​ಉಡುಪಿ ಜಿಲ್ಲೆಯಲ್ಲಿ ಮತ್ತೆ ಸಾವಿರದ ಗಡಿ ದಾಟಿದ ಕೊರೋನ ಸೋಂಕಿತರು

Update: 2022-01-23 15:29 GMT

ಉಡುಪಿ, ಜ.23: ಜಿಲ್ಲೆಯಲ್ಲಿ ರವಿವಾರ ಕೋವಿಡ್‌ಗೆ ಪಾಸಿಟಿವ್ ಬಂದವರ ಸಂಖ್ಯೆ ಮತ್ತೆ ಸಾವಿರದ ಗಡಿ ದಾಟಿದೆ. ಇಂದು ಒಟ್ಟು 1061 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ದಿನದಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 503. ಜಿಲ್ಲೆಯಲ್ಲಿ ಸದ್ಯ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 6546 ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 1061 ಮಂದಿಯಲ್ಲಿ 546 ಮಂದಿ ಪುರುಷರು ಹಾಗೂ 515 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 757 ಮಂದಿ ಉಡುಪಿ ತಾಲೂಕಿಗೆ ಸೇರಿದವರು. ಕುಂದಾಪುರ ತಾಲೂಕಿನ 207 ಹಾಗೂ ಕಾರ್ಕಳ ತಾಲೂಕಿನ 92 ಮಂದಿಯೊಂದಿಗೆ ಹೊರಜಿಲ್ಲೆಗಳ ಐವರು ಸಹ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.

ಇಂದು ಪಾಸಿಟಿವ್ ಬಂದ 1061 ಮಂದಿಯಲ್ಲಿ 45 ಮಂದಿಯನ್ನು ಕೋವಿಡ್ ಕೇರ್‌ ಸೆಂಟರ್‌ಗೂ, 10 ಮಂದಿಯನ್ನು ಕೋವಿಡ್ ಆಸ್ಪತ್ರೆಗೂ, 20 ಮಂದಿಯನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿದ್ದು, ಉಳಿದ 986 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಜಿಲ್ಲೆಯಲ್ಲಿ ಒಟ್ಟು 160 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು ಇವರಲ್ಲಿ 11 ಮಂದಿ ವೆಂಟಿಲೇಟರ್, 21 ಮಂದಿ ಐಸಿಯು ಹಾಗೂ 34ಮಂದಿ ಎಚ್‌ಡಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಶನಿವಾರ 503 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನ ದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 3060ಕ್ಕೇರಿದೆ. ನಿನ್ನೆ ಜಿಲ್ಲೆಯ ಉಡುಪಿ ತಾಲೂಕಿನಲ್ಲಿ 3694 ಮಂದಿ, ಕುಂದಾಪುರದಲ್ಲಿ 774 ಹಾಗೂ ಕಾರ್ಕಳ ತಾಲೂಕಿನ 711 ಮಂದಿ ಸೇರಿದಂತೆ ಒಟ್ಟು 5179 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 9462ಕ್ಕೇರಿದೆ. ಜಿಲ್ಲೆಯಲ್ಲಿ ಇಂದು ಸಹ ಸೋಂಕಿಗೆ ಯಾರೂ ಬಲಿಯಾಗಿಲ್ಲ.

30 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಕೇವಲ 14 ಮಂದಿ ಮಾತ್ರ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ಪಡೆದರು. ಇವರಲ್ಲಿ 60 ವರ್ಷಕ್ಕೂ ಮೇಲಿನ 13 ಮಂದಿ ಹಾಗೂ ಒಬ್ಬ ಆರೋಗ್ಯ ಕಾರ್ಯಕರ್ತರಿದ್ದಾರೆ. ಇಂದು 18 ವರ್ಷದೊಳಗಿನ ಯಾರೂ ಲಸಿಕೆ ಪಡೆದಿಲ್ಲ. 44 ವರ್ಷದೊಳಗಿನ ಒಬ್ಬರು ಮೊದಲ ಡೋಸ್ ಹಾಗೂ ಒಟ್ಟು 15 ಮಂದಿ ಎರಡನೇ ಡೋಸ್ ಪಡೆದರು ಎಂದು ಡಿಎಚ್‌ಓ ಡಾ.ಉಡುಪ ತಿಳಿಸಿದ್ದಾರೆ.

1061 ಪಾಸಿಟಿವ್‌ನಲ್ಲಿ 609 ಮಂದಿ 0-25ವರ್ಷದವರು

ಇಂದು ಜಿಲ್ಲೆಯಲ್ಲಿ ಕೋವಿಡ್‌ಗೆ ಪಾಸಿಟಿವ್ ಬಂದ ಒಟ್ಟು 1061 ಸೋಂಕಿತರಲ್ಲಿ ಐದು ವರ್ಷದೊಳಗಿನ ಮಕ್ಕಳು ಸೇರಿದಂತೆ ಒಟ್ಟು 609 ಮಂದಿ 25 ವರ್ಷದೊಳಗಿನವರು ಸೇರಿದ್ದಾರೆ. ಜಿಲ್ಲೆಯಲ್ಲಿ ಕಳೆದ ಜನವರಿ ಒಂದರಿಂದ ಇಂದಿನವರೆಗೆ ಒಟ್ಟು 9462 ಮಂದಿ ಸೋಂಕಿಗೆ ಪಾಸಿಟಿವ್ ಬಂದಿದ್ದು, ಇವರಲ್ಲಿ 5108 ಮಂದಿ 0-25ವರ್ಷ ವಯೋವರ್ಗಕ್ಕೆ ಸೇರಿದವರು ಎಂದು ಮಾಹಿತಿ ತಿಳಿಸಿದೆ.

ಶನಿವಾರ ಮತ್ತು ರವಿವಾರ ಒಟ್ಟು 958 ಮಂದಿ 25 ವರ್ಷದೊಳಗಿನವರು ಪಾಸಿಟಿವ್ ಬಂದಿದ್ದಾರೆ. ಇವರಲ್ಲಿ 0-5ವರ್ಷದೊಳಗಿನ ಒಟ್ಟು 25 ಮಂದಿ (7+18) ಮಕ್ಕಳು ಕೊರೋನಕ್ಕೆ ಪಾಸಿಟಿವ್ ಬಂದಿದ್ದಾರೆ. ಉಳಿದಂತೆ 6ರಿಂದ 10ವರ್ಷದೊಳಗಿನ 123(37+86), 11ರಿಂದ 15 ವರ್ಷದೊಳಗಿನ 309 (107+202), 16ರಿಂದ 20ವರ್ಷದೊಳಗಿನ 277 (119+158) ಹಾಗೂ 20ರಿಂದ 25ವರ್ಷದೊಳಗಿನ 224 (79+145) ಮಂದಿ ಕೊರೋನಕ್ಕೆ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ ಎಂದು ಆರೋಗ್ಯ ಇಲಾಖೆಯ ಮಾಹಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News