ಉಡುಪಿ ಜಿಲ್ಲೆ : 1202 ಮಂದಿಗೆ ಕೋವಿಡ್ ಪಾಸಿಟಿವ್

Update: 2022-01-25 14:49 GMT

ಉಡುಪಿ, ಜ.25: ಮಂಗಳವಾರ ಜಿಲ್ಲೆಯಲ್ಲಿ ಕೋವಿಡ್‌ಗೆ ಪಾಸಿಟಿವ್ ಬಂದವರ ಸಂಖ್ಯೆ 1202ಕ್ಕೇರಿದೆ. ದಿನದಲ್ಲಿ ಒಟ್ಟು 1149 ಮಂದಿ ಕೋವಿಡ್ -19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 5771ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 1202 ಮಂದಿಯಲ್ಲಿ 597 ಮಂದಿ ಪುರುಷರು ಹಾಗೂ 605 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 730 ಮಂದಿ ಉಡುಪಿ ತಾಲೂಕಿಗೆ ಸೇರಿದವರು. ಕುಂದಾಪುರ ತಾಲೂಕಿನ 300 ಹಾಗೂ ಕಾರ್ಕಳ ತಾಲೂಕಿನ 170 ಮಂದಿಯೊಂದಿಗೆ ಹೊರಜಿಲ್ಲೆಯ ಇಬ್ಬು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.

ಇಂದು ಪಾಸಿಟಿವ್ ಬಂದವರಲ್ಲಿ 20 ಮಂದಿಯನ್ನು ಕೋವಿಡ್ ಕೇರ್ ಸೆಂಟರ್‌ಗೂ, 10 ಮಂದಿಯನ್ನು ಕೋವಿಡ್ ಆಸ್ಪತ್ರೆಗೂ, 15 ಮಂದಿಯನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿದ್ದು, ಉಳಿದ 1157 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಜಿಲ್ಲೆಯಲ್ಲಿ ಒಟ್ಟು 176 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು ಇವರಲ್ಲಿ 15 ಮಂದಿ ವೆಂಟಿಲೇಟರ್, 16 ಮಂದಿ ಐಸಿಯು ಹಾಗೂ 41 ಮಂದಿ ಎಚ್‌ಡಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಸೋಮವಾರ 1149 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 5711ಕ್ಕೇರಿದೆ. ನಿನ್ನೆ ಜಿಲ್ಲೆಯ ಉಡುಪಿ ತಾಲೂಕಿನಲ್ಲಿ 2560 ಮಂದಿ, ಕುಂದಾಪುರದಲ್ಲಿ 1692 ಹಾಗೂ ಕಾರ್ಕಳ ತಾಲೂಕಿನ 565 ಮಂದಿ ಸೇರಿದಂತೆ ಒಟ್ಟು 4817 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 11341ಕ್ಕೇರಿದೆ. ಇಂದು ಸೋಂಕಿಗೆ ಯಾರೂ ಬಲಿಯಾಗಿಲ್ಲ.

987 ಮಂದಿಗೆ ಮುನ್ನೆಚ್ಚರಿಕೆ ಡೋಸ್: ಜಿಲ್ಲೆಯಲ್ಲಿ ಇಂದು ಒಟ್ಟು 987 ಮಂದಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟವರಿಗೆ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 60 ವರ್ಷಕ್ಕೂ ಮೇಲ್ಪಟ್ಟ 734 ಮಂದಿ ಲಸಿಕೆ ಪಡೆದರೆ, 228 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 25 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಸೇರಿದ್ದಾರೆ.

686 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 686 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 27 ಮಂದಿ 15ರಿಂದ 18 ವರ್ಷ ದೊಳಗಿನ ಮಕ್ಕಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ನೀಡಲಾಗಿದೆ. ಒಟ್ಟಾರೆಯಾಗಿ ದಿನದಲ್ಲಿ 169 ಮಂದಿ ಮೊದಲ ಡೋಸ್ ಹಾಗೂ 517 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ.ಉಡುಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News