ಉಡುಪಿ: ಕೋವಿಡ್ ಗೆ ಮೂವರು ಬಲಿ; 542 ಮಂದಿಗೆ ಕೊರೋನ ಪಾಸಿಟಿವ್

Update: 2022-02-02 14:58 GMT

ಉಡುಪಿ, ಫೆ.2: ಬುಧವಾರ ಸಹ ಉಡುಪಿ ಜಿಲ್ಲೆಯಲ್ಲಿ ಮೂವರು ಪುರುಷರು ಕೋವಿಡ್ ಸೋಂಕಿನಿಂದ ಮೃತಪಟ್ಟಿದಾರೆ. ಕೋವಿಡ್‌ಗೆ ಪಾಸಿಟಿವ್ ಬಂದವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, 542 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ದಿನದಲ್ಲಿ 972 ಮಂದಿ ಕೋವಿಡ್‌ನಿಂದ ಗುಣಮುಖರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 3288ಕ್ಕೆ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು ಉಡುಪಿಯ 84 ಮತ್ತು 59 ವರ್ಷ ಪ್ರಾಯದವರು ಹಾಗೂ ಕುಂದಾಪುರದ 54 ವರ್ಷ ಪ್ರಾಯದವರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಕುಂದಾಪುರದ ವ್ಯಕ್ತಿ ಮಂಗಳವಾರ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾ ಗಿದ್ದು, ಅಂದೇ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆ, ಉಡುಪಿಯ 84 ವರ್ಷ ಪ್ರಾಯದ ಹಿರಿಯರು ಸರಕಾರಿ ಆಸ್ಪತ್ರೆಯಲ್ಲಿ 24 ಗಂಟೆಯೊಳಗೆ ಮೃತಪಟ್ಟರು. ಎಲ್ಲರಲ್ಲೂ ಕೋವಿಡ್‌ನ ಸಾಮಾನ್ಯ ಗುಣಲಕ್ಷಣದೊಂದಿಗೆ, ಇತರ ಗಂಭೀರ ಸಮಸ್ಯೆಗಳಿದ್ದವು. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 503ಕ್ಕೇರಿದೆ.

ಇಂದು ಪಾಸಿಟಿವ್ ಬಂದ 542 ಮಂದಿಯಲ್ಲಿ 281ಮಂದಿ ಪುರುಷರು ಹಾಗೂ 261 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 310ಮಂದಿ ಉಡುಪಿ ತಾಲೂಕಿಗೆ, 119 ಮಂದಿ ಕುಂದಾಪುರ ಹಾಗೂ 110 ಮಂದಿ ಕಾರ್ಕಳ ತಾಲೂಕಿಗೆ ಸೇರಿದವರು. ಉಳಿದ ಮೂವರು ಹೊರಜಿಲ್ಲೆಯವರು.

ಪಾಸಿಟಿವ್ ಬಂದವರಲ್ಲಿ 35 ಮಂದಿಯನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಗಿದೆ. 9 ಮಂದಿಯನ್ನು ಕೋವಿಡ್ ಆಸ್ಪತ್ರೆಗೂ, 20 ಮಂದಿಯನ್ನು ಕೋವಿಡ್ ಹೆಲ್ತ್ ಆಸ್ಪತ್ರೆಗೆ ಸೇರಿಸಿದ್ದು, ಉಳಿದ 478 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ 149ಕ್ಕಿಳಿದಿದೆ. ಇವರಲ್ಲಿ 9 ಮಂದಿ ವೆಂಟಿಲೇಟರ್, 22 ಮಂದಿ ಐಸಿಯು ಹಾಗೂ 32 ಮಂದಿ ಎಚ್‌ಡಿಯು ಚಿಕಿತ್ಸೆಯಲ್ಲಿದ್ದಾರೆ.

ಮಂಗಳವಾರ 972 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 13464ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 3339 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 16628 ಕ್ಕೇರಿದೆ.

5765 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 5765 ಮಂದಿ ಕೋವಿಡ್ ನಿಯಂತ್ರಣಕ್ಕಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 2303 ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ದಿನದಲ್ಲಿ 60 ವರ್ಷ ಮೇಲಿನ 1931 ಮಂದಿ, ಆರೋಗ್ಯ ಕಾರ್ಯಕರ್ತರು 254 ಮಂದಿ ಇದ್ದಾರೆ. ಅದೇ ರೀತಿ 15-18ವರ್ಷದೊಳಗಿನ 16 ಮಂದಿ ಮೊದಲ ಡೋಸ್ ಹಾಗೂ 61 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಉಳಿದಂತೆ ಒಟ್ಟು 594 ಮಂದಿ ಮೊದಲ ಡೋಸ್ ಹಾಗೂ 2868 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

275 ಮಂದಿ 25ವರ್ಷದೊಳಗಿನವರು

ಬುಧವಾರ ಕೋವಿಡ್‌ಗೆ ಪಾಸಿಟಿವ್ ಬಂದ 542 ಮಂದಿಯಲ್ಲಿ 275 ಮಂದಿ 25ವರ್ಷ ಪ್ರಾಯದೊಳಗಿವರು ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ. ಇವರಲ್ಲಿ 0-5ವರ್ಷದೊಳಗಿನ ಆರು ಮಂದಿ ಪುಟಾಣಿಗಳಿದ್ದಾರೆ. ಉಳಿದಂತೆ 6-10ವರ್ಷದೊಳಗಿನ 50, 11-15ವರ್ಷಗೊಳಗಿನ 67, 16-20 ವರ್ಷದೊಳಗಿನ 104 ಹಾಗೂ 20ರಿಂದ 25ವರ್ಷದೊಳಗಿನ 48 ಮಂದಿ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ ಎಂದು ಮಾಹಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News