ಕಗ್ಗತ್ತಲಲ್ಲಿ ನೀರಿಲ್ಲದೆ ರೈಲು ಪ್ರಯಾಣ!

Update: 2022-01-04 10:16 GMT

ಕೊಚುವೇಲಿಯಿಂದ ಅಮೃತ್‌ಸರಕ್ಕೆ ಹೋಗುವ ರೈಲು ಸಂಖ್ಯೆ 12483ರಲ್ಲಿ ನನಗೆ ದಿನಾಂಕ 29ಡಿಸೆಂಬರ್ 2021ರಂದು ಮಂಗಳೂರು ಜಂಕ್ಷನ್‌ನಿಂದ ಮುಂಬೈಗೆ ಪ್ರಯಾಣಿಸಬೇಕಾಯಿತು. ರೈಲು ರಾತ್ರಿ 7:50ಕ್ಕೆ ಮಂಗಳೂರು ಜಂಕ್ಷನ್ ತಲುಪಿದಾಗ ನಾನು ಪ್ರಯಾಣಿಸಬೇಕಾದ ‘ಎಸ್2’ ಕೋಚ್‌ಗೇರಿದಾಗ ಒಳಗೆ ಅಮಾವಾಸ್ಯೆಯ ಕತ್ತಲು ನೋಡಿ ಆಶ್ಚರ್ಯ ಕಾದಿತ್ತು. ಅಷ್ಟರಲ್ಲಿ ಸ್ಲೀಪರ್ ವರ್ತುಲದಲ್ಲಿರುವ ಸ್ಲೀಪರ್ ಸಂಖ್ಯೆ 17ರಿಂದ 40ರವರೆಗಿನ ಒಟ್ಟು 24 ಸ್ಲೀಪರ್ ಪ್ರದೇಶದ ಯಾವ ಲೈಟೂ ಉರಿಯುತ್ತಿರಲಿಲ್ಲ. ನಮ್ಮ ಸ್ಲೀಪರ್ ಸಂಖ್ಯೆಯನ್ನು ಹುಡುಕಲು ಪರದಾಡಬೇಕಾಯಿತು. ಮೊಬೈಲ್ ಲೈಟಿನಲ್ಲಿ ಹುಡುಕಿದಾಗ ನನ್ನ ಜಾಗವನ್ನು ತರುಣನೊಬ್ಬ ಆಕ್ರಮಿಸಿಕೊಂಡಿದ್ದ. ಮೊಬೈಲ್ ಲೈಟ್ ಇಲ್ಲದಿದ್ದರೆ ಲಗೇಜ್‌ನೊಂದಿಗೆ ನಾನು ಅವನ ಮೇಲೆಯೇ ಕೂರುತ್ತಿದ್ದೆನೇನೋ

 ಪ್ರತಿ ಬೋಗಿಗೆ ನಾಲ್ಕು ಶೌಚಾಲಯಗಳಿವೆ ‘ಎಸ್2’ ಬೋಗಿಯ ನಾಲ್ಕೂ ಶೌಚಾಲಯಗಳಲ್ಲಿ ಲೈಟಿಲ್ಲ. ಅವುಗಳಲ್ಲಿ ಮೂರು ಶೌಚಾಲಯಗಳಲ್ಲಿ ಕಪ್ಪಾದ ಮಲವಿತ್ತು. ಗಬ್ಬುನಾತವಿತ್ತು. ಲೈಟ್ ಇಲ್ಲದಿದ್ದರೆ ಪ್ರಯಾಣಿಕರಿಗೂ ಶೌಚಾಲಯ ಸ್ವಚ್ಛವಾಗಿರಿಸಲು ಕಷ್ಟ. ಇದೇ ಬೋಗಿಯ ಯಾವ ನಳ್ಳಿಯಲ್ಲೂ ನೀರಿಲ್ಲ. ಆದುದರಿಂದ ನಮ್ಮ ಬೋಗಿಯ 80 ಪ್ರಯಾಣಿಕರು ಪಕ್ಕದ ಬೋಗಿಗಳ ಶೌಚಾಲಯ ಹಾಗೂ ನಳ್ಳಿ ನೀರು ಉಪಯೋಗಿಸಿದ್ದರಿಂದ ಆ ಎರಡೂ (‘ಎಸ್1’, ‘ಎಸ್3’) ಬೋಗಿಗಳ ನೀರು ಖಾಲಿಯಾಯಿತು. ಈ ಬೋಗಿ ತಯಾರಿಕಾ ಸಂಖ್ಯೆ 173365ಸಿ.
 ಬೆಳಗ್ಗೆಯಾದಾಗ ನನಗೊಂದು ಸತ್ಯ ಸಂಗತಿ ಅರಿವಾಯಿತು. ಮಂಗಳೂರು ಜಂಕ್ಷನ್ ಹಾಗೂ ಮಡಗಾಂವ್ ರೈಲು ನಿಲ್ದಾಣದಲ್ಲಿ ನಮ್ಮ ಬೋಗಿಗೆ ನೀರು ತುಂಬಿಸಿದ್ದರೂ ಅದು ಇಡೀ ರೈಲು ಹಳಿಗಳಲ್ಲಿ ಸೋರುವುದು ನನ್ನ ಸೀಟ್ ಕೆಳಗಿನ ನೀರಿನ ನಳ್ಳಿಯಿಂದ ಎಂದು ತಿಳಿದು ಬಂತು. ಆ ನಳ್ಳಿಯ ಮುಚ್ಚಳ ಸಡಿಲವಾಗಿದ್ದು ಇದಕ್ಕೆ ಕಾರಣವಾಗಿರಬಹುದು.
12483 ಈ ರೈಲು ತಮಿಳುನಾಡಿನ ಕೊಚುವೇಲಿಯಿಂದ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದಿಲ್ಲಿ ಮತ್ತು ಪಂಜಾಬ್, ಅಮೃತಸರವರೆಗೆ ಹೀಗೆ 3292 ಕಿ.ಮೀ. ದೂರವನ್ನು 52 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತಿದೆ. ಹಾಗಿರುವಾಗ ಈ ರೈಲಿನ ಬೋಗಿ(‘ಎಸ್2’)ಯಲ್ಲಿ 52 ಗಂಟೆ 30 ನಿಮಿಷ ಲೈಟು, ನಳ್ಳಿ ನೀರು ಇಲ್ಲದೆ ಪ್ರಯಾಣಿಸಬೇಕಾದ ಪ್ರಯಾಣಿಕರ ಪಾಡೇನು?
ರಾತ್ರಿ ಹಗಲೆನ್ನದೆ ತಮ್ಮ ನಿತ್ಯಕರ್ಮಗಳಿಗೆ ವೃದ್ಧರು/ರೋಗಿಗಳು/ಮಕ್ಕಳು ಪಟ್ಟ ಬವಣೆ ಅಷ್ಟಿಷ್ಟಲ್ಲ. ಕೊರೋನ ಸಂಕಟಕಾಲದಲ್ಲಿ ನೀರಿಲ್ಲದೆ ಕೈತೊಳೆಯದೆ ಇರಲು ಸಾಧ್ಯವೇ? ಕೊರೋನ ಹಬ್ಬುವುದಿಲ್ಲವೇ? ಕೊಂಕಣ ರೈಲು ಹಾದಿಯಲ್ಲಿ 84 ಸುರಂಗಗಳಿವೆ. ಕಗ್ಗತ್ತಲಲ್ಲಿ ಯಾರಾದರೂ ನಮ್ಮ ಬೆಳೆಬಾಳುವ ವಸ್ತುಗಳನ್ನು ಕದ್ದರೆ ಯಾರು ಹೊಣೆಗಾರರು?
ತೀರಾ ಹಳೆಯದಾದ ಸೂಕ್ತ ಸೌಕರ್ಯಗಳಿಲ್ಲದ ಈ ಬೋಗಿಯನ್ನು 53 ಗಂಟೆ ಪ್ರಯಾಣದ ಈ ಎಕ್ಸ್ ಪ್ರೆಸ್ ರೈಲಿಗೆ ಉಪಯೋಗಿಸುವ ಬದಲು ಸರಿಯಾಗಿರುವ ಬೋಗಿಯನ್ನೇಕೆ ಅಳವಡಿಸಿಲ್ಲ? ಸಂಬಂಧಪಟ್ಟವರು ಉತ್ತರಿಸಿಯಾರೇ? ಹಾಗೂ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವರೇ ಎಂಬ ಆಶಯ ಎಲ್ಲಾ ‘ಎಸ್2’ ಬೋಗಿಯ ಪ್ರಯಾಣಿಕರದ್ದು

Writer - ಒಲಿವರ್ ಡಿ’ಸೋಜ

contributor

Editor - ಒಲಿವರ್ ಡಿ’ಸೋಜ

contributor

Similar News

ಜಗದಗಲ
ಜಗ ದಗಲ