ನ.17-18: ಉಡುಪಿ ನ್ಯಾಯಾಲಯ, ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವ ಸಂಭ್ರಮ ಆಚರಣೆ

Update: 2024-09-06 16:28 GMT

ಉಡುಪಿ, ಸೆ.6: ಉಡುಪಿ ನ್ಯಾಯಾಲಯ ಹಾಗೂ ಉಡುಪಿ ವಕೀಲರ ಸಂಘಕ್ಕೆ ಶತಮಾನೋತ್ತರ ರಜತ ಮಹೋತ್ಸವ (125ವರ್ಷ) ತುಂಬಿದ್ದು, ಈ ಸಂಭ್ರಮಾಚರಣೆಯನ್ನು ಮುಂದಿನ ನವೆಂಬರ್ 17ಮತ್ತು 18ರಂದು ಉಡುಪಿಯ ನ್ಯಾಯಾಲಯದ ಆವರಣದಲ್ಲಿ ಅದ್ದೂರಿ ಮತ್ತು ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಹಾಗೂ ಶತಮಾನೋತ್ತರ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಉಡುಪಿ ಯ ಪುರಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಮುನ್ಸಿಫ್ ನ್ಯಾಯಾಲಯ ಎಂದು ಕರೆಸಿಕೊಳ್ಳುತಿದ್ದ ಉಡುಪಿ ನ್ಯಾಯಾಲಯ 1899ರಲ್ಲಿ ಸಾಮಂತ ರಾಜರು ಆಳುತಿದ್ದ, ಕರಾವಳಿಯಲ್ಲಿ ಅಂದು ಪ್ರಮುಖ ಪಟ್ಟಣವಾದ ಬಾರಕೂರಿನಲ್ಲಿ ಪ್ರಾರಂಭಗೊಂಡಿತ್ತು. ಅಂದು ಪಕ್ಕದ ಹಂಗಾರ ಕಟ್ಟೆ ಕರಾವಳಿಯ ಪ್ರಮುಖ ಸ್ವಾಭಾವಿಕ ಬಂದರಾಗಿತ್ತು ಎಂಬುದು ಅಂದಿನ ದಾಖಲೆಗಳಿಂದ ತಿಳಿದು ಬರುತ್ತದೆ ಎಂದು ಮಟ್ಟಾರು ಹೇಳಿದರು.

ಉಡುಪಿ ನ್ಯಾಯಾಲಯಗಳ ಶತಮಾನೋತ್ಸವ 1999ರಲ್ಲಿ ಆಗಿದ್ದು, 2003ರಲ್ಲಿ ಶತಮಾನೋತ್ಸವ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಅಂದಿನ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎನ್.ಸಂತೋಷ್ ಹೆಗ್ಡೆ ಅವರು ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ರಾಜ್ಯ ಉಚ್ಚ ನ್ಯಾಯಾಲಯದ ಅಂದಿನ ಮುಖ್ಯ ನ್ಯಾಯ ಮೂರ್ತಿಗಳಾದ ಎನ್.ಕೆ.ಜೈನ್ ಅಧ್ಯಕ್ಷತೆ ವಹಿಸಿದ್ದರು ಎಂದರು.

ಇದೀಗ ಶತಮಾನೋತ್ತರ ರಜತ ಮಹೋತ್ಸವ (100+25=125)ದ ಉದ್ಘಾಟನೆಯು ನವೆಂಬರ್ 17ರಂದು ನಡೆಯಲಿದೆ. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಬೆಳಗ್ಗೆ 10 ಗಂಟೆಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಿದ್ದು, ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಹಾಗೂ ಆಂಧ್ರಪ್ರದೇಶ ರಾಜ್ಯದ ರಾಜ್ಯ ಪಾಲರಾಗಿರುವ ಎಸ್.ಅಬ್ದುಲ್ ನಝೀರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ.ಅಂಜಾರಿಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

ಕರ್ನಾಟಕ ಹೈಕೋರ್ಟ್‌ನ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಜಿಲ್ಲಾ ಆಡಳಿತಾತ್ಮಕ ನ್ಯಾಯ ಮೂರ್ತಿ ಇ.ಎಸ್.ಇಂದಿರೇಶ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ರಾಜ್ಯ ಉಚ್ಛ ನ್ಯಾಯಾಯಲಯದ ನ್ಯಾಯ ಮೂರ್ತಿಗಳಾದ ಎಂ.ಜಿ.ಉಮಾ, ರಾಮಚಂದ್ರ ಡಿ.ಹುದ್ದಾರ್, ಟಿ.ವೆಂಕಟೇಶ್ ನಾಯ್ಕ್ ಗೌರವ ಅತಿಥಿಗಳಾಗಿ ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತಕುಮಾರ್ ಹಾಗೂ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು ಎಂದರು.

ಶತಮಾನೋತ್ತರ ರಜತ ಮಹೋತ್ಸವದ ಸಮಾರೋಪ ಸಮಾರಂಭ ಮರುದಿನ ನ.18ರಂದು ಸಂಜೆ 4:30ಕ್ಕೆ ನಡೆಯಲಿದೆ. ಕರ್ನಾಟಕ ಹೈಕೋರ್ಟ್‌ನ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಜಿಲ್ಲಾ ಆಡಳಿತಾ ತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ರಾಜ್ಯ ಉಚ್ಛ ನ್ಯಾಯಾಲಯ ಹಾಗೂ ಉಡುಪಿ ನ್ಯಾಯಾಲಯದ ನ್ಯಾಯಾಧೀಶರು ಇದರಲ್ಲಿ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ವಿವರಿಸಿದರು.

ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಕಾನೂನಿನ ವಿವಿಧ ವಿಷಯಗಳು, ಹೊಸದಾಗಿ ಅಳವಡಿಸಲಾಗಿರುವ ಕಾನೂನಿನ ಕುರಿತು ನಾಲ್ವರು ಹಿರಿಯ ನ್ಯಾಯಮೂರ್ತಿಗಳು ವಿಷಯ ಮಂಡನೆ ಮಾಡಲಿದ್ದಾರೆ. ಎರಡೂ ದಿನಗಳಲ್ಲಿ ಸಂಜೆ ವೈವಿಧ್ಯ ಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಉಡುಪಿ ಜಿಲ್ಲೆಯಾದ್ಯಂತದಿಂದ ಸುಮಾರು 1300ಕ್ಕೂ ಅಧಿಕ ವಕೀಲರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಪಕ್ಕದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗಗಳ ವಕೀಲರನ್ನು ಆಹ್ವಾನಿಸಲಾಗುವುದು. ಶತಮಾನೋತ್ತರ ರಜತ ಮಹೋತ್ಸವ ಸಂಭ್ರಮದ ಕುರಿತು ಸ್ಮರಣ ಸಂಚಿಕೆ ಹೊರತರಲಾಗುವುದು. ಎರಡು ದಿನಗಳ ಕಾರ್ಯಕ್ರಮಕ್ಕೆ ಸುಮಾರು 50 ಲಕ್ಷ ರೂ.ಗಳ ಖರ್ಚಿನ ಅಂದಾಜು ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ರಾಜೇಶ್ ಎ.ಆರ್, ಸಂಜೀವ ಎ, ಎಂ. ಶಾಂತಾರಾಮ ಶೆಟ್ಟಿ, ಎನ್.ಕೆ. ಆಚಾರ್ಯ, ವಿಲ್ಪ್ರೆಡ್ ಓಸ್ವಾಲ್ಡ್ ಡಿಮೆಲ್ಲೋ, ಮಿತ್ರಕುಮಾರ್, ಬೈಲೂರು ರವೀಂದ್ರ ದೇವಾಡಿಗ, ಸಂತೋಷ್‌ಕುಮಾರ್ ಮೂಡುಬೆಳ್ಳೆ, ಗಂಗಾಧರ ಎಚ್.ಎಂ., ಆರೂರು ಸುಕೇಶ್ ಶೆಟ್ಟಿ, ಬಿ.ನಾಗರಾಜ, ಅಸದುಲ್ಲಾ ಕಟಪಾಡಿ, ಶಶಿಕಾಂತ ಶೆಟ್ಟಿ, ಆನಂದ ಮಡಿವಾಳ, ಅಮೃತಕಲಾ, ಶಶೀಂದ್ರ ಕುಮಾರ್, ಸತೀಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News