ಶಿರಿಯಾರ ಗ್ರಾಪಂ ಅಧ್ಯಕ್ಷರಿಂದ ದಲಿತ ವ್ಯಕ್ತಿಗೆ ಹಲ್ಲೆ: ದೂರು

Update: 2022-02-01 15:57 GMT
ಸಂತೋಷ್

ಕೋಟ, ಫೆ.1: ಅಕ್ರಮ ಮರಳುಗಾರಿಕೆ ಬಗ್ಗೆ ಮಾಹಿತಿ ನೀಡಿದ ಆರೋಪದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಶಿರಿಯಾರ ಗ್ರಾಪಂ ಅಧ್ಯಕ್ಷರು ಸೇರಿದಂತೆ ಇಬ್ಬರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಘಟನೆ ಜ.30ರಂದು ಬೆಳಗ್ಗೆ ಶಿರಿಯಾರ ಗ್ರಾಮದ ಹೆಬ್ಬಾರ್‌ ಬೆಟ್ಟು ಎಂಬಲ್ಲಿ ನಡೆದಿದೆ.

ಶಿರಿಯಾರ ಎತ್ತಿನಟ್ಟಿ ನಿವಾಸಿ ಸಂತೋಷ ಪಾಣ(42) ಎಂಬವರು ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಆರೋಪಿಗಳನ್ನು ಶಿರಿಯಾರ ಗ್ರಾಪಂ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಹಾಗೂ ನಾಗರಾಜ ಶೆಟ್ಟಿ ಎಂದು ದೂರಲಾಗಿದೆ.

ಸಂತೋಷ್ ಶಿರಿಯಾರ ಹೆಬ್ಬಾರ್‌ ಬೆಟ್ಟುವಿನ ಕೊರಗ ದೇವಾಡಿಗ ಎಂಬವರ ಮನೆಯಿಂದ ರಿಕ್ಷಾದಲ್ಲಿ ತೆಂಗಿನ ಕಾಯಿ ತರಲು ಬಾಡಿಗೆಗೆ ಹೋಗಿದ್ದು, ಈ ವೇಳೆ ಸುಧೀಂದ್ರ ಶೆಟ್ಟಿ ಹಾಗೂ ನಾಗರಾಜ ಶೆಟ್ಟಿ ರಸ್ತೆಯಲ್ಲಿ ರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಿ ಸಂತೋಷ್ ಪಾಣಗೆ ಅವಾಚ್ಯ ಶಬ್ದಗಳಿಂದ ಬೈದು, ರಿಕ್ಷಾದಿಂದ ಹೊರಗೆ ಎಳೆದು ಜಾತಿ ನಿಂದನೆ ಮಾಡಿರುವುದಾಗಿ ದೂರಲಾಗಿದೆ. ಬಳಿಕ ಮರದ ದೊಣ್ಣೆಯಿಂದ ಕೈ ಹಾಗೂ ಎದೆಗೆ ಹೊಡೆದು, ಕಾಲಿನಿಂದ ತುಳಿದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಸುಧೀಂದ್ರ ಶೆಟ್ಟಿ ಶಿರಿಯಾರ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಮರಳು ತೆಗೆದು ಮನೆಯ ಬಳಿ ಸಂಗ್ರಹ ಮಾಡುತ್ತಿದ್ದು, ಈ ಬಗ್ಗೆ ಸಂತೋಷ್ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುತ್ತಿದ್ದಾರೆಂದು ಆರೋಪಿ ಈ ಕೃತ್ಯ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News