ಉಡುಪಿ ಕರಾವಳಿ ಬೈಪಾಸ್ ನಲ್ಲಿ ಉರಿಯದ ದಾರಿದೀಪ: ಪ್ರತಿದಿನ ದೊಂದಿ ಬೆಳಕು ಉರಿಸುವ ವಿನೂತನ ಪ್ರತಿಭಟನೆ

Update: 2022-01-30 16:34 GMT

ಉಡುಪಿ, ಜ.30: ಉಡುಪಿ ಕರಾವಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ದಾರಿದೀಪ ವ್ಯವಸ್ಥೆ ಮಾಡುವಂತೆ ಪ್ರತಿದಿನ ದೊಂದಿ ಬೆಳಕು ಉರಿಸುವ ವಿನೂತನ ಪ್ರತಿಭಟನೆಗೆ ಇಂದು ರಾತ್ರಿ ಚಾಲನೆ ನೀಡಲಾಯಿತು.

ಉಡುಪಿ ರಾಷ್ಟ್ರೀಯ ಹೆದ್ದಾರಿ 66 ಕರವಳಿ ಬೈಪಸ್ ನಿಂದ ಅಂಬಾಗಿಲು ಜಂಕ್ಷನ್ ತನಕ ದಾರಿದೀಪ ಕೆಟ್ಟುಹೋಗಿದ್ದು ಪಾದಚಾರಿಗಳು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಭಯಭೀತರಾಗಿ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಂಪ್ರತಿ ಅಪಘಾತಗಳು ಸಂಭವಿಸುತ್ತಿವೆ ಎಂದು ಪ್ರತಿಭಟನೆ ನೇತೃತ್ವ ವಹಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮದ್ ಆರೋಪಿಸಿದ್ದಾರೆ.

ಈ ಸಮಸ್ಯೆಯ ಬಗ್ಗೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಗಮನಸೆಳೆಯಲು ದಿನಂಪ್ರತಿ ದೊಂದಿ ಅಥವಾ ಚಿಮಣಿಯನ್ನು ಉರಿಸಿ ವಿಭಿನ್ನ ರೀತಿಯ ಪ್ರತಿಭಟನೆಗೆ ಇಂದು ಚಾಲನೆ ನೀಡಲಾಯಿತು. ಸಮಸ್ಯೆ ಬಗೆಹರಿಯುವವರೆಗೆ ಪ್ರತಿದಿನ ಇದೇ ರೀತಿ ಬೆಂಕಿ ಉರಿಸಿ ಪಾದಚಾರಿಗಳಿಗೆ ನಮ್ಮಿಂದಾಗುವಷ್ಟು ಬೆಳಕು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.  

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಅಧ್ಯಕ್ಷ ಸುಧೀರ್ ಪೂಜಾರಿ, ಶಾಹಿಲ್ ರಹಮತುಲ್ಲಾ  ಮಂಜು ನಾಸಿರ್ ಯಾಕೂಬ್,  ಸುಹೇಲ್, ಇಂತಿಯಾಜ್, ಹಸನ್ ಸಾಹೇಬ್, ಅನಿಲ್ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News