ಹೈಕೋರ್ಟ್ ಮಧ್ಯಂತರ ಆದೇಶದ ಉಲ್ಲಂಘನೆ: ಶಿಕ್ಷಣ ಇಲಾಖೆಯ ಆಯಕ್ತರಿಗೆ ಪತ್ರ ಬರೆದ ಶಿಕ್ಷಣ ತಜ್ಞ ನಿರಂಜನಾರಾಧ್ಯ

Update: 2022-02-15 12:20 GMT

ಬೆಂಗಳೂರು, ಫೆ.15: ಕೆಲವು ಶಿಕ್ಷಣ ಸಂಸ್ಥೆಗಳು ಮತ್ತು ಶೈಕ್ಷಣಿಕ ಜಿಲ್ಲಾಡಳಿತದಿಂದ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಉಲ್ಲಂಘನೆಯಾಗುತ್ತಿದೆ. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಯಾವುದೇ ಕ್ರಮ ವಹಿಸುವಂತಿಲ್ಲ. ಹಾಗಾಗಿ, ಇಂತಹ ಉಲ್ಲಂಘನೆಯನ್ನು ತಕ್ಷಣವೇ ನಿಲ್ಲಿಸಲು ಜಿಲ್ಲಾ ಮತ್ತು ಬ್ಲಾಕ್ ಹಂತದ ಅಧಿಕಾರಿಗಳಿಗೆ ಕೂಡಲೇ ಸ್ಪಷ್ಟೀಕರಣವನ್ನು ನೀಡಬೇಕು ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಹಿಜಾಬ್ ಧರಿಸುವುದನ್ನು ವಿನಾಕಾರಣ ವಿವಾದವನ್ನಾಗಿ ಮಾಡಿ, ಶಾಲೆಗಳನ್ನು ಮುಚ್ಚಲಾಗಿದೆ. ಇದು ಕೋವಿಡ್ ಮಹಾಮಾರಿಯಿಂದ ಮುಚ್ಚಿದ್ದ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸುವ ಪ್ರಯತ್ನಗಳನ್ನು ವಿಫಲಗೊಳಿಸಿದೆ. ಧಾರ್ಮಿಕ ನಂಬಿಕೆ, ಸಮಾನತೆ ಮತ್ತು ನ್ಯಾಯದ ಹಕ್ಕು ಸೇರಿದಂತೆ ನಾಗರಿಕರ ಮೂಲಭೂತ ಹಕ್ಕುಗಳ ಕುರಿತು ನ್ಯಾಯಾಲಯದ ಮೆಟ್ಟಿಲು ಹತ್ತಿರುವ ಹಿಜಾಬ್ ಪ್ರಕರಣದ ವಿಚಾರಣೆಯು ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಮಧ್ಯೆ ಶಿಕ್ಷಣಕ್ಕೆ ಭಂಗವಾಗಬಾರದು ಎಂದು ತಲೆಗೆ ಸ್ಕಾರ್ಫ್ ಮತ್ತು ಇತರ ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಧರಿಸುವುದನ್ನು ಪ್ರಕರಣ ಅಂತಿಮವಾಗಿ ತೀರ್ಮಾನವಾಗುವವರೆಗೆ ನಿಬರ್ಂಧಿಸಿ ಮಧ್ಯಂತರ ಆದೇಶವನ್ನು ನೀಡಿದೆ ಎಂದು ಮಾಹಿತಿಯನ್ನು ಪತ್ರದಲ್ಲಿ ಬರೆದಿದ್ದಾರೆ.

ಆದೇಶವು ಕೇವಲ ದಾವೆ ಹೂಡಿದ ವಿದ್ಯಾರ್ಥಿನಿಯರು ಓದುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಆದೇಶದ 11ನೆಯ ಕ್ರಮ ಸಂಖ್ಯೆಯಲ್ಲಿ ತಿಳಿಸಿದೆ. ಆದರೆ, ವಿದ್ಯಾರ್ಥಿಗಳು ತಲೆಗೆ ಸ್ಕಾರ್ಫ್ ಧರಿಸದಂತೆ ನಿರ್ಬಂಧ ಹೊಂದಿರದ ಶಿಕ್ಷಣ ಸಂಸ್ಥೆಗಳ ಮೇಲೂ ನಿಷೇಧವನ್ನು ವಿಧಿಸುತ್ತಿವೆ. ಇದು ನ್ಯಾಯಾಲಯದ ಮಧ್ಯಂತರ ಆದೇಶದ ಉಲ್ಲಂಘನೆಯಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. 

ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವುದಲ್ಲದೆ ನಾಗರಿಕರ ಮೂಲಭೂತ ಹಕ್ಕನ್ನು ಸರಿಯಾಗಿ ಅರ್ಥೈಸದ ಅಧಿಕಾರಿಗಳು ನ್ಯಾಯಾಲಯದ ಮಧ್ಯಂತರ ಆದೇಶವನ್ನು ತಪ್ಪಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಈ ವಿಷಯವು ಗೌರವಾನ್ವಿತ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿರುವಾಗ ಇಲಾಖೆಯ ಈ ಕ್ರಮಗಳಿಗೆ ಅವಕಾಶವಿರುವುದಿಲ್ಲ ಎಂದು ವಿವರಣೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News