ಬಾಲಗ್ರಹ
ಎಳೆಯ ಮಗುವು ಸರಿಯಾಗಿ ಹಾಲು ಕುಡಿಯದೆ ಇರುವುದು, ವಿಪರೀತವಾಗಿ ಅಳುವುದು, ನಿದ್ರಿಸದೆ ಇರುವುದು ಇತ್ಯಾದಿಗಳನ್ನೆಲ್ಲಾ ಮಾಡುವಾಗ ಮಗುವಿಗೆ ಬಾಲಗ್ರಹವಾಗಿದೆ ಅಂತ ಹೇಳಿ ಮಂತ್ರ ಹಾಕಿಸಿಕೊಂಡು ಬರುವವರಿದ್ದಾರೆ.
ಸರಿ, ಅಂತಹ ಬಾಲಗ್ರಹದ ಬಾಧೆಯನ್ನು ಜ್ಯೋತಿಷಿಯ ಬಳಿ ಹೇಳದೇ ಡಾಕ್ಟರ್ ಹತ್ತಿರ ಹೇಳಿದರೆ, ಮಗುವಿಗೆ ಹೊಟ್ಟೆ ನೋವಿರುವುದೋ ಎಂದು ಹೊಟ್ಟೆಯನ್ನು ಮುಟ್ಟಿ ತಟ್ಟಿ ಅದರ ಮೆದುತನ ಅಥವಾ ಪೆಡಸುತನಗಳನ್ನು ಗಮನಿಸಿ ಅದಕ್ಕೆ ಏನಾದರೂ ಸಮಸ್ಯೆ ಇದೆಯೋ ಏನೋ ಎಂದು ಗಮನಿಸಿ ಅದಕ್ಕೆ ಬೇಕಾದ ಚಿಕಿತ್ಸೆ ಕೊಡುತ್ತಾರೆ. ಅದೇ ಓರ್ವ ವಯಸ್ಕನು ಖಿನ್ನತೆ, ಆತಂಕವೇ ಮೊದಲಾದ ಮನೋರೋಗದಿಂದ ಬಳಲುತ್ತಿದ್ದರೆ ಮನೋವೈದ್ಯರು ಅವನ ಬಾಲ್ಯದ ಕತೆಗಳ ಕಂತೆಗಳನ್ನು ಬಿಚ್ಚಿಸುತ್ತಾರೆ. ನೋಡಿ, ಮಗುವಿಗೆ ತನಗೆ ಆಗುತ್ತಿರುವ ಬಾಧೆ ಏನೆಂದು ಹೇಳಲು ಬಾರದು. ಆದರೆ ತನಗೆ ಬಾಧೆಯಾಗುತ್ತಿದೆ ಎಂಬುದನ್ನು ವ್ಯಕ್ತಪಡಿಸಬಲ್ಲದು. ಅಂಬೆಗಾಲಿಟ್ಟು ಇನ್ನಷ್ಟು ಬೆಳೆದ ಮೇಲೂ ಕೂಡಾ ತನಗೆ ಇರುವ ಪದಸಂಪತ್ತಿನ ಕೊರತೆಯಿಂದಾಗಿ ತನ್ನ ಅನಿಸಿಕೆ, ಅಭಿಪ್ರಾಯ, ವಿಚಾರ ಮತ್ತು ಭಾವನೆಗಳನ್ನು ಮಾತಿನ ಮೂಲಕ ತೋರ್ಪಡಿಸಲು ಆಗದೇ ತಮ್ಮ ಚಟುವಟಿಕೆಗಳ ಮೂಲಕ ತಮ್ಮ ಒಲವು ನಿಲುವುಗಳನ್ನು ಪ್ರಕಟಿಸುತ್ತಾರೆ. ಹಾಗೆಯೇ ತಮ್ಮ ಪ್ರತಿಭಟನೆಯನ್ನಾಗಲಿ, ಪ್ರತಿರೋಧವನ್ನಾಗಲಿ, ಭಿನ್ನಾಭಿಪ್ರಾಯವನ್ನಾಗಲಿ ಪದಗಳ, ವಾಕ್ಯಗಳ ಮೂಲಕ ತೋರಿಸಲು ಭಾಷಾ ಸಾಮರ್ಥ್ಯವಿರದೆ ಅಳುವ, ಹಟ ಹಿಡಿಯುವ, ವಸ್ತುಗಳನ್ನು ಮುರಿಯುವ; ಹೀಗೆ ನಾನಾ ರೀತಿಗಳಲ್ಲಿ ತೋರಿಸುತ್ತಾರೆ. ಮಗುವಿಗೆ ವ್ಯಕ್ತಪಡಿಸಲು ಸಾಧ್ಯವಾಗುವುದು ತನ್ನ ಭಾವನೆಗಳನ್ನು, ವಿಚಾರಗಳನ್ನು. ಹಾಗಾಗಿ ಹಿರಿಯರಾದವರು ಅಥವಾ ಶಿಕ್ಷಕರಾದವರು ಅವರಿಂದ ಅವರ ವರ್ತನೆಗಳಿಗೆ ವೈಚಾರಿಕ ಅಥವಾ ತಾಂತ್ರಿಕ ವ್ಯಾಖ್ಯಾನಗಳನ್ನು ಎದುರು ನೋಡದೆ ಅವರಿಗೆ ಸಮಾಧಾನವಾಗುವಂತೆ ನಡೆದುಕೊಂಡು ಅವರ ವರ್ತನೆಗಳ ಕಾರಣವನ್ನು ಕಂಡು ಹಿಡಿದು, ಅದಕ್ಕೆ ಸೂಕ್ತವಾಗಿ ಉಪಶಮನ ನೀಡಬೇಕು. ಇದು ಒಂದು ಕ್ರಮವರಿತ ನಡವಳಿಕೆ. ಇದಕ್ಕೆ ಹೊರತಾಗಿ ದೊಡ್ಡವರು ಮಗುವಿನ ಹಟವನ್ನು ಮಣಿಸಲು ಹಟ ಹಿಡಿದು ಅದನ್ನು ಸುಮ್ಮನಿರಿಸಿದರೆ, ಮಗುವಿನ ಭಾವನೆಗೆ ಧಕ್ಕೆಯಾಗುವುದಲ್ಲದೆ, ಅದರ ಸೂಕ್ಷ್ಮಮನಸ್ಸಿಗೆ ವಿಪರೀತ ಗಾಯವಾಗಿ ಅದು ಮುಂದಿನ ದಿನಗಳಲ್ಲಿ ವ್ರಣವಾಗಿ ಕೊಳೆಯತೊಡಗುತ್ತದೆ. ‘‘ಮಗು ಅಷ್ಟೊಂದು ಗಲಾಟೆ ಮಾಡುತ್ತಿದೆ, ನಿನಗೆ ನೋಡಿಕೊಳ್ಳಲು ಆಗುವುದಿಲ್ಲವಾ?’’ ಎಂದು ಗಂಡ ಹೆಂಡತಿಯ ಮೇಲೆ ಹರಿ ಹಾಯ್ದರೆ, ಹೆಂಡತಿ, ‘‘ನಿನ್ನಿಂದ ನಾನು ಬೈಯಿಸಿಕೊಳ್ಳಬೇಕು. ಬಾಯಿ ಮುಚ್ಚು, ಅಳು ನಿಲ್ಲಿಸು, ಉಸಿರು ಬಿಡಬೇಡ’’ ಎಂದು ಮಗುವನ್ನು ಬಡಿದು ಸುಮ್ಮನಿಸಿರಿದಳೆಂದು ಇಟ್ಟುಕೊಳ್ಳಿ, ಮಗುವು ಮನೋಬಾಧೆಯಿಂದ ಕೂಡುತ್ತದೆ. ಮಗುವು ಕುಟುಂಬದ ಕೇಂದ್ರವಾಗಿರದಿದ್ದರೆ, ಮಗುವಿನ ಬದುಕು ಸಂಸಾರದ ಆದ್ಯತೆ ಆಗದಿದ್ದರೆ ಗಂಡ ಹೆಂಡತಿ ಇಬ್ಬರೂ ಕುಸ್ತಿಯ ಕಣದಲ್ಲಿ ತಮ್ಮ ತಮ್ಮ ಗೆಲುವಿಗಾಗಿ ಹೋರಾಡುತ್ತಿರುತ್ತಾರೆ. ಇಂತಹವನ್ನು ನೋಡುವ ಮಗುವಿನ ಸುಪ್ತ ಮನಸ್ಸಿನಲ್ಲಿ ಬಾಧೆಗಳ ಸಣ್ಣಪುಟ್ಟ ಗಾಯಗಳೆಲ್ಲಾ ಕೂಡುತ್ತಾ ಕಲೆಯುತ್ತಾ ದೊಡ್ಡದೊಡ್ಡ ವ್ರಣಗಳಾಗಿ ಕೊಳೆಯುತ್ತಾ ನಾರುತ್ತಾ ತನ್ನ ವಾಸನೆಯನ್ನು ನಾನಾ ರೀತಿಗಳಲ್ಲಿ ಬೀರುತ್ತಿರುತ್ತದೆ. ಅವರ ವೈಯಕ್ತಿಕ, ಕೌಟುಂಬಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಜೀವನದಲ್ಲಿ ನಕಾರಾತ್ಮಕವಾದ ಪರಿಣಾಮಗಳು ಉಂಟಾಗುವುದು. ಇದನ್ನು ಚೈಲ್ಡ್-ಹುಡ್ ಟ್ರಾಮ ಅಥವಾ ಬಾಲಬಾಧೆ ಎನ್ನುವರು. ಮಕ್ಕಳನ್ನು ಕಾಡುವ ಗ್ರಹಗಳು ರಾಹು ಕೇತುಗಳಲ್ಲ, ಅವರ ಪೋಷಕರು ಮತ್ತು ಸಮಾಜದ ಇತರ ಹಿರಿಯರು. ಧಾರ್ಮಿಕತೆ, ರಾಜಕೀಯ ಹಟ, ಸಾಂಪ್ರದಾಯಿಕ ದ್ವೇಷ, ಸಾಮುದಾಯಿಕ ಅಸಹನೆ ಇತ್ಯಾದಿ ಯಾವುದೇ ನೆಪಗಳು ದಾಳಗಳಾಗಬಹುದು. ಆದರೆ ನಡೆಸುವ ಕಾಯಿಗಳು ಮಕ್ಕಳಾಗಿಬಿಟ್ಟರೆ, ಅವರಿಗೆ ಉಂಟಾಗುವ ಬಾಲಬಾಧೆಯನ್ನು ಮುಂದೆ ಗುಣಪಡಿಸುವವರಾರು? ಹಿಜಾಬ್ ವಿವಾದದ ವಿಷಯವನ್ನು ತೆಗೆದುಕೊಳ್ಳಿ, ಇಲ್ಲಿ ವಿಷಯದ, ಸಂಪೂರ್ಣ ಅವಲೋಕನದ ಕೇಂದ್ರವಾಗ ಬೇಕಾಗಿರುವುದು ಆ ಹೆಣ್ಣುಮಕ್ಕಳು. ಅವರ ಅಸ್ತಿತ್ವ, ಬದುಕು, ಭವಿಷ್ಯ, ಅವರ ಮುನ್ನಡೆಯುವಿಕೆ ಚರ್ಚೆಯ ವಸ್ತುವನ್ನಾಗಿಸಿಕೊಳ್ಳುವುದು ಶಿಕ್ಷಣ ಸಂಸ್ಥೆಯವರ ಮತ್ತು ಆ ಮಕ್ಕಳ ಪರವಾಗಿರುವಂತೆ ತೋರುತ್ತಿರುವವರ ಆದ್ಯತೆ ಆಗದಿದ್ದರೆ ಈ ಬಗೆಯ ಬಾಲಬಾಧೆ ಅಥವಾ ಅಡ್ವರ್ಸ್ ಚೈಲ್ಡ್ ಹುಡ್ ಎಕ್ಸ್‌ಪಿರಿಯನ್ಸ್ (ಎಸಿಇ) ಮತ್ತು ಚೈಲ್ಡ್ ಹುಡ್ ಟ್ರಾಮವನ್ನು ಅವರಿಗೆ ಸಾಮುದಾಯಿಕವಾಗಿ ಮತ್ತು ಸಾಮಾಜಿಕವಾಗಿ, ಒಟ್ಟಾರೆ ದೂರದೃಷ್ಟಿ ರಹಿತವಾಗಿರುವ ಹಿರಿಯರು ವ್ಯಸ್ಥಿತವಾಗಿ ಕಾಣಿಕೆ ಕೊಟ್ಟಂತೆಯೇ ಸರಿ.