ಉಡುಪಿ: ತಾಂತ್ರಿಕ ಉದ್ಯೋಗ ನೇಮಕಾತಿ ಸಂಸ್ಥೆ ‘ಎಕ್ಸ್‌ಫಿನೋ’ ಕೇಂದ್ರ

Update: 2024-09-16 16:15 GMT

ಉಡುಪಿ, ಸೆ.16: ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿರುವ ತಾಂತ್ರಿಕ ಉದ್ಯೋಗ ನೇಮಕಾತಿ ಸಂಸ್ಥೆ ‘ಎಕ್ಸ್ ಫಿನೋ’ದ ಶಾಖೆಯೊಂದು ಮಂಗಳವಾರ ಉಡುಪಿಯಲ್ಲಿ ಉದ್ಘಾಟನೆ ಗೊಳ್ಳಲಿದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಐರೋಡಿ ಕಮಲ್ ಕಾರಂತ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಳು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪ್ರಾರಂಭ ಗೊಂಡ ಈ ಸಂಸ್ಥೆ ಈವರೆಗೆ 22,000ದಷ್ಟು ವೃತ್ತಿನಿರತರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಕರಾವಳಿಯನ್ನು ಕೇಂದ್ರ ವಾಗಿರಿಸಿಕೊಂಡು ಉಡುಪಿ-ಮಂಗಳೂರು ಪ್ರದೇಶದಲ್ಲಿ ತಾಂತ್ರಿಕ ನೇಮಕಾತಿಗೆ ಕೇಂದ್ರೀಕೃತವಾದ ಈ ಸೆಂಟರ್ ಆಫ್ ಎಕ್ಸಲೆನ್ಸ್ ನಾಳೆಯಿಂದ ಪ್ರಾರಂಭಗೊಳ್ಳಲಿದೆ ಎಂದರು.

ಕೇಂದ್ರದ ಪ್ರಾರಂಭದಿಂದ ಕರಾವಳಿ ಭಾಗದ ಪ್ರತಿಭಾವಂತರಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷ ಉದ್ಯೋಗಾವ ಕಾಶದ ಬಾಗಿಲು ತೆರೆಯಲಿದೆ. ತಮ್ಮ ಸಂಸ್ಥೆ ದೇಶ ಹಾಗೂ ವಿದೇಶಗಳ 210 ಖ್ಯಾತನಾಮ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿಗೆ ಬೇಕಾದ ತಜ್ಞರ ನೇಮಕಾತಿಗೆ ಸಹಾಯ ಮಾಡುತ್ತಿದೆ ಎಂದರು.

ಇದರೊಂದಿಗೆ ಉಡುಪಿ-ಮಂಗಳೂರು ಪ್ರದೇಶಕ್ಕೆ ಎಂಎನ್‌ಸಿ ಕಂಪೆನಿಗಳನ್ನು ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ತರುವ ಪ್ರಯತ್ನವನ್ನು ನಾವು ನಡೆಸಲಿದ್ದೇವೆ. ಮುಂದಿನವಾರವೇ ಅಮೆರಿಕದ ಕಂಪೆನಿಯೊಂದು ಇಲ್ಲಿಗೆ 500 ಇಂಜಿನಿಯರ್‌ಗಳ ನೇಮಕಾತಿಗೆ ಬರಲಿದ್ದು, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಪ್ರಯತ್ನ ಮಾಡಲಿದ್ದೇವೆ ಎಂದರು.

ನಮ್ಮ ಕಂಪೆನಿಯೂ 250 ಮಂದಿ ಸ್ಥಳೀಯ ಪದವೀಧರನ್ನು ನಿಯುಕ್ತಿಗೊಳಿಸಿ ಅವರಿಗೆ ಇಲ್ಲಿಯೇ ತರಬೇತಿ ನೀಡುವ ವ್ಯವಸ್ಥೆ ಮಾಡಲಿದ್ದೇವೆ. ತಾಂತ್ರಿಕ ಉದ್ಯೋಗದ ನೇಮಕಾತಿ ಜೊತೆಗೆ ಎಕ್ಸ್‌ಫಿನೋ ಹಲವು ಸ್ಥಳೀಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಇಲ್ಲಿನ ಕಾಲೇಜು, ಉನ್ನತ ಶಿಕ್ಷಣ ಸಂಸ್ಥೆಗಳಿಂದ ನೇಮಕಾತಿಗೆ ಸಹಾಯ ಮಾಡಲಿದ್ದೇವೆ ಎಂದು ಕಮಲ್ ಕಾರಂತ್ ತಿಳಿಸಿದರು.

ಇದೀಗ ಉಡುಪಿ-ಮಣಿಪಾಲ ರಾ.ಹೆದ್ದಾರಿಯಲ್ಲಿ ಕುಂಜಿಬೆಟ್ಟಿನಲ್ಲಿ ಸಂಸ್ಥೆಯ ಹೊಸ ಕೇಂದ್ರ ಕ್ರೋಮಾ ಬಿಲ್ಡಿಂಗ್‌ನ 4ನೇ ಮಹಡಿಯಲ್ಲಿ ತೆರೆದಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮತ್ತೊಬ್ಬ ಸಹ ಸಂಸ್ಥಾಪಕ ಅನಿಲ್ ಎತನೂರ್, ಉಡುಪಿ ಕೇಂದ್ರದ ಮುಖ್ಯಸ್ಥ ಗುರುಪ್ರಸಾದ್ ಎಂ.ತಂತ್ರಿ, ಹಾಗೂ ರಾಮಕೃಷ್ಣ ಭಗವಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News