‘ಬಾಪೂ’ ಬಹು ಮಾಧ್ಯಮ ರಂಗ ಪ್ರಸ್ತುತಿ

Update: 2022-01-22 04:38 GMT

ಏನಿದು ಬಹುಮಾಧ್ಯಮ ರಂಗಪ್ರಸ್ತುತಿ ಅನ್ನುವ ಕುತೂಹಲದಲ್ಲೇ ‘ಬಾಪೂ’ (ರಚನೆ-ನಿರ್ದೇಶನ: ಎನ್.ಎಸ್. ಶಂಕರ್) ಪ್ರದರ್ಶನಕ್ಕೆ ಹೋದಾಗ ನನ್ನ ಮನಸ್ಸಿನಲ್ಲಿ ನೂರೆಂಟು ಪ್ರಶ್ನೆಗಳು. ಗಾಂಧೀಜಿಯವರ ಜೀವನಶೈಲಿ ಅತ್ಯಂತ ಸರಳವಾಗಿದ್ದರೂ ಅವರ ಯೋಚನೆಗಳು ಸಂಕೀರ್ಣವಾಗಿದ್ದವು. ಬಹು ಪದರಗಳಲ್ಲಿ ಯೋಚಿಸಿ ಎಲ್ಲವನ್ನೂ ಯೋಜಿಸಿ ಕಾರ್ಯೋನ್ಮುಖರಾದವರು ಗಾಂಧೀಜಿ. ಆ ಹಿನ್ನೆಲೆಯಲ್ಲಿ ನೋಡಿದಾಗ ಅವರ ಸಂಕೀರ್ಣ ಯೋಚನೆಗಳನ್ನು ಸರಳವಾಗಿ, ಅಷ್ಟೇ ಪರಿಣಾಮಕಾರಿಯಾಗಿ ನಿರೂಪಿಸಲು ಇಂದಿನ ಕಾಲಘಟ್ಟದಲ್ಲಿ ಬಹುಮಾಧ್ಯಮ ಪ್ರಸ್ತುತಿಯೇ ಸೂಕ್ತ ಎಂದು ಮನದಟ್ಟು ಮಾಡಿಸಿತು ಈ ಪ್ರಯೋಗ!

ಗಾಂಧೀಜಿಯವರ ಆತ್ಮಾವಲೋಕನದ ಪುಟಗಳನ್ನು ತಿರುವಿ ಹಾಕಿದಂತೆ ಎನ್.ಎಸ್. ಶಂಕರ್ ‘ಬಾಪೂ’ ಪ್ರಯೋಗವನ್ನು ರೂಪಿಸಿದ್ದಾರೆ. ದಕ್ಷಿಣ ಆಫ್ರಿಕಾ ರೈಲು ಪಯಣದ ಅನುಭವ ಅವರನ್ನು ನಾಗರಿಕ ಅಸಹಕಾರ ಚಳವಳಿಯ ಮುಂದಾಳತ್ವ ವಹಿಸಲು ಪ್ರೇರೇಪಿಸಿತು. ಭಾರತಕ್ಕೆ ಹಿಂದಿರುಗಿದ ಮೇಲೆ ದಂಡಿ ಯಾತ್ರೆ ಮೂಲಕ ಬ್ರಿಟಿಷರ ವಿರುದ್ಧ ಹೂಡಿದ ಅಹಿಂಸಾ ಸಮರವನ್ನು ಇಡೀ ವಿಶ್ವವೇ ಬೆರಗಿನಿಂದ ನೋಡುವಂತಾಯಿತು. ಆನಂತರದ ಎಲ್ಲಾ ಹೋರಾಟಗಳ ಬಗ್ಗೆ ಅಲ್ಲಲ್ಲಿ ನೋಡಿದ್ದೇವೆ, ಓದಿದ್ದೇವೆ. ಬಾಪೂ ಪ್ರಸ್ತುತಿಯಲ್ಲಿ ಅವೆಲ್ಲವೂ ರಂಗದ ಮೇಲೆ ಬರುತ್ತವೆ. ಆದರೆ ಎಲ್ಲಕ್ಕಿಂತ ಪ್ರಮುಖವಾದದ್ದು ಗಾಂಧೀಜಿ ಯಾವುದೇ ಸರಕಾರದ ಅಥವಾ ಅಧಿಕಾರಕೇಂದ್ರದ ನೆರವಿಲ್ಲದೆ, ಕೇವಲ ತಮ್ಮ ಆಪ್ತ ಬಳಗವನ್ನು ಕಟ್ಟಿಕೊಂಡು ಬಂಗಾಳದ ನೌಖಾಲಿಯಲ್ಲಿ ಕೈಗೊಂಡ ಶಾಂತಿಯಾತ್ರೆ.

ಭಾರತ ವಿಭಜನೆಯ ಹೊಸ್ತಿಲಲ್ಲಿ, ಇಡೀ ದೇಶದಲ್ಲಿ ಅಶಾಂತಿ ಭುಗಿಲೆದ್ದ ದಿನಗಳಿಂದ ಆರಂಭಗೊಂಡು ಸ್ವಾತಂತ್ರ್ಯ ದೊರಕಿದ ನಂತರವೂ ಗಾಂಧೀಜಿ ಹತ್ಯೆಯಾಗುವ ದಿನದವರೆಗೆ ಆ ಮಹಾತ್ಮ ಅನುಭವಿಸಿದ ಕಠಿಣ ಸವಾಲುಗಳು, ಸಮಸ್ಯೆಗಳು, ಸನ್ನಿವೇಶಗಳನ್ನು ಒಳಗೊಂಡು ಬಾಪೂ ಚಿತ್ರಿಸುವ ವಿವರಗಳನ್ನು ಕಂಡಾಗ ಭಾವೋದ್ವೇಗಗೊಳ್ಳುತ್ತೇವೆ. ವಿಶೇಷವಾಗಿ ನೌಖಾಲಿಯ ಗಲಭೆಗ್ರಸ್ತ ಪ್ರದೇಶಗಳಲ್ಲಿ ಗಾಂಧೀಜಿ ಏಕಾಂಗಿಯಾಗಿ ಹೋಗಿ ನಿಂತ ಪರಿಗೆ ಮೈ ಜುಮ್ಮೆನ್ನುತ್ತದೆ.

ನೌಖಾಲಿ ಮುಸ್ಲಿಂ ಬಾಹುಳ್ಯದ ಪ್ರದೇಶ. ಹಿಂದೂಗಳು ಅಲ್ಲಿ ಅಲ್ಪಸಂಖ್ಯಾತರು. ಅಲ್ಲಿ ಧರ್ಮದ ಹೆಸರಿನ ಕ್ರೌರ್ಯ ಎದೆ ನಡುಗಿಸುವಷ್ಟು ರುದ್ರ ಭೀಕರವಾಗಿದ್ದಾಗ, ಗಾಂಧೀಜಿ ಒಬ್ಬರೇ ಆ ಸ್ಥಳಕ್ಕೆ ತೆರಳಿ ‘‘ಹಿಂದೂಗಳ ರಕ್ಷಣೆಯ ಜವಾಬ್ದಾರಿ ನಿಮ್ಮದು. ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ನಿಮ್ಮ ಕೆಲಸ’’ ಎಂದು ಮುಸಲ್ಮಾನರಿಗೆ ಹೇಳುವಾಗ ಬಾಪೂಜಿ ಮನಸ್ಥಿತಿ ಹೇಗಿರಬಹುದು, ರಕ್ತ ಕುದಿಯುತ್ತಿದ್ದ ಹಿಂದೂ- ಮುಸಲ್ಮಾನರ ಮನಸ್ಥಿತಿ ಹೇಗಿರಬೇಕು.... ಇವೆಲ್ಲ ಸನ್ನಿವೇಶಗಳು ರಂಗದ ಮೇಲೆ ವಿಶದವಾಗುತ್ತವೆ. ಒಂದು ರೀತಿಯಲ್ಲಿ point of no return ಎನ್ನುವಂತಹ ಪರಮ ಬಿಕ್ಕಟ್ಟಿನ ಸನ್ನಿವೇಶ. ಪ್ರತಿಯೊಬ್ಬ ಪ್ರೇಕ್ಷಕನ ಮನಸ್ಸಿನಲ್ಲಿ ಮುಂದೆ ಏನು, ಹೇಗೆ ಅನ್ನುವ ಪ್ರಶ್ನೆ, ಗಾಢ ಆತಂಕ. ರಂಗಮಂದಿರದಲ್ಲಿ ಕೂತ ಪ್ರೇಕ್ಷಕನಿಗೇ ಹೀಗಾದರೆ, ಅಂದು ನೌಖಾಲಿಯಲ್ಲಿ ಗಾಂಧೀಜಿ ಮತ್ತು ಮುಸಲ್ಮಾನರು ಮತ್ತು ಹಿಂದೂಗಳು ಏನೇನೆಲ್ಲ ಅನುಭವಿಸಿರಬಹುದು?!.... ಇಂತಹ ಹಲವಾರು ಸನ್ನಿವೇಶಗಳನ್ನು ಶಂಕರ್ ಸೃಷ್ಟಿಸುವ ಮೂಲಕ ನೋಡುಗರನ್ನು ಮೂಕವಿಸ್ಮಿತರಾಗಿಸುತ್ತಾರೆ. ಅವರ ಬರವಣಿಗೆಯ ತಾಪ ಪ್ರೇಕ್ಷಕರ ಎದೆಯನ್ನೂ ಬಿಸಿಯಾಗಿಸುತ್ತದೆ.

ಪ್ರಸ್ತುತಿ ಅತ್ಯಂತ ವಿರಳ ಎನಿಸುವಂತಹ ಅಪರೂಪದ ಸಮಕಾಲೀನ ಪ್ರಯೋಗ ಈ ‘ಬಾಪೂ’. ಮೂಲದಲ್ಲಿ ಇದು ರಂಗದ ಮೇಲೆ ನಡೆಯುವುದರಿಂದ ನಾಟಕವೆನಿಸಿದರೂ ರಂಗದ ನಡುವಣ ಪರದೆಯ ಮೇಲೆ ಚಲನಚಿತ್ರಗಳು, ಸ್ಥಿರ ಚಿತ್ರಗಳು, ಸಂದರ್ಶನದ ತುಣುಕುಗಳು, ಧ್ವನಿಮುದ್ರಿಕೆಗಳು, ಸಾಕ್ಷ್ಯಚಿತ್ರಗಳು, ಪೋಸ್ಟರ್‌ಗಳು, ಇತರ ದೃಶ್ಯಾವಳಿಗಳ ಜೊತೆಗೆ ಜೀವತಳೆದು ಅಭಿನಯಿಸುವ ಕಲಾವಿದರ ಲೈವ್ ಶೋ ಇದು! ಇವೆಲ್ಲದರ ಹದವಾದ ಮಿಶ್ರಣವೇ ಬಾಪೂ. ಬಹುಶಃ ಇಂದಿನ ಡಿಜಿಟಲ್ ಯುಗದ ಕಾರ್ಪೊರೇಟ್ ಶೈಲಿಯ advanced PPT presentation ಮಾದರಿಯಲ್ಲಿ ಅಪ್‌ಡೇಟ್ ಆಗಿದೆ ಬಾಪೂ ರಂಗಪ್ರಸ್ತುತಿ! ನಾನು ನೋಡಿದ್ದು ಬೆಂಗಳೂರಿನಲ್ಲಿ ನಡೆದ ಮೊದಲ ಪ್ರದರ್ಶನ. ಕಲಾವಿದರ ದಂಡೇ ಅಲ್ಲಿತ್ತು. ಮುಖ್ಯ ಭೂಮಿಕೆಯಲ್ಲಿನ ಕೆಲವು ಕಲಾವಿದರು ಅಲ್ಲಲ್ಲಿ ಗಮನ ಸೆಳೆದರೆ, ಇನ್ನೂ ಚೆನ್ನಾಗಿ ಅಭಿನಯಿಸಬಹುದಿತ್ತು ಎಂದು ಮತ್ತೂ ಕೆಲವೆಡೆ ಅನಿಸಿತು. ಕೋವಿಡ್ ಕಾಲದಲ್ಲಿ ರಂಗಪ್ರದರ್ಶನ, ತಾಲೀಮು ನಡೆಸುವುದೇ ದೊಡ್ಡ ಸವಾಲೆನಿಸಿದರೂ ಇನ್ನೂ ಸ್ವಲ್ಪಎನರ್ಜಿ ಬೇಕಿತ್ತು ಎನಿಸಿದ್ದು ಸುಳ್ಳಲ್ಲ.

ಆದರೆ ಇಡೀ ಪ್ರಸ್ತುತಿಯ ಸಂಶೋಧನೆ ಹಾಗೂ ರಚನೆ, ಅದಕ್ಕಾಗಿ ಬಳಸಲಾದ ದೃಶ್ಯಗಳು, ಚಿತ್ರಗಳೇ ಮುಂತಾಗಿ- ಒಟ್ಟಾರೆ ಕಥಾ ಸಂವಿಧಾನವೇ ಅತ್ಯಂತ ಕ್ರಿಯಾಶೀಲ ನಿರ್ದೇಶಕನೊಬ್ಬನ ಮನಸ್ಸನ್ನು ಪರಿಚಯಿಸುವಂತಿದೆ. ನಾಟಕಕಾರನಿಗೆ ತಾನು ಆರಿಸಿಕೊಂಡ ವಿಷಯದ ಮೇಲಿನ ಹಿಡಿತವನ್ನು ಸಾಬೀತುಪಡಿಸುವಂತಿದೆ.

ಸರ್ ರಿಚರ್ಡ್ ಆಟೆನ್‌ಬರೋ ಅವರ ‘ಗಾಂಧಿ’ ಚಿತ್ರದ ಹಲವಾರು ತುಣುಕುಗಳು ‘ಬಾಪೂ’ ರಂಗ ಪ್ರಸ್ತುತಿಯಲ್ಲಿ ಅಚ್ಚುಕಟ್ಟಾಗಿ ಮಿಳಿತವಾಗಿವೆ. ರಂಗದ ಮೇಲೆ ಕಲಾವಿದರು ನಟಿಸುತ್ತಿರುವಾಗಲೇ ಆ ದೃಶ್ಯಕ್ಕೆ ಅನುಗುಣವಾಗಿ ಹಿಂದಿನ ಪರದೆಯ ಮೇಲೆ ಗಾಂಧಿ ಚಿತ್ರದ ತುಣುಕುಗಳು, ದೇವನೂರ ಮಹಾದೇವ, ಕಡಿದಾಳು ಶಾಮಣ್ಣ, ಎಚ್.ಎಸ್. ದೊರೆಸ್ವಾಮಿಯವರ ಸಂದರ್ಶನದ ತುಣುಕು, ಗಾಂಧೀಜಿಯವರ ನೆಚ್ಚಿನ ವೈಷ್ಣವ ಜನತೋ ಗೀತೆಯ ಕನ್ನಡ ಅವತರಣಿಕೆ, ಎಲ್ಲವೂ ಸಮಂಜಸವಾಗಿ, ಸುಲಲಿತವಾಗಿ ಬೆಸೆದುಕೊಂಡು ಮನಸ್ಸನ್ನು ತಟ್ಟುತ್ತದೆ.

ಗಾಂಧೀಜಿಯೊಡನೆ ಪಯಣ

ಶಾಲೆಯಲ್ಲಿ ಕಲೆಯುವಾಗ ಬಾಪೂ ಎಂದ ಕೂಡಲೇ ಮನಸ್ಸಿಗೆ ಬರುತ್ತಿದ್ದುದು- ಒಂದು ಸೌಮ್ಯ ವ್ಯಕ್ತಿತ್ವದ ಚಿತ್ರಣ. ಪಠ್ಯ ಪುಸ್ತಕದಲ್ಲಿ, ಫೋಟೊಗಳಲ್ಲಿ ಕಾಣುವುದೆಲ್ಲ ಗಾಂಧೀಜಿಯವರ ನಗುಮುಖದ ಚಿತ್ರಗಳೇ. ಆ ಮುಗುಳ್ನಗೆಯ ಹಿಂದಿರುವ ಶಕ್ತಿಯ ಅರಿವು ನಮಗೆ ಬಾಲ್ಯದಲ್ಲಿ ಅಷ್ಟಾಗಿರಲಿಲ್ಲ. ಬ್ರಿಟಿಷರ ವಿರುದ್ಧ, ಹಿಂಸೆಯ ವಿರುದ್ಧ ಹೋರಾಡಿದ ಮುಖ ಎಂದಷ್ಟೇ ನಮಗೆ ಪರಿಚಯವಾಗಿದ್ದು. ಆದರೆ ಆ ಮುಖದ ಹಿಂದೆ ಅದೆಂತಹ ಅಸೀಮ ಶಕ್ತಿಯಿತ್ತು ಎಂದು ಅರಿಯಬೇಕಾದರೆ, ಅವರು ತಮ್ಮನ್ನು ತಾವೇ ಅತ್ಯಂತ ಕಠಿಣ ಪರೀಕ್ಷೆಗಳಿಗೆ ಒಡ್ಡಿಕೊಂಡಿದ್ದನ್ನು ಗಮನಿಸಬೇಕು. ಅವೆಲ್ಲವೂ ಅಹಿಂಸಾ ಮಾರ್ಗದ ಶಕ್ತಿಯನ್ನು ಶೋಧಿಸುವ ಮತ್ತು ಸತ್ಯವನ್ನು ಹುಡುಕುವ ದಾರಿಗಳಾಗಿದ್ದವು. ಅತ್ಯಂತ ದುರ್ಗಮ ಹಾದಿ ಅದು. ಈ ಆತ್ಮಪರೀಕ್ಷೆಗಳ ಪರಾಕಾಷ್ಠೆ ಎಂದರೆ, ಅವರು ಭಾರತದ ಎರಡು ಕಣ್ಣುಗಳು ಎಂದು ಕರೆದಿದ್ದ ಹಿಂದೂ ಮತ್ತು ಮುಸ್ಲಿಮರ ನಡುವೆ ಘೋರ ಸಂಘರ್ಷ ಆರಂಭವಾದಾಗ, ಒಡೆದ ಹೃದಯಗಳನ್ನು ಒಗ್ಗೂಡಿಸುವ ಸಲುವಾಗಿ ಬಾಪೂಜಿ ತಮ್ಮನ್ನೇ ಬಲಿಗೊಡ್ಡಿ ನಡೆಸಿದ ಪ್ರಯೋಗ.

ಭಾರತದ ವಿಭಜನೆಯ ದುರಂತ, ಗಾಂಧೀಜಿಯವರಿಗೆ ನೆತ್ತರ ರೂಪದಲ್ಲಿ, ಸಾವು, ನೋವು, ದೌರ್ಜನ್ಯ, ಅಪಮಾನ, ಅಪನಂಬಿಕೆ, ನಿರ್ದಾಕ್ಷಿಣ್ಯಗಳ ಸ್ವರೂಪದಲ್ಲಿ ನೌಖಾಲಿಯಲ್ಲಿ ಗೋಚರವಾಗಿರಬೇಕು. ಆ ಅನುಭವ ಮತ್ತು ಬಾಪೂ ಅದಕ್ಕೆ ಎದೆಯೊಡ್ಡಿದ ರೀತಿ ಅರಿತಾಗ ಗಾಂಧೀಜಿಯವರನ್ನು ಯಾಕೆ ಮಹಾತ್ಮ ಎಂದು ಕರೆದರು ಎಂಬುದು ಸ್ಪಷ್ಟವಾಗುತ್ತದೆ. ಆ ಅಗಾಧ ಅನುಭವವನ್ನು, ಅದರ ಸಂಕೀರ್ಣತೆಯನ್ನು ಬಹುಮಾಧ್ಯಮ ಪರಿಕರಗಳನ್ನು ಬಳಸಿ ನಿರೂಪಿಸುವ ಮೂಲಕ ‘ಬಾಪೂ’ ರಂಗಪ್ರಸ್ತುತಿಯನ್ನು ಒಂದು ಅವಿಸ್ಮರಣೀಯ ಕ್ಲಾಸಿಕ್ ಆಗಿಸಿದ್ದಾರೆ ಎನ್.ಎಸ್. ಶಂಕರ್.

ಅಂತೂ ಬಹುಕಾಲ ಪ್ರೇಕ್ಷಕನ ಮನಸ್ಸಿನಲ್ಲಿ ಉಳಿಯುವ ರಂಗಪ್ರಸ್ತುತಿ ‘ಬಾಪೂ’.

Writer - ಎಸ್.ಡಿ. ಅರವಿಂದ್

contributor

Editor - ಎಸ್.ಡಿ. ಅರವಿಂದ್

contributor

Similar News

ಜಗದಗಲ
ಜಗ ದಗಲ