ಹಿಜಾಬ್ ಹಕ್ಕನ್ನು ನಿರಾಕರಿಸಿದೆ ಶಾಹಿನಾ ಬಾಗ್ ಮಾದರಿಯಲ್ಲಿ ಹೋರಾಟ: ಆಯಿಷಾ ಮುರ್ಷಿದಾ

Update: 2022-02-07 16:05 GMT

ಉಡುಪಿ, ಫೆ.7: ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ಯಾರಿದಂಲೂ ಕಸಿದುಕೊಳ್ಳಲು ಆಗುವುದಿಲ್ಲ. ಅದಕ್ಕೆ ನಾವು ಅವಕಾಶ ಕೂಡ ನೀಡುವುದಿಲ್ಲ. ಅದನ್ನು ಕಸಿಯುವ ಪ್ರಯತ್ನ ಮಾಡಿದರೆ ರಾಜ್ಯದ ಮೂಲೆಮೂಲೆಗಳಲ್ಲೂ ಶಾಹಿನಾ ಬಾಗ್ ನಿರ್ಮಿಸಿ ಹೋರಾಟ ನಡೆಸುತ್ತೇವೆ ಎಂದು ಸಿಎಫ್‌ಐ ರಾಜ್ಯ ಸಮಿತಿ ಸದಸ್ಯೆ ಆಯಿಷಾ ಮುರ್ಷಿದಾ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಮಹಿಳಾ ಹಕ್ಕುಗಳ ಸಂರಕ್ಷಣಾ ವೇದಿಕೆ ನೇತೃತ್ವದಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ವಿರೋಧಿ ನಡೆಯ ವಿರುದ್ಧ ಸೋಮವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಹಿಜಾಬ್ ನಮ್ಮ ಘನತೆಯಾಗಿದೆ. ಅದು ಯಾವುದಕ್ಕೂ ತಡೆ ಆಗುವುದಿಲ್ಲ. ಅದನ್ನು ಹಾಕಿಯೇ ನಾವು ಹಲವು ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದ್ದೇವೆ. ಕೇಸರಿ ಶಾಲು ಹಾಕಿ ಬರುತ್ತಿರುವುದರ ಹಿಂದೆ ಸಂಘಪರಿವಾರದ ಹಿಡನ್ ಅಜೆಂಡಾ ಇರುವುದು ಸ್ಪಷ್ಟವಾಗಿದೆ. ಕೇವಲ ಸಮಾನತೆ ಹೆಸರಿನಲ್ಲಿ ನಮ್ಮ ಧಾರ್ಮಿಕ ಹಕ್ಕನ್ನು ನಿರಾಕರಣೆ ಮಾಡಲಾಗುತ್ತಿದೆ. ಸಂಘಪರಿವಾರ ಹಾಗೂ ಬಿಜೆಪಿ ಸರಕಾರ ನಿರಂತರವಾಗಿ ಮುಸ್ಲಿಮ್ ಮಹಿಳೆಯರನ್ನು ಅವಮಾನಿಸುವ ಕಾರ್ಯ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ನ್ಯಾಶನಲ್ ವಿಮೆನ್ ಫ್ರಂಟ್‌ನ ರಾಜ್ಯ ಸಮಿತಿ ಸದಸ್ಯೆ ಫಾತಿಮಾ ನಸೀಮಾ ಮಾತನಾಡಿ, ಈಗ ಇರುವುದು ಹಿಜಾಬ್ ವಿವಾದ ಅಲ್ಲ. ಹಿಜಾಬ್ ಎಂಬುದು ಹೊಸದಾಗಿ ಹುಟ್ಟಿರುವುದಲ್ಲ. ಆದರೆ ಕೇಸರಿ ಶಾಲನ್ನು ವಿವಾದ ಸೃಷ್ಠಿಸುವುದ ಕ್ಕಾಗಿಯೇ ಹಾಕಲಾಗುತ್ತಿದೆ. ಆದುದರಿಂದ ಸದ್ಯ ನಡೆಯುತ್ತಿರುವು ಕೇಸರಿ ಶಾಲು ವಿವಾದ. ನಮಗೆ ಹೈಕೋರ್ಟ್ ಮೇಲೆ ವಿಶ್ವಾಸ ಇದೆ. ಅಲ್ಲಿ ನಮ್ಮ ಪರವಾದ ತೀರ್ಪು ಬರಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಎಫ್‌ಐ ಮುಖಂಡೆ ಝಮ್‌ ಝಮ್, ನಝಿಯಾ ಕನ್ನಂಗಾರ್, ರೆಹಮತ್ತುನ್ನೀಸಾ, ಯಾಸ್ಮಿನ್ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News