ಕೋವಿಡ್ ಬಳಿಕ ಚರ್ಮರೋಗ, ಅಲರ್ಜಿಯಲ್ಲಿ ಹೆಚ್ಚಳ: ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ ವೈದ್ಯರ ಅಭಿಮತ

Update: 2024-09-06 15:54 GMT

ಉಡುಪಿ, ಸೆ.6: ವಿಶ್ವದಾದ್ಯಂತ ಜನತೆಯನ್ನು ಸುಮಾರು ಎರಡು ವರ್ಷಗಳ ಕಾಲ ವಿವಿಧ ರೀತಿಯಲ್ಲಿ ಬಾಧಿಸಿದ ಕೋವಿಡ್‌ ನಿಂದ ಚರ್ಮರೋಗ ಹಾಗೂ ವಿವಿಧ ರೀತಿಯ ಅಲರ್ಜಿಗಳಲ್ಲಿ ಹೆಚ್ಚಳ ಕಂಡು ಬಂದಿದ್ದು, ಜನರ ರೋಗ ನಿರೋಧಕ ಶಕ್ತಿಯಲ್ಲೂ ಕುಂಠಿತವಾಗಿದೆ ಎಂದು ಉಡುಪಿ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಅಧೀಕ್ಷಕರಾದ ಡಾ.ನಾಗರಾಜ್ ಎಸ್., ಈ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಾದ ಅಗತ್ಯವಿದೆ. ಕಳೆದೆರಡು ವರ್ಷಗಳಿಂದ ಚರ್ಮರೋಗ ಹಾಗೂ ವಿವಿಧ ರೀತಿಯ ಅಲರ್ಜಿಗಳಿಂದ ಚಿಕಿತ್ಸೆಗೆ ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ನಮಗೆ ವೇದ್ಯವಾಗುತ್ತದೆ ಎಂದರು.

ಅದೇ ರೀತಿ ಹಿಂದೆ ಒಂದು ರೋಗಕ್ಕೆ ನೀಡುವ ಔಷಧಿ, ಈಗ ರೋಗಿಯ ಮೇಲೆ ಯಾವುದೇ ಪರಿಣಾಮ ಬೀರದಿರುವುದು ನಮ್ಮ ವೈದ್ಯರ ಗಮನಕ್ಕೆ ಬರುತ್ತಿದೆ. ಹೀಗಾಗಿ ನಾವು ಆಯುರ್ವೇದದಲ್ಲಿ ಈ ಬಗ್ಗೆ ಸಂಶೋದನೆ ಮಾಡಿ ರೋಗದ ಮೇಲೆ ಪರಿಣಾಮ ಬೀರುವ ಹೊಸ ಔಷಧಿ ತಯಾರಿ ಸ ಬೇಕಾದ ಅನಿವಾರ್ಯತೆ ಇದೆ ಎಂದರು.

ಇವೆಲ್ಲವೂ ಕೋವಿಡ್ ಮಹಾಮಾರಿ ಕಾಣಿಸಿಕೊಂಡ ಬಳಿಕ ಕಳೆದೆರಡು ವರ್ಷಗಳಲ್ಲಿ ಕಂಡುಬಂದ ವಿದ್ಯಾಮಾನ. ಕೋವಿಡ್‌ಗೂ ಇದಕ್ಕೂ ಯಾವ ಸಂಬಂಧ, ಕೋವಿಡ್ ಸೋಂಕು ಕಾಣಿಸಿಕೊಂಡವರಲ್ಲೋ ಅಥವಾ ಲಸಿಕೆ ಪಡೆದವರಲ್ಲಿ ಇದು ಕಾಣಿಸಿಕೊಳ್ಳುತಿದ್ದೆಯೋ ಎಂಬ ಬಗ್ಗೆ ಆಳವಾದ ಸಂಶೋಧನೆ ನಡೆಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಪಾಸಣಾ ಶಿಬಿರ: ಎಸ್‌ಡಿಎಂ ಆಸ್ಪತ್ರೆಯ ಆಗಮತಂತ್ರ ವಿಭಾಗದ ನೇತೃತ್ವದಲ್ಲಿ ಸೆ.9ರಿಂದ 14ರವರೆಗೆ ಆರು ದಿನಗಳ ಕಾಲ ಆಸ್ಪತ್ರೆಯ ಚರ್ಮರೋಗ ಮತ್ತು ಸೌಂದರ್ಯ ಚಿಕಿತ್ಸಾ ಘಟಕಗಳಲ್ಲಿ ಬೃಹತ್ ಚರ್ಮ ಮತ್ತು ಕೇಶರೋಗಳ ತಪಾ ಸಣಾ ಶಿಬಿರ ನಡೆಯಲಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮಮತಾ ಕೆ.ವಿ.ತಿಳಿಸಿದರು.

ಜನರನ್ನು ಪ್ರತಿನಿತ್ಯ ಬಾಧಿಸುವ ವಿವಿಧ ರೀತಿಯ ಚರ್ಮ ವ್ಯಾದಿಗಳಾದ ಸೋರಿಯಾಸಿಸ್, ತೊನ್ನು, ಕಜ್ಜಿ, ಚರ್ಮದ ಅಲರ್ಜಿ, ಇಸುಬು, ಸರ್ಪಸುತ್ತು, ಗಜಕರ್ಣ, ಮೊಡವೆ, ತಲೆಹೊಟ್ಟು, ಹೇನಿನ ಉಪದ್ರ, ಕೂದಲು ಉದುರುವಿಕೆ, ವಿಷಜಂತುಗಳ ಕಡಿತದಿಂದ ಬರುವ ಚರ್ಮರೋಗ ಗಳಿಗೆ ಉಚಿತ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುವುದು ಎಂದರು.

ಆಸ್ಪತ್ರೆಯ ತಜ್ಞ ವೈದ್ಯರು ಚರ್ಮ ಹಾಗೂ ಕೇಶಕ್ಕೆ ಸಂಬಂಧಿಸಿದ ವ್ಯಾದಿಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಿದ್ದು, ಅರಿವು ಮೂಡಿಸುವರು. ಇದೇ ರೀತಿಯಲ್ಲಿ ಮುಂಬರುವ ದಿನಗಳಲಿಲ ವಿವಿಧ ರೋಗಗಳನ್ನು ಕೇಂದ್ರೀಕರಿಸಿ ಬೃಹತ್ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿಬಿರದ ಮುಖ್ಯ ಸಂಯೋಜಕಿ ಡಾ.ಚೈತ್ರಾ ಹೆಬ್ಬಾರ್ ಹಾಗೂ ಸಹ ಸಂಯೋಜಕ ಡಾ.ಶ್ರೀನಿಧಿ ಬಲ್ಲಾಳ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News