'ರಾಜ್ಯದ ಹಿಂದುಳಿದ ವರ್ಗಗಳ 3 ಕೋಟಿ ಜನಕ್ಕೆ ಅನ್ಯಾಯವಾಗಲು ಬಿಡೆವು'

Update: 2022-02-12 13:53 GMT

ಉಡುಪಿ, ಫೆ.12: ಹಿಂದುಳಿದ ವರ್ಗಗಳಿಗೆ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಯಲ್ಲಿ ಸೂಕ್ತ ಸ್ಥಾನಮಾನ ಸಿಗಲೇ ಬೇಕು ಹಾಗೂ ಮುಂದಿನ ವಿಧಾನಸಭಾ ಅಧಿವೇಶದಲ್ಲಿ ರಾಜ್ಯ ಜನಗಣತಿಯ ಕಾಂತರಾಜು ಆಯೋಗದ ವರದಿಯನ್ನು ಸದನ ಸ್ವೀಕರಿಸಲೇಬೇಕು. ಇದಕ್ಕಾಗಿ ಪಕ್ಷ ನಿರಂತರವಾಗಿ ಹೋರಾಟ ವನ್ನು ಹಮ್ಮಿಕೊಳ್ಳಲಿದೆ ಎಂದು ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ರಾಜ್ಯ ಸಮಿತಿಯ ಅಧ್ಯಕ್ಷ ಎಂ.ಡಿ. ಲಕ್ಷ್ಮೀ ನಾರಾಯಣ ಹೇಳಿದ್ದಾರೆ.

ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಬಿಜೆಪಿ ಜಿಪಂ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ 129 ಸ್ಥಾನಗಳಲ್ಲಿ ಅನ್ಯಾಯ ಮಾಡಿದಾಗ ನಾವದನ್ನು ಸೂಕ್ತ ರೀತಿಯಲ್ಲಿ ಪ್ರಶ್ನಿಸಿದ್ದೇವೆ. ಇದರಿಂದ ರಾಜ್ಯದ ತಾಪಂ ಹಾಗೂ ಜಿಪಂಗಳಿಗೆ ಚುನಾವಣೆ ನಡೆಯಲು ಸಾಧ್ಯವಾಗಿಲ್ಲ ಎಂದರು.

ಕಾಂತರಾಜ ಆಯೋಗದ ಮೂಲಕ ದೇಶದಲ್ಲೇ ಮೊದಲ ಬಾರಿ ಜನಗಣತಿಯನ್ನು ಸಿದ್ಧರಾಮಯ್ಯ ಸರಕಾರ 2013ರಲ್ಲಿ ನಡೆಸಿದ್ದರೂ, ವರದಿ ಸ್ವೀಕರಿಸುವ ಮೊದಲೇ ಸರಕಾರ ಬದಲಾಯಿತು. ಮುಂದಿನ ಸಮ್ಮಿಶ್ರ ಸರಕಾರ ಹಾಗೂ ಈಗಿನ ಬಿಜೆಪಿ ಸರಕಾರ ವರದಿಯನ್ನು ಸ್ವೀಕರಿಸಲು ಮೀನಮೇಷ ಎಣಿ ಸುತ್ತಿದೆ. ವರದಿ ಕುರಿತಂತೆ ನಾವು ಸೂಕ್ತಕ್ರಮ ಕೈಗೊಳ್ಳುವುದಾಗಿ ಸಚಿವ ಈಶ್ವರಪ್ಪ ಆಶ್ವಾಸನೆ ನೀಡಿ 9 ತಿಂಗಳು ಕಳೆದರೂ ಯಾವುದೇ ಕ್ರಮಕೈಗೊಂಡಿಲ್ಲ. ವರದಿ ಕುರಿತು ಬಸವರಾಜ ಬೊಮ್ಮಾಯಿ ಸರಕಾರ ಮೂರು ಸಭೆ ನಡೆಸಿದರೂ ಏನೂ ಪ್ರಗತಿಯಾಗಿಲ್ಲ. ಹೀಗಾಗಿ ವರದಿ ಸ್ವೀಕಾರಕ್ಕಾಗಿ ನಮ್ಮ ಹೋರಾಟ ಮುಂದು ವರಿಯಲಿದೆ ಎಂದು ಅವರು ಹೇಳಿದರು.

ಹಿಂದುಳಿದ ವರ್ಗಗಳಲ್ಲಿ ರಾಜ್ಯದಲ್ಲಿ ಒಟ್ಟು 197 ಸಮುದಾಯಗಳಿವೆ. 2ಎಯಲ್ಲಿ 102 ಹಾಗೂ ಪ್ರವರ್ಗ ಒಂದರಲ್ಲಿ 97 ಸಮುದಾಯಗಳಿವೆ. ರಾಜ್ಯದ 6.5 ಕೋಟಿ ಜನಸಂಖ್ಯೆಯಲ್ಲಿ ಮೂರು ಕೋಟಿ ಹಿಂದುಳಿದ ವರ್ಗಕ್ಕೆ ಸೇರಿದೆ. ಕಾಂಗ್ರೆಸ್ ಹಿಂದುಳಿದ ವರ್ಗದ ಸಮಿತಿಗಳಲ್ಲಿ 197 ಸಮುದಾಯಗಳಲ್ಲಿ 173ಕ್ಕೆ ಅವಕಾಶ ನೀಡಿದ್ದೇವೆ. ಉಳಿದ ಸಮುದಾಯಗಳಲ್ಲೂ ಸೂಕ್ತರನ್ನು ಗುರುತಿಸಿ ನಿನಿಧ ಸಮಿತಿಗಳಲ್ಲಿ ಪ್ರಾತಿನಿಧ್ಯ ನೀಡಲು ಪ್ರಯತ್ನಿಸುತಿದ್ದೇವೆ ಎಂದು ಲಕ್ಷ್ಮೀನಾರಾಯಣ ನುಡಿದರು.

ರಾಜ್ಯದ 31 ಜಿಲ್ಲೆಗಳಲ್ಲಿರುವ 224 ವಿಧಾನಸಭಾ ಕ್ಷೇತ್ರಗಳಲ್ಲೂ ಹಿಂದುಳಿದ ವರ್ಗಗಳ ಘಟಕವನ್ನು ಬಲಿಷ್ಠಗೊಳಿಸಲು ಪ್ರಯತ್ನ ನಡೆದಿದೆ. ಈಗಾಗಲೇ 147 ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಇನ್ನುಳಿದ ಕ್ಷೇತ್ರಗಳಲ್ಲೂ ಸಭೆ ನಡೆಸಿ ಸದಸ್ಯತ್ವ ನೊಂದಾವಣಿ ಮೂಲಕ ಪಕ್ಷ ಬಲಪಡಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಮತ್ತೆ ತನ್ನ ಹಿಂದಿನ ಸ್ಥಾನಗಳನ್ನು ಗೆಲ್ಲುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸಂಕಪ್ಪ ಎ. ಅವರು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ ಸದಸ್ಯತ್ವ ಅಭಿಯಾ ನದ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರು.

ಶೀಘ್ರವೇ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾ ಸಮಾವೇಶವೊಂದನ್ನು ನಡೆಸಲು ಕಾರ್ಯಯೋಜನೆಯನ್ನು ಘೋಷಿಸಲಾಯಿತು. ಇದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಪಾಲ್ಗೊಳ್ಳುವಂತೆ ಪ್ರಯತ್ನಿಸುುದಾಗಿ ಲಕ್ಷ್ಮೀನಾರಾಯಣ ಘೋಷಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ತುಕರಾಂ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್. ಹರೀಶ್, ದ.ಕ. ಜಿಲ್ಲಾ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ವಿಶಾ್ವಸ್‌ಕುಮಾರ್ ದಾಸ್ ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ದಿನಕರ್ ಹೇರೂರು, ರಮೇಶ್ ಕಾಂಚನ್, ಮಣಿಕಂಠ, ದಿನೇಶ್ ಬಂಗೇರ, ಮಂಜುನಾಥ ಪೂಜಾರಿ, ಶ್ರೀನಿವಾಸ ಶೆಟ್ಟಿಗಾರ್, ಮಹಾಬಲ ಮಡಿವಾಳ, ಎ.ಪಿ.ರಾಜು ಪೂಜಾರಿ, ಮೋಹನ್ ಪೂಜಾರಿ ಗಿಳಿಯಾರು, ಶ್ರೀಕುಮಾರ್, ಲಕ್ಷೀಶ್ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಸುಲೋಚನಾ, ಅನುಷಾ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಅಧ್ಯಕ್ಷ ಸಂಕಪ್ಪ ಎ. ಅತಿಥಿಗಳನ್ನು ಸ್ವಾಗತಿಸಿದರೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿ ದರು. ಹಿಂದುಳಿದ ವರ್ಗ ಘಟಕದ ರಾಜ್ಯ ಕಾರ್ಯದರ್ಶಿ ಶಿವಾಜಿ ಸುವರ್ಣ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News