ಹಿಜಾಬ್ ವಿವಾದದ ಹಿಂದಿನ ಹಿಡನ್‌ ಅಜೆಂಡಾವನ್ನು ಸರಕಾರ ಬಗ್ಗು ಬಡಿಯಲಿದೆ: ಸಚಿವ ಸುನೀಲ್ ಕುಮಾರ್‌

Update: 2022-02-06 16:05 GMT

ಉಡುಪಿ, ಫೆ. 6: ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಸಂಬಂಧ ರಾಜ್ಯ ಸರಕಾರ ಕಾನೂನು ಮಾಡಿದೆ. ಈ ಕಾನೂನನ್ನು ಎಲ್ಲರು ಗೌರವಿಸಬೇಕು. ಇಲ್ಲದಿದ್ದರೆ ಇದರ ಹಿಂದೆ ಯಾವುದೋ ದೊಡ್ಡ ಪ್ರಮಾಣದ ಹಿಡನ್ ಅಜೆಂಡಾ ಇದೆ ಎಂಬುದು ಅರ್ಥ. ಆ ಹಿಡನ್ ಅಜೆಂಡಾವನ್ನು ಸರಕಾರ ಬಗ್ಗು ಬಡಿಯಲಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ನೆಲದ ಕಾನೂನನ್ನು ಗೌರವಿಸಬೇಕಾಗಿರುವುದು ಎಲ್ಲ ಕರ್ತವ್ಯವಾಗಿದೆ. ಅದನ್ನು ಯಾರು ಗೌರವಿಸುವುದಿಲ್ಲವೋ ಅವರು ಈ ನೆಲದಲ್ಲಿ ಇರಲು ಅನರ್ಹರು. ಸುತ್ತೋಲೆ, ಕಾನೂನುಗಳಿಗಿಂತ ಹೆಚ್ಚಾಗಿ, ಶಾಲಾ ಕಾಲೇಜುಗಳಲ್ಲಿ ಎಲ್ಲರೂ ಒಟ್ಟಾಗಿ ಸಮಾನತೆಯಿಂದ ಶಿಕ್ಷಣ ಕಲಿಯಬೇಕು ಎಂಬುದು ನಮ್ಮ ಪರಂಪರೆಯಲ್ಲಿಯೇ ಇದೆ. ಇದರಲ್ಲಿ ಮತೀಯ ಸಂಗತಿಗಳು ವಿಜೃಂಭಿಸುವುದು ಒಳ್ಳೆಯದಲ್ಲ ಎಂದರು. ಕರ್ನಾಟಕವನ್ನು ಹಿಡನ್ ಅಜೆಂಡಾ ಮೂಲಕ ಏನೋ ಮಾಡುತ್ತೇವೆ. ಕಾಂಗ್ರೆಸ್ ಟೂಲ್‌ಕಿಟ್ ಭಾಗವಾಗಿ ಇನ್ನೇನೋ ಮಾಡುತ್ತೇವೆ ಎಂಬುದನ್ನು ನಮ್ಮ ಸರಕಾರ ಸಹಿಸಲು ಸಾಧ್ಯವಿಲ್ಲ. ಪೋಷಕರು ಕೂಡ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಮುಸ್ಲಿಮ್ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ನಾನು ಕರೆ ಕೊಡುತ್ತೇನೆ. ಇಲ್ಲಿಯವರೆಗೆ ಅಲ್ಲಿರುವ ವ್ಯವಸ್ಥೆ ನಿಮ್ಮನ್ನು ಬಗ್ಗುಬಡಿಯುವ ಹಾಗೂ ಮುಸುಕಿನಲ್ಲಿ ಇರಿಸುವ ಪ್ರಯತ್ನ ಮಾಡಿತ್ತು. ತ್ರಿಪಲ್ ತಲಾಕ್ ರದ್ದು ಪಡಿಸುವ ಮೂಲಕ ಮುಸ್ಲಿಮ್ ಮಹಿಳೆಯರಿಗೆ ಸರಕಾರ ಭದ್ರತೆಯನ್ನು ನೀಡಿದೆ. ಹಾಗಾಗಿ ಮುಖ್ಯವಾಹಿನಿಗೆ ಬನ್ನಿ ಎಂದು ಕರೆಕೊಡುತ್ತೇವೆ ಎಂದರು.

ಜಗತ್ತಿನ ಯಾವುದೇ ದೇಶದಲ್ಲಿ ಇರದ ಅನಿಷ್ಠ ಪದ್ಧತಿ ಈ ದೇಶದಲ್ಲಿ ಇಂದಿಗೂ ಮುಂದುವರಿಯುತ್ತಿದೆ. ಅದನ್ನು ಬಿಟ್ಟು ಹೊರಗೆ ಬರುವ ಪ್ರಯತ್ನ ಮಾಡಿದರೆ ಈ ಸಮಾಜದಲ್ಲಿ ಗೌರವದಿಂದ ನಡೆದು ಕೊಳ್ಳಲು ಸಾಧ್ಯವಾಗುತ್ತದೆ. ಆ ರೀತಿಯ ಜಾಗೃತಿ ಅವರ ಮನೆಯಲ್ಲಿಯೇ ಆಗಬೇಕು ಎಂದು ಸಚಿವರು ಹೇಳಿದರು.

ಹೈಕೋರ್ಟ್ ತೀರ್ಪು ಬರುವ ಮೊದಲೇ ತರಾತುರಿಯಲ್ಲಿ ಕಾನೂನು ಮಾಡಿರುವುದು ಮುಸ್ಲಿಮ್ ಹೆಣ್ಣು ಮಕ್ಕಳ ಶಿಕ್ಷಣ ತಪ್ಪಿಸಿರುವ ಹುನ್ನಾರ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಎರಡು ದಿನ ವಿಳಂಬವಾಗಿರು ವುದಕ್ಕೆ ಸುತ್ತೋಲೆ ನೀಡಿಲ್ಲ ಎಂದು ಹೇಳುತ್ತಾರೆ. ಸುತ್ತೋಲೆ ಕೊಟ್ಟರೆ ತರಾತುರಿ ಎಂದು ಹೇಳುತ್ತಾರೆ. ಹಾಗಾಗಿ ನಾನು ಸುತ್ತೋಲೆ ಬಗ್ಗೆ ಮಾತನಾಡುವುದಿಲ್ಲ. ಇಂದಿನ ಸರಕಾರಿ ಶಾಲೆಗಳಲ್ಲಿ ಇರುವ ಪದ್ಧತಿಯ ಪ್ರಕಾರವೇ ಎಲ್ಲ ತರಗತಿಗೆ ಬರಬೇಕು ಎಂದರು.

ನಾಳೆ ನಮಗೆ ಆ ಭಾಷೆ ಅರ್ಥ ಆಗುವುದಿಲ್ಲ ಉರ್ದುವಿನಲ್ಲಿ ಪಾಠ ಮಾಡಿ ಹೇಳಿದರೆ, ಉರ್ದುವಿನಲ್ಲಿ ಪಾಠ ಮಾಡಲು ಆಗುತ್ತದೆಯೇ ? ಹಾಗೆ ಮಾಡಲು ಆಗುವುದಿಲ್ಲ. ಒಂದು ವ್ಯವಸ್ಥೆ ಎಂಬುದು ಇದೆ. ಅದರ ಅಡಿಯಲ್ಲಿ ಎಲ್ಲವೂ ನಡೆಯಬೇಕು. ವ್ಯಕ್ತಿ ಸ್ವಾತಂತ್ರ ಇದೆ ಎಂದು ಮಧ್ಯಾಹ್ನ ಬಿಸಿಯೂಟದಲ್ಲಿ ನಿಂತು, ಮಲಗಿ ಊಟ ಮಾಡುತ್ತೇನೆ ಎಂದು ಹೇಳಿದರೆ ಆಗುತ್ತದೆಯೇ? ಸಂಪ್ರದಾಯ ಪ್ರಕಾರ ಎಲ್ಲರು ಕುಳಿತೇ ಊಟ ಮಾಡಬೇಕು. ಅದಕ್ಕೆ ಶಿಸ್ತು ಎಂದು ಹೇಳುತ್ತಾರೆ. ಅದೇ ರೀತಿ ಸಮವಸ್ತ್ರದಲ್ಲಿಯೂ ನಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಕೇಸರಿ ಶಾಲು ಧರಿಸುವವರ ಬಗ್ಗೆ ಪ್ರತ್ರಿಯಿಸಿದ ಅವರು, ವಸ್ತ್ರ ಸಂಹಿತೆ ಎಂಬುದು ಒಂದು ಗುಂಪಿಗೆ, ಒಂದು ಸಮಾಜಕ್ಕೆ ಅಲ್ಲ. ಶಾಲೆಯ ಒಳಗೆ ಸಮವಸ್ತ್ರ ಹಾಕಿಕೊಂಡು ಬರಬೇಕು ಎಂಬುದು ಎಲ್ಲರಿಗೂ ಅನ್ವಯ. ಕೇವಲ ಒಂದು ಗುಂಪಿಗೆ ಎಂದು ನಾನು ಹೇಳುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News