಜ್ಞಯಾಗ ಕರ್ಮ, ಬಹುದೇವೋಪಾಸನೆ, ಚಾತುರ್ವರ್ಣ ಪದ್ಧತಿ, ಇದರಿಂದಾಗಿ ಜೀವಹಿಂಸೆ, ಕಂದಾಚಾರ, ವರ್ಗ-ವರ್ಣ-ಲಿಂಗ ಭೇದ ವ್ಯವಸ್ಥೆ, ಶೋಷಣೆ-ಇದೇ ಮೊದಲಾದ ಜೀವ ವಿರೋಧಿ, ಅಮಾನವೀಯ ವಿಧಿ ನಿಯಮ, ಕಟ್ಟುಪಾಡುಗಳು ಹುಟ್ಟಿಕೊಂಡವು; ಗಟ್ಟಿಗೊಂಡವು. ಅವೇ ಬಹುಕಾಲ ಮಾನವ ಬದುಕನ್ನು ನಿಯಂತ್ರಿಸುತ್ತ ಬಂದವು; ಅವೇ ಸತ್ಯ ಎಂಬ ಭ್ರಮೆಯಲ್ಲಿ ಮನುಷ್ಯ ಬದುಕುವಂತೆ ಮಾಡಿದವು.
ಶರಣಧರ್ಮ ವೈಚಾರಿಕ ತಳಹದಿಯ ಮೇಲೆ ನಿರ್ಮಾಣವಾದ ಜೀವ ಕಾರುಣ್ಯದ, ಸರ್ವ ಸಮಾನತೆಯ ಮಾನವೀಯ ಮೌಲ್ಯಗಳನ್ನು ಉಸಿರಾಗಿಸಿಕೊಂಡ ಸ್ವತಂತ್ರ ಧರ್ಮ, ಸಕಲ ಜೀವಾತ್ಮರ ಲೇಸು ಅದರ ಪರಮಧೇಯ. ಮನಸ್ಸಾಕ್ಷಿ ಆತ್ಮಸಾಕ್ಷಿಯ ಸತ್ಯ-ಶುದ್ಧ ಸಾತ್ವಿಕ ನಡೆ-ನುಡಿ ಅದರ ಸಿದ್ಧಾಂತ, ಅಂತರಂಗ ಬಹಿರಂಗ ಶುದ್ಧಿ, ನಿತ್ಯ ಕಾಯಕ ದಾಸೋಹ, ವ್ಯಕ್ತಿ-ಸಮಾಜ-ಲೋಕಕಲ್ಯಾಣ ಅದರ ಹಿರಿಯ ಗುರಿ, ಅರಿವು ಆಚಾರ ಅನುಭಾವಗಳ ಸಾಮರಸ ಅದರ ಚರಮ ಸಿದ್ಧಿ.
ಈ ಎರಡರ ರೀತಿ ನೀತಿ ತದ್ವಿರುದ್ಧ, ಎರಡರ ನಡೆ-ನಿಲವು ಅಜಗಜಾಂತರ. ಒಂದು ಉತ್ತರ, ಮತ್ತೊಂದು ದಕ್ಷಿಣ ಹೀಗಿರುವ ಉಭಯ ವಿರೋಧಿಗಳನ್ನು ಮುಖಾಮುಖಿಯಾಗಿಸಿ ನಿಜ ಮಾನವ ಧರ್ಮದ ದರ್ಶನವನ್ನು ಮಾಡಿಸಲು ಕೈಕೊಂಡ ಪ್ರಯತ್ನ ಪ್ರಸ್ತುತ ಕೃತಿಯಲ್ಲಿ ಸಮರ್ಥವಾಗಿ ಫಲಕಾರಿಯಾಗಿದೆ.
ಇದನ್ನು ವಿಶಿಷ್ಟ ತಂತ್ರದ ಮೂಲಕ ನಿರ್ವಹಿಸಿ, ಓದುಗರಲ್ಲಿ ಕುತೂಹಲ ಕೆರಳುವಂತೆ ಮಾಡಿರುವುದು ಲೇಖಕರ ಸೃಜನಶೀಲತೆ ಮತ್ತು ಪ್ರಯೋಗಶೀಲತೆಗೆ ಸಾಕ್ಷಿ ಎನಿಸಿದೆ.
ಇಲ್ಲಿನ ತಾಂತ್ರಿಕ ದೃಷ್ಟಿ ಹೀಗಿದೆ. ಮೊದಲು ಸನಾತನ ಒಪ್ಪಿತ ಪದ್ಧತಿಯನ್ನು ಪ್ರಸ್ತಾಪಿಸುವುದು; ಆನಂತರ ಅದಕ್ಕೆ ಪ್ರತಿಯಾಗಿ ಶರಣರ ನೂತನ ಪದ್ಧತಿಯನ್ನು ನಿರೂಪಿಸುವುದು; ಅದರಿಂದ ಎರಡರಲ್ಲಿ ತೋರುವ ವಿಗತಿ-ಪ್ರಗತಿಗಳನ್ನು ಎತ್ತಿ ತೋರಿಸಿ, ಶರಣ ಧರ್ಮದ ವಾಸ್ತವ ವೈಜ್ಞಾನಿಕ ನಿಲವಿನ ಸತ್ಯ ದರ್ಶನವನ್ನು ಮಾಡಿಸುವುದು, ಇಲ್ಲಿನ ಚಿಂತನೆಗಳು ಬಿಡಿ ಬಿಡಿ ಸಂಗತಿಗಳನ್ನು ಹೇಳುತ್ತಿದ್ದರೂ ಒಟ್ಟಾಗಿ ನೋಡಿದಾಗ ಎಲ್ಲದರ ಮೂಲ ಆಶಯ ಲಿಂಗಾಯತ ಧರ್ಮದ ಪ್ರಗತಿಪರ ಧೋರಣೆಗಳನ್ನು ಗುರುತಿಸುವುದೇ ಆಗಿದೆ.
ಇಲ್ಲಿ ಚರ್ಚಿತವಾದ ವಿಷಯಗಳ ಹರಹು ದೊಡ್ಡದು; ಹಲವು ಮುಖಗಳಲ್ಲಿ ಹಬ್ಬಿಕೊಂಡುದು. ಅದು ‘ಸ್ತ್ರೀಗೆ ಧಾರ್ಮಿಕ ಸಂಸ್ಕಾರ’ ಏಕಿಲ್ಲ ಎಂಬ ಪ್ರಶ್ನೆಯಿಂದ ಆರಂಭವಾಗಿ, ‘ಶರಣರು ಕಾಲ್ಪನಿಕ ಅಮರತ್ವಕ್ಕೆ ತುಡಿಯದೆ ವಾಸ್ತವದ ಸಮಸ್ಯೆಗಳಿಗೆ ಮಿಡಿಯುವ ಲೋಕ ವ್ಯಾಮೋಹಿಗಳು’ ಎಂಬ ಉತ್ತರದೊಂದಿಗೆ ಮುಕ್ತಾಯವಾಗುತ್ತದೆ. ಮಧ್ಯದಲ್ಲಿ ಲಿಂಗಾಯತ ಧರ್ಮದಲ್ಲಿ ತೋರುವ ಅಸಂಗ್ರಹತ್ವ ಸಾಕ್ಷರತೆಗೆ, ಆದ್ಯತೆ, ಸ್ತ್ರೀ ಸಮಾನತೆ, ಏಕದೇವ ನಿಷ್ಠೆ, ಸಾಮಾಜಿಕ ನ್ಯಾಯ, ಪುರಾಣಗಳ ನಿರಾಕರಣೆ, ಧರ್ಮದ ಹೆಸರಿನಲ್ಲಿ ನಡೆಯುವ ಪ್ರಾಣಿ ಹಿಂಸೆಯ ನಿರಾಕರಣೆ, ವರ್ಣಭೇದ ನಿರಾಕರಣೆ, ಮೌಡ್ಯಗಳ ತಿರಸ್ಕಾರ, ಕಾಯಕ ದಾಸೋಹ, ಕಲ್ಲು ಇತ್ಯಾದಿ ದೇವರಲ್ಲ, ತೀರ್ಥ ಕ್ಷೇತ್ರದರ್ಶನ ಸಲ್ಲದು, ಅರಿವೇ ಗುರು, ವೇದ ಶಾಸ್ತ್ರ ಪ್ರಮಾಣವಲ್ಲ, ವ್ರತ ನೇಮ ಸುಳ್ಳು, ಇಷ್ಟಲಿಂಗ ಪೂಜೆಯ ವೈಜ್ಞಾನಿಕ ದೃಷ್ಟಿಕೋನ, ಲಿಂಗಾಯತದ ನಿಜಾಚರಣೆಗಳು, ಲಿಂಗಾಯ ಸ್ವತಂತ್ರ ಧರ್ಮ ಮಾನ್ಯತೆಯ ಅಗತ್ಯ- ಇವೇ ಮೊದಲಾದ ಲಿಂಗಾಯತ ಧರ್ಮದ ತತ್ವ, ಆಚರಣೆ, ಪರಂಪರೆ, ಪ್ರಗತಿ, ದೃಷ್ಟಿ-ಧೋರಣೆ, ಸ್ವತಂತ್ರ ಧರ್ಮ ಮಾನ್ಯತೆಯ ಚಳವಳಿ, ಇಂದಿನ ಅದರ ಸ್ಥಿತಿಗತಿ, ಮುಂದಿನ ದಾರಿ ಏನೆಲ್ಲವನ್ನೂ ಕುರಿತು ಇಲ್ಲಿ ಮಾತನಾಡಲಾಗಿದೆ.
ಇಲ್ಲಿ ನಡೆಯುವ ಚರ್ಚೆಯಲ್ಲಿ ರಾಜ, ರಾಣಿ, ಮಂತ್ರಿ, ಯುವರಾಜ, ಪುರೋಹಿತ, ಸೇವಕ, ಋಷಿ ಮುನಿಗಳು, ದ್ವಿಜರು, ಶರಣರು, ಸಾಮಾನ್ಯ ಪ್ರಜೆಗಳು, ಸನಾತನಿ, ವೈಚಾರಿಕ-ಹೀಗೆ ಎಲ್ಲ ತರಹ ಪಾತ್ರಗಳು ಭಾಗವಹಿಸುತ್ತವೆ.
ಸನಾತನ ನಂಬಿಕೆಗಳನ್ನು ಹೇಳುವಲ್ಲಿ ಪುರಾಣದ ಘಟನೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಶರಣರ ವಾಸ್ತವದ ಘಟನೆಗಳನ್ನು ಜೋಡಿಸಿ, ಆ ಮೂಲಕ ಶರಣರು ಮಾಡಿದ ಬದಲಾವಣೆಗಳನ್ನು ಓದುಗರಿಗೆ ಮನದಟ್ಟು ಮಾಡಿಸಲಾಗಿದೆ.
ನಿರೂಪಣೆಯಲ್ಲಿ ಗದ್ಯ ಸಂಭಾಷಣೆ, ಮಧ್ಯೆ ಮಧ್ಯೆ ಶರಣರ ವಚನಗಳನ್ನು ದೃಷ್ಟಾಂತ ರೂಪದಲ್ಲಿ ಬಳಕೆ ಮಾಡಲಾಗಿದೆ. ಇದರಿಂದಾಗಿ ಇಲ್ಲಿನ ಹೇಳಿಕೆಗಳಿಗೆಲ್ಲ ಶರಣರ ಅನುಭಾವ ಪ್ರಮಾಣ ಪ್ರಾಪ್ತವಾದಂತೆನಿಸಿದೆ.
ಇಲ್ಲಿನ ಯಾವುದೇ ಅಭಿಪ್ರಾಯಗಳಿಗೆ ಕಲ್ಪಕತೆಯ ಸ್ಪರ್ಶವಿಲ್ಲ; ಮೂಢಾಚಾರದ ಸೋಂಕಿಲ್ಲ. ಎಲ್ಲವೂ ವಾಸ್ತವ, ವೈಜ್ಞಾನಿಕ ವೈಚಾರಿಕವೆನಿಸಿವೆ. ಮಾನವ ಬದುಕಿನ ಒಳಿತಿಗೆ ಪೂರಕ, ಪ್ರೇರಕವಾಗಿದೆ. ಹೀಗಾಗಿ ಇದೊಂದು ಲಿಂಗಾಯತ ಧರ್ಮದ ನಿಜತತ್ವಾಚರಣೆ ಹಾಗೂ ಉನ್ನತ ಜೀವನ ಮೌಲ್ಯಗಳನ್ನು ಆಪ್ತವಾಗಿ, ಅಷ್ಟೇ ನಿಖರವಾಗಿ ತಿಳಿಸುವ, ಅದರಂತೆ ಸನಾತನ ಧರ್ಮದ ದೋಷಗಳನ್ನು ನಿಷ್ಠುರವಾಗಿ ಎತ್ತಿ ತೋರಿಸುವ ಮಹತ್ವದ ಕೃತಿ ಎನಿಸಿದೆ.
-ಮುನ್ನುಡಿಯಿಂದ
ಪುಸ್ತಕ: ವೇದಕ್ಕೆ ಒರೆಯ ಕಟ್ಟುವೆ
ಲೇಖಕರು: ಜೆ. ಎಸ್. ಪಾಟೀಲ
ಮೊದಲ ಮುದ್ರಣ: 2021
ಪ್ರಕಾಶಕರು: ಅನುಭಾವ ಸಾಹಿತ್ಯ ಗ್ರಂಥಮಾಲೆ, ನಿಷ್ಕಲ ಮಂಟಪ, ಬೈಲೂರು, ಕಿತೂರು(ತಾ) ಬೆಳಗಾವಿ(ಜಿ)
ಬೆಲೆ:185 ರೂ.
ಪುಟಗಳು:224