ಬಾಗಲಕೋಟೆ | ಇನ್ನೊಂದು ಸಮುದಾಯದ ಯುವಕನನ್ನು ಮದುವೆಯಾದ ಪುತ್ರಿ: ತಂದೆಯಿಂದಲೇ ಯುವಕನ ಕೊಲೆ

Update: 2023-06-27 10:52 GMT

ಬಾಗಲಕೋಟೆ: ಇನ್ನೊಂದು ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ತಂದೆಯೇ ಮಗಳ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದ ನಿವಾಸಿ, ಜೈನ ಸಮುದಾಯಕ್ಕೆ ಸೇರಿದ ಭುಜಬಲಿ (34) ಕೊಲೆಯಾದ ಯುವಕ. ಯುವತಿಯ ತಂದೆ, ಆರೋಪಿ ತಮ್ಮನಗೌಡ ಪಾಟೀಲ ಎಂಬಾತನನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷತ್ರಿಯ ಸಮಾಜದ ತಮ್ಮನಗೌಡ ಪಾಟೀಲ ಎಂಬವರ ಪುತ್ರಿ ಭಾಗ್ಯಶ್ರೀ ಎಂಬಾಕೆ ಭುಜಬಲಿ ಕರ್ಜಗಿಯನ್ನು ಪ್ರೀತಿಸಿ, ಕೆಲ ತಿಂಗಳ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದರು ಎನ್ನಲಾಗಿದೆ.

ಶನಿವಾರ ರಾತ್ರಿ ದೇವರ ಪಲ್ಲಕ್ಕಿ ಉತ್ಸವ ಮುಗಿಸಿ ಸಹೋದರನ ಪುತ್ರನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗಲು ಮುಂದಾದಾಗ ಭುಜಬಲಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ನಂತರ ಆರೋಪಿ ತಮ್ಮನಗೌಡ ಪಾಟೀಲ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರು ಹಾಗೂ ಯುವಕನ ಮಧ್ಯೆ ಪೊಲೀಸರು ರಾಜೀಸಂಧಾನ ಮಾಡಿದ್ದರು ಎಂದು ತಿಳಿದುಬಂದಿದೆ.

Similar News