ದೌರ್ಬಲ್ಯವೇ ಮಹಾಬಲ
‘‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’’, ಇದು ಮಣ್ಣಿನ ಮಡಕೆ ಮತ್ತು ದೊಣ್ಣೆಗೆ ಮಾತ್ರವಲ್ಲದೆ ಮನಸ್ಸಿಗೂ ಕೂಡಾ ಸಂಬಂಧಿಸಿರುವುದು. ಪ್ರಕೃತಿಯ ರಚನೆ ಹಾಗೂ ಚಟುವಟಿಕೆಗಳಲ್ಲಿ ಮತ್ತು ಮನುಷ್ಯನ ಮಾನಸಿಕ ಮತ್ತು ಸಾಮಾಜಿಕ ವ್ಯವಹಾರಗಳಲ್ಲಿಯೂ ಕೂಡಾ ರಚನಾತ್ಮಕವಾಗಿರುವುದಕ್ಕಿಂತ ವಿನಾಶಾತ್ಮಕವಾಗಿರುವುದೇ ಬಹಳ ತೀವ್ರವಾಗಿಯೂ ಮತ್ತು ಪ್ರಭಾವಶಾಲಿಯಾಗಿಯೂ ಇರುವುದು.
ಸಿಗರೇಟು ಬಿಡಬೇಕು, ಬಿಡಬೇಕು ಅಂದುಕೊಳ್ಳುವವನು ಸಾವಿರ ಸಲ ಬಿಟ್ಟಿರುತ್ತಾನೆ. ಕೋಪಿಸಿಕೊಳ್ಳಬಾರದು, ಕಟುಮಾತುಗಳನ್ನಾಗಲಿ, ಬಿರುನುಡಿಗಳನ್ನಾಗಲಿ ಆಡಬಾರದು ಎಂದು ಮಾನಸಿಕವಾಗಿ ಸಿದ್ಧವಾಗಿದ್ದರೂ ಆ ಸಮಯಕ್ಕೆ ಅಂದುಕೊಂಡಿದ್ದೆಲ್ಲಾ ಮರೆತು ಕೆರಳಿ ಕ್ರೋಧಾವೇಶಕ್ಕೊಳಗಾಗಿರುತ್ತಾನೆ.
ಒಬ್ಬ ವ್ಯಕ್ತಿಯ ಮನೋವ್ಯಾಪಾರಗಳಲ್ಲಿ ಆಗುವ ಲಾಭ ನಷ್ಟಗಳಲ್ಲಿ ನಷ್ಟವೇ ಪ್ರಖರವಾಗಿರುವುದು. ಒಬ್ಬ ವ್ಯಕ್ತಿಗೆ ನೀವು ಹತ್ತು ಹಲವು ವಿಷಯಗಳಲ್ಲಿ ಸಂತೋಷ ಪಡಿಸುತ್ತೀರಿ. ಹಲವಾರು ಕಾಲ ಆನಂದ ನೀಡಿರುತ್ತೀರಿ. ಆದರೆ ಯಾವಾಗಲೋ ಒಮ್ಮೆ ನೀವು ಆ ವ್ಯಕ್ತಿಗೆ ಅಪಮಾನಿಸುವಂತೆಯೋ ಅಥವಾ ದುಃಖವಾಗುವಂತೆಯೋ ವರ್ತಿಸಿದಿರಿ ಅಂತಿಟ್ಟುಕೊಳ್ಳಿ. ಆ ನಕಾರಾತ್ಮಕವಾದ ಸಂಗತಿ ನೀವು ಈ ಮೊದಲು ನೀಡಿದ ಸಕಾರಾತ್ಮಕವಾದ ಅನುಭವಗಳನ್ನೆಲ್ಲಾ ಹಿಂದಕ್ಕೆ ಸರಿಸಿಬಿಡುತ್ತವೆ. ಒಂದು ವೇಳೆ ಆತ ನಿಮ್ಮನ್ನು ಕ್ಷಮಿಸಿ, ಇದೊಂದು ಕಾರಣಕ್ಕೆ ನಾನು ಮುನಿಯಬಾರದು, ನೋಯಬಾರದು ಅಂತ ಆಲೋಚಿಸಬೇಕೆಂದರೆ ಅದಕ್ಕೆ ಸಾಕಷ್ಟು ಪರಿಶ್ರಮಬೇಕು. ತಾಳ್ಮೆ ಬೇಕು, ಸಹಿಸಿಕೊಳ್ಳುವ ಶಕ್ತಿ ಇರಬೇಕು, ವಿಚಾರ ಮಾಡುವ, ವಿಶ್ಲೇಷಣೆ ಮಾಡುವ ಶಕ್ತಿ ಇರಬೇಕು. ಆದರೆ, ನೋವಾಗಿಸಿಕೊಳ್ಳಲು, ಕೋಪಿಸಿಕೊಳ್ಳಲು, ಕುದಿಯಲು ಯಾವ ಪರಿಶ್ರಮವೂ ಬೇಡ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನೀಡುವುದು ತೀರಾ ಸಹಜ ಮತ್ತು ಅತ್ಯಂತ ನೈಸರ್ಗಿಕ. ನಿಮಗೆ ನೋವುಂಟು ಮಾಡಿದ, ಕೋಪ ತರಿಸಿದ ವ್ಯಕ್ತಿಯನ್ನು ನೆನೆದಾಗೆಲ್ಲಾ ಬೇಸರಗೊಳ್ಳುವುದು, ನೊಂದುಕೊಳ್ಳುವುದು, ಆ ವ್ಯಕ್ತಿಗೆ ಏನಾದರೂ ಮಾಡಿ ಸೇಡು ತೀರಿಸಿಕೊಳ್ಳ ಬೇಕೆಂದುಕೊಳ್ಳುವುದು ಮನಸ್ಸಿನ ನಕಾರಾತ್ಮಕ ಗುಣವೆಂದೋ ಅಥವಾ ದೌರ್ಬಲ್ಯವೆಂದೋ ಭಾವಿಸುವುದಾದರೆ, ಅದು ನಿಜವೇ. ಆದರೆ ಈ ಮನೋಲೋಕದಲ್ಲಿ ದೌರ್ಬಲ್ಯವೇ ಮಹಾಬಲ.
ಕೋಪ, ತಾನು ತನ್ನದು, ಅಸೂಯೆ, ಸೇಡು, ಜಗಳಗಂಟತನ, ಆಸೆಬುರುಕತನ, ದಾಳಿಕೋರತನ; ಇತ್ಯಾದಿ ತನ್ನನ್ನೂ ಮತ್ತು ಇತರರನ್ನೂ ನಾಶ ಮಾಡುವಂತಹ ಗುಣಗಳನ್ನೆಲ್ಲಾ ಪಟ್ಟಿ ಮಾಡಿ. ಅವೆಲ್ಲವೂ ಬಹಳ ನೈಸರ್ಗಿಕವಾದದ್ದು. ಸಹಜವಾಗಿ ಪ್ರಾಣಿಗಳಲ್ಲಿರುವುದು. ಮೃಗೀಯ ಪ್ರವೃತ್ತಿ ಎನ್ನುತ್ತೇವೆ. ಮನುಷ್ಯನೂ ಕೂಡಾ ಪ್ರಾಣಿಯೇ. ಆದರೆ ಅವನು ಸಾಮಾಜಿಕ ಪ್ರಾಣಿ ಅಥವಾ ಸಂಘ ಜೀವಿಯಾಗಿರುವುದರಿಂದ ಕೆಲವೊಂದು ಪರಿಕಲ್ಪನೆಗಳನ್ನು ರೂಪಿಸಿಕೊಳ್ಳಲು ಅನಿವಾರ್ಯವಿತ್ತು. ಏಕೆಂದರೆ ಬಲಶಾಲಿಯು ದುರ್ಬಲನನ್ನು ಶೋಷಿಸದಿರಲು, ಸಂಘರ್ಷಗಳಿಂದ ಪೀಳಿಗೆಗಳನ್ನು ನಾಶಮಾಡಿಕೊಂಡು ಸಮಾಜವು ಸಂತಾನಹೀನವಾಗದಿರಲು, ಒತ್ತಡ ಮತ್ತು ಖಿನ್ನತೆಗಳಿಂದ ಮನಸ್ಸಿನ ಆರೋಗ್ಯ ಹಾಳು ಮಾಡಿಕೊಳ್ಳದಿರಲು, ಕೆಟ್ಟಾಕೆಟ್ಟದಾಗಿ ವರ್ತಿಸಿಕೊಂಡು ಬದುಕನ್ನು ಮೂರಾಬಟ್ಟೆಯಾಗಿಸಿಕೊಳ್ಳದಿರಲು ತನಗೆ ತಾನೇ ನೈತಿಕತೆ ಎಂಬ ಚೌಕಟ್ಟನ್ನು ಕಟ್ಟಿಕೊಂಡ. ಮಾನವತೆ, ಪ್ರೀತಿ, ಕರುಣೆ, ಕ್ಷಮೆ, ಸೌಹಾರ್ದವೇ ಮೊದಲಾದ ಪರಿಕಲ್ಪನೆಗಳನ್ನು ರೂಪಿಸಿಕೊಂಡು, ಅವಕ್ಕೆ ಮೌಲ್ಯವನ್ನು ಆರೋಪಿಸಿ ಶ್ರೇಷ್ಠತಮವೆಂದು ಆದರಿಸುತ್ತಾ ರೂಢಿಸಿಕೊಳ್ಳಲು ಪ್ರಯತ್ನಿಸಿದ. ಏಕೆಂದರೆ ಈ ಲೋಕದಲ್ಲಿ ನಾವೆಲ್ಲರೂ ಬದುಕಿರುವವರೆಗೂ ನೆಮ್ಮದಿಯಾಗಿ ಬದುಕಿರಲು. ಆದರೂ ಬಲು ಕಷ್ಟ. ಬಲು ಪರಿಶ್ರಮ ಪಡಬೇಕು.
‘‘ಆಚಾರಕ್ಕರಸಾಗು ನೀತಿಗೆ ಪ್ರಭುವಾಗು
ಮಾತಲ್ಲಿ ಚೂಡಾಮಣಿಯಾಗು | ಕಂದಯ್ಯ
ಜ್ಯೋತಿಯೇ ಆಗು ಜಗಕ್ಕೆಲ್ಲಾ’’
ಎಂದು ಮಗುವಿಗೆ ನಮ್ಮ ಹಿರಿಯರು ಹಾಲೂಡುತ್ತಿದ್ದರು. ನೈತಿಕತೆಯನ್ನೇ ಮೈಗೂಡಿಸಿಕೊಂಡು ಮಗುವು, ನೈತಿಕತೆಯನ್ನೇ ಬಲವನ್ನಾಗಿಸಿಕೊಳ್ಳಲಿ ಎಂದು. ಅದೇ ಮುಂದೆ, ‘‘ಇಂಡಿಯಾ ಈಸ್ ಮೈ ಕಂಟ್ರೀ’’, ‘‘ಆಲ್ ಇಂಡಿಯನ್ಸ್ ಆರ್ ಮೈ ಬ್ರದರ್ಸ್ ಸಿಸ್ಟರ್ಸ್’’, ‘‘ಐ ಲವ್ ಮೈ ಕಂಟ್ರೀ’’ ಇತ್ಯಾದಿ ದೇಶ ಮತ್ತು ದೇಶವಾಸಿಗಳಲ್ಲಿ ತನ್ನನ್ನು ಗುರುತಿಸಿಕೊಂಡು ತನ್ನ ವ್ಯಕ್ತಿಗತವಾದ ಧ್ಯೇಯ ಧೋರಣೆಗಳನ್ನು ಸಾಮಾಜಿಕವಾಗಿ ಉತ್ತಮವಾಗಿಸಿಕೊಳ್ಳಲು ಶಾಲೆಗಳಲ್ಲಿ ಬೆಳಗಿನ ಹೊತ್ತು ಪ್ರಾರ್ಥನೆಯ ನಂತರ ಪ್ರತಿಜ್ಞಾವಿಧಿಗಳನ್ನು ತೆಗೆದುಕೊಳ್ಳುವ ಮಟ್ಟಕ್ಕೆ ರೂಪಾಂತರಗೊಂಡಿತು. ಅಷ್ಟಾದರೂ ದ್ವೇಷದ ಮನಸ್ಸುಗಳ ಮತ್ತು ಸಂಘರ್ಷಕ್ಕೆ ಹಾತೊರೆವ ವಿನಾಶಕಾರಿ ಸಮೂಹಗಳನ್ನು ಅಸಂಖ್ಯಾತವಾಗಿ ನೋಡುತ್ತಿದ್ದೇವೆ ಮತ್ತು ಅನುಭವಿಸುತ್ತಿದ್ದೇವೆ. ಉದಾತ್ತ ಧ್ಯೇಯದ ಆ ಪ್ರತಿಜ್ಞಾವಿಧಿಯು ಅಷ್ಟೇನೂ ಕೆಲಸ ಮಾಡಲಿಲ್ಲ. ಆದರೆ ನಕಾರಾತ್ಮಕವಾದ, ವಿನಾಶಾತ್ಮಕವಾದ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಪ್ರತಿಜ್ಞೆಯೇನೂ ಮಾಡುವಷ್ಟಿಲ್ಲ. ತಾನಾಗಿ ಮಾಡುತ್ತಾರೆ. ಅಂತಹುದರಲ್ಲಿ ಪ್ರತಿಜ್ಞೆಯನ್ನೇ ಕೈಗೊಂಡರೆ? ಹೌದು, ತೂಕಡಿಸುವವನಿಗೆ ಹಾಸಿಕೊಟ್ಟಂತೆ ಅದು ಉತ್ತೇಜನಕ್ಕೊಳಗಾಗುತ್ತದೆ.
ಇನ್ನು ಧರ್ಮದ ಹೆಸರಿನಲ್ಲಿ, ರಾಷ್ಟ್ರರಕ್ಷಣೆಯ ಸೋಗಿನಲ್ಲಿ ಬಡಿಯುವ, ಕೊಲ್ಲುವ ಕ್ರೌರ್ಯದ ಪ್ರತಿಜ್ಞೆ ಕೆಲಸ ಮಾಡುತ್ತದೆ. ಆಂತರ್ಯದ ಕ್ರೌರ್ಯ ಹೊರಗುಕ್ಕಲು ಮಹಾವಕಾಶವಿದಾಗುತ್ತದೆ. ಇದರಲ್ಲಿ ಆಘಾತಕ್ಕೊಳಗಾಗಿ ದುಃಖಿಸುವ ಅಂಶವೆಂದರೆ, ಹಾಲುಂಡ ಮಕ್ಕಳೇ ಬದುಕರು, ಇನ್ನು ವಿಷವುಂಡ ಮಕ್ಕಳುಳಿವರೇ?