ಧೃತರಾಷ್ಟ್ರ ಪ್ರೇಮ
ಮಹಾಭಾರತದಲ್ಲಿ ಕೌರವರ ತಂದೆ ಧೃತರಾಷ್ಟ್ರ ನಿಜವಾಗಿ ಕುರುಡನೋ ಅಥವಾ ಪಾತ್ರದ ಗುಣವಿಶೇಷವನ್ನು ನಿರೂಪಿಸಲು ಕುರುಡನಾಗಿಸಿರುವ ರೂಪಕವೋ, ಅದೇನೇ ಆಗಿರಲಿ, ಧೃತರಾಷ್ಟ್ರ ಪ್ರೇಮ ಎಂಬುದೊಂದು ತಮ್ಮವರ ಮೇಲಿನ ಮೋಹಕ್ಕೆ ಒಂದು ಸಂಕೇತವಾಗಿರುವುದಂತೂ ನಿಜ.
ತಮ್ಮ ಮಗು ಮತ್ತು ಇತರ ಮಗುವು ಜಗಳವಾಡಿದಾಗ ಉಂಟಾಗುವ ಸಂಘರ್ಷದಲ್ಲಿ ತಮ್ಮ ಮಗುವಿಗೆ ಏನೂ ತೊಂದರೆಯಾಗಬಾರದೆಂದು ಬಯಸುವ ತಂದೆ ಅಥವಾ ತಾಯಿ, ಆ ಆತಂಕದಲ್ಲಿಯೇ ತಮ್ಮ ಮಗುವಿನ ರಕ್ಷಣೆಗೆ ಹಾತೊರೆಯುವರು. ಈ ಆತುರದಲ್ಲಿ ಉಂಟಾಗುವ ಉದ್ವಿಗ್ನತೆ ಅವರಲ್ಲಿ ವಿವೇಚನೆಯ ಸಾಮರ್ಥ್ಯವನ್ನು ಮಂಕಾಗಿಸುವುದು. ಆಂಕ್ಸೈಟಿ ಡಿಸಾರ್ಡರಿಗೆ ಒಳಗಾಗುವ ವ್ಯಕ್ತಿಯು ವಿಶ್ಲೇಷಿಸುವ ಅಥವಾ ವಿವೇಚಿಸುವ ಸಮಚಿತ್ತವನ್ನು ಸಾಂದರ್ಭಿಕವಾಗಿಯಾದರೂ ಹೊಂದಿರುವುದಿಲ್ಲ. ಹಾಗಾಗಿ ತಮ್ಮ ಮಗುವನ್ನು ಬೆಂಬಲಿಸುವ ಮತ್ತು ಅದರ ಉಳಿಯುವಿಕೆಯನ್ನು ಭದ್ರಗೊಳಿಸುವ ಧಾವಂತಕ್ಕೆ ಒಳಗಾಗುವ ಪೋಷಕರು ಧೃತರಾಷ್ಟ್ರನಂತೆ ತಮ್ಮ ದುರ್ಯೋಧನ ಮತ್ತು ದುಶ್ಯಾಸನರನ್ನು ಸದಾ ಸಮರ್ಥಿಸಿಕೊಳ್ಳುತ್ತಲೇ ಇರುತ್ತಾರೆ. ಆ ತನ್ನ ದುರ್ಯೋಧನನಲ್ಲಿ ಧೃತರಾಷ್ಟ್ರ ತಾನು ಪೂರೈಸಿಕೊಳ್ಳಲಾಗದ ಹಲವು ಆಸೆಗಳನ್ನು ಪೂರ್ತಿಗೊಳಿಸಿಕೊಳ್ಳಬೇಕಾಗಿರುತ್ತದೆ. ಈಡೇರಿಸಿಕೊಳ್ಳಲಾಗದ ಕನಸುಗಳನ್ನು ನನಸು ಮಾಡಿಕೊಳ್ಳಬೇಕಾಗಿರುತ್ತದೆ. ಹೊಂದಲಾಗದ ಯಜಮಾನಿಕೆಯನ್ನು ಮತ್ತು ವೈಭವವನ್ನು ತನ್ನದೇ ಮುಂದುವರಿಯುವ ಜೈವಿಕಭಾಗದ ಮೂಲಕ ಆನಂದಿಸುವ ತೃಪ್ತಿಯನ್ನು ಪಡೆಯುವುದಾಗಿರುತ್ತದೆ. ಒಟ್ಟಾರೆ ಯಾವುದೇ ಸೂಕ್ಷ್ಮವಾದ ಕೊಂಡಿ ಬೆಸೆದುಕೊಂಡಿರಲಿ ತನ್ನದರ ಮೋಹ ಎಂಬುದನ್ನೇ ಧೃತರಾಷ್ಟ್ರ ಪ್ರೇಮ ಎಂದು ವ್ಯಾಖ್ಯಾನಿಸಲಾಗುವುದು.
ತನ್ನ ಮಕ್ಕಳು, ತನ್ನ ಮನೆ, ತನ್ನ ಸಿದ್ಧಾಂತ, ತನ್ನ ಮಾತು, ತನ್ನ ಧರ್ಮ; ಹೀಗೆ ಧೃತರಾಷ್ಟ್ರ ಪ್ರೇಮದ ಪರಿಧಿ ತಾನು ಗುರುತಿಸಿಕೊಂಡಿರುವ ಅಥವಾ ತನ್ನದು ಎಂದು ಅಂದುಕೊಂಡಿರುವ ಎಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹೋಗುವುದು. ಹಾಗೆಯೇ ಈ ಕುರುಡು ಧೃತರಾಷ್ಟ್ರ ತನ್ನ ಉದ್ಧಟ ಮಗ ದುರ್ಯೋಧನನಂತೆಯೇ ಇನ್ನೊಬ್ಬರ ಮಗನಾಗಿರುವ ಬಲ ಭೀಮನನ್ನು ಅಪ್ಪಿಕೊಂಡು ನಾಶಪಡಿಸಲು ಹೋದ. ಅದು ಪೋಸ್ಟ್ ಟ್ರಾಮಾಟಿಕ್ ಡಿಸಾರ್ಡರ್. ತನ್ನ ಮಗನ ಸಾವಿನ ನೋವನ್ನು ಭೀಮನ ನಾಶದ ಮೂಲಕ ಶಮನ ಮಾಡಿಕೊಳ್ಳುವ ಸೇಡಿನ ಮನಸ್ಥಿತಿ.
ತನ್ನದರ ವ್ಯಾಮೋಹ ಸಾಮಾನ್ಯವಾಗಿರುವ ತನ್ನ ದೃಷ್ಟಿಯನ್ನು ಕುರುಡು ಮಾಡುತ್ತದೆ. ಅವರಿಗೆ ಸಾಮಾನ್ಯ ನೋಟದಲ್ಲಿ ಎಲ್ಲವನ್ನೂ ನೋಡಲು ಸಾಧ್ಯವಾಗುವುದಿಲ್ಲ. ಹಿಜಾಬ್ ಧರಿಸಿ ಶಿಕ್ಷಣ ಸಂಸ್ಥೆಗೆ ಬಂದಾಗ ಸಾರ್ವಜನಿಕ ಕ್ಷೇತ್ರದಲ್ಲಿ ಧಾರ್ಮಿಕತೆಯ ಪ್ರಾತಿನಿಧ್ಯ ಅಗತ್ಯವಿಲ್ಲ ಎನ್ನುವ ವ್ಯವಸ್ಥೆಯ ಪ್ರತಿನಿಧಿಗಳು ತಮ್ಮ ಧಾರ್ಮಿಕತೆಯ ಆಚಾರ ವಿಚಾರಗಳು ಅದೇ ಕ್ಷೇತ್ರದಲ್ಲಿ ಎಷ್ಟರಮಟ್ಟಿಗೆ ವ್ಯಾಪಿಸಿದೆ ಎನ್ನುವುದನ್ನು ನೋಡಲಾಗದೆ ಇರುವಷ್ಟರಮಟ್ಟಿಗೆ ಕುರುಡಾಗುವುದೇ ಧೃತರಾಷ್ಟ್ರ ಪ್ರೇಮ.
ಇನ್ನು ಧಾರ್ಮಿಕತೆಯ ಮತ್ತು ಸೈದ್ಧಾಂತಿಕ ವಿಷಯದಲ್ಲಂತೂ ಈ ಧೃತರಾಷ್ಟ್ರ ಪ್ರೇಮ ದೇಶ, ಸಮಾಜ, ಸಾಮಾನ್ಯ ಪದ್ಧತಿ; ಎಲ್ಲಾ ಸರ್ವೇ ಸಾಮಾನ್ಯವಾದ ವಿಷಯಗಳನ್ನೂ ತಮ್ಮದಾಗಿಸಿಕೊಳ್ಳುತ್ತದೆ. ಧಾರ್ಮಿಕ ಮನಸ್ಥಿತಿಯ ಧೃತರಾಷ್ಟ್ರ ಪ್ರೇಮವಂತೂ ಸಹಜ ಆಲೋಚನೆಗಳನ್ನು ಮತ್ತು ಸಾಮಾನ್ಯ ಬದುಕಿನ ಪ್ರಕರಣಗಳನ್ನು ಸಮಚಿತ್ತದಲ್ಲಿ ನೋಡದು. ಈ ಧರ್ಮದವರಿಗೊಂದು ಶಾಸ್ತ್ರ, ಆ ಧರ್ಮದವರಿಗೊಂದು ಶರೀಯತ್.
ಧೃತರಾಷ್ಟ್ರನೆಂಬ ಹುಟ್ಟುಗುರುಡ ನೋಡದ ಸಂಗತಿಗಳನ್ನು ತಾನೂ ನೋಡೆನು ಎಂದ ಅವನ ಸಹಧರ್ಮಿಣಿ ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸತಿ ಧರ್ಮವನ್ನು ಮೆರೆದಳು. ಆದರೆ ಅವಳು ಕಣ್ಪಟ್ಟಿಯನ್ನು ಕಟ್ಟಿಕೊಳ್ಳದೇ ಇದ್ದ ಪಕ್ಷದಲ್ಲಿ ಅವನು ಕುರುಡಾಗಿ ನಡೆಯುವ ದಾರಿಯಲ್ಲಿ ಎಡವದೇ ನಡೆಸಲು ಸಮರ್ಥಳಾಗಿರುತ್ತಿದ್ದಳು. ಪ್ರೇಮವೋ, ಮೋಹವೋ, ಧರ್ಮವೋ, ಸ್ವಜನ ಪಕ್ಷಪಾತವೋ ಯಾವುದೇ ಪಟ್ಟಿಯಾಗಿರಲಿ; ಕಣ್ಕಟ್ಟಿದರೆ ಎಲ್ಲವೂ ಕುರುಡೇ. ಈ ಕಣ್ಪಟ್ಟಿಯನ್ನು ಕಟ್ಟಿಕೊಂಡವರು ಆ ಕಣ್ಪಟ್ಟಿಯನ್ನು ಕಟ್ಟಿಕೊಂಡವರನ್ನು ಟೀಕಿಸುತ್ತಾರೆ. ನನ್ನ ಮೆಚ್ಚಿನ ಕಣ್ಪಟ್ಟಿಯನ್ನು ಕಟ್ಟಿಕೊಂಡವರು ಮಾಡುವುದನ್ನು ನಾನು ಸಮರ್ಥಿಸುತ್ತೇನೆ. ಏಕೆಂದರೆ ಅು ನಾನೂ ಕಟ್ಟಿಕೊಂಡಿರುವ ಕಣ್ಪಟ್ಟಿ.