‘ಕಲ್ಜಿಗ ಚಿತ್ರಕ್ಕಲ್ಲ; ಕೊರಗಜ್ಜನ ದೃಶ್ಯಕ್ಕೆ ವಿರೋಧ: ವೇದಿಕೆ ಸ್ಪಷ್ಟನೆ

Update: 2024-09-16 15:53 GMT

ಉಡುಪಿ, ಸೆ.16: ಇದೀಗ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಅರ್ಜುನ ಕಾಪಿಕ್ಕಾಡ್ ನಾಯಕರಾಗಿ ನಟಿಸಿರುವ ‘ಕಲ್ಜಿಗ’ ಕನ್ನಡ ಚಿತ್ರಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದರಲ್ಲಿ ಅನಗತ್ಯವಾಗಿ, ಸುಧೀರ್ಘವಾಗಿ ತೋರಿಸಿರುವ ಕೊರಗಜ್ಜ ದೈವದ ದರ್ಶನದ ದೃಶ್ಯಕ್ಕೆ ನಮ್ಮ ವಿರೋಧವಿದೆ ಎಂದು ಮಂಗಳೂರಿನ ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ ಸ್ಪಷ್ಟಪಡಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಗೌರವಾಧ್ಯಕ್ಷ ದಿಲ್‌ರಾಜ್ ಆಳ್ವ ಹಾಗೂ ಸಹನಾ ಕುಂದರ್ ಸೂಡಾ, ಸಿನಿಮಾದಲ್ಲಿ ಸುಮಾರು 10 ನಿಮಿಷಗಳ ಕಾಲ ಬರುವ ಕೊರಗಜ್ಜ ದೈವದ ದೃಶ್ಯವನ್ನು ತೆಗೆಯುವಂತೆ ನಾವು ಮನವಿ ಮಾಡುತ್ತೇವೆ ಎಂದರು.

ಸಿನಿಮಾದಲ್ಲಿ ಈ ದೈವದ ದೃಶ್ಯವನ್ನು ಇಷ್ಟೊಂದು ವಿವರವಾಗಿ ತೋರಿಸುವ ದೃಶ್ಯ ಅನಗತ್ಯ ಹಾಗೂ ಅದರ ಅಗತ್ಯವೂ ಇರಲಿಲ್ಲ ಎಂಬುದು ಸಿನಿಮಾ ನೋಡಿದ ಪ್ರತಿಯೊಬ್ಬರ ಅಭಿಪ್ರಾಯವೂ ಆಗಿದೆ. ಇದನ್ನು ಹೊರತು ಪಡಿಸಿದರೆ ಚಿತ್ರದ ನಾಯಕ ನಟ, ನಿರ್ದೇಶಕ ಅಥವಾ ಇನ್ನುಳಿದ ಯಾರ ಬಗ್ಗೆಯೂ ನಮಗೆ ಯಾವುದೇ ವಿರೋಧವಿಲ್ಲ. ಅವರು ನಮ್ಮ ಟಾರ್ಗೆಟ್ ಸಹ ಅಲ್ಲ ಎಂದು ನ್ಯಾಯವಾದಿಯಾದ ಸಹನಾ ಕುಂದರ್ ನುಡಿದರು.

ಓರ್ವ ನಿರ್ದೇಶಕನಿಗೆ ಸೃಜನಶೀಲತೆ ಬೇಕು. ದೈವಾರಾಧನೆಯನ್ನು ಆತ ಬೇರೆ ರೀತಿಯಲ್ಲೂ ತೋರಿಸಬಹುದಿತ್ತು. ಒಬ್ಬ ಬಾಲಕನಿಗೆ ವೇಷಭೂಷಣ ತೊಡಿಸಿ ತೋರಿಸಬೇಕಾದ ಅಗತ್ಯವಿರಲಿಲ್ಲ. ತುಳುನಾಡಿನಲ್ಲಿ ದೈವಾರಾಧನೆಗೆ ವಿಶೇಷವಾದ ಹಾಗೂ ನಿರ್ದಿಷ್ಟವಾದ ಕ್ರಮವಿದೆ. ಇದಕ್ಕೆ ಧಕ್ಕೆ ತರುವ ಕೆಲಸವನ್ನು ಯಾರೂ ಸಹ ಮಾಡಬಾರದು ಎಂದವರು ಮನವಿ ಮಾಡಿದರು.

ಜಿಲ್ಲಾಧಿಕಾರಿಗೆ ಮನವಿ: ಈ ಕುರಿತಂತೆ ವೇದಿಕೆ ಜಿಲ್ಲಾಧಿಕಾರಿ ಅವರಿಗೆ ಮನವಿಯೊಂದನ್ನು ಅರ್ಪಿಸಿದೆ ಎಂದು ಸಹನಾ ಕುಂದರ್ ತಿಳಿಸಿದರು. ದೈವಾರಾಧನೆ ತುಳುನಾಡಿನ ಮಣ್ಣಿನ ಅಸ್ಮಿತೆ. ದೈವಗಳು ನಮ್ಮ ಮೂಲ ನಂಬಿಕೆಯಾಗಿದೆ. ಅನಾದಿ ಕಾಲದಿಂದಲೂ ನಮ್ಮ ಬದುಕಿನ ಭಾಗವಾಗಿರುವ ದೈವಾರಾಧನೆಗೆ ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ಆಪತ್ತು ಎದುರಾಗಿದೆ. ನಾವು ನಂಬಿಕೆ ಎಂದು ಆರಾಧಿಸಿಕೊಂಡು ಬರುತ್ತಿರುವ ಆರಾಧನಾ ಪದ್ಧತಿಯನ್ನು ಸಾಂಸ್ಕೃತಿಕ ಕಲೆ ಎಂದು ಬಿಂಬಿಸಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಮನವಿಯಲ್ಲಿ ತಿಳಿಸಲಾಗಿದೆ.

ಆದುದರಿಂದ ನಮ್ಮ ದೈವಗಳನ್ನು ಸಾಂಸ್ಕೃತಿಕ ಚಟುವಟಿಕೆಯ ಭಾಗವಾಗಿ ತೋರಿಸುವುದನ್ನು ಕಾನೂನಾತ್ಮಕವಾಗಿ ನಿಷೇಧಿಸಬೇಕು. ಹಾಗೂ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತೆ ನೋಡಿಕೊಳ್ಳಬೇಕು. ಹಿಂದೂ ಧಾರ್ಮಿಕ ಕಾರ್ಯ ಕ್ರಮಗಳ ವೇಳೆ ಟ್ಯಾಬ್ಲೋ ಪ್ರದರ್ಶನ, ಸಿನಿಮಾ, ನಾಟಕ, ಯಕ್ಷಗಾನಗಳಲ್ಲಿ ದೈವಗಳ ವಿಡಂಬನೆ, ಛದ್ಮವೇಷದಲ್ಲಿ ದೈವದ ಪಾತ್ರ ಮಾಡುವುದಕ್ಕೆ ಕಡಿವಾಣ ಹಾಕುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ದೈವಾರಾಧನೆ ಸಾಂಸ್ಕೃತಿಕ ಜಗತ್ತಿಗೆ ಕಾಲಿಟ್ಟರೆ ನಮ್ಮ ನಂಬಿಕೆಗಳಿಗೆ ಬೆಲೆ ಇಲ್ಲದಂತಾಗುತ್ತದೆ. ಈಗ ಅಲ್ಲಲ್ಲಿ ನಡೆಯುವ ದೈವ ನಿಂದನೆ ಘಟನೆಗಳು ಮುಂದೆ ಸಾಮಾನ್ಯ ಎನಿಸಲಿದೆ. ಹೀಗಾಗಿ ಸಂಭಾವ್ಯ ಅಪಾಯವನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ಭರತ್‌ರಾಜ್ ಬಲ್ಲಾಳ್‌ಭಾಗ್, ಕಾರ್ಯದರ್ಶಿ ಗಿರೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News