ಕೊಪ್ಪದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಯಾತ್ರೆ, ಗೌರವ ನಮನ

Update: 2022-01-27 04:58 GMT

ಕೊಪ್ಪ, ಜ.27: ಗಣರಾಜ್ಯೋತ್ಸವ ಪರೇಡ್ ಗೆ ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆಯನ್ನು ಖಂಡಿಸಿ ಕೊಪ್ಪ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಣರಾಜ್ಯೋತ್ಸವ ದಿನದಂದು ನಾರಾಯಣ ಗುರುಗಳ ಸಂದೇಶ ಯಾತ್ರೆ ನಡೆಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಕೊಪ್ಪದ ಪುರಭವನದಿಂದ ನಾರಾಯಣಗುರುಗಳ ಸಂದೇಶ ಸಾರುವ ಸ್ತಬ್ಧಚಿತ್ರ, ಭಿತ್ತಿಪತ್ರ, ಹಳದಿ ಶಾಲು ಧ್ವಜಗಳೊಂದಿಗೆ ಮುಖ್ಯರಸ್ತೆಯಲ್ಲಿ ಸಾಗಿ ಬಂದ ನೂರಾರು ಕಾರ್ಯಕರ್ತರು, ನಾರಾಯಣಗುರು ಸಮುದಾಯ ಬಾಂಧವರು ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸೇರಿಕೊಂಡರು. ಕಾರ್ಯಕ್ರಮ ನಂತರ ಪಕ್ಷದ ಕಚೇರಿಯಲ್ಲಿ ಸಭೆ ಸೇರಿ ಕೇಂದ್ರ ಸರಕಾರದ ನಡೆಯನ್ನು ಖಂಡಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ, ಬ್ರಹ್ಮಶೀ ನಾರಾಯಣ ಗುರುಗಳು ದೇಶಕಂಡ ಮಹಾನ್ ದಾರ್ಶನಿಕ ಸಂತರಾಗಿದ್ದು, ಮಾನವ ಜನಾಂಗದ ಸೇವೆಯಲ್ಲಿ ದೈವತ್ವವನ್ನು ಕಂಡ ಸಂತಶ್ರೇಷ್ಠರು. ಸಮ ಸಮಾಜದ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಕೇಂದ್ರ ಸರಕಾರ ಅವಕಾಶ ನೀಡದೆ ಅವಮಾನಿಸಿರುವುದು ಬಹಳ ದುಃಖದ ಸಂಗತಿ ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಡಾ.ಅಂಶಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಕೀಲ, ಸುಧೀರ್ ಕುಮಾರ್ ಮುರೊಳ್ಳಿ, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಎಚ್.ಎಂ‌.ಸತೀಶ್, ನಾರಾಯಣ ಗುರು ಸಮುದಾಯ ಬಾಂಧವರು, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News