ಐಸಿಸಿ ವರ್ಷದ ಟ್ವೆಂಟಿ-20 ತಂಡದಲ್ಲಿ ಭಾರತದ ಯಾವ ಆಟಗಾರನೂ ಇಲ್ಲ!

Update: 2022-01-19 15:35 GMT

 ದುಬೈ, ಜ.19: 2021ರಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತದ ಖ್ಯಾತ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಐಸಿಸಿ ವರ್ಷದ ಪುರುಷರ ಟ್ವೆಂಟಿ-20 ತಂಡದಲ್ಲಿ ಭಾರತದ ಯಾವೊಬ್ಬ ಆಟಗಾರನೂ ಸ್ಥಾನ ಪಡೆಯದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

ಬಲಗೈ ಆಟಗಾರ್ತಿ ಮಂಧಾನ ಭಾರತ ಕ್ರಿಕೆಟ್ ತಂಡದ ಉಪ ನಾಯಕಿಯಾಗಿದ್ದು, 2021ರಲ್ಲಿ 31.87ರ ಸರಾಸರಿಯಲ್ಲಿ ಒಟ್ಟು 255 ರನ್ ಗಳಿಸಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿ ಗಮನ ಸೆಳೆದಿದ್ದರು. 25ರ ಹರೆಯದ ಮಂಧಾನ ತಾನು ಆಡಿರುವ 9 ಪಂದ್ಯಗಳ ಪೈಕಿ 2 ಅರ್ಧಶತಕಗಳನ್ನು ಗಳಿಸಿದ್ದರು. 131.44 ಸ್ಟ್ರೈಟ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಮಂಧಾನ ಪ್ರತಿ ಬಾರಿಯೂ ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದರು. ಐಸಿಸಿ ತಂಡದಲ್ಲಿ ಇಂಗ್ಲೆಂಡ್‌ನ ಹಲವು ಆಟಗಾರ್ತಿಯರಿದ್ದು, ಮಂಧಾನ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ.

ಐಸಿಸಿ ವರ್ಷದ ಪುರುಷರ ಟ್ವೆಂಟಿ-20 ತಂಡದಲ್ಲಿ ಭಾರತ ಪ್ರತಿನಿಧಿಸುವ ಯಾವ ಆಟಗಾರನೂ ಇಲ್ಲ್ಲ. ನಾಯಕ ಬಾಬರ್ ಆಝಂ ಸಹಿತ ಪಾಕ್‌ ನ ಮೂವರು ಆಟಗಾರರು ತಂಡದಲ್ಲಿದ್ದಾರೆ. ಆಝಂರಲ್ಲದೆ ಮುಹಮ್ಮದ್ ರಿಝ್ವಾನ್ ಹಾಗೂ ಶಾಹೀನ್ ಅಫ್ರಿದಿ ಕೂಡ ತಂಡದಲ್ಲಿದ್ದಾರೆ. ಈ ಇಬ್ಬರು ಆಟಗಾರರು ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಟ್ವೆಂಟಿ-20 ವಿಶ್ವಕಪ್ ನಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದ ಬಾಬರ್ ಆಝಂ ನಾಯಕನಾಗಿರುವ ಐಸಿಸಿ ವರ್ಷದ ಟ್ವೆಂಟಿ-20 ತಂಡದಲ್ಲಿ ಆಸ್ಟ್ರೇಲಿಯದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಹಾಗೂ ವೇಗದ ಬೌಲರ್ ಜೋಶ್ ಹೇಝಲ್‌ವುಡ್, ದಕ್ಷಿಣ ಆಫ್ರಿಕಾದ ಏಡೆನ್ ಮರ್ಕ್ರಮ್, ಡೇವಿಡ್ ಮಿಲ್ಲರ್ ಹಾಗೂ ತಬ್ರೈಝ್ ಶಂಸಿ ಅವರಿದ್ದಾರೆ. ಇಂಗ್ಲೆಂಡ್‌ನ ವಿಕೆಟ್‌ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಕೂಡ ತಂಡದಲ್ಲಿದ್ದಾರೆ.

 ಬಾಬರ್ 2021ರಲ್ಲಿ 29 ಪಂದ್ಯಗಳಲ್ಲಿ 939 ರನ್ ಗಳಿಸಿದ್ದು 1 ಶತಕ ಹಾಗೂ 9 ಅರ್ಧಶತಕ ಗಳಿಸಿದ್ದಾರೆ. ಯುಎಇನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಪಾಕ್ ತಂಡವನ್ನು ಸೆಮಿ ಫೈನಲ್ ತನಕ ತಲುಪಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.

ಐಸಿಸಿ ವರ್ಷದ ಪುರುಷರ ಟ್ವೆಂಟಿ-20 ತಂಡ: ಜೋಸ್ ಬಟ್ಲರ್(ಇಂಗ್ಲೆಂಡ್), ಮುಹಮ್ಮದ್ ರಿಝ್ವಾನ್(ಪಾಕಿಸ್ತಾನ), ಬಾಬರ್ ಆಝಂ(ನಾಯಕ, ಪಾಕಿಸ್ತಾನ)ಏಡೆನ್ ಮರ್ಕ್ರಮ್(ದ.ಆಫ್ರಿಕಾ) , ಮಿಚೆಲ್ ಮಾರ್ಷ್(ಆಸ್ಟ್ರೇಲಿಯ) , ಡೇವಿಡ್ ಮಿಲ್ಲರ್(ದ.ಆಫ್ರಿಕಾ), ತಬ್ರೈಝ್ ಶಂಸಿ(ದ.ಆಫ್ರಿಕಾ), ಜೋಶ್ ಹೇಝಲ್‌ವುಡ್(ಆಸ್ಟ್ರೇಲಿಯ), ವಿನಿಂದು ಹಸರಂಗ(ಶ್ರೀಲಂಕಾ), ಮುಸ್ತಫಿಝರ್ರಹ್ಮಾನ್(ಬಾಂಗ್ಲಾ), ಶಾಹೀನ್ ಅಫ್ರಿದಿ(ಪಾಕ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News