ರೇಷ್ಮೆ ಬೆಳೆಗಾರನ ಮೇಲೆ ದೌರ್ಜನ್ಯ ಎಸಗಿದ ರೀಲರ್ ವಿರುದ್ಧ ಎಫ್‍ಐಆರ್: ಸಚಿವ ಡಾ.ನಾರಾಯಣಗೌಡ

Update: 2022-01-15 13:50 GMT

ಬೆಂಗಳೂರು, ಜ.15: ರಾಮನಗರ ರೇಷ್ಮೆ  ಮಾರುಕಟ್ಟೆಯಲ್ಲಿ ರೈತನ ಮೇಲೆ ದೌರ್ಜನ್ಯ ಎಸಗಿದ್ದ ರೀಲರ್ ವಿರುದ್ಧ ರೇಷ್ಮೆ , ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರ ಸೂಚನೆಯಂತೆ ಕೇಸ್ ದಾಖಲಾಗಿದೆ.

ಜ.13ರಂದು ಹಾವೇರಿ ಮೂಲದ ವಿರೂಪಾಕ್ಷಪ್ಪ ಎಂಬುವರು ರಾಮನಗರ ಮಾರುಕಟ್ಟೆಗೆ ರೇಷ್ಮೆ ಗೂಡನ್ನು ತಂದಿದ್ದರು. ಹರಾಜಿನಲ್ಲಿ ರೇಷ್ಮೆ  ಗೂಡು ಖರೀದಿಸಿದ್ದ ಮುನೀರ್ ಅಹ್ಮದ್ ಎಂಬ ರೀಲರ್ ರೈತನ ಮೇಲೆ ದೌರ್ಜನ್ಯ ಎಸಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದ ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾರಾಯಣಗೌಡ, ಆಸ್ಪತ್ರೆಯಿಂದಲೇ ಅಧಿಕಾರಿಗಳ ಜೊತೆ ಮಾತನಾಡಿ ಕೂಡಲೇ ಆತನ ವಿರುದ್ಧ ಕೇಸ್ ದಾಖಲಿಸುವಂತೆ ಸೂಚಿಸಿದ್ದರು. ಅದರಂತೆ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ರೇಷ್ಮೆ ಬೆಳೆಗಾರರ ಹಿತ ಕಾಯುವುದಕ್ಕೆ ಸರಕಾರ ಬದ್ದವಾಗಿದೆ. ರೇಷ್ಮೆ  ಬೆಳೆಗಾರರಿಗೆ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಎಂದು ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಲು ಐಡಿ ಕಾರ್ಡ್, ಸಿಸಿ ಕ್ಯಾಮರ ಅಳವಡಿಕೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.

ಹಾಗಿದ್ದರೂ ಕೆಲವು ರೀಲರ್‍ಗಳು ಈ ರೀತಿಯ ದೌರ್ಜನ್ಯ ಎಸಗುತ್ತಿರುವುದು ಗಮನಕ್ಕೆ ಬಂದಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ರೇಷ್ಮೆ ಬೆಳೆಗಾರರಿಗೆ ಯಾವುದೇ ರೀತಿ ತೊಂದರೆ ಆಗುವುದಕ್ಕೆ ಬಿಡುವುದಿಲ್ಲ ಎಂದು ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News