ಹಿರಿಯ ಯಕ್ಷಗಾನ ಕಲಾವಿದ ಮುಳಿಯಾಲ ಭೀಮ ಭಟ್ ನಿಧನ

Update: 2022-01-25 14:50 GMT

ಉಡುಪಿ, ಜ.25: ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಹಿರಿಯ ಕಲಾವಿದ ‘ದೇವಿ ಭಟ್ರು’ ಎಂದೇ ಹೆಸರು ಪಡೆದಿದ್ದ ಮುಳಿಯಾಲ ಭೀಮ ಭಟ್ (85) ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಮಂಗಳವಾರ ಬೆಳಗ್ಗೆ ಕಾಂತಾವರದಲ್ಲಿ ನಿಧನಹೊಂದಿದರು.

ಸಕ್ರಿಯ ಯಕ್ಷಗಾನ ರಂಗದಿಂದ ನಿವೃತ್ತರಾದ ಬಳಿಕ ಕಳೆದ ಸುಮಾರು ಎರಡು ದಶಕಗಳಿಂದ ಕಾಂತಾವರ ದೇವಸ್ಥಾನದಲ್ಲಿ ಸೇವೆಸಲ್ಲಿಸುತ್ತಿದ್ದ ಇವರು ಕಳೆದ ಕೆಲವು ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ದೇವಿಯ ಪಾತ್ರಕ್ಕೆ ಜೀವ ತುಂಬಿದ್ದ ಇವರನ್ನು ಯಕ್ಷಗಾನ ಅಭಿಮಾನಿಗಳು ದೇವಿ ಭಟ್ರು ಎಂದೇ ಕರೆಯುತ್ತಿದ್ದರು.

ಭೀಮ ಭಟ್ಟರ ತಂದೆ ಸಹ ಯಕ್ಷಗಾನ ಕಲಾವಿದರಾಗಿದ್ದರು. ದಿ.ಕುರಿಯ ವಿಠಲ ಶಾಸ್ತ್ರಿಗಳ ಗರಡಿಯಲ್ಲಿ ಪಳಗಿದ್ದ ಭೀಮ ಭಟ್ಟರು 5ನೇ ತರಗತಿ ಓದಿದವರು. ಅನಂತರ ಯಕ್ಷಗಾನ ಕಲಿತು ಕುರಿಯ ಶಾಸ್ತ್ರಗಳ ಸಂಚಾಲಕತ್ವದ ಶ್ರೀಧರ್ಮಸ್ಥಳ ಮೇಳದಿಂದ ಕಲಾ ಸೇವೆ ಪ್ರಾರಂಭಿಸಿದ್ದರು. ಮುಂದೆ ಕೂಡ್ಲು, ಕುಂಡಾವು, ಕಟೀಲು ಹಾಗೂ ಸುಂಕದಕಟ್ಟೆ ಮೇಳಗಳಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಕಲಾಸೇವೆಗೈದಿದ್ದಾರೆ. ಸ್ತ್ರೀವೇಷಗಳಲ್ಲದೆ ಪುರುಷ ಪಾತ್ರಗಳಿಗೂ ಅವರು ಜೀವ ತುಂಬಿದವರು. ದೇವಿ ಪಾತ್ರದೊಂದಿಗೆ ಪ್ರಮೀಳೆ, ಮೀನಾಕ್ಷಿ, ಶಶಿಪ್ರಭೆಯಂಥ ಗಡಸು ಪಾತ್ರಗಳಿಗೆ ಜೀವ ತುಂಬಿದವರು.

ಮಳೆಗಾಲದಲ್ಲಿ ಯಕ್ಷಗಾನದ ತಂಡ ಕಟ್ಟಿಕೊಂಡು ರಾಜ್ಯ ಹಾಗೂ ದೇಶದ ವಿವಿದೆಡೆ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸು ತಿದ್ದರು. ಮೃತರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News