ಸಚಿವ ಸುನೀಲ್ ಕುಮಾರ್ ಸುಳ್ಳು ಹೇಳುವುದನ್ನೂ ಸಂಸ್ಕೃತಿಯ ಭಾಗ ಎಂದುಕೊಂಡಿದ್ದಾರೆ : ದಿನೇಶ್ ಅಮಿನ್ ಮಟ್ಟು
ಕೇಂದ್ರ ಸರಕಾರ ಗಣರಾಜ್ಯೋತ್ಸವ ಪೆರೇಡ್ ಗೆ ನಾರಾಯಣ ಗುರು ಸ್ಥಬ್ಧಚಿತ್ರ ತಿರಸ್ಕರಿಸಿದ ವಿವಾದಕ್ಕೆ ಸಂಬಂಧಿಸಿ ಸಚಿವ ಸುನೀಲ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ದಿನೇಶ್ ಅಮಿನ್ ಮಟ್ಟು ಅವರು ''ಸಚಿವ ಸುನೀಲ್ ಕುಮಾರ್ ಸುಳ್ಳು ಹೇಳುವುದನ್ನೂ ಸಂಸ್ಕೃತಿಯ ಭಾಗ ಎಂದುಕೊಂಡಿದ್ದಾರೆ'' ಎಂದು ಫೇಸ್ಬುಕ್ ಪೋಸ್ಟ್ ನಲ್ಲಿ ತಿರುಗೇಟು ನೀಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರ್ ಅವರು ಸುಳ್ಳು ಹೇಳುವುದು ಕೂಡಾ ಸಂಸ್ಕೃತಿಯ ಭಾಗ ಎಂದು ತಿಳಿದುಕೊಂಡಂತೆ ಕಾಣುತ್ತಿದೆ. ಗಣರಾಜ್ಯೋತ್ಸವದ ಪರೇಡ್ ನಲ್ಲಿ ಪ್ರತಿಯೊಂದು ರಾಜ್ಯದ ಸ್ತಬ್ಧಚಿತ್ರಕ್ಕೆ ಮೂರು ವರ್ಷಗಳಿಗೊಮ್ಮೆ ಮಾತ್ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸುವ ಅವಕಾಶ ನೀಡುವ ನಿಯಮವಿದೆ ಎಂದು ಸುನೀಲ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ನಾರಾಯಣ ಗುರುಗಳ ಸ್ಥಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿದ ಕೇಂದ್ರದ ಬಿಜೆಪಿ ಸರ್ಕಾರದ ವಿದ್ರೋಹವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಅಮಿನ್ ಮಟ್ಟು ಫೇಸ್ ಬುಕ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸತತ ಐದು ವರ್ಷಗಳ ಕಾಲ ಕರ್ನಾಟಕದ ಸ್ತಬ್ಧಚಿತ್ರಗಳು ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸಿರುವುದನ್ನು ಸುನೀಲ್ ಕುಮಾರ್ ಮರೆತುಬಿಟ್ಟಂತೆ ಕಾಣುತ್ತಿದೆ.
ಸಚಿವರು ಉಲ್ಲೇಖಿಸಿರುವ ನಿಯಮ ಆಗ ಜಾರಿಯಲ್ಲಿರಲಿಲ್ಲವೇ? ಈ ನಿಯಮವನ್ನು ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ನಿರಾಕರಿಸುವ ದುರುದ್ದೇಶದಿಂದ ಇದೇ ವರ್ಷ ಹೊಸದಾಗಿ ರೂಪಿಸಲಾಗಿದೆಯೇ? ಇದನ್ನು ಸಚಿವರು ಸ್ಪಷ್ಟಪಡಿಸಬೇಕು.
ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ತಂಡ ಸಚಿವರು ಹೇಳಿರುವ ನಿಯಮವನ್ನು ಯಾಕೆ ಉಲ್ಲೇಖಿಸಿಲ್ಲ? ಯಾಕೆ ಅವರು ನಾರಾಯಣ ಗುರುಗಳ ಸ್ಥಬ್ಧಚಿತ್ರಕ್ಕೆ ಬದಲಾಗಿ ಶಂಕರಾಚಾರ್ಯರ ಸ್ಥಬ್ಧಚಿತ್ರವನ್ನು ಸೂಚಿಸಿದ್ದರು? ಈ ಪ್ರಶ್ನೆಗಳಿಗೆ ಸಚಿವ ಸುನೀಲ್ ಕುಮಾರ್ ಉತ್ತರಿಸಬೇಕಾಗುತ್ತದೆ.
ತಾವು ಉಲ್ಲೇಖಿಸಿರುವ ನಿಯಮದ ಮೂಲವನ್ನು ಸುನೀಲ್ ಕುಮಾರ್ ಬಹಿರಂಗ ಪಡಿಸಿ ತನ್ನ ಮಾತನ್ನು ಸಮರ್ಥಿಸಿಕೊಳ್ಳಬೇಕು, ಇಲ್ಲದೆ ಇದ್ದರೆ ತಾವು ಹೇಳಿದ ಸುಳ್ಳಿಗಾಗಿ ಅವರು ಸಾರ್ವಜನಿಕರು ಮತ್ತು ನಾರಾಯಣ ಗುರುಗಳ ಅನುಯಾಯಿಗಳ ಕ್ಷಮೆ ಕೇಳಬೇಕು.
ಸುನೀಲ್ ಕುಮಾರ್ ಒಬ್ಬ ಜವಾಬ್ದಾರಿಯುತ ಸಚಿವರು. ಅವರು ಇಲ್ಲದ ನಿಯಮಗಳನ್ನು ಸ್ವಯಂಸೃಷ್ಟಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ನಾರಾಯಣ ಗುರುಗಳ ಅನುಯಾಯಿ ಎಂದು ಹೇಳಿಕೊಳ್ಲುತ್ತಿರುವ ಸುನೀಲ್ ಕುಮಾರ್ ಮೊದಲು ಆಗಿರುವ ತಪ್ಪನ್ನು ಪ್ರಧಾನ ಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟು ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡುವಂತೆ ಮಾಡಬೇಕು ಎಂದು ದಿನೇಶ್ ಅಮಿನ್ ಮಟ್ಟು ಅವರು ಆಗ್ರಹಿಸಿದ್ದಾರೆ.
ಅವರ ಫೇಸ್ ಬುಕ್ ಪೋಸ್ಟ್ ಇಲ್ಲಿದೆ-