ಜಡ್ಕಲ್ ಸಂಪೂರ್ಣ ಸೋಲಾರ್ ಗ್ರಾಮವಾಗಲಿ: ಮಹಾಲಿಂಗ ನಾಯ್ಕಾ

Update: 2022-02-09 14:24 GMT

ಜಡ್ಕಲ್, ಫೆ.9: ಪ್ರಕೃತಿಯಿಂದ ಉಚಿತ ಹಾಗೂ ಧಾರಾಳವಾಗಿ ದೊರೆಯುವ ಸೂರ್ಯನ ಬೆಳಕಿನ ಸೌರಶಕ್ತಿ ಚಾಲಿತ ಉಪಕರಣಗಳನ್ನು ಗ್ರಾಮದ ಜನತೆ ಹೆಚ್ಚು ಹೆಚ್ಚು ಬಳಸುವಂತಾಗಬೇಕು. ಈ ಮೂಲಕ ಜಡ್ಕಲ್ ಗ್ರಾಮ ಸಂಪೂರ್ಣ ಸೋಲಾರ್ ಗ್ರಾಮ ಎನಿಸಿಕೊಳ್ಳುವಂತಾಗಲಿ ಎಂದು ಜಡ್ಕಲ್‌ನ ಸಿದ್ಧೇಶ್ವರ ಮರಾಠಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಹಾಗೂ ಸಹಕಾರಿ ಧುರೀಣ ಮಹಾಲಿಂಗ ನಾಯ್ಕೆ ಜೋಗಿಜೆಡ್ಡು ಹೇಳಿದ್ದಾರೆ.

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಗ್ಯಾಪ್ ಫೈನಾನ್ಸ್ ಯೋಜನೆಯಡಿ ಬೈಂದೂರು ತಾಲೂಕಿನ ಜಡ್ಕಲ್, ಗೋಳಿಹೊಳೆ, ಕೊಲ್ಲೂರು ಪರಿಸರದ ಯೋಜನೆಯ ಫಲಾನುಭವಿಗಳಿಗೆ ಸೆಲ್ಕೋ ಸೋಲಾರ್ ಲೈಟ್ ಸಂಸ್ಥೆ ಕುಂದಾಪುರ ಶಾಖೆ ಹಾಗೂ ಜಡ್ಕಲ್ ಗ್ರಾಪಂನ ಸಹಯೋಗದೊಂದಿಗೆ ಹಮ್ಮಿ ಕೊಂಡಿದ್ದ ಸಂವಹನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.

ಸಂವಹನ ಕಾರ್ಯಕ್ರಮವನ್ನು ಜಡ್ಕಲ್ ಗ್ರಾಪಂ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆ ಸೌರ ದೀಪ ಮತ್ತು ಬಿಸಿ ನೀರಿನ ಉಪಕರಣಗಳನ್ನು ಹೊಂದುವುದರ ಜೊತೆಗೆ ಸೌರ ಚಾಲಿತ ಹಾಲು ಕರೆಯುವ ಯಂತ್ರ, ರೈಸ್ ಹಲ್ಲರ್, ಕಬ್ಬಿನ ಹಾಲಿನ ಯಂತ್ರಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಸ್ವಾವಲಂಬಿಗಳಾಗಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗೋಳಿಹೊಳೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಶಾಖಾ ವ್ಯವಸ್ಥಾಪಕಿ ದೀವರಂ ಉಪೇಂದ್ರ ಮಾತನಾಡಿ, ಸೌರ ಶಕ್ತಿ ಉಪಕರಣಗಳಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಿಂದ ಗರಿಷ್ಠ ಮಟ್ಟದಲ್ಲಿ ಸಾಲ ನೀಡಲಾಗಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಬಿಟಿ ಸಸ್ಟೈನ್ ಪ್ಲಸ್ ಯೋಜನೆಯ ಮುಖ್ಯಸ್ಥ ಸುಧೀರ್ ಕುಲಕರ್ಣಿ ಗ್ಯಾಪ್ ಫೈನಾನ್ಸ್ ಯೋಜನೆಯ ವಿವರಗಳನ್ನು ನೀಡಿ ಕಳೆದ 2 ವರ್ಷಗಳಿಂದ ಈ ಯೋಜನೆಯಲ್ಲಿ ಕರ್ನಾಟಕ, ತುಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಅಸ್ಸಾಂ, ಮಣಿಪುರ, ಮೇಘಾಲಯ ರಾಜ್ಯಗಳ ಫಲಾನುಭವಿಗಳಿಗೆ ಸಹಾಯ ನೀಡಲಾಗಿದೆ ಎಂದರು.

ಬಿವಿಟಿಯ ವ್ಯವಸ್ಥಾಪಕ ಶ್ರದ್ಧಾ ಹೇರ್ಳೆ, ಜಡ್ಕಲ್ ಗ್ರಾಪಂ ಉಪಾಧ್ಯಕ್ಷ ಲಕ್ಷಣ ಶೆಟ್ಟಿ, ಕುಂದಾಪುರದ ಸೆಲ್ಕೋ ಸಂಸ್ಥೆಯ ಶಾಖಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.

ಭಾರತೀಯ ವಿಕಾಸ ಟ್ರಸ್ಟಿನ ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ಸ್ವಾಗತಿಸಿದರು. ಸಿದ್ಧೇಶ್ವರ ಮರಾಠಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕೆ ಕೆ. ವಂದಿಸಿದರು. ಬಿವಿಟಿಯ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News