ಉಡುಪಿ ಎಂಜಿಎಂ ಕಾಲೇಜಿನಲ್ಲಿ ತಾರಕಕ್ಕೇರಿದ ವಿವಾದ: ಮುಂದಿನ ನಿರ್ಧಾರದವರೆಗೆ ರಜೆ ಘೋಷಣೆ

Update: 2022-02-08 10:11 GMT

ಉಡುಪಿ, ಫೆ.8: ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತಾರಕ್ಕೇರಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮುಂದೆ ತೆಗೆದುಕೊಳ್ಳುವ ನಿರ್ಧಾರದ ವರೆಗೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಯಿತು.

ಕಾಲೇಜು ಆವರಣದೊಳಗೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಹಾಗೂ ಕೇಸರಿ ಶಾಲು ಮತ್ತು ಪೇಟ ಧರಿಸಿದ ವಿದ್ಯಾರ್ಥಿಗಳು ಮುಖಾಮುಖಿ ಯಾದರು. ಈ ವೇಳೆ ವಿದ್ಯಾರ್ಥಿಗಳು ನ್ಯಾಯ ಬೇಕು ಘೋಷಣೆಗಳನ್ನು ಕೂಗಿದರೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈಶ್ರೀರಾಮ್, ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಇದರ ಪರಿಣಾಮ ಕಾಲೇಜು ಆವರಣದಲ್ಲಿ ಕೆಲವು ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಬಳಿಕ ಆಗಮಿಸಿದ ಪ್ರಾಂಶುಪಾಲ ಡಾ.ದೇವಿದಾಸ್ ನಾಯ್ಕಾ, ಎರಡು ಕಡೆ ಯವವರಿಗೆ ಗೇಟಿನಿಂದ ಹೊರಹೋಗುವಂತೆ ಸೂಚಿಸಿದರು. ಆದರೆ ಪಟ್ಟು ಹಿಡಿದ ವಿದ್ಯಾರ್ಥಿಗಳು ಹೊರಗೆ ಹೋಗಲು ನಿರಾಕರಿಸಿದರು. ಬಳಿಕ ಉಪ ನ್ಯಾಸಕರು, ಪೊಲೀಸರು ಮನವಿಯಂತೆ ಎಲ್ಲ ವಿದ್ಯಾರ್ಥಿಗಳು ಗೇಟಿನಿಂದ ಹೊರಗಡೆ ನಡೆದರು. ಆದರೂ ಸುಮಾರು ಹೊತ್ತು ವಿದ್ಯಾರ್ಥಿಗಳು ಗೇಟಿನ ಹೊರಗಡೆ ನಿಂತು ಘೋಷಣೆಗಳನ್ನು ಕೂಗುತ್ತಿದ್ದರು.

ಬಳಿಕ ಅಲ್ಲಿಗೆ ಬಂದ ಪ್ರಾಂಶುಪಾಲರು, ಮುಂದಿನ ತೀರ್ಮಾನ ತೆಗೆದು ಕೊಳ್ಳುವವರೆಗೆ ಕಾಲೇಜಿಗೆ ರಜೆ ನೀಡಲಾಗಿದೆ ಎಂದು ಘೋಷಿಸಿದರು. ತದ ನಂತರ ವಿದ್ಯಾರ್ಥಿಗಳು ಅಲ್ಲಿಂದ ಮನೆಗೆ ತೆರಳಿದರು. ಸ್ಥಳದಲ್ಲಿ ಡಿವೈಎಸ್ಪಿ ಸುಧಾಕರ್ ನಾಯ್ಕಿ, ನಗರ ಠಾಣಾ ಇನ್ಸ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಹಾಜರಿದ್ದರು. ಬಿಗಿ ಪೊಲೀಸ್ ಬಂದೋಬಸ್ಥ್ ಒದಗಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News