ಅಮೆರಿಕದಲ್ಲಿ ಯಕ್ಷಗಾನವನ್ನು ಕ್ರೋಢೀಕರಿಸುವ ಅಗತ್ಯವಿದೆ: ಡಾ. ರಾಜೇಂದ್ರ ಕೆದ್ಲಾಯ

Update: 2024-09-16 15:05 GMT

ಮಣಿಪಾಲ, ಸೆ.16: ಅಮೆರಿಕದಲ್ಲಿ ಯಕ್ಷಗಾನ ತನ್ನ ಛಾಪು ಮೂಡಿಸಲು ಸಾಧ್ಯವಾಗಿದೆ. ಆದರೆ ಅದನ್ನು ಇನ್ನಷ್ಟು ಕ್ರೋಢೀಕರಿಸುವ ಅಗತ್ಯವೂ ಇದೆ ಎಂದು ಅಮೆರಿಕದಲ್ಲಿರುವ ಸಾಗರೋತ್ತರ ಯಕ್ಷಗಾನ ಗುರು ಡಾ.ರಾಜೇಂದ್ರ ಕೆದ್ಲಾಯ ಅಭಿಪ್ರಾಯಪಟ್ಟಿದ್ದಾರೆ.

ಮಣಿಪಾಲ ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(ಜಿಸಿಪಿಎಎಸ್)ನಲ್ಲಿ ಅಲ್ಲಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ರೊಂದಿಗೆ ಸಂವಾದದಲ್ಲಿ ಭಾಗವಹಿಸಿದ ಡಾ.ಕೆದ್ಲಾಯ, ಅಮೆರಿಕದಲ್ಲಿ ಯಕ್ಷಗಾನ ಶಾಲೆಯನ್ನು ನಡೆಸು ತ್ತಿರುವ ಅನುಭವ ಒಂದು ರೋಮಾಂಚನಕಾರಿ ಅನುಭವವಾಗಿದೆ. ಹಲವು ಮಕ್ಕಳು ಮತ್ತು ಯುವಕರು ಯುಎಸ್‌ಎನಲ್ಲಿ ಯಕ್ಷಗಾನವನ್ನು ಕಲಿಯುತ್ತಿದ್ದಾರೆ ಮತ್ತು ಪ್ರದರ್ಶಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ತಿಳಿಸಿದರು.

ಅವರು ತಮ್ಮ ಪಾತ್ರದ ಸಂಭಾಷಣೆಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಿದ್ದರೂ ಸಹ, ಅದು ಸಹಜ ಮತ್ತು ಸ್ವಾಭಾವಿಕವಾಗಿ ಕಾಣುತ್ತದೆ ಎಂದು ಡಾ.ಕೆದ್ಲಾಯ ಹೇಳಿದರು.

ಮಣಿಪಾಲದ ಕೆಎಂಸಿಯಲ್ಲಿ ಜೀವರಸಾಯನಶಾಸ್ತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದ ಡಾ.ರಾಜೇಂದ್ರ ಕೆದ್ಲಾಯರು ನಂತರ 2003ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಯಕ್ಷಗಾನ ಆಸಕ್ತರಾದ ಡಾ ಕೆದ್ಲಾಯ, ಜೀವರಸಾಯನ ಶಾಸ್ತ್ರ ವೃತ್ತಿ ಯೊಂದಿಗೆ ಅಲ್ಲಿ ಕಲೆಯನ್ನು ಕಲಿಸಲು ಮತ್ತು ಪ್ರದರ್ಶಿಸಲು ಪ್ರಾರಂಭಿಸಿದರು. ಇಂದು ಅವರ ಯಕ್ಷಗಾನ ಶಾಲೆ ಅಮೆರಿಕ ದಲ್ಲಿ ಗಮನಾರ್ಹವಾದ ಛಾಪು ಮೂಡಿಸಿದೆ. ಅವರು ಇಂಡಿಯಾನಾಪೊಲಿಸ್‌ನಲ್ಲಿ ವಾಸಿಸುತ್ತಿದ್ದಾರೆ.

ಪ್ರೊ. ಉದ್ಯಾವರ ಮಾಧವಾಚಾರ್ಯ ನಿರ್ಮಾಣದಲ್ಲಿ ‘ಪಾಂಚಾಲಿ’ ಪಾತ್ರಕ್ಕೆ ಜನಪ್ರಿಯತೆಯನ್ನು ಪಡೆದ ಡಾ.ಕೆದ್ಲಾಯ, ಈ ಹಿಂದೆ ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಯಕ್ಷಗಾನ ಕಲಿತಿದ್ದರು. ಯಕ್ಷಗಾನದ ಕಲಿಕೆ ಮತ್ತು ಕಲಿಸುವಿಕೆ, ಹೊರದೇಶದಲ್ಲಿದ್ದು ನನ್ನೂರಿನ ಜೊತೆಗಿನ ಸಂಬಂಧವನ್ನು ಜೀವಂತವಾಗಿಡುತ್ತದೆ ಎಂದು ಅವರು ಹೇಳಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಸಂವಾದ ನಡೆಸಿಕೊಟ್ಟರು. ಡಾ.ಭ್ರಮರಿ ಶಿವಪ್ರಕಾಶ್, ಡಾ.ರಾಜಾರಾಂ ತೋಳ್ಪಾಡಿ, ಚಿತ್ರ ನಿರ್ಮಾಪಕ ಕ್ಲಿಂಗ್ ಜಾನ್ಸನ್, ಡಾ.ರವೀಂದ್ರನಾಥನ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News