ವಿವೇಕ ಚಿಂತನೆ
ಸಹಾನುಭೂತಿಯಿಲ್ಲ
ಯಾವ ಸಭಾ ಸಮಿತಿಗಳು ಮನುಷ್ಯರಲ್ಲಿ ಸಹಾನುಭೂತಿಯನ್ನು ತೋರದೆ, ತಮ್ಮ ಅಣ್ಣತಮ್ಮಂದಿರು ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆಂದು ನೋಡಿಯೂ ಅವರ ಜೀವವನ್ನು ಉಳಿಸುವುದಕ್ಕಾಗಿ ಒಂದು ತುತ್ತು ಅನ್ನವನ್ನು ಕೊಡದೆ ಪಶುಗಳ ರಕ್ಷಣೆಗಾಗಿ ರಾಶಿ ರಾಶಿ ಅನ್ನವನ್ನು ದಾನ ಮಾಡುತ್ತವೆಯೋ ಅವುಗಳೊಡನೆ ನನಗೆ ಸ್ವಲ್ಪವೂ ಸಹಾನುಭೂತಿಯಿಲ್ಲ. ಅವುಗಳಿಂದ ಸಮಾಜಕ್ಕೆ ಹೆಚ್ಚು ಉಪಕಾರವಾಗುತ್ತದೆಂದು ನಾನು ನಂಬುವುದಿಲ್ಲ. ಕರ್ಮಫಲದಿಂದ ಜನರು ಸಾಯುತ್ತಾರೆ ಎಂದು ಕರ್ಮದ ನೆವವನ್ನು ಹೇಳುವುದಾದರೆ ಜಗತ್ತಿನ ಯಾವ ವಿಷಯದಲ್ಲಿಯೂ ಕೆಲಸ ಮಾಡುವುದೇ ನಿಷ್ಪ್ರಯೋಜಕವೆಂದು ಒಟ್ಟಿಗೆ ನಿಶ್ಚಯಿಸಬಹುದು. ನಮ್ಮ ಪಶುರಕ್ಷಣೆಯ ಕೆಲಸವೂ ಆಮೇಲೆ ನಡೆಯುವುದಿಲ್ಲ. ಈ ಕೆಲಸದ ವಿಚಾರದಲ್ಲಿಯೂ ಗೋಮಾತೆಗಳು ತಮ್ಮ ತಮ್ಮ ಕರ್ಮಫಲದಿಂದಲೇ ಕಟುಕರ ಕೈಗೆ ಹೋಗುತ್ತವೆ ಮತ್ತು ಸಾಯುತ್ತವೆ, ಆದ್ದರಿಂದ ಅದಕ್ಕೆ ನಾವು ಏನೂ ಮಾಡಬೇಕಾದ ಅವಶ್ಯಕತೆಯಿಲ್ಲ ಎಂದು ಹೇಳಬಹುದು
(ರಾಮಕೃಷ್ಣ ಮಠ ಪ್ರಕಟಿಸಿದ ‘ಸ್ವಾಮಿ ವಿವೇಕಾನಂದ ಗ್ರಂಥಾವಳಿ’ 10ನೇ ಸಂಪುಟ)
***
ಅಂಜಿಕೆ ಯಾವುದೆಂದರೆ...
ನನಗೆ ತುಂಬಾ ಅಂಜಿಕೆ ಯಾವುದೆಂದರೆ ದೇವರ ಕೋಣೆ. ದೇವರ ಮನೆಯೇನೋ ಕೆಟ್ಟದ್ದಲ್ಲ. ಆದರೆ ಕೆಲವರು ಇದನ್ನೇ ಸರ್ವಸ್ವವೆಂದು ಎಣಿಸಿ ಹಳೆಯ ಮಾದರಿಯ ಹುಚ್ಚು ಕೆಲಸವನ್ನು ಪುನಃ ರೂಢಿಗೆ ತರುವುದಕ್ಕೆ ಯತ್ನಿಸುವರು. ಇದೇ ನನ್ನ ಅಂಜಿಕೆಗೆ ಕಾರಣ.
ಮನುಷ್ಯರ ಸಂಖ್ಯೆಗಿಂತ ಹೆಚ್ಚಾಗಿ ದೇವರುಗಳಿರುವರು. ಆದರೂ ಯಾವ ಸಹಾಯವೂ ಒದಗಲಿಲ್ಲ.
ಯಾವ ಚರ್ಚೂ ಜನರನ್ನು ಉದ್ಧಾರ ಮಾಡಲಿಲ್ಲ. ಒಂದು ದೇವಸ್ಥಾನದಲ್ಲಿ ಹುಟ್ಟುವುದು ಒಳ್ಳೆಯದು. ಆದರೆ ಯಾರು ದೇವಸ್ಥಾನ ಅಥವಾ ಚರ್ಚಿನಲ್ಲೇ ಸಾಯುತ್ತಾರೋ ಅವರನ್ನು ದೇವರೇ ರಕ್ಷಿಸಬೇಕು. ಅದರಿಂದ ಪಾರಾಗಿ. ಒಳ್ಳೆಯ ಪ್ರಾರಂಭವೇನೋ ನಿಜ. ಆದರೆ ಅದನ್ನು ತ್ಯಜಿಸಿ, ಅದು ಬಾಲ್ಯಾವಸ್ಥೆ.
(ವಿವೇಕಾನಂದರ ಕೃತಿ ಶ್ರೇಣಿ, ಸಂಪುಟ 9 ಪುಟ ಸಂಖ್ಯೆ 51/52, ಸಂಪುಟ-6, ಪುಟ 236, ಸಂಪುಟ-8, ಪುಟ 223, ಸಂಪುಟ-8, ಪುಟ 271 ಮೈಸೂರಿನ ಶ್ರೀ ರಾಮಕೃಷ್ಣಾಶ್ರಮದಿಂದ ಪ್ರಕಟಿತ)
***
ಹುಸಿ ದೇಶಾಭಿಮಾನವಿಲ್ಲ
ನನಗೆ ದೇಶದ ಬಗ್ಗೆ ಹುಸಿ ಅಭಿಮಾನವಿಲ್ಲ. ನಾನೆಷ್ಟು ಭಾರತೀಯನೋ ಅಷ್ಟೇ ಜಾಗತಿಕ. ನನ್ನ ಮೇಲೆ ಯಾವ ದೇಶದ ಹಕ್ಕೂ ಇಲ್ಲ. ನಾನು ಯಾವ ದೇಶದ ಗುಲಾಮನೂ ಅಲ್ಲ. ಶ್ರದ್ಧಾಹೀನ ನಾಸ್ತಿಕತೆ, ಮೂರ್ಖರಂತೆ ಏನೇನೋ ವಟಗುಟ್ಟಬೇಡಿ... ಕೇವಲ ಸುಶಿಕ್ಷಿತ ಹಿಂದೂಗಳಲ್ಲೇ ಗೋಚರಿಸುವ ಜಾತ್ಯಂಧ, ಧರ್ಮ ಭೋಳೆ, ನಿರ್ದಯ, ಡಾಂಭಿಕ, ನಾಸ್ತಿಕರಲ್ಲಿಯ ಒಬ್ಬ ಹೇಡಿಯಂತೆ ಬದುಕಲೆಂದು ನಾನು ಹುಟ್ಟಿ ಬರಲಿಲ್ಲ... (1895-ಸೆಪ್ಟ್ಟಂಬರ್ 5ರಂದು ಪ್ಯಾರಿಸ್‌ನಿಂದ ಅಳಸಿಂಗ ಪೆರುಮಾಳ್ ಅವರಿಗೆ ಬರೆದ ಪತ್ರದಲ್ಲಿ)
***
ಏಕೈಕ ಆಶಾ ಸ್ಥಾನ
ನಮ್ಮ ಮಾತೃ ಭೂಮಿಯ ದೃಷ್ಟಿಯಿಂದ ವೇದದ ತತ್ವಜ್ಞಾನ ಮತ್ತು ಇಸ್ಲಾಮಿನ ಸಮತೆಯ ಸಮನ್ವಯವೇ ಏಕೈಕ ಆಶಾ ಸ್ಥಾನವಾಗಿದೆ.
(ವಿವೇಕಾನಂದರು ಜೂನ್ 10, 1898ರಲ್ಲಿ ಅಲ್ಮೊರಾದಿಂದ ಶಿಷ್ಯ ಮಹಮದಾನಂದನಿಗೆ ಬರೆದ ಪತ್ರ-ಮಹಮ್ಮದ್ ಸರ್ಫರಾಝ್ ಎಂಬವರು ವಿವೇಕಾನಂದರ ಶಿಷ್ಯರಾಗಿದ್ದರು. ಅವರಿಗೆ ವಿವೇಕಾನಂದರು ಮಹಮದಾನಂದ ಎಂದು ಹೆಸರು ನೀಡಿದ್ದರು)
***
ಹೆಚ್ಚು ಯೋಗ್ಯತೆಯಿದ್ದರೆ
ಹೇ ಬ್ರಾಹ್ಮಣರೇ, ವಂಶಪಾರಂಪರ್ಯದ ಕಾರಣದಿಂದ ಬ್ರಾಹ್ಮಣರಿಗೆ ಅಸ್ಪೃಶ್ಯರಿಗಿಂತ ಹೆಚ್ಚು ಶೈಕ್ಷಣಿಕ ಯೋಗ್ಯತೆಯಿದ್ದರೆ ಅಸ್ಪೃಶ್ಯರ ಶಿಕ್ಷಣಕ್ಕೆ ನಿಮ್ಮೆಲ್ಲ ಹಣವನ್ನೂ ಖರ್ಚು ಮಾಡಿ... ಪ್ರತಿಯೊಬ್ಬ ಮಹಿಳೆ, ಪುರುಷ ಮತ್ತು ಮಗು - ಜಾತಿ, ಕುಲ ಗೋತ್ರಗಳ ಭೇದವಿಲ್ಲದೆ, ದುರ್ಬಲ-ಸಬಲ ಎಂಬ ವ್ಯತ್ಯಾಸವಿಲ್ಲದೆ, ಉಚ್ಚ-ನೀಚ ಎಂದು ನೋಡದೆ, ಪ್ರತಿಯೊಬ್ಬರಲ್ಲೂ ಅನಂತಾತ್ಮನಿದ್ದಾನೆಂದು ಅರಿಯಿರಿ
(ವಿವೇಕಾನಂದರ ಕೃತಿ ಶ್ರೇಣಿ: ಸಂಪುಟ-5)