ಅದಾನಿ ಸಿಎಸ್‍ಆರ್ ನಿಧಿ| ಪಡುಬಿದ್ರಿಯಲ್ಲಿ ಸ್ಯಾನಿಟರಿಪ್ಯಾಡ್, ನ್ಯಾಪ್ಕಿನ್ ವಿಲೇವಾರಿ ಸುಡುವಯಂತ್ರ ಉದ್ಘಾಟನೆ
ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್‍ನ ಸಿಎಸ್‍ಆರ್ ಅನುದಾನದಡಿ ಪಡುಬಿದ್ರಿ ಗ್ರಾಮದಲ್ಲಿ ರೂ. 15 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸ್ಯಾನಿಟರ್ ಪ್ಯಾಡ್ ಇನ್ಸಿರಿನೇಟರ್ ಘಟಕವನ್ನು ಬುಧವಾರ ಉದ್ಘಾಟಿಸಿ ಲೋಕಾರ್ಪಣೆ ಮಾಡಲಾಯಿತು.
ಅದಾನಿ ಫೌಂಡೇಷನ್‍ನ ಸಿಎಸ್‍ಆರ್ ಯೋಜನೆಗಳಲ್ಲಿ ಒಂದಾದ ಗ್ರಾಮೀಣ ಮೂಲಭೂತ ಸೌಕರ್ಯ ಯೋಜನೆಯಡಿ ಪಡುಬಿದ್ರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿಯು 2023-24ನೇ ವಾರ್ಷಿಕ ಸಾಲಿನಲ್ಲಿ ನೀಡಿದ ಕ್ರಿಯಾಯೋಜನೆ ಮೇರೆಗೆ ನಿರ್ಮಿಸಲಾಯಿತು. ಘಟಕವನ್ನು ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಕಿಶೋರ್ ಆಳ್ವ, ಸ್ಯಾನಿಟರಿ ಪ್ಯಾಡ್‍ಗಳನ್ನು ಸುಡುವ ಯಂತ್ರವನ್ನು ಸ್ಥಾಪಿಸಲು ಅದಾನಿ ಫೌಂಡೇಶನ್ ಈ ಯೋಜನೆಯನ್ನು ಅನುಷ್ಟಾನಕ್ಕೆ ತಂದಿದೆ. ಇದೊಂದು ಉತ್ತಮ ಯೋಜನೆ. ಈ ಘಟಕದಲ್ಲಿ ಘಂಟೆಗೆ ಸುಮಾರು 60 ಕಿಲೋ ಸ್ಯಾನಿಟರ್ ಪ್ಯಾಡ್‍ಗಳನ್ನು ದಹಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನರೇಟರ್ ಯಂತ್ರಗಳನ್ನು ಅಳವಡಿಸುವುದರಿಂದ ಉತ್ತಮ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿ ಸಬಹುದು. ಬಳಸಿದ ಸ್ಯಾನಿಟರಿ ನ್ಯಾಪ್ಕಿನ್‍ಗಳನ್ನು ತೆರೆದ ಸ್ಥಳಗಳಲ್ಲಿ ಅಥವಾ ಅನೈರ್ಮಲ್ಯದ ರೀತಿಯಲ್ಲಿ ವಿಲೇವಾರಿ ಮಾಡುವುದರಿಂದ ಉಂಟಾಗುವ ಪರಿಸರ ಮತ್ತು ಆರೋಗ್ಯದ ಅಪಾಯಗಳನ್ನು ತಪ್ಪಿಸಲು ಈ ಘಟಕ ಸಹಾಯ ಮಾಡುತ್ತದೆ ಎಂದರು.
ವ್ಯಾಪಾರ ಕೇಂದ್ರವಾಗಿ ಪರಿವರ್ತನೆ: ಕಾಪು ತಾಲೂಕಿನ ಬೃಹತ್ ಗಾತ್ರದ ಪಾಂಚಾಯತ್ ಆಗಿರುವ ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಕೈಗಾರಿಕಾ ಪ್ರದೇಶಗಳು ಸ್ಥಾಪಿತವಾಗಿದ್ದು, ಒಂದು ಸುಂದರವಾದ ವ್ಯಾಪಾರ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಸುತ್ತಮುತ್ತಲ ಗ್ರಾಮಗಳು ಅಭಿವೃದ್ಧಿಗೊಂಡಿದೆ ಎಂದು ಆಳ್ವ ಹರ್ಷವ್ಯಕ್ತಪಡಿಸಿದರು.
ಗ್ಯಾಸ್ ವಿತರಣೆಗೆ ಮೊದಲ ಆದ್ಯತೆ: ಅದಾನಿ ಸಮೂಹವು ಪಡುಬಿದ್ರಿ ಗ್ರಾಮ ಪಂಚಾಯಿಯನ್ನು ತನ್ನ ಸಿಟಿ ಗ್ಯಾಸ್ ವಿತರಣೆ ಯೋಜೆನಯಡಿ ಪ್ರತಿಯೊಂದು ಮನೆಗೂ ಗ್ಯಾಸ್ ವಿತರಣೆಗೆ ಮೊದಲ ಆದ್ಯತೆಯಾಗಿ ಆಯ್ಕೆ ಮಾಡಿದೆ ಎಂದು ಆಳ್ವ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಮಾತನಾಡಿ, ಗ್ರಾಮಸ್ಥರ ಬೇಡಿಕೆ ಮೇರೆಗೆ ಒಂದು ಪಂಚಾಯತ್ ವ್ಯಾಪ್ತಿಯಲ್ಲಿ ಪರಿಸರ ದೃಷ್ಟಿಕೋನದಿಂದ ಸ್ಯಾನಿಟರಿ ಸುಡುವಯಂತ್ರವನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದ್ದು, ಅದಾನಿ ಸಂಸ್ಥೆಯ ಸಿಎಸ್‍ಆರ್ ಯೋಜನೆಯಿಂದ ಆ ಬೇಡಿಕೆ ಈಡೇಡಿರಿಸಿರುವುದು ಸಂತಸ ತಂದಿದೆ ಎಂದರು,
ಪಡುಬಿದ್ರಿ ಪಂಚಾಯಿತಿ ಉಪಾಧ್ಯಕ್ಷ ಹೇಮಚಂದ್ರ, ಸದಸ್ಯರುಗಳಾದ ನವೀನ್ ಎನ್. ಶೆಟ್ಟಿ, ಗಣೇಶ್ ಕೋಟ್ಯಾನ್, ಶೋಭಾ ಶೆಟ್ಟಿ, ಅಶೋಕ್ ಪೂಜಾರಿ, ರಮೀಝ್ ಹುಸೈನ್, ನಿಯಾಝ್, ಸುನಂದ, ವಿದ್ಯಾಶ್ರೀ, ಜ್ಯೋತಿ ಮೆನನ್, ಸಂದೇಶ್ ಶೆಟ್ಟಿ, ಶಾಫಿ, ಅದಾನಿ ಪವರ್ ಲಿಮಿಟೆಡ್‍ನ ಏಜಿಎಂ ರವಿ ಆರ್. ಜೇರೆ, ಅದಾನಿ ಫೌಂಡೇಷನ್‍ನ ಅನುದೀಪ್ ಉಪಸ್ಥಿತರಿದ್ದರು.