ಉದ್ಯಾವರ; ಕಂಪೌಂಡ್ ಗೋಡೆಗೆ ಬೈಕ್ ಢಿಕ್ಕಿ: ವೈದ್ಯಕೀಯ ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತ್ಯು
Update: 2022-02-03 09:48 GMT
ಮಲ್ಪೆ, ಫೆ.3: ನಿಯಂತ್ರಣ ತಪ್ಪಿದ ಬೈಕೊಂದು ಕಂಪೌಂಡ್ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಉದ್ಯಾವರ ಎಸ್‌ಡಿಎಂ ಆಯುರ್ವೇದ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಯೊರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಫೆ.3ರಂದು ನಸುಕಿನ ವೇಳೆ ಕಡೆಕಾರಿನಲ್ಲಿ ನಡೆದಿದೆ.
ಮೃತರನ್ನು ಬೀದರ್ ಜಿಲ್ಲೆಯ ಋಷಿಕೇಶ್ (23) ಎಂದು ಗುರುತಿಸಲಾಗಿದೆ. ಎಸ್‌ಡಿಎಂ ಆಯುರ್ವೇದ ಮಹಾವಿದ್ಯಾಲಯದಲ್ಲಿ ಅಂತಿಮ ಬಿಎಎಂಎಸ್ ವಿದ್ಯಾರ್ಥಿಯಾಗಿದ್ದ ಇವರು, ಕುತ್ಪಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರು ಬುಧವಾರ ಮಧ್ಯರಾತ್ರಿ ಮಲ್ಪೆ ಬೀಚ್‌ಗೆ ತನ್ನ ಬೈಕಿನಲ್ಲಿ ಒಬ್ಬರೇ ಹೊರಟಿದ್ದರೆನ್ನಲಾಗಿದೆ.
ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಪೌಂಡ್ ಗೋಡೆಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಋಷಿಕೇಶ್ ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.