ಶೋಷಿತರ ಪರವಾಗಿ ಹಕ್ಕುಗಳನ್ನು ಮಂಡಿಸುವ ಕವಿತೆಗಳು

Update: 2022-01-04 07:38 GMT

ಕೊಪ್ಪಳದ ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯಪ್ರಶಸ್ತಿ ಗೆಳೆಯ ಬಿದಲೋಟಿ ರಂಗನಾಥ್‌ರವರಿಗೆ ದೊರಕಿದ್ದನ್ನು ಗಮನಿಸಿದ್ದೆ. ‘ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ’ ಎಂಬ ಆ ಪುಸ್ತಕದ ಶೀರ್ಷಿಕೆ ನನ್ನ ಗಮನ ಸೆಳೆದಿತ್ತು. ಅದನ್ನು ಓದಬೇಕೆಂದುಕೊಳ್ಳುತ್ತಿರುವಾಗಲೇ ಮಿತ್ರ ಬಿದಲೋಟಿ ರಂಗನಾಥ್ ಫೋನಾಯಿಸಿ ಪುಸ್ತಕ ತಲುಪಿಸಿದರು. ಲೋಕದ ವಿದ್ಯಮಾನಗಳಿಗೆ ವೈಚಾರಿಕವಾಗಿ ಮತ್ತು ಭಾವುಕವಾಗಿ ಮಿಡಿಯುವ ಕಾವ್ಯಪ್ರತಿಭೆ ಬಿದಲೋಟಿ ರಂಗನಾಥ. ವರ್ತಮಾನದ ವಿದ್ಯಮಾನಗಳಿಗೆ ತಕ್ಷಣವೇ ಸ್ಪಂದಿಸಿ ಕಾವ್ಯದ ಮೂಲಕ ಪ್ರಶ್ನಿಸುತ್ತಾ ಉತ್ತರಿಸುತ್ತಾ ಸಾಗಿದವರು. ಅವರ ಈ ಸಂಕಲನದೊಳಗಿನ ಭಾವನೆಗಳು ಕಾವ್ಯದ ಉತ್ಪ್ರೇಕ್ಷೆಗೆ ಒಳಗಾಗಿ ದಿಗ್ಗನೆದ್ದು ಬಂದ ಸಂಗತಿಗಳಲ್ಲ. ಬದಲಾಗಿ ಕಾಲದೊಳಗೆ ಕುದ್ದು ಆಕಾಶದ ಅಪಮಾನಗಳನ್ನೆಲ್ಲಾ ಅಂಗೈಯಲ್ಲಿ ತುಂಬಿಕೊಂಡು ನೋವ ಕಂಠದಲ್ಲಿ ಬರೆಯುತ್ತಿರುವವರು. ನಮಗೆಲ್ಲರಿಗೂ ಅರಿವಿನ ದಾರಿ ತೋರಿಸಿದ ಗುರು ಅಂಬೇಡ್ಕರ್ ಮಾರ್ಗವಾಗಿ ಕಾಡುವ ಕವಿತೆಗಳ ಬಿತ್ತಿದವರು.

ಸಂಕಟಗಳನ್ನು ಕವಿತೆಗಳಲ್ಲಿ ಕಟ್ಟಿ ಸಮನಾಗಿ ಹಂಚುವ, ಆ ಮೂಲಕ ಏಕತಾರಿಯ ನಾದದಂತೆ ಮಿಡಿಯುವ ಕಾವ್ಯ ಪ್ರತಿಭೆಯಾಗಿ ನಿಂತವರು. ಮೇಲೆ ಭೋರ್ಗರೆಯುವ ನದಿಯ ಶಬ್ದದಂತಾಗದೆ ನದಿಯ ಒಳ ಹರಿವನ್ನು ಮತ್ತದರ ಶಾಂತ ಪ್ರತಿಭಟನೆಯನ್ನು ನಮಗೆ ಅರ್ಥ ಮಾಡಿಸುವ ಬಗೆಯಲ್ಲಿ ಇವರ ಕಾವ್ಯ ಹೊಸ ರೂಪಕಗಳನ್ನು ಇಟ್ಟುಕೊಂಡು ನಮ್ಮ ಮುಂದೆ ಬಂದು ನಿಲ್ಲುತ್ತದೆ. ಕವಿತೆಗಳ ಮೂಲಕ ಸಮಕಾಲೀನ ಸಮಸ್ಯೆಗಳಿಗೆ ಹೊಸ ಹೊದಿಕೆ ಹೆಣೆಯಲಾಗಿದೆ. ಜಗದ ಪ್ರತಿ ವಿದ್ಯಮಾನವನ್ನು ಸೂಕ್ಷ್ಮವಾಗಿ ಗ್ರಹಿಸಿ ಕಾವ್ಯವಾಗಿಸುವ ತಾಕತ್ತು ಬಿದಲೋಟಿ ರಂಗನಾಥರವರಿಗೆ ಸರಿಯಾಗಿ ದಕ್ಕಿದೆ. ಓದುತ್ತಿದ್ದರೆ ಬೇಗ ಅರ್ಥವಾಗುವವು ಎಂಬ ಭ್ರಮೆ ಕಳಚಿ ಮತ್ತೆ ಮತ್ತೆ ಓದಿಸಿಕೊಂಡು ಹೋಗುವ ಕವಿತೆಗಳು ಈ ಲೋಕದ ಶೋಷಿತರ ಪರವಾದ ತನ್ನ ಹಕ್ಕುಗಳನ್ನು ಮಂಡಿಸುತ್ತದೆ. ಕವಿತೆಯೊಳಗಿನ ಆಕ್ರೋಶ ಸಾಮಾಜಿಕ ನ್ಯಾಯಕ್ಕಾಗಿ ಎಂಬುದನ್ನು ಇಲ್ಲಿ ಮರೆಯಲಾಗದು.

Writer - ರಮೇಶ ಗಬ್ಬೂರ್

contributor

Editor - ರಮೇಶ ಗಬ್ಬೂರ್

contributor

Similar News

ಜಗದಗಲ
ಜಗ ದಗಲ